ಬೆಂಗಳೂರು(ಅ.27):  ಕಂಠೀರವ ಕ್ರೀಡಾಂಗಣದಲ್ಲಿನ ಗುಂಡಿ ಬಿದ್ದ ಸಿಂಥೆಟಿಕ್‌ ಟ್ರ್ಯಾಕ್‌ ಮರು ಅಳವಡಿಕೆ ಕಾರ್ಯ ಮತ್ತಷ್ಟುವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಕಳೆದ 6 ತಿಂಗಳಿಂದ ರಾಜ್ಯ ಕ್ರೀಡಾ ಇಲಾಖೆ ಟ್ರ್ಯಾಕ್‌ ಇನ್ನೇನು ಅಳವಡಿಸುತ್ತೇವೆ, ಕೆಲ ದಿನಗಳಲ್ಲಿ ಕಾರ್ಯ ಆರಂಭ ಮಾಡುತ್ತೇವೆ ಎಂದೇ ಕಾಲ ಮುಂದೂಡುತ್ತಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ‘ಟೆಂಡರ್‌ ಪ್ರಕ್ರಿಯೆ ಮುಗಿದಿಲ್ಲ. ಬಿಡ್‌ ಓಪನ್‌ ಆಗಿಲ್ಲ’, ಹೀಗೆ ಹಲವು ಕಾರಣಗಳನ್ನು ನೀಡುತ್ತಿರುವ ಇಲಾಖೆ ಟ್ರ್ಯಾಕ್‌ ಮರು ಅಳವಡಿಕೆಗೆ ಮೂಹೂರ್ತ ನಿಗದಿ ಮಾಡುವ ಮನಸ್ಸು ಮಾಡುತ್ತಿಲ್ಲ.

ಇದನ್ನೂ ಓದಿ: ಕರ್ನಾಟಕ ಅಥ್ಲೀಟ್‌ಗಳಿಗೆ ನಿರ್ಬಂಧದ ಶಿಕ್ಷೆ!

ಇದರ ಮಧ್ಯೆಯೇ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ (ಕೆಎಎ) ಹಾಗೂ ಸ್ಥಳೀಯ ಅಥ್ಲೆಟಿಕ್ಸ್‌ ಕೋಚ್‌ಗಳ ಪ್ರಬಲ ವಿರೋಧದ ನಡುವೆಯೇ ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಫುಟ್ಬಾಲ್‌ ನಡೆಸಲು ಜೆಎಸ್‌ಡಬ್ಲ್ಯು ಸಂಸ್ಥೆಗೆ ಇಲಾಖೆ ಅವಕಾಶ ಕಲ್ಪಿಸಿದೆ. ಈ ಹಿಂದೆ ಇದೇ ಸಂಸ್ಥೆ ಮೈದಾನದ ಸುತ್ತ ಬ್ಯಾರಿಕೇಡ್‌ ಹಾಕಿ, ಸಿಂಥೆಟಿಕ್‌ ಟ್ರ್ಯಾಕ್‌ ಹಾಳು ಮಾಡಿದೆ ಎಂದು ಅಥ್ಲೆಟಿಕ್ಸ್‌ ಕೋಚ್‌ಗಳು ಹಾಗೂ ಕೆಎಎ ಆರೋಪಿಸಿತ್ತು. ಇಂಡಿ​ಯನ್‌ ಸೂಪರ್‌ ಲೀಗ್‌ (ಐ​ಎಸ್‌ಎಲ್‌) ಫುಟ್ಬಾಲ್‌ ಟೂರ್ನಿ ಚಾಲ್ತಿ​ಯ​ಲ್ಲಿದ್ದು, ಪಂದ್ಯ​ಗಳು ಮಾಚ್‌ರ್‍ ವರೆಗೂ ನಡೆ​ಯ​ಲಿದೆ. ಪ್ರತಿ ಪಂದ್ಯದ ವೇಳೆ ಕೇವಲ 2 ದಿನ​ಗಳ ಮಾತ್ರ ಕಂಠೀರವ ಕ್ರೀಡಾಂಗಣವನ್ನು ಬೆಂಗ​ಳೂರು ಎಫ್‌ಸಿ (ಬಿ​ಎಫ್‌ಸಿ) ತಂಡಕ್ಕೆ ಬಿಟ್ಟು​ಕೊ​ಟ್ಟರೂ, ಫುಟ್ಬಾಲ್‌ ಟೂರ್ನಿ ನಡುವೆ ಸಿಂಥೆ​ಟಿಕ್‌ ಟ್ರ್ಯಾಕ್‌ ಅಳ​ವ​ಡಿಕೆ ಕಾರ್ಯ ಕಷ್ಟಎನಿ​ಸು​ತ್ತಿದೆ.

