ಡೇವಿಸ್ ಕಪ್: ಇಂದಿನಿಂದ ಭಾರತ-ಪಾಕ್ ಫೈಟ್
ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಟೆನಿಸ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಬಲಿಷ್ಠ ಭಾರತ ತಂಡ ಪಾಕಿಸ್ತಾನವನ್ನು ಬಗ್ಗುಬಡಿಯಲು ರೆಡಿಯಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಜಕಸ್ತಾನ(ನ.29): ಭಾರತ-ಪಾಕಿಸ್ತಾನ ನಡುವೆ ನಡೆಯಲಿರುವ ಏಷ್ಯಾ/ಓಶಿಯಾನಿಯಾ ಡೇವಿಸ್ ಕಪ್ ಟೆನಿಸ್ ಗುಂಪು ಹಂತದ ಪಂದ್ಯ ಶುಕ್ರವಾರದಿಂದ ಇಲ್ಲಿ ಆರಂಭವಾಗಲಿದ್ದು, ಭಾರತ ಟೂರ್ನಿ ಗೆಲ್ಲುವ ಫೇವರಿಟ್ ಎನಿಸಿದೆ.
ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸುವಂತೆ ಭಾರತ ಕೇಳಿಕೊಂಡಿತ್ತು. ಭಾರತದ ಮನವಿಯನ್ನು ಪುರಸ್ಕರಿಸಿದ್ದ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಪಂದ್ಯಗಳನ್ನು ಕಜಕಸ್ತಾನದ ನೂರ್ ಸುಲ್ತಾನದಲ್ಲಿ ಆಯೋಜಿಸಿದೆ. ಇಲ್ಲಿ ವಿಪರೀತ ಚಳಿ ಇರುವುದರಿಂದಾಗಿ ಪಂದ್ಯಗಳು ಒಳಾಂಗಣ ಕೋರ್ಟ್‌ನಲ್ಲಿ ನಡೆಯಲಿವೆ ಎಂದು ಈ ಮೊದಲೇ ನಿಗದಿಪಡಿಸಲಾಗಿತ್ತು.
ಡೇವಿಸ್ ಕಪ್: ಪಾಕ್ ಟೀಂನಲ್ಲಿ 17ರ ಟೆನಿಸಿಗರು!
ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಸುವುದನ್ನು ವಿರೋಧಿಸಿದ ಪಾಕಿಸ್ತಾನದ ಹಿರಿಯ ಟೆನಿಸ್ ಆಟಗಾರರಾದ ಐಸಾಮ್ ಉಲ್ ಹಕ್ ಖುರೇಷಿ, ಅಖಿಲ್ ಖಾನ್ ಕೂಟದಿಂದ ಹೊರಗುಳಿದಿದ್ದು, ಯುವಕರನ್ನೇ ಒಳಗೊಂಡ ಪಾಕ್ ವಿರುದ್ಧ ಭಾರತೀಯರು ಸುಲಭದಲ್ಲಿ ಜಯಿಸುವ ನಿರೀಕ್ಷೆ ಹೊಂದಿದ್ದಾರೆ.
ಭುಜದ ಗಾಯಕ್ಕೆ ತುತ್ತಾಗಿರುವ ರೋಹನ್ ಬೋಪಣ್ಣ ಈ ಮೊದಲೇ ಕೂಟದಿಂದ ಹಿಂದೆ ಸರಿದಿದ್ದರು. ಭಾರತ ತಂಡದ ಸವಾಲನ್ನು 46 ವರ್ಷದ ಲಿಯಾಂಡರ್ ಪೇಸ್ ಹಾಗೂ ಜೀವನ್ ಮುನ್ನಡೆಸಲಿದ್ದಾರೆ. ಡೇವಿಸ್ ಕಪ್ ಇತಿಹಾಸದಲ್ಲೇ ಪೇಸ್ ಅತಿಹೆಚ್ಚು 43 ಡಬಲ್ಸ್ ಗೆಲುವಿನ ದಾಖಲೆ ಹೊಂದಿದ್ದಾರೆ. 18 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳ ಒಡೆಯ ಪೇಸ್ 44ನೇ ಗೆಲುವಿನ ನಿರೀಕ್ಷೆಯಲ್ಲಿದ್ದು, ಡೇವಿಸ್ ಕಪ್ ಪದಾರ್ಪಣೆ ಮಾಡಲಿರುವ ಜೀವನ್ ನೆಡುಂಚಿಯಾನ್ ಸಾಥ್ ನೀಡಲಿದ್ದಾರೆ. ಗ್ರ್ಯಾಂಡ್‌ಸ್ಲಾಂ ಅನುಭವವಿರುವ ಸುಮಿತ್ ನಗಾಲ್, ರಾಮ್ಕುಮಾರ್ ರಾಮನಾಥನ್ ಹಾಗೂ ಲಿಯಾಂಡ್ ಭಾರತ ತಂಡದಲ್ಲಿರುವ ಇತರೆ ಆಟಗಾರರಾಗಿದ್ದಾರೆ. ರೋಹಿತ್ ರಾಜ್‌ಪಾಲ್ ತಂಡದಲ್ಲಿ ಆಟವಾಡದ ನಾಯಕನಾಗಿದ್ದಾರೆ.
