ಕಂಠೀರವ ಅಥ್ಲೀಟ್‌ಗಳಿಗೆ ಮೈದಾನವೇ ಜಿಮ್!
ಬೆಂಗಳೂರಿನ ಹೃದಯ ಭಾಗದಲ್ಲಿರುವ ಶ್ರೀ ಕಂಠೀರವ ಕ್ರೀಡಾಂಗಣದ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ. ಮುರುಕಲು ಜಿಮ್ ಒಡೆದು, ಹೊಸ ಜಿಮ್ ನಿರ್ಮಿಸಲಾಗಿದೆಯಾದರೂ, ಉದ್ಘಾಟನೆಗೆ ಯಾರೂ ಗಣ್ಯವ್ಯಕ್ತಿಗಳು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಜಿಮ್‌ಗೆ ಬೀಗ ಹಾಕಲಾಗಿದೆ. ಹೀಗಾಗಿ ಅಥ್ಲೀಟ್‌ಗಳು ಮೈದಾನದಲ್ಲೇ ಅಭ್ಯಾಸ ನಡೆಸುವ ಪರಿಸ್ಥಿತಿ ಬಂದೊದಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.20]: ಕಳೆದ ಕೆಲ ತಿಂಗಳಲ್ಲಿ ಕರ್ನಾಟಕದಲ್ಲಿ ಸರ್ಕಾರ ಬದಲಾಯಿತು, ಆದರೆ ಕಂಠೀರವ ಕ್ರೀಡಾಂಗಣದ ಸ್ಥಿತಿ ಬದಲಾಗಲಿಲ್ಲ. ಇಲ್ಲಿನ ಸಮಸ್ಯೆಗಳು ಹಾಗೇ ಉಳಿದಿವೆ. ಕಳೆದ 6 ತಿಂಗಳುಗಳಿಂದ ಇಲ್ಲಿನ ಕ್ರೀಡಾಪಟುಗಳಿಗೆ ಜಿಮ್‌ಗೆ ಪ್ರವೇಶ ಸಿಗುತ್ತಿಲ್ಲ. ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿದ ಬಳಿಕ, ಮುರುಕಲು ಜಿಮ್ ಅನ್ನು ಒಡೆದು ಹಾಕಿ, ಹೊಸದಾಗಿ ವ್ಯವಸ್ಥೆ ಮಾಡುವ ಭರವಸೆಯನ್ನು ರಾಜ್ಯ ಕ್ರೀಡಾ ಇಲಾಖೆ ನೀಡಿತ್ತು. ಆದರೆ ಭರವಸೆ ಈಡೇರಿಲ್ಲ. ಕ್ರೀಡಾಪಟುಗಳು ಕ್ರೀಡಾಂಗಣದೊಳಗಿರುವ ಟರ್ಫ್(ಹುಲ್ಲು ಹಾಸು) ಮೇಲೆ ವೇಟ್ ಟ್ರೈನಿಂಗ್ ನಡೆಸುತ್ತಿದ್ದಾರೆ.
ಗುಂಡಿಬಿದ್ದ ಟ್ರ್ಯಾಕ್‌ನಲ್ಲಿ ದಸರಾ ಕೂಟ!
ಮುರುಕಲು ಜಿಮ್ ಒಡೆದು, ಹೊಸ ಜಿಮ್ ನಿರ್ಮಿಸಲಾಗಿದೆಯಾದರೂ, ಉದ್ಘಾಟನೆಗೆ ಯಾರೂ ಗಣ್ಯವ್ಯಕ್ತಿಗಳು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಜಿಮ್‌ಗೆ ಬೀಗ ಹಾಕಲಾಗಿದೆ. ಮಲ್ಟಿಜಿಮ್‌ಗೆ ಹೋಗಲು ದುಡ್ಡಿಲ್ಲ. ಹಳೆಯ ಜಿಮ್‌ನ ಸಾಮಾಗ್ರಿಗಳು ನೂತನ ಜಿಮ್‌ನಲ್ಲಿ ಸೇರಿಕೊಂಡಿವೆ. ಹೀಗಾಗಿ ಕೋಚ್‌ಗಳ ಬಳಿ ಇರುವ ಕೆಲವೇ ಸಾಮಾಗ್ರಿಗಳನ್ನು ಬಳಸಿಕೊಂಡು ಅಥ್ಲೀಟ್‌ಗಳು ಅಭ್ಯಾಸ ನಡೆಸುತ್ತಿದ್ದಾರೆ. ಕ್ರೀಡಾ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಸಮಸ್ಯೆಯತ್ತ ಗಮನ ಹರಿಸಬೇಕು ಎಂದು ಅಥ್ಲೀಟ್‌ಗಳು ಹಾಗೂ ಕೋಚ್‌ಗಳು ಕೇಳಿಕೊಂಡಿದ್ದಾರೆ.
