ಪೋಲೆಂಡ್ ಕುಸ್ತಿ ಟೂರ್ನಿ: ಚಿನ್ನದ ಪದಕಕ್ಕೆ ಕೊರಳೊಡ್ಡಿದ ವಿನೇಶ್ ಫೋಗಾಟ್
* ಟೋಕಿಯೋ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ವಿನೇಶ್ ಫೋಗಾಟ್
* ವಿನೇಶ್ ಫೋಗಾಟ್ ಭಾರತದ ಭರವಸೆಯ ಮಹಿಳಾ ಕುಸ್ತಿಪಟು
* ಈ ಋುತುವಿನಲ್ಲಿ 3 ಚಿನ್ನದ ಜಯಿಸಿದ ವಿನೇಶ್ ಫೋಗಾಟ್
ವಾರ್ಸಾ(ಜೂ.12): ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಟೋಕಿಯೋ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಪೋಲೆಂಡ್ ಓಪನ್ ಕುಸ್ತಿ ಟೂರ್ನಿಯ ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ವಿನೇಶ್ ಫೋಗಾಟ್ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.
ಮೊದಲ ಸುತ್ತಿನಲ್ಲಿ 2019ರ ವಿಶ್ವ ಕಂಚು ವಿಜೇತೆ ಎಕ್ತಾರೀನಾ ವಿರುದ್ಧ ಗೆದ್ದ ವಿನೇಶ್, ಮುಂದಿನ ಸುತ್ತಿನಲ್ಲಿ ಅಮೆರಿಕದ ಏಮಿ ಆ್ಯನ್ ವಿರುದ್ಧ ಕೇವಲ 75 ಸೆಕೆಂಡ್‌ಗಳಲ್ಲಿ ಜಯಿಸಿದರು. ಇನ್ನು ಫೈನಲ್‌ನಲ್ಲಿ ಉಕ್ರೇನಿನ ಕ್ರೈಸ್ಟಿಯಾನಾ ಬ್ರೀಜಾ ಎದುರು 8-0 ಅಂಕಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ದಿದ್ದಾರೆ.
ಪೋರ್ಚುಗಲ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಪಟು ನೀರಜ್ ಚೋಪ್ರಾ
ಈ ಋುತುವಿನಲ್ಲಿ ವಿನೇಶ್ ಫೋಗಾಟ್ 3 ಚಿನ್ನದ ಜಯಿಸಿದಂತಾಗಿದೆ. ಈ ಮೊದಲು 26 ವರ್ಷದ ವಿನೇಶ್, ಮಾರ್ಚ್‌ನಲ್ಲಿ ಮೆಟ್ಟಿಯೋ ಪೆಲಿಕಾನ್ ಇವೆಂಟ್ ಟೂರ್ನಿ ಹಾಗೂ ಏಪ್ರಿಲ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಉತ್ತಮ ಫಾರ್ಮ್‌ನಲ್ಲಿರುವ ವಿನೇಶ್ ಫೋಗಾಟ್ ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.