ಪ್ರಧಾನಿ, ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಪಕ್ಷದ ಪದಾಧಿಕಾರಿಗಳು, ಸಂಸದರು ಹಾಗೂ ಶಾಸಕರು ಸೇರಿದಂತೆ ಸುಮಾರು 128 ಮಂದಿ ನಾಯಕರು ಪ್ರವಾಸ ಕೈಗೊಂಡು ಪಕ್ಷದ ಪರ ಪ್ರಚಾರ ನಡೆಸಿದ್ದಾರೆ. 

ಬೆಂಗಳೂರು(ಮೇ.09): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಲ್ಲಿ ಆಡಳಿತಾರೂಢ ಬಿಜೆಪಿಯು ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ನಾಯಕರು ನಡೆಸಿದ ಒಟ್ಟು ಸಾರ್ವಜನಿಕ ಸಮಾವೇಶಗಳ ಸಂಖ್ಯೆ 437. ಇದೇ ವೇಳೆ 138 ರೋಡ್‌ ಶೋಗಳನ್ನು ನಡೆಸಿದ್ದಾರೆ. ಪ್ರಧಾನಿ, ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಪಕ್ಷದ ಪದಾಧಿಕಾರಿಗಳು, ಸಂಸದರು ಹಾಗೂ ಶಾಸಕರು ಸೇರಿದಂತೆ ಸುಮಾರು 128 ಮಂದಿ ನಾಯಕರು ಪ್ರವಾಸ ಕೈಗೊಂಡು ಪಕ್ಷದ ಪರ ಪ್ರಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನರೇಂದ್ರ ಮೋದಿ ಅವರು 19 ಸಾರ್ವಜನಿಕ ಸಮಾವೇಶ ಮತ್ತು ಆರು ರೋಡ್‌ ಶೋಗಳಲ್ಲಿ ಭಾಗಿಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು 16 ಸಾರ್ವಜನಿಕ ಸಮಾವೇಶ ಹಾಗೂ 15 ರೋಡ್‌ ಶೋ ನಡೆಸಿದ್ದರೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 10 ಸಾರ್ವಜನಿಕ ಸಮಾವೇಶ ಮತ್ತು 16 ರೋಡ್‌ ಶೋ ಗಳಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ 3 ತಾಸಿನಲ್ಲಿ 26 ಕಿಲೋಮೀಟರ್‌ ರೋಡ್‌ ಶೋ ಮಾಡಿದ ಪ್ರಧಾನಿ ಮೋದಿ!

ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು 9 ಸಾರ್ವಜನಿಕ ಸಮಾವೇಶ ಮತ್ತು ಮೂರು ರೋಡ್‌ ಶೋಗಳಲ್ಲಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು 17 ಸಮಾವೇಶ ಮತ್ತು 2 ರೋಡ್‌ ಶೋಗಳಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ 15 ಸಮಾವೇಶ ಒಂದು ರೋಡ್‌ ಶೋ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ 13 ಸಮಾವೇಶ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನಾಲ್ಕು ಸಮಾವೇಶಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪಕ್ಷ ತಿಳಿಸಿದೆ.

ಇನ್ನು ರಾಜ್ಯ ನಾಯಕರ ಪೈಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕು ಸಮಾವೇಶ ಮತ್ತು 40 ರೋಡ್‌ ಶೋಗಳನ್ನು ನಡೆಸಿದ್ದಾರೆ. ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು 24 ಸಮಾವೇಶ ಹಾಗೂ ಮೂರು ರೋಡ್‌ ಶೋಗಳಲ್ಲಿ ಭಾಗಿಯಾಗಿದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 44 ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು.

ಮೋದಿ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ: ಸಿದ್ದರಾಮಯ್ಯ ಕಿಡಿ

ಶಾಸಕ ಬಸನಗೌಡ ಪಾಟೀಲ ಯತ್ನಾಳ 41 ಸಮಾವೇಶಗಳಲ್ಲಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ 24 ಸಮಾವೇಶಗಳಲ್ಲಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ 25 ಸಮಾವೇಶಗಳಲ್ಲಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ 16 ಸಮಾವೇಶ ಮತ್ತು ನಾಲ್ಕು ರೋಡ್‌ ಶೋ, ಸಚಿವ ಬಿ.ಶ್ರೀರಾಮುಲು 15 ಸಮಾವೇಶಗಳಲ್ಲಿ ಭಾಗಿಯಾಗಿದ್ದರೆ, ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಕೇವಲ ಒಂದು ಸಮಾವೇಶ ಮತ್ತು ಒಂದು ರೋಡ್‌ ಶೋಗಳಲ್ಲಿ ಮಾತ್ರ ಭಾಗವಹಿಸಿದ್ದರು ಎಂದು ಪಕ್ಷ ಮಾಹಿತಿ ನೀಡಿದೆ.

41 ಕಡೆಗಳಲ್ಲಿ ಸುದೀಪ್‌ ರೋಡ್‌ ಶೋ

ನಟ ಸುದೀಪ್‌ ಅವರು ಈ ಬಾರಿ ಆಡಳಿತಾರೂಢ ಬಿಜೆಪಿ ಪರವಾಗಿ ಭರ್ಜರಿ ಪ್ರವಾಸ ಕೈಗೊಂಡಿದ್ದು, ರಾಜ್ಯಾದ್ಯಂತ 41 ಕಡೆಗಳಲ್ಲಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ ಎಂದು ಪಕ್ಷ ತಿಳಿಸಿದೆ.