ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಸಿಲುಕಿರುವ ಭಯ: ಬೊಮ್ಮಾಯಿ
ತಮ್ಮ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದೇ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಸಿಲುಕಿರುವ ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಜು.15): ತಮ್ಮ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದೇ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಸಿಲುಕಿರುವ ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲದಲ್ಲಿ ಯಾವುದೇ ಭ್ರಷ್ಟಾಚಾರ ನಡೆದೇ ಇಲ್ಲ ಎಂದು ಹೇಳಿದ್ದಾರೆ. ಅವರ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಿದ್ದರೆ 2013ರಿಂದ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆಯದಿದ್ದರೆ ನ್ಯಾಯಾಂಗ ಆಯೋಗ ರಚನೆ ಏಕಾಯಿತು? ಎಸಿಬಿ ಮಾಡಿದ್ದೇ ಭ್ರಷ್ಟಾಚಾರ ಮುಚ್ಚಿ ಹಾಕಲು. ಇದು ಇಡೀ ಜಗತ್ತಿಗೆ ಗೊತ್ತಿದೆ. ಸಣ್ಣ ನೀರಾವರಿ, ದೊಡ್ಡ ನೀರಾವರಿ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ಅವರಿಗೆ ಭಯ ಇಲ್ಲದಿದ್ದರೆ 2013ರಿಂದ ಎಲ್ಲ ಪ್ರಕರಣಗಳನ್ನು ತನಿಖೆಗೆ ವಹಿಸಲಿ. ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯ ಇದೆ ಎಂದರು. ಯಡಿಯೂರಪ್ಪ ಅವರು ತಮ್ಮ ಕಾಲದ ಅವಧಿಯ ಅಕ್ರಮ ಗಣಿಗಾರಿಕೆಯ ಪ್ರಕರಣಗಳನ್ನು ತನಿಖೆಗೆ ನೀಡಿದ್ದರು ಎಂದರು.
ಹಿಟ್ಲರ್ ಬಗ್ಗೆ ಮಾತನಾಡಿದ್ರೆ ನಿಮಗೇಕೆ ಕೋಪ: ಬಿಜೆಪಿಗೆ ಸಿದ್ದು ಪ್ರಶ್ನೆ
ಸದನದಲ್ಲಿ ಅನ್ನಭಾಗ್ಯ ಫೈಟ್: ‘ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ರಾಜಕೀಯ ಅಸೂಯೆಯಿಂದ ಹಣ ನೀಡಿದರೂ ಹೆಚ್ಚುವರಿ ಅಕ್ಕಿ ನೀಡಿಲ್ಲ. ಬಡವರ ಅಕ್ಕಿ ಕಿತ್ತುಕೊಂಡ ಬಿಜೆಪಿಗೆ ನಾಚಿಕೆಯಾಗಬೇಕು’ ಎಂದು ಕಾಂಗ್ರೆಸ್ ಸರ್ಕಾರ ಆರೋಪಿಸಿದರೆ, ‘ಕೇಂದ್ರ ನೀಡಿರುವ ಅಕ್ಕಿಯಲ್ಲೂ 2 ಕೆಜಿ ಕಡಿತ ಮಾಡಿ 3 ಕೇಜಿ ಮಾತ್ರ ನೀಡುತ್ತಿರುವ ನಿಮಗೆ ನಾಚಿಕೆಯಾಗಬೇಕು’ ಎಂದು ಬಿಜೆಪಿ ತಿರುಗೇಟು ನೀಡಿದೆ. ವಿಧಾನಸಭೆಯಲ್ಲಿ ಈ ಅನ್ನಭಾಗ್ಯ ಅಕ್ಕಿ ಬಗ್ಗೆ ಉಭಯ ಪಕ್ಷಗಳ ನಡುವೆ ಗದ್ದಲದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಘಟನೆಯೂ ನಡೆಯಿತು.
ಮೊದಲಿಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸ್ತುತ ಆಹಾರ ಭದ್ರತಾ ಕಾಯ್ದೆಯಡಿ 5 ಕೆ.ಜಿ. ಕೇಂದ್ರ ಸರ್ಕಾರ 360 ಲಕ್ಷ ಟನ್ ನೀಡಬೇಕು. ಜತೆಗೆ 5 ಕೆ.ಜಿ. ಹೆಚ್ಚುವರಿಯಾಗಿ ಸೇರಿ ಒಟ್ಟು 10 ಕೆಜಿ ಅಕ್ಕಿ ನೀಡಲು ಹೆಚ್ಚುವರಿಯಾಗಿ 220 ಲಕ್ಷ ಟನ್ ಅಕ್ಕಿ ಕೇಳಿದ್ದೆವು. ಇದಕ್ಕೆ ಕೆಜಿಗೆ 34 ರು.ಗಳಂತೆ ಹಣ ನೀಡುವುದಾಗಿಯೂ ಹೇಳಿದ್ದೆವು. ನಮಗೆ ಅಕ್ಕಿ ನೀಡದೆ ಕಡಿಮೆ ದರಕ್ಕೆ ಖಾಸಗಿಯವರಿಗೆ ನೀಡುತ್ತಿದ್ದಾರೆ. ಆ ಮೂಲಕ ರಾಜ್ಯದ ಬಡವರಿಗೆ ದ್ರೋಹ ಮಾಡಿದ ಬಿಜೆಪಿಗೆ ನಾಚಿಕೆಯಾಗಬೇಕು. ಬಡವರ ಅನ್ನ ಕಿತ್ತುಕೊಂಡಿದ್ದಾರೆ ಎಂದು ಬಿಜೆಪಿಯನ್ನು ಉದ್ದೇಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ರಾಜ್ಯಗಳಿಂದ ಅಕ್ಕಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೇಂದ್ರ ಅಕ್ಕಿ ನೀಡಿಲ್ಲ ಎಂದು ಕೊಟ್ಟಮಾತಿಗೆ ತಪ್ಪದೆ ತಾತ್ಕಾಲಿಕವಾಗಿ ಪ್ರತಿಯೊಬ್ಬರಿಗೆ 170 ರು.ಗಳಂತೆ ಹಣ ನೀಡುತ್ತಿದ್ದೇವೆ. ತನ್ಮೂಲಕ ನುಡಿದಂತೆ ನಡೆಯುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಕ್ರಷರ್ ಉದ್ಯಮದ ವಿರುದ್ಧ ರೇವಣ್ಣ ದಾಳಿ: ಶಿವಲಿಂಗೇಗೌಡ ಆಕ್ರೋಶ
ಅಶೋಕ್ ತಿರುಗೇಟು: ಈ ವೇಳೆ ಬಿಜೆಪಿ ಸದಸ್ಯ ಆರ್. ಅಶೋಕ್, ‘ನೀವು ಅನ್ನಭಾಗ್ಯ ಯೋಜನೆ ಯಾರನ್ನು ಕೇಳಿ ಘೋಷಣೆ ಮಾಡಿದ್ದಿರಿ. ಅರ್ಜಿ ಹಾಕಿದ ಕೂಡಲೇ ಅಕ್ಕಿ ಕೊಡಲು ಕೇಂದ್ರ ನಿಮ್ಮ ಅತ್ತೆ ಮನೆಯೇ? ಘೋಷಣೆ ಮಾಡುವ ಮೊದಲು ನೀವು ಮೋದಿಯನ್ನು ಕೇಳಿದ್ದಿರಾ?’ ಎಂದು ಗರಂ ಆದರು. ಇದಕ್ಕೆ ಸಿದ್ದರಾಮಯ್ಯ, ‘ತಾಳ್ಮೆಯಿಂದ ಮಾತನಾಡಪ್ಪ ಅಶೋಕ್. ನಾನು ಮೋದಿ ಹೆಸರೇ ಹೇಳಿಲ್ಲ. ನಮಗೆ ಆಗಿರುವ ಅನ್ಯಾಯವನ್ನು ಹೇಳಿದ್ದೇನೆ. ನೀವು ಇನ್ನೂ ರಾಜ್ಯದ ಬಡವರ ಪರವಾಗಿ ಧ್ವನಿ ಎತ್ತಬೇಕು’ ಎಂದು ಟೀಕಿಸಿದರು.