ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳ ಸುಳಿವು ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಸ್ಥಾನದ ಪ್ರಸ್ತಾಪ ಬಂದಿದ್ದು, ಈ ಬೆಳವಣಿಗೆಯು ರಾಜ್ಯದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದೆ.
ಬೆಂಗಳೂರು (ಮೇ27): ರಾಜ್ಯ ರಾಜಕಾರಣದ ಬದಲಾವಣೆಗಳ ಕುರಿತು ಮಂಗಳವಾರದ ದೆಹಲಿ ಸಭೆಯಲ್ಲಿ ಮಹತ್ವದ ಚರ್ಚೆಯಾಗಿರುವ ಬೆನ್ನಲ್ಲೇ ಬುಧವಾರ ರಾಜ್ಯದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆಯುವ ನಿರೀಕ್ಷೆಯಿದೆ.

ರಾಜ್ಯ ಕಾಂಗ್ರೆಸ್(Karnataka Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ(Randeep singh surjewala) ಅವರು ಕೆಪಿಸಿಸಿ(KPCC) ಕಚೇರಿಯಲ್ಲಿ ನಡೆಯಲಿರುವ ಜಿಬಿಎ ಚುನಾವಣೆ(GBA Election) ಕುರಿತ ಸಭೆ ನೆಪದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ರಾಜ್ಯದಲ್ಲಿ ನಡೆಯಲಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು ದೆಹಲಿಯ ಕೆ.ಜೆ. ಜಾರ್ಜ್ ನಿವಾಸದಲ್ಲಿ ಆಪ್ತರೊಂದಿಗೆ ಸಭೆ ನಡೆಸಿದ್ದಾರೆ. ಬಳಿಕ ರಾತ್ರಿಯೇ ಬೆಂಗಳೂರಿಗೆ ವಾಪಸಾಗಿದ್ದಾರೆ.
ಆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಸುರ್ಜೇವಾಲಾ ಅವರ ಜೊತೆಗೆ ಬೆಂಗೂರಿಗೆ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ. ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಸ್ಥಾನದ ಆಫರ್ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಸಿದ್ದರಾಮಯ್ಯ ಅವರ ಆಪ್ತರು ಸಭೆ ನಡೆಸುವ ಸಾಧ್ಯತೆಯಿದೆ.
ಮತ್ತೊಂದೆಡೆ ರಾಜ್ಯ ಒಕ್ಕಲಿಗರ ಸಂಘವು ಸರ್ವ ಸದಸ್ಯರ ಸಭೆ ಕುರಿತ ಕಾರಣ ನೀಡಿ ಸುದ್ದಿಗೋಷ್ಠಿ ಕರೆದಿದೆ. ಈ ವೇಳೆ ಅಧಿಕಾರ ಹಸ್ತಾಂತರ ಬಗ್ಗೆ ಪ್ರಸ್ತಾಪ ಆಗುತ್ತದೆಯೇ ಎಂಬ ಅನುಮಾನ ಶುರುವಾಗಿದೆ.
ಒಂದೊಮ್ಮೆ ಒಕ್ಕಲಿಗರ ಸಂಘ ಈ ವಿಷಯ ಪ್ರಸ್ತಾಪಿಸಿದರೆ ಸಿದ್ದರಾಮಯ್ಯ ಅವರ ಸಮುದಾಯದ ನಡೆಯೇನು ಎಂಬ ಬಗ್ಗೆಯೂ ಕುತೂಹಲ ಕೆರಳಿದೆ. ಹೀಗಾಗಿ ರಾಜಕೀಯದಲ್ಲಿ ತೀವ್ರ ಚಟುವಟಿಕೆ ನಿರೀಕ್ಷಿಸಲಾಗಿದೆ.
ಮುಖ್ಯಪಾತ್ರ ವಹಿಸಿದ್ರಾ ಪ್ರಿಯಾಂಕಾ ಗಾಂಧಿ?
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಜತೆಗಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಸಭೆಯು ಮಧ್ಯಾಹ್ನದವರೆಗೆ ಸಂಪುಟ ಪುನಾರಚನೆ ಮತ್ತಿತರ ವಿಷಯಗಳಿಗೆ ಮಾತ್ರ ಸೀಮಿತವಾಗಿತ್ತು. ಮಧ್ಯಾಹ್ನ 3.30ಕ್ಕೆ ರಾಹುಲ್ ಗಾಂಧಿ ಅವರು ಸೋನಿಯಾ ಭೇಟಿ ಮಾಡಿದರು. ಈ ವೇಳೆ ಸೋನಿಯಾ ಗಾಂಧಿ ಜತೆಗೆ ಪ್ರಿಯಾಂಕಾ ಗಾಂಧಿಯೂ ಚರ್ಚಿಸಿದ್ದು, ಬಳಿಕ ಸಂಜೆ 4.20ಕ್ಕೆ ಪುನಃ ಇಂದಿರಾಭವನಕ್ಕೆ ಆಗಮಿಸಿದ ರಾಹುಲ್‌ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಆಫರ್ ನೀಡಿದರು ಎನ್ನಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಆಫರ್ ಹಿಂದೆ ಪ್ರಿಯಾಂಕಾ ಮುಖ್ಯಪಾತ್ರ ವಹಿಸಿದ್ರಾ ಎಂಬ ಪ್ರಶ್ನೆ ಎದುರಾಗಿದೆ.


