ನೊವಾಕ್ ಜೋಕೋವಿಚ್‌ಗೆ ಒಲಿದ ಫ್ರೆಂಚ್ ಓಪನ್ ಕಿರೀಟ

* ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಗೆದ್ದ ನೊವಾಕ್ ಜೋಕೋವಿಚ್

* 19ನೇ ಗ್ರ್ಯಾನ್‌ಸ್ಲಾಂಗೆ ಮುತ್ತಿಕ್ಕಿದ ವಿಶ್ವದ ನಂ.1 ಟೆನಿಸಿಗ

* ಸ್ಟೆಫಾನೋಸ್ ಸಿಟ್ಸಿಪಾಸ್ ಎದುರು ರೋಚಕ ಜಯ ಸಾಧಿಸಿದ ಸರ್ಬಿಯಾದ ಟೆನಿಸಿಗ

French Open Tennis 2021 Novak Djokovic Makes History With 19th Grand Slam Title kvn

ಪ್ಯಾರಿಸ್(ಜೂ.14): 4 ವರ್ಷಗಳ ಬಳಿಕ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ರಾಫೆಲ್ ನಡಾಲ್ ಬದಲು ಬೇರೆಯವರು ಚಾಂಪಿಯನ್ ಆಗಿದ್ದಾರೆ. ಈ ಬಾರಿ ಟ್ರೋಫಿಗೆ ಮುತ್ತಿಟ್ಟಿರುವುದು 2016ರ ಫ್ರೆಂಚ್ ಓಪನ್ ಚಾಂಪಿಯನ್, ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೋಕೋವಿಚ್

ಗ್ರೀಸ್‌ನ 22 ವರ್ಷದ ಯುವ ಟೆನಿಸಿಗ ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ಧ ಭಾನುವಾರ ನಡೆದ ಫೈನಲ್‌ನಲ್ಲಿ ಜೋಕೋವಿಚ್ 6-7(6-8), 2-6, 6-3, 6-2, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ತಮ್ಮ ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು. ಒಟ್ಟಾರೆ ಇದು ಅವರ 19ನೇ ಗ್ರ್ಯಾನ್ ಸ್ಲಾಂ ಗೆಲುವು. 

ಭರ್ಜರಿ ಪೈಪೋಟಿ: ಪಂದ್ಯ 4 ಗಂಟೆಗೂ ಹೆಚ್ಚು ಕಾಲ ನಡೆಯಿತು. ಮೊದಲ ಸೆಟ್ ಭಾರೀ ರೋಚಕತೆಯಿಂದ ಕೂಡಿತ್ತು. ಇಬ್ಬರೂ ತಲಾ 6 ಗೇಮ್‌ಗಳನ್ನು ಗೆದ್ದ ಕಾರಣ, ಟೈ ಬ್ರೇಕರ್ ಮೊರೆ ಹೋಗಲಾಯ್ತು. ಟೈ ಬ್ರೇಕರ್‌ನಲ್ಲಿ ಗೆದ್ದು ಸಿಟ್ಸಿಪಾಸ್ ಸೆಟ್ ತಮ್ಮದಾಗಿಸಿಕೊಂಡರು. 2ನೇ ಸೆಟ್ 6-2ರಲ್ಲಿ ಸಿಸ್ಟಿಪಾಸ್ ಪಾಲಾಯಿತು. 2 ಸೆಟ್ ಹಿನ್ನಡೆ ಅನುಭವಿಸಿದ ಮೇಲೆ ಜೋಕೋವಿಚ್ ತಮ್ಮ ಅಸಲಿ ಆಟ ಪ್ರದರ್ಶಿಸಲು ಆರಂಭಿಸಿದರು. ಜೋಕೋಗೆ ಭರ್ಜರಿ ಪೈಪೋಟಿ ನೀಡಿದರೂ, ವಿಶ್ವ ನಂ.1 ಆಟಗಾರನ ಜಾದೂಗೆ ಗ್ರೀಕ್ ಆಟಗಾರ ಸಮರ್ಥ ಉತ್ತರ ನೀಡಲು ಸಾಧ್ಯವಾಗಲಿಲ್ಲ. 3ನೇ ಹಾಗೂ 4ನೇ ಸೆಟ್‌ಗಳನ್ನು 6-3, 6-2ರಲ್ಲಿ ಸುಲಭವಾಗಿ ಗೆದ್ದ ಜೋಕೋವಿಚ್, 5ನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಸಮಬಲದ ಹೋರಾಟ ಕಂಡು ಬಂತು. ಜೋಕೋವಿಚ್ ಆರಂಭಿಕ ಮುನ್ನಡೆ ಸಾಧಿಸಿದರೂ, ಸಿಟ್ಸಿಪಾಸ್ ಹೋರಾಟ ಬಿಡಲಿಲ್ಲ. ಅಂತಿಮವಾಗಿ 6-4 ಗೇಮ್‌ಗಳಲ್ಲಿ ಜೋಕೋವಿಚ್ ಸೆಟ್ ಗೆದ್ದರು.

