ಯುಪಿಗೆ ಗುಮ್ಮಿ ಸೆಮೀಸ್ ಗೆ ಲಗ್ಗೆ ಇಟ್ಟ ಬೆಂಗ್ಳೂರು 'ಗೂಳಿಗಳು'
ಸೆಮಿಫೈನಲ್‌ಗೆ ಪ್ರವೇಶಿಸಿದ ಬೆಂಗಳೂರು ಬುಲ್ಸ್| ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧ ವಿರುದ್ಧ ಗೆದ್ದು ಸೆಮೀಸ್ ಗೆ ಲಗ್ಗೆ| 48-45ರ ಅಂತರದಿಂದ ಯುಪಿ ಯೋಧರನ್ನ ಗುಮ್ಮಿದ ಬುಲ್ಸ್| ಮತ್ತೊಮ್ಮೆ ಚಾಂಪಿಯನ್ಸ್ ಆಗುವ ಕನಸಿನಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್.
ಅಹ್ಮದಾಬಾದ್, [ಅ.14]: ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ 2019ರ ಪ್ರೊ ಕಬಡ್ಡಿ ಲೀಗ್ ಸೀಸನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯೋಧಾ ತಂಡವನ್ನು ಮಣಿಸಿ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದೆ.
ಸೋಮವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಯುಪಿ ಯೋಧ ವಿರುದ್ಧ 45-48 ಪಾಯಿಂಟ್ಸ್ ಅಂತರದಿಂದ ಗೆಲುವಿನ ನಗೆ ಬೀರಿತು. ಮೊದಲ 40 ನಿಮಿಷದ ಪಂದ್ಯ ಮುಕ್ತಾಯವಾದಾಗ ಉಭಯ ತಂಡಗಳು 36-36 ಅಂಕಗಳ ಸಮಬಲ ಸಾಧಿಸುವ ಮೂಲಕ ಪಂದ್ಯ ಟೈ ಆಯಿತು. ಹೀಗಾಗಿ ಫಲಿತಾಂಶಕ್ಕಾಗಿ 7 ನಿಮಿಷಗಳ ಹೆಚ್ಚುವರಿ ಆಟಕ್ಕೆ ಮೊರೆ ಹೋಗಲಾಯಿತು. ಸ್ಟಾರ್ ರೈಡರ್ ಪವನ್ ಶೆರಾವತ್ ಮಿಂಚಿನ ಪ್ರದರ್ಶನ ತೋರುವುದರೊಂದಿಗೆ ತಂಡಕ್ಕೆ ಮತ್ತೊಂದು ಸ್ಮರಣೀಯ ಗೆಲುವು ತಂದಿತ್ತರು. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ಸ್ ಬುಲ್ಸ್ ಪಡೆ ಮತ್ತೊಮ್ಮೆ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.
ಪ್ರೊ ಕಬಡ್ಡಿ 2019 : ಚಾಂಪಿಯನ್ನರಿಗೆ 3 ಕೋಟಿ!
ಬೆಂಗಳೂರು ಬುಲ್ಸ್ ಸ್ಟಾರ್ ರೈಡರ್ ಪವನ್ ಕುಮಾರ್ ಚಾಣಾಕ್ಷತನದ ಆಟ ಪ್ರದರ್ಶಿಸಿದರು. ಇದರಿಂದ ಬೆಂಗಳೂರು ಬುಲ್ಸ್ ಸೆಮಿಫೈನಲ್ ಗೆ ಪ್ರವೇಶಿಸುವ ಮೂಲಕ ಪ್ರಶಸ್ತಿ ಕನಸನ್ನು ಜೀವಂತವಾಗಿರಿಸಿದೆ.
ಬುಲ್ಸ್ ಪರ ಪವನ್ ಕುಮಾರ್ 18 ರೈಡ್, 2 ಬೋನಸ್ ಅಂಕಗಳೊಂದಿ ಒಟ್ಟು 20 ಪಾಯಿಂಟ್ಸ್ ಗಳಿಸಿದ್ರೆ, ಸುಮಿತ್ ಸಿಂಗ್ 7, ಮಣೀಂದರ್ ಸಿಂಗ್ 4, ರೋಹಿತ್ ಕುಮಾರ್ 3, ಅಮಿತ್ ಶಿರೋನ್ 2, ಸೌರಭ್ ನಂದಲ್ 2 ಅಂಕ ಪಡೆಯುವ ಮೂಲಕ ತಂಡವನ್ನು ಸೆಮೀಸ್ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಯುಪಿ ಪೈಕಿ ರಿಶಾಂಕ್ ದೇವಾಡಿಗ 11, ಶ್ರೀಕಾಂತ್ ಜಾಧವ್ 9, ಸುಮಿತ್ 5, ಸುರೇಂದರ್ ಗಿಲ್ 5, ನಿತೇಶ್ ಕುಮಾರ್ 5, ಮೋನು ಗೋಯಟ್ 5, ಅಮಿತ್ 1, ಅಶು ಸಿಂಗ್ 1 ಅಂಕಗಳೊಂದಿಗೆ ಬುಲ್ಸ್ ಗೆ ಭರ್ಜರಿ ಪೈಪೋಟಿ ನೀಡಿದರಾದರೂ ಕೊನೆಗಳಿಗೆಯಲ್ಲಿ ಬುಲ್ಸ್ ವಿಜಯಪತಾಕೆ ಹಾರಿಸಿತು.
ಇನ್ನು ಸೆಮಿಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ತಂಡ ಬಲಿಷ್ಠ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ. ಮೊದಲ ಸೆಮಿಫೈನಲ್ ಪಂದ್ಯ ಅಕ್ಟೋಬರ್ 16ರಂದು ನಡೆಯಲಿದೆ.