ಕಂಠೀರವದಲ್ಲಿ ಫುಟ್ಬಾಲ್ ವಿರೋಧಿಸಿ ಪ್ರತಿಭಟನೆ
ಬಗೆಹರಿಯದ ಮಲ್ಟಿಜಿಮ್ ಸಮಸ್ಯೆ!: ಕಂಠೀರವದಲ್ಲಿ ಸುಸಜ್ಜಿತ ಮಲ್ಟಿಜಿಮ್ ಇದೆಯಾದರೂ, ಅಲ್ಲಿ ಅಭ್ಯಾಸ ನಡೆಸಲು ಕ್ರೀಡಾಪಟುಗಳು ಮಾಸಿಕ .2000 ಶುಲ್ಕ ಪಾವತಿಸಬೇಕು. ‘ಕನ್ನಡಪ್ರಭ’ ವರದಿ ಬಳಿಕ ಲೆಕ್ಕಪತ್ರ ಸಮಿತಿ ಮುಖ್ಯಸ್ಥ, ಹಾಲಿ ಸಚಿವ ಆರ್.ಅಶೋಕ್ ಕ್ರೀಡಾಂಗಣಕ್ಕೆ ದಾಳಿ ನಡೆಸಿದ್ದ ವೇಳೆ ಮಲ್ಟಿಜಿಮ್ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಕ್ರೀಡಾಪಟುಗಳಿಗೆ ಸಹಕಾರಿಯಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ಆ ಭರವಸೆಯೂ ಹಾಗೇ ಉಳಿದಿದೆ. ಒಂದು ಕಡೆ ಗುಂಡಿ ಬಿದ್ದಿರುವ ಸಿಂಥೆಟಿಕ್ ಟ್ರ್ಯಾಕ್, ಮತ್ತೊಂದೆಡೆ ಜಿಮ್ ಸಮಸ್ಯೆ, ಜತೆಗೆ ಕ್ರೀಡಾಂಗಣವನ್ನು ಫುಟ್ಬಾಲ್‌ಗೆ ನೀಡಬಾರದು ಎನ್ನುವ ಹೋರಾಟ. ಯುವ ಹಾಗೂ ಬಡ ಅಥ್ಲೀಟ್‌ಗಳು ಸಮಸ್ಯೆಯ ನಡುವೆಯೇ ಅಭ್ಯಾಸ ನಡೆಸುವ ಸ್ಥಿತಿ ಮುಂದುವರಿದಿದೆ. ಅ. 22 ರಿಂದ ರಾಷ್ಟ್ರೀಯ ಅಂತರ ಜಿಲ್ಲಾ ಕ್ರೀಡಾಕೂಟ ಹಾಗೂ ನ. 2ರಿಂದ ಕಿರಿಯರ ರಾಷ್ಟ್ರೀಯ ಕೂಟಕ್ಕಾಗಿ ಅಥ್ಲೀಟ್‌ಗಳು ಸಿದ್ಧಗೊಳ್ಳಬೇಕಿದೆ. ಇದಕ್ಕಾಗಿ ಕ್ರೀಡಾಪಟುಗಳು ಫಿಟ್ನೆಸ್ ಅಭ್ಯಾಸ ನಡೆಸಲು ಜಿಮ್‌ನ ಅಗತ್ಯವಿದೆ. ಸರಿಯಾದ ವ್ಯವಸ್ಥೆ ಇಲ್ಲದೆ ಕ್ರೀಡಾಪಟುಗಳು ಸಿಕ್ಕ ಜಾಗದಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ.
’ನಾನು 100, 200 ಮೀ. ಓಟಗಾರ. ವಾರದಲ್ಲಿ 2 ದಿನ ಭಾರ ಎತ್ತುವ ಅಭ್ಯಾಸ ನಡೆಸಿದರೆ ಮಾತ್ರ ಕಾಲಿಗೆ ಹೆಚ್ಚಿನ ಸಾಮರ್ಥ್ಯ ದೊರೆಯಲಿದೆ. ಆದರೆ ಕಳೆದ 6 ತಿಂಗಳಿಂದ ಸರಿಯಾದ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಮಲ್ಟಿಜಿಮ್‌ಗೆ ಹೋದರೆ ಹಣ ಕೇಳ್ತಾರೆ. ಹೀಗಾಗಿ ಗೊಂದಲದಲ್ಲಿದ್ದೇನೆ’.
- ಹೆಸರು ಹೇಳಲಿಚ್ಛಿಸದ ಅಥ್ಲೀಟ್
’ಪೋಲ್ ವಾಲ್ಟ್‌ನಲ್ಲಿ ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಂ.ರಾ. ಕೂಟದಲ್ಲಿ ಭಾಗವಹಿಸುವ ಉತ್ಸಾಹವಿದೆ. ಕಳೆದ ಕೆಲ ತಿಂಗಳಿಂದ ಜಿಮ್‌ನಲ್ಲಿ ವೇಟ್ ಟ್ರೈನಿಂಗ್ ನಡೆಸಲು ಸಾಧ್ಯವಾಗದೆ ಉತ್ಸಾಹ ಕುಂದುತ್ತಿದೆ’.
- ಹೆಸರು ಹೇಳಲಿಚ್ಚಿಸದ ಅಥ್ಲೀಟ್
’ಕ್ರೀಡಾಂಗಣದ ಹರಕಲು ಜಿಮ್‌ನಲ್ಲಿ ಆದರೂ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿದ್ದರು ಎನ್ನುವ ಸಮಾಧಾನವಿತ್ತು. ಇದೀಗ ಕ್ರೀಡಾಪಟುಗಳು ಜಿಮ್ ಇಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಬಂದಿರುವುದು ಶೋಚನಿಯ’.
- ರಮೇಶ್, ಅಥ್ಲೆಟಿಕ್ಸ್ ಕೋಚ್
ವರದಿ: ಧನಂಜಯ ಎಸ್.ಹಕಾರಿ