ಫ್ರೆಂಚ್ ಓಪನ್: ಅಭಿಮಾನಿ ಬಾಲಕನಿಗೆ ಅಮೂಲ್ಯ ಗಿಫ್ಟ್ ಕೊಟ್ಟ ಜೋಕೋವಿಚ್
* 2021ರ ಫ್ರೆಂಚ್ ಓಪನ್ ಚಾಂಪಿಯನ್ ಆದ ನೊವಾಕ್ ಜೋಕೋವಿಚ್
* ಕೋರ್ಟ್‌ನಲ್ಲಿ ತಮ್ಮನ್ನು ಹುರಿದುಂಬಿಸಿದ ಅಭಿಮಾನಿಗೆ ಟೆನಿಸ್ ರ‍್ಯಾಕೆಟ್ ಗಿಫ್ಟ್ ನೀಡಿದ ಜೋಕೋ
* ಅಮೂಲ್ಯ ಗಿಫ್ಟ್ ಪಡೆದು ಕುಣಿದು ಕುಪ್ಪಳಿಸಿದ ಬಾಲಕ
ಪ್ಯಾರಿಸ್(ಜೂ.15): ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ತಮ್ಮನ್ನು ಹುರಿದುಂಬಿಸಿದ ಅಭಿಮಾನಿ ಬಾಲಕನೊಬ್ಬನಿಗೆ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್ ತಮ್ಮ ಟೆನಿಸ್ ರ‍್ಯಾಕೆಟ್ ಅನ್ನೇ ಉಡುಗೊರೆ ನೀಡಿದ್ದಾರೆ.
ಪಂದ್ಯ ಮುಗಿಯುತ್ತಿದ್ದಂತೆ ಗ್ಯಾಲರಿ ಬಳಿ ತೆರಳಿದ ನೊವಾಕ್ ಜೋಕೋವಿಚ್, ಬಾಲಕನಿಗೆ ರ‍್ಯಾಕೆಟ್ ನೀಡುತ್ತಿದ್ದಂತೆ ಆತ ಪುಳಕಗೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 2019ರಲ್ಲೂ ಪಂದ್ಯವೊಂದರ ಬಳಿಕ ಅಭಿಮಾನಿ ಬಾಲಕನೊಬ್ಬನಿಗೆ ಜೋಕೋವಿಚ್ ತಮ್ಮ ರ‍್ಯಾಕೆಟ್ ನೀಡಿದ್ದರು.
"
ಆ ಬಾಲಕ ಯಾರೆಂದು ನನಗೆ ಗೊತ್ತಿಲ್ಲ, ಆದರೆ ಇಡೀ ಪಂದ್ಯದುದ್ದಕ್ಕೂ ಆತ ನನಗೆ ಸಪೋರ್ಟ್ ಮಾಡುತ್ತಲೇ ಇದ್ದ. ನಾನು ಮೊದಲೆರಡು ಸೆಟ್‌ಗಳನ್ನು ಸೋತರೂ ನನ್ನನ್ನು ಹುರಿದುಂಬಿಸುತ್ತಲೇ ಇದ್ದ. ಅದಷ್ಟೇ ಅಲ್ಲ, ಕೆಲವೊಂದು ಸಲಹೆಗಳನ್ನು ನೀಡಿದ. ನಿಮ್ಮ ಸರ್ವ್ ಕಾಪಾಡಿಕೋ, ಆರಾಮವಾಗಿ ಆಡು, ಆತನ ಬ್ಯಾಕ್‌ಹ್ಯಾಂಡ್ ಕಡೆ ಬಾರಿಸು ಎಂದೆಲ್ಲ ಸಲಹೆ ನೀಡುತ್ತಿದ್ದ. ಈ ಮೂಲಕ ಅಕ್ಷರಶಃ ಕೋರ್ಟ್‌ನಲ್ಲಿ ನನಗೆ ಕೋಚಿಂಗ್ ಮಾಡಿದ ಎಂದು ಪಂದ್ಯ ಮುಗಿದ ಬಳಿಕ ಜೋಕೋವಿಚ್ ಹೇಳಿದ್ದಾರೆ.
ನೊವಾಕ್ ಜೋಕೋವಿಚ್‌ಗೆ ಒಲಿದ ಫ್ರೆಂಚ್ ಓಪನ್ ಕಿರೀಟ
2021ನೇ ಸಾಲಿನ ಫ್ರೆಂಚ್ ಓಪನ್ ಟೆನಿಸ್ ಫೈನಲ್‌ನಲ್ಲಿ ಗ್ರೀಸ್‌ನ 22 ವರ್ಷದ ಯುವ ಟೆನಿಸಿಗ ಸ್ಟೆಫಾನೋಸ್ ಸಿಟ್ಸಿಪಾಸ್ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ 19ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದೀಗ ಜೋಕೋ 19ನೇ ಗ್ರ್ಯಾನ್ ಸ್ಲಾಂ ಗೆಲ್ಲುವ ಮೂಲಕ ಅತಿಹೆಚ್ಚು ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿರುವ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್‌ರ ದಾಖಲೆಯ ಸನಿಹಕ್ಕೆ ಬಂದಿದ್ದಾರೆ. ಫೆಡರರ್ ಹಾಗೂ ನಡಾಲ್ ಇಬ್ಬರೂ ತಲಾ 20 ಗ್ರ್ಯಾನ್ ಸ್ಲಾಂ ಟ್ರೋಫಿಗಳನ್ನು ಗೆದ್ದಿದ್ದಾರೆ.