ಹರಿಯಾಣದ ಬಡ ಕುಟುಂಬದ ನೀರು ಧಾಂಡಾ ಏಷ್ಯನ್ ಗೇಮ್ಸ್‌ನ ಟ್ರ್ಯಾಪ್ ಶೂಟಿಂಗ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ತೀವ್ರ ಎಚ್1ಎನ್1 ಜ್ವರ ಹಾಗೂ ಬಡತನವನ್ನು ಮೆಟ್ಟಿ ನಿಂತ ಇವರು, 1978ರ ಬಳಿಕ ಈ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ಮೊದಲ ಮಹಿಳೆಯಾಗಿದ್ದಾರೆ.
ನವದೆಹಲಿ (ಸೆ.30): ಹರಿಯಾಣದ ಸಂಗತ್‌ಪುರ ಗ್ರಾಮದ 48 ವರ್ಷದ ಸುದೇಶ್ ದೇವಿ ಮಂಗಳವಾರ ಬೆಳಿಗ್ಗೆ ಕೈಯಲ್ಲಿ ಬಿಪಿಎಲ್ (BPL) ಕಾರ್ಡ್ ಹಿಡಿದು ತಮ್ಮ ಸಿಂಗಲ್ ಬೆಡ್‌ರೂಮ್‌ನ ಪುಟ್ಟ ಮನೆಯಿಂದ ಪಡಿತರ (PDS) ಅಂಗಡಿಯತ್ತ ನಡೆದು ಹೋಗುತ್ತಿದ್ದರು. ಅದೇ ಸಮಯದಲ್ಲಿ ಅವರ ಬಳಿಯಿದ್ದ ಹಳೆಯ, ಬಟನ್ ಒತ್ತುವ ಸಾಮಾನ್ಯ ಕೀಪ್ಯಾಡ್ ಮೊಬೈಲ್ ಫೋನ್ ಶಬ್ದ ಮಾಡಿತು. ಕರೆ ಸ್ವೀಕರಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬರು "ನಿಮ್ಮ ಮಗಳು ನೀರು ಧಾಂಡಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ" ಎಂದು ತಿಳಿಸಿದರು. ಆ ಕ್ಷಣಕ್ಕೆ ಸುದೇಶ್ ದೇವಿ ಸ್ಥಳದಲ್ಲೇ ನಿಂತುಕೊಂಡು ಬಿಟ್ಟರು. ಸಂತೋಷದಿಂದ ಕುಣಿದಾಡಬೇಕೆನಿಸಿದರೂ, ಸುದ್ದಿ ನಿಜವೋ ಅಲ್ಲವೋ ಎಂದು ಖಾತ್ರಿಪಡಿಸಿಕೊಳ್ಳಲು ಸುತ್ತಲೂ ಯಾರಾದರೂ ಇದ್ದಾರೆಯೇ ಎಂದು ಹುಡುಕಿದರು.
"ನಮ್ಮ ಮನೆಯಲ್ಲಿ ಟಿವಿ ಇಲ್ಲ, ಸ್ಮಾರ್ಟ್‌ಫೋನ್‌ಗಳೂ ಇಲ್ಲ. ಮಂಗಳವಾರ ಆಕೆಗೆ ಸ್ಪರ್ಧೆ ಇದೆ ಎಂದು ಮಾತ್ರ ಗೊತ್ತಿತ್ತು, ಸುದ್ದಿ ತಿಳಿಯಲು ಬೇರೆ ಮಾರ್ಗವಿರಲಿಲ್ಲ" ಎಂದು ನಂತರ ಭಾವುಕರಾಗಿ ನುಡಿದರು. ಪಡಿತರ ತಂದು ಮನೆಗೆ ಹಿಂತಿರುಗಿದ ಮೇಲೆಯೂ ಅವರಿಗೆ ಮಗಳು ಏಷ್ಯನ್ ಗೇಮ್ಸ್‌ನಲ್ಲಿ ಗೋಲ್ಡ್ ಗೆದ್ದಿದ್ದಾಳೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. ಈ ನೀರು ಧಾಂಡಾ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಸ್ವರ್ಣ ಗೆದ್ದು ಈಗ ಇತಿಹಾಸ ರಚಿಸಿದ್ದಾರೆ.
