ಬೆಂಗಳೂರು(ಅ.31):  ಇದು ಕರ್ನಾಟಕದ ಕ್ರೀಡಾ ಕ್ಷೇತ್ರದ ದುರದೃಷ್ಟವೋ ಅಥವಾ ದೇಶದ ಕ್ರೀಡಾ ದೀವಿಗೆಯನ್ನು ಎತ್ತಿ ಹಿಡಿಯಬೇಕಾದ ಸುಪ್ತ ಪ್ರತಿಭೆಗಳೇ ನತದೃಷ್ಟರೋ, ಬಲ್ಲವರೇ ಹೇಳಬೇಕು. ಎಂತಹ ಸವಾಲುಗಳನ್ನೂ ಎದುರಿಸಿ ಗೆಲ್ಲಬಲ್ಲ ಎಲೆಮರೆಯಕಾಯಿಗಳಿಗೆ ಅವಕಾಶ, ವೇದಿಕೆ ಸಿಗುತ್ತಿಲ್ಲ ಎಂಬ ಹಳಹಳಿಕೆ ಒಂದೆಡೆಯಾದರೆ, ರಾಜ್ಯದ ಭವಿಷ್ಯದ ಕ್ರೀಡಾ ತಾರೆಗಳನ್ನು ಗುರುತಿಸಿ, ಪೋಷಿಸಿ, ಮೆರೆಸಬೇಕಾದ ತರಬೇತುದಾರರ (ಕೋಚ್‌ಗಳ) ಆಯ್ಕೆ, ನೇಮಕಾತಿಗಳಲ್ಲಿ ಲೋಪಗಳ ಸರಮಾಲೆಯೇ ನಡೆದಿದೆ ಎಂಬ ಆಘಾತಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಕಳೆದ ಜೂನ್‌ನಲ್ಲಿ ನಡೆದಿರುವ ಈ ಪ್ರಕ್ರಿಯೆ ಬಗ್ಗೆ ಈಚೆಗಷ್ಟೇ ಕ್ರೀಡಾ ಖಾತೆಯ ಉಸ್ತುವಾರಿ ವಹಿಸಿರುವ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಗಮನಹರಿಸಬೇಕಿದೆ.

ಇದನ್ನೂ ಓದಿ: ಬೆಂಗಳೂರಿನ ಕಂಠೀರವದ ಸಿಂಥೆಟಿಕ್‌ ಟ್ರ್ಯಾಕ್‌ ಮತ್ತಷ್ಟುವಿಳಂಬ?

ಏನಿದು ಪ್ರಕರಣ?
ಕಳೆದ ಜೂನ್‌ ತಿಂಗಳಲ್ಲಿ ರಾಜ್ಯದ ಕ್ರೀಡಾ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ಖಾಲಿ ಇರುವ 100 ಕೋಚ್‌ಗಳ ಹುದ್ದೆ ಭರ್ತಿ ಮಾಡುವುದಕ್ಕಾಗಿ ಕ್ರೀಡಾ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಅದರಂತೆ 190 ಅರ್ಜಿಗಳು ಬಂದಿದ್ದವು. ಇದರಲ್ಲಿ 160 ಕ್ಕೂ ಹೆಚ್ಚು ಅಭ್ಯರ್ಥಿಗಳು ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಇದೀಗ 78 ಕೋಚ್‌ಗಳನ್ನು ಆಯಾ ಜಿಲ್ಲೆಗಳಿಗೆ ನಿಯುಕ್ತಿಗೊಳಿಸಲಾಗಿದೆ. ಇದರಲ್ಲಿ 28 ಜೂನಿಯರ್‌ ಕೋಚ್‌ಗಳು ಹಾಗೂ 12 ಫಿಟ್ನೆಸ್‌ ಟ್ರೇನರ್‌, ಇನ್ನುಳಿದ 38 ಹಿರಿಯ ಕೋಚ್‌ಗಳು ಇದ್ದಾರೆ.

ಇದನ್ನೂ ಓದಿ: ಕಂಠೀರವ ಅಥ್ಲೀಟ್‌ಗಳಿಗೆ ಮೈದಾನವೇ ಜಿಮ್‌!

ಇದನ್ನೂ ಓದಿ: ಕನ್ನಡಪ್ರಭ ಇಂಪಾಕ್ಟ್: ಕಂಠೀರವಕ್ಕೆ ಆರ್ ಅಶೋಕ್ ಭೇಟಿ-ಅಧಿಕಾರಿಗಳಿಗೆ ಕ್ಲಾಸ್!

