ಸತತ 2ನೇ ವರ್ಷ ಫೈನಲ್‌ಗೇರುವ ತವಕದಲ್ಲಿ ಬೆಂಗಳೂರು ಬುಲ್ಸ್!
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿಂದು ಸೆಮಿಫೈನಲ್ ಹೋರಾಟ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದಿಲ್ಲಿ ತಂಡಗಳು ಹೋರಾಟ ನಡೆಸುತ್ತಿದೆ. ಹಾಲಿ ಚಾಂಪಿಯನ್ ಬುಲ್ಸ್, ಸತತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಅಹಮದಾಬಾದ್(ಅ.16): ಪ್ರೊ ಕಬಡ್ಡಿ 7ನೇ ಆವೃತ್ತಿಯ ಸೆಮಿಫೈನಲ್ ಸೆಣಸಾಟ ಬುಧವಾರ ಇಲ್ಲಿನ ಟ್ರ್ಯಾನ್ಸ್ ಸ್ಟೇಡಿಯಾ ಅರೇನಾದಲ್ಲಿ ನಡೆಯಲಿದೆ. ಮೊದಲ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಮುಖಾಮುಖಿಯಾಗಲಿವೆ.
ರೈಡ್ ಮಷಿನ್ ಪವನ್ ಶೆರಾವತ್ ಅಬ್ಬರದ ರೈಡಿಂಗ್ ನೆರವಿನಿಂದ ಕಳೆದ ಬಾರಿ ಚಾಂಪಿಯನ್ ಆಗಿದ್ದ ಬುಲ್ಸ್ ಈ ಬಾರಿಯೂ ಅವರನ್ನೇ ನೆಚ್ಚಿಕೊಂಡಿದೆ. ಪವನ್ ಮಿಂಚಿದರಷ್ಟೇ ಬುಲ್ಸ್‌ಗೆ ಜಯ. ಮೊದಲ ಎಲಿಮಿನೇಟರ್ ಪಂದ್ಯದಲ್ಲೂ 20 ಅಂಕ ಗಳಿಸಿ ಬುಲ್ಸ್ ಸೆಮೀಸ್ಗೇರಿಸಿದ್ದ ಪವನ್, ಇನ್ನೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ಯುಪಿಗೆ ಗುಮ್ಮಿ ಸೆಮೀಸ್ ಗೆ ಲಗ್ಗೆ ಇಟ್ಟ ಬೆಂಗ್ಳೂರು 'ಗೂಳಿಗಳು'
ಒನ್ ಮ್ಯಾನ್ ಆರ್ಮಿ: ಪವನ್ ಬೆಂಗಳೂರು ತಂಡದ ಒನ್ ಮ್ಯಾನ್ ಆರ್ಮಿಯಂತಾಗಿದ್ದಾರೆ. ತಂಡ ಈ ಆವೃತ್ತಿಯಲ್ಲಿ ಒಟ್ಟು 497 ರೈಡ್ ಅಂಕ ಗಳಿಸಿದ್ದು, ಇದರಲ್ಲಿ 321 ಅಂಕಗಳನ್ನು ಪವನ್ ಒಬ್ಬರೇ ಪಡೆದಿದ್ದಾರೆ. ಪಂದ್ಯದಲ್ಲಿ ತಂಡದ ಪರ ಬಹುತೇಕ ರೈಡ್‌ಗಳನ್ನು ನಡೆಸುವ ಪವನ್, ಸಾಧ್ಯವಾದಷ್ಟುಹೆಚ್ಚಿನ ಸಮಯ ಅಂಕಣದಲ್ಲಿ ಕಳೆದರೆ ಬುಲ್ಸ್‌ಗೆ ಹೆಚ್ಚು ಲಾಭ.
ಪವನ್ ನಂತರ ಹೆಚ್ಚು ರೈಡ್ ಅಂಕ ಗಳಿಸಿರುವ ಬುಲ್ಸ್ ಆಟಗಾರ ಎಂದರೆ ರೋಹಿತ್ ಕುಮಾರ್ (89). ಗಾಯದ ಸಮಸ್ಯೆಯಿಂದಾಗಿ ರೋಹಿತ್ ಈ ಆವೃತ್ತಿಯಲ್ಲಿ ಸಾಧಾರಣ ಪ್ರದರ್ಶನ ತೋರಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಗಾಯದ ನಡುವೆಯೂ ಅವರು ಕಣಕ್ಕಿಳಿದು ಆಡಿದ್ದರು. ಸೆಮೀಸ್‌ನಲ್ಲಿ ಪವನ್‌ಗೆ ರೋಹಿತ್‌ರಿಂದ ಉತ್ತಮ ಬೆಂಬಲ ಸಿಕ್ಕರೆ ಬುಲ್ಸ್ ಗೆಲುವು ಸುಲಭವಾಗಲಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019 : ಚಾಂಪಿಯನ್ನರಿಗೆ 3 ಕೋಟಿ!