ಫ್ರೆಂಚ್‌ ಓಪನ್‌ 2021: 2 ದಿನದಲ್ಲಿ 2 ಗ್ರ್ಯಾನ್‌ಸ್ಲಾಂ ಜಯಿಸಿದ ಕ್ರೆಜಿಕೋವಾ

ಫೆಡರರ್, ನಡಾಲ್ 20 ಗ್ರ್ಯಾನ್ ಸ್ಲಾಂ ದಾಖಲೆ ಸರಿಗಟ್ಟಲು ಒಂದೇ ಹೆಜ್ಜೆ: ಜೋಕೋವಿಚ್ 19ನೇ ಗ್ರ್ಯಾನ್ ಸ್ಲಾಂ ಗೆದ್ದು ಅತಿಹೆಚ್ಚು ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿರುವ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್‌ರ ದಾಖಲೆಯ ಸನಿಹಕ್ಕೆ ಬಂದಿದ್ದಾರೆ. ಫೆಡರರ್ ಹಾಗೂ ನಡಾಲ್ ಇಬ್ಬರೂ ತಲಾ 20 ಗ್ರ್ಯಾನ್ ಸ್ಲಾಂ  ಟ್ರೋಫಿಗಳನ್ನು ಗೆದ್ದಿದ್ದಾರೆ. ಈ ವರ್ಷ ಇನ್ನೂ 2 ಗ್ರ್ಯಾನ್ ಸ್ಲಾಂಗಳು ಬಾಕಿ ಇದ್ದು, ಭಾರೀ ನಿರೀಕ್ಷೆ ಶುರುವಾಗಿದೆ.

4 ಗ್ರ್ಯಾನ್‌ಸ್ಲಾಂ ಒಂದಕ್ಕಿಂತ ಹೆಚ್ಚು ಸಲ ಗೆದ್ದು ಜೋಕೋ ದಾಖಲೆ: ನಾಲ್ಕೂ ಗ್ರ್ಯಾನ್ ಸ್ಲಾಂಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದ ವಿಶ್ವದ 3ನೇ ಆಟಗಾರ ಎನ್ನುವ ದಾಖಲೆಯನ್ನು ಜೋಕೋವಿಚ್ ಬರೆದಿದ್ದಾರೆ. 52 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಜೋಕೋವಿಚ್ 2 ಬಾರಿ ಫ್ರೆಂಚ್ ಓಪನ್, 9 ಬಾರಿ ಆಸ್ಟ್ರೇಲಿಯನ್ ಓಪನ್, 5 ಬಾರಿ ವಿಂಬಲ್ಡನ್ ಹಾಗೂ 3 ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ.      

Latest Videos
Follow Us:
Download App:
  • android
  • ios