ರಾಜ್ಯದ ವಿವಿಧ ಕ್ರೀಡಾ ವಸತಿ ಶಾಲೆಗಳಲ್ಲಿ ಖಾಲಿ ಇದ್ದ 100 ತರಬೇತುದಾರರ ಹುದ್ದೆಗಳ ಪೈಕಿ 78 ತರಬೇತುದಾರರ ಆಯ್ಕೆ, ನೇಮಕಾತಿ, ನಿಯೋಜನೆ ಆಗಿದ್ದು, ಇದರ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮಾನದಂಡಗಳನ್ನು ಉಲ್ಲಂಘಿಸಿ, ಬೇಕಾಬಿಟ್ಟಿಯಾಗಿ ಪ್ರಕ್ರಿಯೆ ಮಾಡಿ ಮುಗಿಸಲಾಗಿದೆ. ಅಗತ್ಯ ಇರುವ ಕ್ರೀಡಾ ವಿಭಾಗಕ್ಕೆ ಕೋಚ್‌ಗಳನ್ನು ಪೂರೈಸದೇ ಇರುವುದು, ಪ್ರಭಾವಿಗಳ ಶಿಫಾರಸು ಪಡೆದು ಕೋಚ್‌ಗಳು ತಮಗೆ ಬೇಕಾದ ಕಡೆ ಸ್ಥಾನ ಗಿಟ್ಟಿಸಿಕೊಂಡಿರುವುದು, ಈಗಾಗಲೇ ಕೋಚ್‌ ಆಗಿದ್ದವರನ್ನು ಕೈಬಿಟ್ಟಿರುವುದು, ಪರೀಕ್ಷೆಯಲ್ಲಿ ಅನುತ್ತೀರ್ಣ ಆದವರನ್ನೂ ಕೋಚ್‌ ಆಗಿ ನೇಮಿಸಿರುವುದು, ಯಾವುದೋ ಕ್ರೀಡೆಗೆ ಇನ್ಯಾವುದೋ ಕ್ರೀಡೆಯ ತಜ್ಞರು ಕೋಚ್‌ ಆಗಿರುವುದು... ಹೀಗೆ ಅನೇಕ ಲೋಪಗಳಾಗಿವೆ ಎಂಬ ಸಂಗತಿ ಬಹಿರಂಗವಾಗಿದೆ.

ಇದನ್ನೂ ಓದಿ: ಕಂಠೀರವ ಟ್ರ್ಯಾಕ್ ಕಾಪಾಡೋದು ಹೇಗೆ..?

ಬೇಕಾಬಿಟ್ಟಿಕೋಚ್‌ಗಳ ನಿಯೋಜನೆ ಆಗಿದೆ ಎಂದು ಅವಕಾಶವಂಚಿತ ಕೋಚ್‌ಗಳು ಹಾಗೂ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಆಯ್ಕೆ ಆಗದ ಅಭ್ಯರ್ಥಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕ್ರೀಡಾ ಇಲಾಖೆ ಪ್ರತಿಕ್ರಿಯೆ ನೀಡಿದೆ.

ಕ್ರೀಡಾ ತರಬೇತುದಾರರ ಆಯ್ಕೆ, ನೇಮಕಾತಿ, ನಿಯೋಜನೆಗಳಲ್ಲಿ ಆಗಿವೆ ಎನ್ನಲಾಗಿರುವ ಲೋಪಗಳಿಗೆ ಕೆಲವು ಉದಾಹರಣೆಗಳು ಇಂತಿವೆ.