ನಗೋಯಾದಲ್ಲಿ ನೀರು ಧಾಂಡಾ ಇತಿಹಾಸ: 1978ರ ಬಳಿಕ ಭಾರತಕ್ಕೆ ಸಿಕ್ಕ ಪ್ರಥಮ ಚಿನ್ನ!
ಅತ್ತ ಜಪಾನ್‌ನ ನಗೋಯಾದ ಮಳೆಯಿಂದ ಕೂಡಿದ, ಎತ್ತರದ ಶೂಟಿಂಗ್ ರೇಂಜ್‌ನಲ್ಲಿ 24 ವರ್ಷದ ನೀರು ಧಾಂಡಾ ತಮ್ಮ ತಾಯಿಯ ಕನಸನ್ನು ನನಸು ಮಾಡುತ್ತಿದ್ದರು. ಮಹಿಳೆಯರ ವೈಯಕ್ತಿಕ 'ಟ್ರ್ಯಾಪ್ ಶೂಟಿಂಗ್' (Individual Trap Shooting) ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಇತಿಹಾಸ ಬರೆದರು. ಅಷ್ಟೇ ಅಲ್ಲದೆ, 1978ರಲ್ಲಿ ದಿವಂಗತ ರಣಧೀರ್ ಸಿಂಗ್ ಚಿನ್ನ ಗೆದ್ದ ಬಳಿಕ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಗೋಲ್ಡ್ ಮೆಡಲ್ ಇದಾಗಿದೆ!
ಹಿಂದಿನ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ 7 ಚಿನ್ನದ ಪದಕಗಳನ್ನು ಗೆದ್ದಿತ್ತಾದರೂ, ಈ ಬಾರಿಯ ನಗೋಯಾ ಕೂಟದಲ್ಲಿ ಭಾರತೀಯ ಶೂಟರ್‌ಗಳಿಗೆ ತೀವ್ರ ಹಿನ್ನಡೆಯಾಗಿತ್ತು. ಆದರೆ ನೀರು ಧಾಂಡಾ ದೇಶದ ಮೊದಲ ಚಿನ್ನದ ಪದಕವನ್ನು ತಂದುಕೊಡುವ ಮೂಲಕ ಭಾರತದ ಪದಕದ ಖಾತೆಗೆ ಹೊಸ ಮೆರುಗು ನೀಡಿದರು, ಇದರ ಬೆನ್ನಲ್ಲಿಯೇ ಮಿಶ್ರ ಟ್ರ್ಯಾಪ್ ವಿಭಾಗದಲ್ಲೂ ಮತ್ತೊಂದು ಚಿನ್ನ ಗದ್ದಿದ್ದಾರೆ.
ಹೆಚ್1ಎನ್1 (H1N1) ಜ್ವರ, ಆಸ್ಪತ್ರೆಯ ಹಾಸಿಗೆಯಿಂದ ಏಷ್ಯನ್ ಗೇಮ್ಸ್ ಪದಕ ವೇದಿಕೆಗೆ
ಈ ಐತಿಹಾಸಿಕ ಪದಕದ ಹಿಂದೆ ಕೇವಲ ಕಠಿಣ ಅಭ್ಯಾಸ ಮಾತ್ರವಲ್ಲ, ಜೀವನ್ಮರಣ ಹೋರಾಟವಿತ್ತು. ಪಂದ್ಯಾವಳಿಗೆ ಕೇವಲ ಎರಡು ವಾರಗಳಷ್ಟೇ ಬಾಕಿ ಇದ್ದಾಗ ಭೋಪಾಲ್‌ನ ರಾಷ್ಟ್ರೀಯ ಶಿಬಿರದ ವೇಳೆ ನೀರು ಧಾಂಡಾ ಅವರಿಗೆ ತೀವ್ರ ಹೆಚ್1ಎನ್1 ಜ್ವರ (H1N1 Flu) ಕಾಣಿಸಿಕೊಂಡು 3 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ ಕಾಲ ಕೇವಲ ದ್ರವಾಹಾರದಲ್ಲಿದ್ದ (Liquid Diet) ಅವರು, ಸತತ ಮೂರೂವರೆ ವಾರಗಳ ಕಾಲ ಯಾವುದೇ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ತರಬೇತಿಯ ಕೊರತೆಯೊಂದಿಗೆ ನಗೋಯಾಗೆ ತಲುಪಿದರೂ, ಅವರಲ್ಲಿದ್ದ ಗೆಲ್ಲುವ ಆತ್ಮವಿಶ್ವಾಸ ಮತ್ತು ಛಲ ಮಾತ್ರ ಕುಗ್ಗಿರಲಿಲ್ಲ.
