ಕಾಠ್ಮಂಡು(ಡಿ.06): 13ನೇ ದಕ್ಷಿಣ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ಸ್ಪರ್ಧಿಗಳ ಪದಕದ ಬೇಟೆ 4ನೇ ದಿನವಾದ ಗುರುವಾರ ಕೂಡ ಮುಂದುವರಿಯಿತು. ವುಶು ಮತ್ತು ಈಜುಪಟುಗಳ ಅತ್ಯದ್ಭುತ ಪ್ರದರ್ಶನದಿಂದಾಗಿ ಭಾರತ 100 ಪದಕಗಳ ಗಡಿಯನ್ನು ದಾಟಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. 

ದಕ್ಷಿಣ ಏಷ್ಯನ್ ಗೇಮ್ಸ್: ಶ್ರೀಲಂಕಾವನ್ನು ಬಗ್ಗುಬಡಿದ ಭಾರತ ಕಬಡ್ಡಿ ತಂಡ

ಭಾರತ ಸದ್ಯ 62 ಚಿನ್ನ, 41 ಬೆಳ್ಳಿ, 21 ಕಂಚಿನೊಂದಿಗೆ 124 ಪದಕ ಜಯಿ​ಸಿದೆ. ಆತಿಥೇಯ ನೇಪಾಳ 36 ಚಿನ್ನ, 27 ಬೆಳ್ಳಿ ಮತ್ತು 38 ಕಂಚಿನೊಂದಿಗೆ 101 ಪದಕ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 17 ಚಿನ್ನ, 35 ಬೆಳ್ಳಿ ಹಾಗೂ 55 ಕಂಚಿನೊಂದಿಗೆ 107 ಪದಕ ಜಯಿಸಿ 3ನೇ ಸ್ಥಾನದಲ್ಲಿದೆ.

ದಕ್ಷಿಣ ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

ಭಾರತ ಗುರುವಾರದ ಸ್ಪರ್ಧೆಯಲ್ಲೇ 30 ಚಿನ್ನ, 18 ಬೆಳ್ಳಿ ಮತ್ತು 8 ಕಂಚಿನ ಪದಕ ಗೆದ್ದು​ಕೊಂಡಿ​ತ್ತು. 3ನೇ ದಿನದ ಮುಕ್ತಾಯಕ್ಕೆ 71 ಪದಕ ಗೆದ್ದಿದ್ದ ಭಾರತ, 4ನೇ ದಿನದಲ್ಲಿ ಬರೋಬ್ಬರಿ 50 ಪದಕಗಳನ್ನು ಬಾಚಿಕೊಂಡಿತು. ಈಜು, ವುಶು, ವೇಟ್‌ ಲಿಫ್ಟಿಂಗ್‌ ಮತ್ತು ಅಥ್ಲೆಟಿಕ್ಸ್‌ನಲ್ಲಿ ಭಾರತದ ಸ್ಪರ್ಧಿಗಳು ಪದಕಗಳ ಕೊಳ್ಳೆ ಹೊಡೆದರು. ವುಶು ಕ್ರೀಡೆಯಲ್ಲಿ ಭಾರತಕ್ಕೆ 7 ಚಿನ್ನ ದೊರೆಯಿತು. ಈಜು ಸ್ಪರ್ಧೆಯಲ್ಲಿ 4 ಚಿನ್ನ ಸಹಿತ 11 ಪದಕಗಳು ಬಂದವು. ಪುರುಷರ 200 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಕರ್ನಾ​ಟ​ಕದ ಲಿಖಿತ್‌ ಎಸ್‌.ಪಿ, 2 ನಿಮಿಷ 14.67 ಸೆ.ಗಳಲ್ಲಿ ಗುರಿ ಮುಟ್ಟಿಚಿನ್ನ ಗೆದ್ದರು. ಪುರುಷರ 200 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಫರ್ನಾಂಡಿಸ್‌ 2 ನಿಮಿಷ 38.05 ಸೆ.ಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರು. ಮಹಿಳೆಯರ 100 ಮೀ. ಬಟರ್‌ಫ್ಲೈನಲ್ಲಿ ದಿವ್ಯಾ ಸತಿಜಾ 1 ನಿಮಿಷ 02.78 ಸೆ.ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು.

ದಕ್ಷಿಣ ಏಷ್ಯನ್ ಗೇಮ್ಸ್: 2ನೇ ದಿನ ಭಾರ​ತಕ್ಕೆ 27 ಪದ​ಕ!

ವೇಟ್‌ ಲಿಫ್ಟಿಂಗ್‌ ಮೊದಲ ದಿನದ ಸ್ಪರ್ಧೆಯಲ್ಲಿ ಭಾರತ 4 ಚಿನ್ನ ಜಯಿಸಿತು. ಟೆಕ್ವಾಂಡೋ ಸ್ಪರ್ಧಿಗಳು ನೀಡಿದ ಉತ್ತಮ ಪ್ರದರ್ಶನದಿಂದಾಗಿ 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನೊಂದಿಗೆ ಒಟ್ಟು 6 ಪದಕ ಮೂಡಿ ಬಂತು. ಪುರುಷರ 400 ಮೀ. ಓಟದಲ್ಲಿ ಕರ್ನಾಟಕದ ಕೆ.ಎಸ್‌. ಜೀವನ್‌ ಕಂಚಿನ ಪದಕ ಗೆದ್ದರು. ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಸುರೇಂದರ ಜಯ ಕುಮಾರ್‌ ಬೆಳ್ಳಿ ಗೆದ್ದರು. ಮಹಿಳೆಯರ 400 ಮೀ. ಓಟದಲ್ಲಿ ಪ್ರಿಯಾ ಹಬ್ಬಂತನಹಳ್ಳಿ ಬೆಳ್ಳಿ ಪದಕ ಗೆದ್ದರು. ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಅಪರ್ಣಾ ರಾಯ್‌ ಬೆಳ್ಳಿ ಜಯಿಸಿದರು. ಟೇಬಲ್‌ ಟೆನಿಸ್‌ನಲ್ಲಿ ಭಾರತ 4 ಪದಕ ಖಚಿತ ಪಡಿ​ಸಿ​ಕೊಂಡರೆ, ಪುರು​ಷರ ಕಬಡ್ಡಿ ತಂಡ ಶ್ರೀಲಂಕಾ ವಿರುದ್ಧ ಗೆದ್ದು ಶುಭಾ​ರಂಭ ಮಾಡಿ​ತು. ಮಹಿಳಾ ತಂಡ ಬಾಂಗ್ಲಾ​ದೇ​ಶ​ವನ್ನು ಮಣಿಸಿತು.