ಫುಟ್ಬಾಲ್‌ ಆಟಗಾರರಿಗೆ ಹಾಕಿ ತಂಡದ ಕೋಚ್‌!:
ರಾಯಚೂರಲ್ಲಿ ಕಳೆದ 10 ವರ್ಷದಿಂದ ಫುಟ್ಬಾಲ್‌ ಕೋಚ್‌ ಇಲ್ಲ. ಭಾರತದಲ್ಲಿ ಫುಟ್ಬಾಲ್‌ ಕ್ರೀಡೆ ಅಭಿವೃದ್ಧಿಗಾಗಿ ರಾಷ್ಟ್ರ ಮಟ್ಟದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಫುಟ್ಬಾಲನ್ನು ಕಡೆಗಣಿಸಲಾಗಿದೆ. ಬೆಂಗಳೂರಿನಲ್ಲಿ ಫುಟ್ಬಾಲ್‌ ಕ್ರೀಡಾಂಗಣ ಇದ್ದರೂ ಯಾರಿಗೂ ಪರಿಚಯವೇ ಇಲ್ಲದಂತಾಗಿದೆ. ಬಿಸಿಲ ನಗರಿ ರಾಯಚೂರಲ್ಲಿ ಫುಟ್ಬಾಲ್‌ ಕ್ರೀಡೆ ಬಗ್ಗೆ ಕ್ರೇಜ್‌ ಹೆಚ್ಚಿದೆ. ಇಲ್ಲಿನ ಕ್ರೀಡಾ ಹಾಸ್ಟೆಲ್‌ನಲ್ಲಿ ಫುಟ್ಬಾಲ್‌ ಆಟಗಾರರಿದ್ದಾರೆ. ಆದರೆ ಇಲ್ಲಿನ ಫುಟ್ಬಾಲ್‌ ಆಟಗಾರರಿಗೆ ಮಾತ್ರ ಕೋಚ್‌ ಇಲ್ಲ. ಇಲ್ಲಿನ ಕ್ರೀಡಾ ಹಾಸ್ಟೆಲ್‌ನ ಹಾಕಿ ಕೋಚ್‌ ಒಬ್ಬರು ಫುಟ್ಬಾಲ್‌ ಕ್ರೀಡೆಗೂ ಕೋಚ್‌ ಆಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಕಂಠೀರವ ಕ್ರೀಡಾಂಗಣದ 1 ಕೋಟಿ ವೆಚ್ಚದ ಮರದ ಹಾಸು ಮಳೆಗೆ ಬಲಿ

ಬಿಜಾಪುರದಲ್ಲಿ ಸೈಕ್ಲಿಂಗ್‌ ಕೋಚ್‌ಗಿಲ್ಲ ಮಾನ್ಯತೆ: 
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಎಲ್ಲಾ ಕ್ರೀಡೆಗಳ ಕೇಂದ್ರ ಸಂಸ್ಥೆ ಇದೆ. ಆದರೆ ಸೈಕ್ಲಿಂಗ್‌ ಸಂಸ್ಥೆಯ ಕೇಂದ್ರ ಸ್ಥಾನ ಮಾತ್ರ ಉತ್ತರ ಕರ್ನಾಟಕ ಭಾಗದ ಬಿಜಾಪುರದಲ್ಲಿದೆ. ಇಲ್ಲಿ ಸೈಕ್ಲಿಸ್ಟ್‌ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ದುರಂತ ಏನೆಂದರೆ ಈ ಬಾರಿಯ ಕೋಚ್‌ ಪ್ರಕ್ರಿಯೆಯಲ್ಲಿ ಹಿರಿಯ ಸೈಕ್ಲಿಸ್ಟ್‌ ಕೋಚ್‌ಗಳನ್ನು ಆಯ್ಕೆ ಮಾಡಿಲ್ಲ. ಎನ್‌ಐಎಸ್‌ ಮಾಡಿರುವ ಸೈಕ್ಲಿಂಗ್‌ ಕೋಚ್‌ಗಳು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ಅವರನ್ನು ಕ್ರೀಡಾ ಇಲಾಖೆ ಪರಿಗಣಿಸಿಲ್ಲ. ಕಳೆದ 5 ವರ್ಷ ಕ್ರೀಡಾ ಇಲಾಖೆಯಲ್ಲಿಯೇ ಸೈಕ್ಲಿಂಗ್‌ ಕೋಚ್‌ ಆಗಿದ್ದ ಹೆಸರು ಹೇಳಲಿಚ್ಛಿಸದ ಕೋಚ್‌ ಒಬ್ಬರನ್ನು ಈ ಪ್ರಕ್ರಿಯೆಯಲ್ಲಿ ಕಡೆಗಣಿಸಲಾಗಿದೆ.

ಎನ್‌ಐಎಸ್‌ ಪದವೀಧರ ಕೋಚ್‌ಗಳ ಕಡೆಗಣನೆ:
ತರಬೇತುದಾರರಾಗಲು ಎನ್‌ಐಎಸ್‌ (1 ವರ್ಷದ ಅವಧಿ), ಏಷ್ಯನ್‌/ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಅಥವಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು ಎಂದು ಇಲಾಖೆ ಪ್ರಕ್ರಿಯೆ ನಡೆಸುವ ಮುಂಚಿತವಾಗಿ ಹೇಳಿತ್ತು. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 14 ಅಭ್ಯರ್ಥಿಗಳು ವಿವಿಧ ಕ್ರೀಡೆಯಲ್ಲಿ ಎನ್‌ಐಎಸ್‌ ಪದವಿ ಪಡೆದು ಭಾಗವಹಿಸಿದ್ದರು. ಇವರಲ್ಲಿ 8 ಎನ್‌ಐಎಸ್‌ ಕೋಚ್‌ಗಳನ್ನು ಪರಿಗಣಿಸಿಯೇ ಇಲ್ಲ. ಎನ್‌ಐಎಸ್‌ ಪದವಿ ಪಡೆದಿರುವ ಕೋಚ್‌ಗಳು, ಆಯಾ ಕ್ರೀಡೆಯಲ್ಲಿ 5 ರಿಂದ 10 ವರ್ಷ ತರಬೇತಿ ನೀಡಿರುವ ಅನುಭವ ಹೊಂದಿದ್ದಾರೆ. ಆದರೂ ಕೋಚ್‌ ಹುದ್ದೆಗೆ ಆಯ್ಕೆ ಮಾಡಿಲ್ಲದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ದೈಹಿಕ ಪರೀಕ್ಷೆಯಲ್ಲಿ ಫೇಲ್‌ ಆದವರಿಗೂ ಕೋಚ್‌ ಹುದ್ದೆ:
ದೈಹಿಕ ಪರೀಕ್ಷೆ ನಡೆಯುವ ವೇಳೆಯಲ್ಲಿ ಅಭ್ಯರ್ಥಿಗಳು 400 ಮೀ. ಓಟವನ್ನು 7 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಈ ಪರೀಕ್ಷೆಯಲ್ಲಿ ಫೇಲ್‌ ಆದ ಅಭ್ಯರ್ಥಿಯೊಬ್ಬರು ಇದೀಗ ಸೈಕ್ಲಿಂಗ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ದೈಹಿಕ ಪರೀಕ್ಷೆಯಲ್ಲಿ ಉತ್ತಮ ಪಾಯಿಂಟ್‌ಗಳನ್ನು ಪಡೆದು ಪಾಸಾದರೂ ಕೋಚ್‌ ಆಗುವ ಭಾಗ್ಯ ಮಾತ್ರ ನನಗೆ ದೊರೆಯಲಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಭ್ಯರ್ಥಿಯೊಬ್ಬರು ‘ಕನ್ನಡಪ್ರಭ’ದ ಎದುರು ತಮ್ಮ ನೋವು ತೋಡಿಕೊಂಡರು.

ಹೊರ ರಾಜ್ಯದ ಕೋಚ್‌ಗಳಿಗೆ ಮಣೆ:
ಕರ್ನಾಟಕದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದೀಗ ಕರ್ನಾಟಕ ರಾಜ್ಯದಲ್ಲಿ ಕೋಚ್‌ಗಳಿದ್ದರೂ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ರಾಮನಗರ ಅಥ್ಲೆಟಿಕ್ಸ್‌ ಕೋಚ್‌ ಆಗಿ ತಮಿಳುನಾಡಿನ ದೇವಿ ಸಿಗಾಮಣಿ ಆರ್‌., ಕೊಪ್ಪಳ ವಾಲಿಬಾಲ್‌ ಕೋಚ್‌ ಆಗಿ ಉತ್ತರಾಖಂಡ್‌ನ ಕಮಲ್‌ ಸಿಂಗ್‌ ಬಿಶ್‌್ತ, ಬೆಳಗಾವಿಯ ಬಾಕ್ಸಿಂಗ್‌ ಕೋಚ್‌ ಆಗಿ ಮಹಾರಾಷ್ಟ್ರದ ಮುಕುಂದ ಕಿಲ್ಲೆಕರ್‌ ಹಾಗೂ ಬೆಂಗಳೂರಿನ ಬಾಕ್ಸಿಂಗ್‌ ಕೋಚ್‌ ಆಗಿ ತಮಿಳುನಾಡಿನ ಧನ ಸಂಜಯನ್‌ರನ್ನು ನೇಮಿಸಲಾಗಿದೆ.

ಇಬ್ಬ​ರು ಅಥ್ಲೀಟ್‌ಗಳಿಗೆ ಇಬ್ಬರು ಕೋಚ್‌ ನೇಮಕ!
ದಾವಣಗೆರೆ ಜಿಲ್ಲೆಯಲ್ಲಿ ಕ್ರೀಡಾ ಹಾಸ್ಟೆಲ್‌ನಲ್ಲಿ ಕೇವಲ 6 ಅಥ್ಲೀಟ್‌ಗಳಿದ್ದು, ಇವ​ರಲ್ಲಿ ನಾಲ್ವರು ಖೋ-ಖೋನತ್ತ ಮುಖ ಮಾಡಿ​ದ್ದಾರೆ. ಹೀಗಾಗಿ ಇಬ್ಬರು ಅಥ್ಲೀಟ್‌ಗಳಿಗೆ ಇಬ್ಬರು ಕೋಚ್‌ಗಳನ್ನು ನೇಮ​ಕ ಮಾಡ​ಲಾ​ಗಿದೆ.

ಹಾಸ್ಟೆಲ್‌ ಇಲ್ಲದಿದ್ದರೂ ಕೋಚ್‌ಗಳ ನೇಮಕ:
ಕೋಚ್‌ಗಳ ಅಗತ್ಯ ಇರುವ ಭಾಗದಲ್ಲಿ ಆಯ್ಕೆ ಮಾಡಿಕೊಳ್ಳದ ಕ್ರೀಡಾ ಇಲಾಖೆ ತಮಗೆ ಅನುಕೂಲವಾದ ಜಾಗದಲ್ಲಿ ಕೋಚ್‌ಗಳನ್ನು ನೇಮಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಕ್ರೀಡಾ ಇಲಾಖೆಯ ಬಾಕ್ಸಿಂಗ್‌ ವಸತಿ ನಿಲಯಗಳು ಇಲ್ಲ. ಆದರೂ ಈ ಬಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ತಲಾ ಒಬ್ಬರೂ ಬಾಕ್ಸಿಂಗ್‌ ಕೋಚ್‌ಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಇತ್ತೀಚೆಗೆ ರಾಜ್ಯ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ ನಡೆಸಲಾದ ಕೋಚ್‌ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದೆ. ಅಗತ್ಯವಿಲ್ಲದ ಜಾಗದಲ್ಲಿ ಎನ್‌ಐಎಸ್‌ ಕೋಚ್‌ಗಳನ್ನು ಕೈಬಿಡಲಾಗಿದೆ. ಆಯ್ಕೆಯಾಗದ ಅಭ್ಯರ್ಥಿಗಳು ಸುಳ್ಳು ಆರೋಪ ಮಾಡಿದ್ದಾರೆ ಎಂದು ಕ್ರೀಡಾ ಇಲಾಳೆ ನಿರ್ದೇಶಕ ಶ್ರೀನಿವಾಸ್ ಹೇಳಿದ್ದಾರೆ. 

ಕಳೆದ ವರ್ಷ ಕ್ರೀಡಾ ಇಲಾಖೆಗೆ ಕೋಚ್‌ ಆಗಿ ಆಯ್ಕೆಯಾಗಿದ್ದೆ. ಮಾಚ್‌ರ್‍ನಲ್ಲಿ ಎಲ್ಲಾ ಕೋಚ್‌ಗಳನ್ನು ತೆಗೆದುಹಾಕಲಾಗಿತ್ತು. ಆ ನಂತರವೂ ಮಕ್ಕಳಿಗೆ ತೊಂದರೆಯಾಗ ಬಾರದು ಎನ್ನುವ ಉದ್ದೇಶದಿಂದ ಸಂಬಳ ನೀಡದೆ ಇದ್ದರೂ ತರಬೇತಿ ಕಾರ‍್ಯ ಮುಂದುವರಸಿದ್ದೆವು. ಈ ಬಾರಿಯ ಆಯ್ಕೆಯಾಗುವ ವಿಶ್ವಾಸವಿತ್ತು. ಅದು ಹುಸಿಯಾಗಿರುವುದು ನೋವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಭ್ಯರ್ಥಿ ಹೇಳಿದ್ದಾರೆ. 

ಎನ್‌ಐಎಸ್‌ ಪದವೀಧರರನ್ನು ಕೋಚ್‌ ಆಗಿ ನೇಮಿಸಲಾಗುತ್ತದೆ. ಆದರೆ ಕ್ರೀಡಾ ಇಲಾಖೆ ನಡೆಸಿರುವ ಪ್ರಕ್ರಿಯೆಯಲ್ಲಿ ಎನ್‌ಐಎಸ್‌ ಪದವಿ ಹೊಂದಿರುವವರನ್ನು ಕಡೆಗಣಿಸಲಾಗಿದ್ದು, ಪ್ರಭಾವಿ ವ್ಯಕ್ತಿಗಳ ಶಿಫಾರಸು ಪಡೆದ ಅಭ್ಯರ್ಥಿಗಳು ಅರ್ಹತೆ ಹೊಂದಿರದಿದ್ದರೂ ಕೋಚ್‌ ಆಗಿ ನೇಮಿಸಿರುವುದು ಬೇಸರ ತಂದಿದೆ ಎಂದು ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಅಭ್ಯರ್ಥಿ ಹೇಳಿದ್ದಾರೆ. 

ವರದಿ: ಧನಂಜಯ.ಎಸ್‌.ಹಕಾರಿ