ಮಂಗಳವಾರ ರೇಂಜ್‌ನಲ್ಲಿ ಮಳೆ ಸುರಿಯುತ್ತಿದ್ದು, ಗುರಿ ತಪ್ಪುವ ವಾತಾವರಣವಿತ್ತು. ಆದರೆ ನೀರು ಧಾಂಡಾ ತಮ್ಮ ಮನಸ್ಸಿನಲ್ಲಿ "ಇಂದು ಬಿರುಗಾಳಿಯೇ ಬಂದರೂ ನಾನು ಕೆಳಗೆ ನೋಡಬಾರದು, ನೇರವಾಗಿ ಗುರಿಯನ್ನಷ್ಟೇ ನೋಡಬೇಕು" ಎಂದು ಪ್ರತಿಜ್ಞೆ ಮಾಡಿ ಬಂದೂಕು ಹಿಡಿದಂತಿದ್ದರು. ಅವರ ಈ ಅಪಾರ ನಿಷ್ಠೆಗೆ ಪ್ರತಿಯಾಗಿ ವೈಯಕ್ತಿಕ ಕೋಚ್, ಮೂರು ಬಾರಿ ಬೆಳ್ಳಿ ಪದಕ ವಿಜೇತ ಮಾನ್ಶೇರ್ ಸಿಂಗ್ ಹಾಗೂ ರಾಷ್ಟ್ರೀಯ ತರಬೇತುದಾರ ಪೀಟರ್ ವಿಲ್ಸನ್ ಅವರ ಬೆಂಬಲ ಸಾಥ್ ನೀಡಿತ್ತು.
ಕೆರೆಯ ದಂಡೆಯಿಂದ ಆರಂಭವಾದ ಜರ್ನಿ: 'ಕಂಟ್ರಿ ಗನ್' ಹಿಡಿದು ಪರೀಕ್ಷೆ ಎದುರಿಸಿದ್ದ ಮಗಳು!
ನೀರು ಅವರ ಶೂಟಿಂಗ್ ಪಯಣ ಆರಂಭವಾಗಿದ್ದು ಹಳ್ಳಿಯ ಸಣ್ಣ ಕೆರೆಯ ದಂಡೆಯ ಮೇಲೆ. ಅವರ ಚಿಕ್ಕಪ್ಪ ಸೋಮ್‌ವೀರ್ (ಮಾಜಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್) ಒಮ್ಮೆ ನೀರು ಅವರನ್ನು ಕೆರೆಯ ಬಳಿ ಕರೆದೊಯ್ದು, ಹಳೆಯ 'ಡಬಲ್ ಬ್ಯಾರಲ್' ಗನ್ ನೀಡಿ ಸಣ್ಣ ತಗಡಿನಡಬ್ಬಿಗೆ ಶೂಟ್ ಮಾಡಲು ಹೇಳಿದರು. ಆ ಪರೀಕ್ಷೆಯಲ್ಲಿ ನೀರು ಯಶಸ್ವಿಯಾಗಿದ್ದರು. ನಂತರ 2018ರ ಏಷ್ಯನ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ಸಹೋದರ (Cousin) ಲಕ್ಷ್ಯ ಶೇರಾನ್ ಅವರಿಂದ ಪ್ರೇರಿತರಾದ ನೀರು, 2019ರಲ್ಲಿ ಉಚಿತ ಗನ್ ಮತ್ತು ತರಬೇತಿ ನೀಡುತ್ತಿದ್ದ ಮಧ್ಯಪ್ರದೇಶ ಶೂಟಿಂಗ್ ಅಕಾಡೆಮಿಗೆ ಸೇರಲು ಭೋಪಾಲ್‌ಗೆ ತೆರಳಿದರು.
"ನಮ್ಮ ಬಳಿ ಈ ಕ್ರೀಡೆಗೆ ಬೇಕಾದ ಹಣವಾಗಲಿ, ಸಂಪನ್ಮೂಲಗಳಾಗಲಿ ಇರಲಿಲ್ಲ. ಲಕ್ಷ್ಯ ಮತ್ತು ಅವರ ಕುಟುಂಬವೇ ಪ್ರತಿಯೊಂದನ್ನೂ ವ್ಯವಸ್ಥೆ ಮಾಡಿಕೊಟ್ಟಿತು. ಲಕ್ಷ್ಯನ ರೈಫಲ್‌ನಿಂದಲೇ ನನ್ನ ಮಗಳು ಅಭ್ಯಾಸ ಮಾಡುತ್ತಿದ್ದಳು. ಇಂದು ಆಕೆಯ ಸಾಧನೆ ನೋಡಿ ನನ್ನ ಹೃದಯ ಸಂತೋಷದಿಂದ ತುಂಬಿಬಂದಿದೆ" ಎಂದು ತಂದೆ ಸುರೇಶ್ ಧಾಂಡಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಎಮ್ಮೆ ಹಾಲು ಮಾರಿ ಮಗಳ ಕನಸು ನನಸು ಮಾಡಿದ ತಾಯಿ!
ಬಡತನ, ಸಂಪನ್ಮೂಲಗಳ ಕೊರತೆ ಮತ್ತು ಖಾಪ್ ಪಂಚಾಯತ್‌ಗಳ ಪ್ರಭಾವವಿರುವ ಪ್ರದೇಶದಲ್ಲೂ ನೀರು ಅವರ ತಾಯಿ ಸುದೇಶ್ ದೇವಿ ಎಮ್ಮೆ ಹಾಲು ಮಾರಿ ಬಂದ ಹಣದಿಂದ ಮಗಳ ಕ್ರೀಡಾ ಕನಸಿಗೆ ನೀರೆರೆದಿದ್ದರು. ಜೀಂದ್‌ನಲ್ಲಿರುವ ಅವರ ಪುಟ್ಟ ಮನೆಗೆ ತಲುಪಿದಾಗ, ತಾಯಿ ಸುದೇಶ್ ದೇವಿ ಪಾತ್ರೆ ತೊಳೆಯುತ್ತಿದ್ದರು. "ನನ್ನ ನೀರು ನಿಜವಾಗಿಯೂ ಚಿನ್ನ ಗೆದ್ದಿದ್ದಾಳೆಯೇ?" ಎಂದು ಆಶ್ಚರ್ಯದಿಂದ ಕೇಳುತ್ತಾ ಸೋಪಿನ ನೊರೆಯಿಂದ ಕೂಡಿದ ಕೈಗಳನ್ನೇ ಎತ್ತಿ ಸಂಭ್ರಮಿಸಿದರು. ಕೆಲವೇ ಕ್ಷಣಗಳಲ್ಲಿ ಇಡೀ 'ಸಂಗತ್‌ಪುರ' ಗ್ರಾಮಸ್ಥರು ಜೀಂದ್‌ನ ಮಗಳ ಸಾಧನೆಯನ್ನು ಕೊಂಡಾಡಲು ಅವರ ಮನೆಗೆ ಹರಿದುಬಂದರು.
ಮಗಳ ಮದುವೆಯ ಕುರಿತು ಮಾತನಾಡಿದ ತಾಯಿ, "ನಾಲ್ಕು ಮಂದಿ ಏನೇ ಅಂದರೂ 'ಅಮ್ಮಾ ನನ್ನ ಮೇಲೆ ನಂಬಿಕೆ ಇಡು' ಎಂದು ನೀರು ಹೇಳುತ್ತಿದ್ದಳು. ಕುಟುಂಬಕ್ಕೆ ಮೊದಲು ಒಂದು ಒಳ್ಳೆಯ ಮನೆ ನಿರ್ಮಿಸಿ ಕೊಟ್ಟು, ನಂತರವೇ ಮದುವೆಯಾಗುವುದಾಗಿ ವಚನ ನೀಡಿದ್ದಳು. ಇಂದಿನ ಈ ಗೆಲುವಿನಿಂದ ನಮ್ಮ ಎಲ್ಲಾ ಕನಸುಗಳು ನನಸಾದಂತಾಗಿದೆ" ಎಂದು ಕಣ್ಣು ಒದ್ದೆ ಮಾಡಿಕೊಂಡರು.