ಡಿಫೆಂಡರ್‌ಗಳ ಮೇಲೆ ಒತ್ತಡ: ಈ ಆವೃತ್ತಿಯಲ್ಲಿ ಅತಿಹೆಚ್ಚು ಅಂಕಗಳನ್ನು ಬಿಟ್ಟುಕೊಟ್ಟತಂಡಗಳ ಪಟ್ಟಿಯಲ್ಲಿ ಬುಲ್ಸ್ 2ನೇ ಸ್ಥಾನದಲ್ಲಿದೆ. ತಂಡ 802 ಅಂಕಗಳನ್ನು ಬಿಟ್ಟುಕೊಟ್ಟಿದ್ದು, ರಕ್ಷಣಾ ಪಡೆ ಎಷ್ಟುಕಳಪೆಯಾಗಿದೆ ಎನ್ನುವುದನ್ನು ತೋರಿಸುತ್ತದೆ. ಬುಲ್ಸ್‌ನ ಡಿಫೆಂಡರ್‌ಗಳು 23 ಪಂದ್ಯಗಳಿಂದ 224 ಟ್ಯಾಕಲ್ ಅಂಕಗಳನ್ನು ಕಲೆಹಾಕಿದ್ದರೂ, ಸ್ಥಿರ ಪ್ರದರ್ಶನ ತೋರುವಲ್ಲಿ ಸತತ ವೈಫಲ್ಯ ಕಾಣುತ್ತಿದ್ದಾರೆ. ಬಲಿಷ್ಠ ದಬಾಂಗ್ ಡೆಲ್ಲಿಯನ್ನು ಕಟ್ಟಿಹಾಕಬೇಕಿದ್ದರೆ ರಕ್ಷಣಾ ಪಡೆ ತನ್ನ ಪ್ರದರ್ಶನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ.
ಇದನ್ನೂ ಓದಿ: 2024ರ ಒಲಿಂಪಿಕ್ಸ್ಗೆ ಕಬಡ್ಡಿ ಸೇರಲಿ: ಕಿರಣ್ ರಿಜಿಜು
ಡೆಲ್ಲಿಗೆ ನವೀನ್ ಆಸರೆ: ಯುವ ರೈಡರ್ ನವೀನ್ ಕುಮಾರ್ ಈ ಆವೃತ್ತಿಯಲ್ಲಿ ಸತತ 19 ಪಂದ್ಯಗಳಲ್ಲಿ ಸೂಪರ್ 10 ಸಾಧಿಸಿದ್ದಾರೆ. 21 ಪಂದ್ಯಗಳಿಂದ 268 ರೈಡ್ ಅಂಕ ಸಂಪಾದಿಸಿರುವ ನವೀನ್, ಡೆಲ್ಲಿ ಪಾಲಿನ ಟ್ರಂಪ್ ಕಾರ್ಡ್ ಎನಿಸಿದ್ದು ತಂಡ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ. ಚಂದ್ರನ್ ರಂಜಿತ್ (110 ರೈಡ್ ಅಂಕ)ರಿಂದ ನವೀನ್‌ಗೆ ಉತ್ತಮ ಬೆಂಬಲ ಸಿಗುತ್ತಿದ್ದು, ಈ ಇಬ್ಬರು ಬುಲ್ಸ್ ಡಿಫೆಂಡರ್‌ಗಳನ್ನು ಕಾಡಲಿದ್ದಾರೆ.
ಈ ಆವೃತ್ತಿಯಲ್ಲಿ ಅತಿಕಡಿಮೆ ಟ್ಯಾಕಲ್ ಅಂಕಗಳನ್ನು ಪಡೆದ ತಂಡಗಳ ಪಟ್ಟಿಯಲ್ಲಿ ಡೆಲ್ಲಿ 11ನೇ ಸ್ಥಾನದಲ್ಲಿದೆ. 22 ಪಂದ್ಯಗಳಿಂದ ತಂಡ 204 ಟ್ಯಾಕಲ್ ಅಂಕ ಗಳಿಸಿದೆ. ಡೆಲ್ಲಿ ಡಿಫೆಂಡರ್‌ಗಳನ್ನು ಪವನ್ ಹೇಗೆ ವಂಚಿಸಿ ಅಂಕ ಹೆಕ್ಕುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ 2 ಪಂದ್ಯಗಳನ್ನು ಆಡಿರುವ ಬುಲ್ಸ್, 1ರಲ್ಲಿ ಸೋತು ಮತ್ತೊಂದನ್ನು ಟೈ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಗೆದ್ದು ಫೈನಲ್ಗೇರುವುದು ಹಾಲಿ ಚಾಂಪಿಯನ್ ತಂಡದ ಗುರಿಯಾಗಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ
2ನೇ ಸೆಮೀಸ್‌ನಲ್ಲಿ ಯು ಮುಂಬಾ ಎದುರಾಳಿ
ಬುಧವಾರ 2ನೇ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಯು ಮುಂಬಾ ತಂಡಗಳು ಎದುರಾಗಲಿವೆ. ಎರಡೂ ತಂಡಗಳು ರೈಡಿಂಗ್ ಹಾಗೂ ಡಿಫೆಂಡಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಬೆಂಗಾಲ್ ಮೊದಲ ಬಾರಿಗೆ ಫೈನಲ್ ಪ್ರವೇಶಿಸಲು ಕಾತರಿಸುತ್ತಿದ್ದರೆ, ಮುಂಬಾ ಮತ್ತೊಮ್ಮೆ ಫೈನಲ್‌ಗೇರಿ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ.