ಇಂದಿನಿಂದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ ಅಧಿಕೃತ ಚಾಲನೆಭಾರತೀಯ ಕಾಲಮಾನ ಸಂಜೆ 5.30ಕ್ಕೆ  ಹಾಂಗ್ಝೂ ಒಲಿಂಪಿಕ್ಸ್‌ ಸ್ಪೋರ್ಟ್ಸ್‌ ಸೆಂಟರ್‌ನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭಲವ್ಲೀನಾ, ಹರ್ಮನ್‌ಪ್ರೀತ್‌ ಭಾರತದ ಧ್ವಜಧಾರಿಗಳು

ಹಾಂಗ್ಝೂ(ಸೆ.23): ಒಂದೂವರೆ ದಶಕದಲ್ಲಿ 3ನೇ ಬಾರಿಗೆ ಚೀನಾ ಜಾಗತಿಕ ಮಟ್ಟದ ಕ್ರೀಡಾಕೂಟದ ಆಯೋಜನೆಗೆ ಸಜ್ಜುಗೊಂಡಿದೆ. 2008ರಲ್ಲಿ ಬೀಜಿಂಗ್‌ ಒಲಿಂಪಿಕ್ಸ್‌ ಮೂಲಕ ಜಗತ್ತಿಗೆ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದ ಚೀನಾ, 2010ರ ಗುವಾಂಗ್ಝು ಏಷ್ಯನ್‌ ಗೇಮ್ಸ್‌ ಮೂಲಕ ಕ್ರೀಡಾಲೋಕದಲ್ಲಿ ತನ್ನ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡಿತ್ತು. ಇದೀಗ ಚೀನಿಯರ ಪಾಲಿನ ‘ಸ್ವರ್ಗ’ ಎಂದೇ ಕರೆಸಿಕೊಳ್ಳುವ, ಧಾರ್ಮಿಕವಾಗಿಯೂ ಮಹತ್ವ ಪಡೆದಿರುವ ಹಾಂಗ್ಝೂ ನಗರದಲ್ಲಿ 19ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ ಆಯೋಜಿಸುವ ಮೂಲಕ ಚೀನಾ ಜಗತ್ತಿಗೆ ಕೆಲ ಪ್ರಮುಖ ಸಂದೇಶಗಳನ್ನು ರವಾನಿಸಲು ಹೊರಟಿದೆ.

ಒಂದು ಕಡೆ ಮುಂದಿನ ವರ್ಷದ ಒಲಿಂಪಿಕ್ಸ್‌ಗೂ ಮುನ್ನ ತನ್ನ ಕ್ರೀಡಾಪಟುಗಳನ್ನು ಪರೀಕ್ಷೆಗಿಳಿಸುವುದು ಒಂದು ಉದ್ದೇಶವಾದರೆ, ಕೊರೋನಾ ಮಹಾಮಾರಿಯ ಹೊಡೆತದಿಂದ ತಾನು ಚೇತರಿಸಿಕೊಂಡಿದ್ದು, ಆರ್ಥಿಕ ಸ್ಥಿತಿ ಕೋವಿಡ್‌ ಪೂರ್ವ ಸ್ಥಿತಿಗೆ ಮರಳಿದೆ ಎನ್ನುವುದನ್ನು ಸಾಬೀತು ಪಡಿಸಲು ಚೀನಾ ಹೊರಟಿದೆ.

ಮೈನವಿರೇಳಿಸಲಿದೆ ಉದ್ಘಾಟನಾ ಸಮಾರಂಭ!

ಶನಿವಾರ ಸಂಜೆ 5.30ಕ್ಕೆ(ಭಾರತೀಯ ಕಾಲಮಾನ) ಹಾಂಗ್ಝೂ ಒಲಿಂಪಿಕ್ಸ್‌ ಸ್ಪೋರ್ಟ್ಸ್‌ ಸೆಂಟರ್‌ನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದ್ದು, ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆಯಲಿದೆ. ಬೀಜಿಂಗ್‌ ಒಲಿಂಪಿಕ್ಸ್‌ ಹಾಗೂ ಗುವಾಂಗ್ಝು ಏಷ್ಯಾಡ್‌ ಕೂಟಗಳ ಉದ್ಘಾಟನಾ ಸಮಾರಂಭಗಳನ್ನು ನೋಡಿದ್ದವರಿಗೆ ಏನು ನಿರೀಕ್ಷೆ ಮಾಡಬಹುದು ಎನ್ನುವುದು ತಿಳಿದಿರಲಿದೆ. ಚೀನಾದ ಸಾಂಸ್ಕೃತಿಕ ಕಲಾ ವೈಭವದ ಅನಾವರಣಗೊಳ್ಳಲಿದ್ದು, ಅತ್ಯಾಧುನಿಕ ಲೇಸರ್‌ ಶೋಗಳು, ರೋಬೋಟ್‌ಗಳ ಜೊತೆ ಚೀನಿ ತಾರೆಯರ ನೃತ್ಯ ಕಣ್ಮನ ಸೆಳೆಯಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿಡಿಮದ್ದುಗಳಿಂದ ಹಾಂಗ್ಝೂ ನಗರ ಕಂಗೊಳಿಸಲಿದ್ದು, ಆ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ರಾಂಚಿಯ ರಸ್ತೆಯಲ್ಲಿ ಜಾಲಿ ರೈಡ್ ಹೊರಟ ಧೋನಿ; ಕ್ಯಾಪ್ಟನ್ ಕೂಲ್ ಮೇಲೆ ಕೇಸ್‌ ಜಡಿಯಲು ನೆಟ್ಟಿಗರ ಆಗ್ರಹ..!

ಲವ್ಲೀನಾ, ಹರ್ಮನ್‌ಪ್ರೀತ್‌ ಭಾರತದ ಧ್ವಜಧಾರಿಗಳು

ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಪಥ ಸಂಚಲನದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನ, ಒಲಿಂಪಿಕ್ಸ್‌ ಕಂಚು ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌, ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಭಾರತದ ಧ್ವಜಧಾರಿಗಳಾಗಲಿದ್ದಾರೆ.

15 ದಿನಗಳ ಕ್ರೀಡಾಕೂಟ

ಏಷ್ಯನ್‌ ಗೇಮ್ಸ್‌ನ ಕೆಲ ಸ್ಪರ್ಧೆಗಳು 3 ದಿನಗಳ ಹಿಂದೆಯೇ ಆರಂಭಗೊಂಡಿದ್ದರೂ, ಶನಿವಾರ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಅ.8ರಂದು ಸಮಾರೋಪ ಸಮಾರಂಭ ನಡೆಯಲಿದೆ. 16 ದಿನಗಳ ಕ್ರೀಡಾಕೂಟದಲ್ಲಿ ಚೀನಾ ಮೊದಲ ಸ್ಥಾನ ಪಡೆಯಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯಾಂಶ. 2ನೇ ಸ್ಥಾನ ಪಡೆಯಲಿರುವ ತಂಡ ಗಳಿಸುವುದಕ್ಕಿಂತ ದುಪ್ಪಟ್ಟು ಚಿನ್ನದ ಪದಕಗಳನ್ನು ಹೆಕ್ಕುವುದು ಚೀನಾದ ಗುರಿಯಾಗಿರಲಿದೆ ಎಂದರೆ ತಪ್ಪಾಗಲಾರದು. ಭಾರತ ಈ ಬಾರಿ ದಾಖಲೆಯ 650ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಕಣಕ್ಕಿಳಿಸಿದ್ದು, ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ.

ನಾಯಕ ಧೋನಿ ಜತೆಗಿನ ವಾಗ್ವದದ ಬಗ್ಗೆ ಮೊದಲ ಬಾರಿ ತುಟಿಬಿಟ್ಟಿದ ಎರಡು ವಿಶ್ವಕಪ್ ವಿಜೇತ ತಂಡದ ವೇಗಿ..!

40 ಕ್ರೀಡೆ, 481 ಸ್ಪರ್ಧೆಗಳು

ಕ್ರೀಡಾಕೂಟದಲ್ಲಿ ಒಟ್ಟು 40 ಕ್ರೀಡೆಗಳ 481 ಸ್ಪರ್ಧೆಗಳು ನಡೆಯಲಿವೆ. ಕೂಟಕ್ಕೆ ಒಟ್ಟು 44 ತಾಣ ಅಥವಾ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಮೊದಲೇ ಇದ್ದ 30 ಕ್ರೀಡಾಂಗಣಗಳನ್ನು ನವೀಕರಿಸುವುದರ ಜೊತೆಗೆ 14 ಕ್ರೀಡಾಂಗಣಗಳನ್ನು ಹೊಸದಾಗಿ ನಿರ್ಮಿಸಲಾಗಿದೆ.

45 ರಾಷ್ಟ್ರಗಳ 12000+ ಅಥ್ಲೀಟ್ಸ್‌!

ಏಷ್ಯಾ ಒಲಿಂಪಿಕ್ಸ್‌ ಸಮಿತಿ(ಒಸಿಎ)ಯ ಎಲ್ಲಾ 45 ರಾಷ್ಟ್ರಗಳು ಕ್ರೀಡಾಕೂಟಕ್ಕೆ ತನ್ನ ಕ್ರೀಡಾಪಟುಗಳನ್ನು ಕಳುಹಿಸಿವೆ. ಒಟ್ಟು 12000ಕ್ಕೂ ಹೆಚ್ಚು ಕ್ರೀಡಾಳುಗಳು ಪದಕ ಬೇಟೆಗೆ ಇಳಿಯಲಿದ್ದಾರೆ. ಥಾಯ್ಲೆಂಡ್‌ ಅತಿಹೆಚ್ಚು ಅಂದರೆ 934 ಕ್ರೀಡಾಪಟುಗಳನ್ನು ಕಳುಹಿಸಿದ್ದು, ಆತಿಥೇಯ ಚೀನಾ 887 ಕ್ರೀಡಾಪಟುಗಳನ್ನು ಕಣಕ್ಕಿಳಿಸಿದೆ. ಜಪಾನ್‌ನ 773 ಕ್ರೀಡಾಪಟುಗಳು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಭಾರತದ 653 ಕ್ರೀಡಾಪಟುಗಳು ಪದಕಕ್ಕಾಗಿ ಸೆಣಸಲಿದ್ದಾರೆ. ಬ್ರೂನಿ ದೇಶವು ಕೇವಲ 11 ಕ್ರೀಡಾಪಟುಗಳನ್ನು ಏಷ್ಯಾಡ್‌ಗೆ ಕಳುಹಿಸಿದೆ.