ಒಳಾಂಗಣ ಕೋರ್ಟ್‌ನಲ್ಲಿ ಭಾರತ-ಪಾಕ್ ಟೆನಿಸ್
ಹಿರಿಯರ ತಂಡದ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ಟೆನಿಸ್ ಸಂಸ್ಥೆ (ಪಿಟಿಎಫ್) ಯುವಕರನ್ನು ಆಯ್ಕೆ ಮಾಡಿದ್ದು, ಪಾಕ್ ಕಿರಿಯರಿಗೆ ಇದೊಂದು ಅನುಭವ ಸಿಗಲಿದೆ. ಈ ಡೇವಿಸ್ ಕಪ್ ಸೆಣಸಿನಲ್ಲಿ ಗೆದ್ದ ತಂಡ ಕ್ರೊವೇಶಿಯಾ ಪ್ರಯಾಣಿಸಲಿದ್ದು, ಮಾರ್ಚ್ 2020ರ ವಿಶ್ವ ಗುಂಪು ಕ್ವಾಲಿಫೈಯರ್ಸ್ ಆಡಲಿದೆ.
ಸೆ. 14-15ರಂದು ನಡೆಯಬೇಕಿದ್ದ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸುವಂತೆ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ (ಐಟಿಎಫ್) ಕೊನೆಗೆ ನ.29-30ರಂದು ಇಸ್ಲಮಾಬಾದ್ನಲ್ಲಿ ನಡೆಸುವುದಾಗಿ ತಿಳಿಸಿತ್ತು. ಆದರೆ ಕೊನೆಗೂ ಭಾರತದ ಮನವಿಯಂತೆ ಪಂದ್ಯವನ್ನು ನೂರ್-ಸುಲ್ತಾನ್ಗೆ ಸ್ಥಳಾಂತರ ಮಾಡಿತ್ತು. ಭದ್ರತಾ ಸಮಸ್ಯೆ ವಿಚಾರಕ್ಕಾಗಿ ಭಾರತದ ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂದೆಸರಿದಿದ್ದರು.
ಒಳಾಂಗಣ ಕೋರ್ಟ್‌ನಲ್ಲಿ ಪಂದ್ಯಗಳು:
ಕಜಕಸ್ತಾನದ ನೂರ್ ಸುಲ್ತಾನದಲ್ಲಿ ವಿಪರೀತ ಚಳಿ ಇರುವ ಕಾರಣದಿಂದ ಭಾರತ-ಪಾಕ್ ಡೇವಿಸ್ ಕಪ್ ಪಂದ್ಯಗಳನ್ನು ಇಲ್ಲಿನ ಒಳಾಂಗಣ ಕೋರ್ಟ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಒಳಾಂಗಣದಲ್ಲಿ ಆಡುವ ಟೆನಿಸ್‌ನಲ್ಲಿ ಭಾರತದ ಆಟಗಾರರ ಗುಣಮಟ್ಟ ಹೆಚ್ಚಿದೆ. ಈ ಕಾರಣದಿಂದ ಪಾಕಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿ ಭಾರತ ತಂಡವಿದೆ. ಗಾಳಿ, ಬಿಸಿಲಿನ ಸಮಸ್ಯೆ ಇರುವುದಿಲ್ಲ. ನಮ್ಮ ಆಟಗಾರರ ಆಟದ ಶೈಲಿಗೆ ಒಳಾಂಗಣ ಕೋರ್ಟ್ ಸೂಕ್ತ ಎಂದು ಕೋಚ್ ಝೀಶಾನ್ ಅಲಿ ಹೇಳಿದ್ದಾರೆ.
ಸಮಯ: ಶುಕ್ರವಾರ ಮಧ್ಯಾಹ್ನ 1.30 ಹಾಗೂ ಶನಿವಾರ ಬೆಳಗ್ಗೆ 11.30ಕ್ಕೆ ಆರಂಭ.