ಇದನ್ನೂ ಓದಿ: ಕಂಠೀರವದಲ್ಲಿ ಫುಟ್ಬಾಲ್‌ ವಿರೋಧಿಸಿ ಪ್ರತಿಭಟನೆ

ಇಲಾಖೆಯಲ್ಲೇ ಗೊಂದಲ: ನವೆಂಬರ್‌ ಮೊದಲ ವಾರದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಮರು ಅಳವಡಿಕೆಯ ಕಾರ‍್ಯ ನಡೆಯಲಿದೆ ಎಂದು ಕ್ರೀಡಾ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್‌ ಭರವಸೆ ನೀಡಿದ್ದಾರೆ ಎಂದು ಅಥ್ಲೆಟಿಕ್ಸ್‌ ಸಂಸ್ಥೆ ಸಿಇಒ ಎಲ್ವಿಸ್‌ ಜೋಸೆಫ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಈ ಸಂಬಂಧ ಕ್ರೀಡಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಎಂದಿನಂತೆ ಸಿಂಥೆಟಿಕ್‌ ಟ್ರ್ಯಾಕ್‌ ಮರು ಅಳವಡಿಕೆ ಕಾರ್ಯ ನಿಗದಿತ ಮೊತ್ತಕ್ಕಿಂತ ದುಬಾರಿಯಾಗುವ ಕಾರಣದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹಣ ಬಿಡುಗಡೆಗಾಗಿ ಮನವಿ ಸಲ್ಲಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಇಲಾಖೆ ಅಧಿ​ಕಾ​ರಿ​ಗಳು ಹಾಗೂ ಕೆಎಎ ಸಿಇಒ ಹೇಳಿಕೆಗಳಲ್ಲಿ ಹೋಲಿಕೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪಬ್ಲಿಕ್‌ ಟಾಯ್ಲೆಟ್‌ಗಿಂತ ಕಡೆ ಕಂಠೀರವ ಕ್ರೀಡಾಂಗಣ ಶೌಚಾಲಯ!

ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಹಾಗೂ ಮೂಲಭೂತ ಸಮಸ್ಯೆಗಳ ಬಗ್ಗೆ ‘ಕನ್ನಡಪ್ರಭ’ 2019ರ ಮೇ 15 ರಿಂದ ಸರಣಿ ವರದಿ ಪ್ರಕಟಿಸಿತ್ತು. ಈ ವರದಿ ಆಧಾರದ ಮೇಲೆ ಆಗಿನ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹಾಗೂ ಈಗಿನ ಕಂದಾಯ ಸಚಿವರಾದ ಆರ್‌. ಅಶೋಕ್‌ ನೇತೃತ್ವದ ಸಮಿತಿ ಕಂಠೀರವ ಕ್ರೀಡಾಂಗಣವನ್ನು ರೇಡ್‌ ಮಾಡಿತ್ತು. ಸಿಂಥೆಟಿಕ್‌ ಟ್ರ್ಯಾಕ್‌ ಮರು ಅಳವಡಿಕೆಯ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ತಿಂಗಳ ಗಡುವು ನೀಡಿತ್ತು.

ಕ್ರೀಡಾ ಇಲಾಖೆ ಕಂಠೀರವದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೇ ಸುಮಾರು 2 ತಿಂಗಳು ಕಾಲವಾಕಾಶ ತೆಗೆದುಕೊಂಡಿದೆ. ಇನ್ನೂ ಸಿಂಥೆಟಿಕ್‌ ಟ್ರ್ಯಾಕ್‌ ಮರು ಅವಳವಡಿಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಅಲ್ಲದೇ ಬೆಂಗಳೂರಲ್ಲಿ ಆಗಿಂದಾಗ್ಗೆ ಮಳೆ ಸುರಿಯುತ್ತಿರುವ ಕಾರಣ ಟ್ರ್ಯಾಕ್‌ ಅಳವಡಿಕೆ ಕಾರ್ಯ ಸದ್ಯಕ್ಕಂತೂ ಶುರುವಾಗುವ ಲಕ್ಷಣ ತೋರುತ್ತಿಲ್ಲ.

ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಮರು ಅಳವಡಿಕೆಗೆ ಹಣಕಾಸು ಇಲಾಖೆ (ಎಫ್‌ಡಿ)ಯಿಂದ ಅಧಿಕೃತ ಒಪ್ಪಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮಳೆ ನೋಡಿಕೊಂಡು ಟ್ರ್ಯಾಕ್‌ ಮರು ಅಳವಡಿಸುವ ಕಾರ್ಯ ಶುರುವಾಗಲಿದೆ ಎಂದು ಕ್ರೀಡಾ ಇಲಾಖೆ ನಿರ್ದೇಸಕ ಶ್ರೀನಿವಾಸ್ ಹೇಳಿದ್ದಾರೆ.