ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ ಅಥ್ಲೀಟ್ ರೋಹಿನಿ ಶವವಾಗಿ ಪತ್ತೆ, ಹಲವು ಅನುಮಾನ, ಜಿಯು ಜಿಸ್ತು ಅಥ್ಲೀಟ್ ಸಾವು ಕ್ರೀಡಾಲೋಕವನ್ನೇ ಅಚ್ಚರಿಗೊಳಿಸಿದೆ. ಹಲವು ಪ್ರಶಸ್ತಿ, ಪದಕ ಗೆದ್ದಿರುವ ರೋಹಿನಿ ಮೃತದೇಹ ಪತ್ತೆಯಾಗಿದ್ದು ಎಲ್ಲಿ?
ಇಂದೋರ್ (ಅ.27) ಏಷ್ಯನ್ ಗೇಮ್ಸ್‌ನಲ್ಲಿ ಜಿಯು ಜಿಸ್ತು ಮಾರ್ಶಿಯಲ್ ಆರ್ಟ್ಸ್ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಿದ ಅಥ್ಲೀಟ್ ರೋಹಿನಿ ಕಲಮ್ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ದೇವಾಸ್ ನಿವಾಸಿಯಾಗಿರುವ ರೋಹಿನಿ ಕಲಂ ಭಾರತ ಪರ ಹಲವು ಕ್ರೀಡಾಕೂಡಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿದ್ದಾರೆ. ರೋಹಿನಿ ಕಲಂ ಸಾವು ಕ್ರೀಡಾಲೋಕವನ್ನೇ ಅಚ್ಚರಗೊಳಿಸಿದೆ. ಅತ್ಯಂತ ಕಠಿಣ ಕ್ರೀಡೆಯಲ್ಲಿ ಹಲವು ಸವಾಲುಗಳನ್ನು ಮೆಟ್ಟಿ ನಿಂತಿದ್ದ ರೋಹಿನಿ ಕಲಮ್ ಅನುಮಾನಸ್ವದ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿದೆ.
ಮನೆಯಲ್ಲಿ ಮೃತದೇಹ ಪತ್ತೆ
35 ವರ್ಷದ ರೋಹಿನಿ ಕಲಂ ಮೃತದೇಹ ದೇವಾಸ್‌ನಲ್ಲಿರುವ ಮನೆಯಲ್ಲಿ ಪತ್ತೆಯಾಗಿದೆ. ಭಾನುವಾರಕುಟುಂಬಸ್ಥರ ಬೆಳಗಿನ ಉಪಹಾರ ಸೇವಿಸಿದ ರೋಹಿನಿ ಕಲಂ ಬಳಿಕ ತಮ್ಮ ಕೊಠಡಿಗೆ ಮರಳಿದ್ದಾರೆ.ಕೆಲ ಹೊತ್ತು ಫೋನ್‌ನಲ್ಲಿ ಮಾತನಾಡುತ್ತಿದ್ದ ರೋಹಿನಿ ಕಲಂ ಬಳಿಕ ಪತ್ತೆ ಇರಲಿಲ್ಲ. ಇತ್ತ ರೋಹಿನಿ ಕಲಂ ತಂದೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ತೆರಳಿದ್ದರು. ಮನೆಯಲ್ಲಿ ತಂಗಿ ರೋಶನಿ ಕಲಂ ಇದ್ದ ವೇಳೆ ಈ ಘನೆ ನಡೆದಿದೆ. ಕೆಲ ಹೊತ್ತಾದರೂ ಅಕ್ಕ ರೋಹಿನಿ ಕಲಂ ಸುಳಿವಿಲ್ಲ ಎಂದು ಬಾಗಿಲು ತೆರೆದಾಗ ರೋಹಿನಿ ಕಲಂ ಬದುಕು ಬದುಕು ಅಂತ್ಯಗೊಳಿಸಿರುವುದು ಪತ್ತೆಯಾಗಿದೆ.
ತಕ್ಷಣವೇ ಕುಟುಂಬಸ್ಥರ ನೆರವಿನಿಂದ ರೋಹನಿ ಕಲಂನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಪರಿಶೀಲಿಸಿ ರೋಹಿನಿ ಕಲಂ ಮೃತಪಟ್ಟಿರುವುದಾಗಿ ಖಚಿತಡಿಸಿದ್ದಾರೆ. ಯಾವುದೇ ನೋಟ್ ಪತ್ತೆಯಾಗಿಲ್ಲ. ಈಕೆಯ ತಂದೆ ಬ್ಯಾಂಕ್ ನೋಟ್ ಪ್ರೆಸ್‌ನಲ್ಲಿ ಉದ್ಯೋಗಿಯಾಗಿದ್ದರು. ಇದೀಗ ನಿವೃತ್ತಿ ಜೀವನದಲ್ಲಿದ್ದಾರೆ. ಘಟನೆ ನಡೆದಾಗ ಇನ್ನುಳಿದ ಸಹೋದರಿಯರು ದೇವಸ್ಥಾನಕ್ಕೆ ತೆರಳಿದ್ದರು. ರೋಹನಿ ಕಲಂ ಖಾಸಗಿ ಶಾಲೆಯಲ್ಲಿ ಮಾರ್ಶಿಯಲ್ ಆರ್ಟ್ಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದರು.
ಸಾವಿನ ಕುರಿತು ರೋಶನಿ ಕಲಂ ಹೇಳಿದ್ದೇನು?
ಅಕ್ಕ ರೋಹಿನಿ ಕಲಂ ಕೆಲಸದ ಕುರಿತು ಅತೀವ ಆತಂಕ ಎದುರಿಸಿದ್ದರೆ. ಆಕೆಯ ಶಾಲಾ ಪ್ರಿನ್ಸಿಪಲ್‌ನಿಂದಲೂ ಸಮಸ್ಯೆ ಎದುರಿಸಿದ್ದರು. ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ರೋಹಿನಿ ಕಲಂ ಬಂದ ಮದುವೆ ಪ್ರಪೋಸಲ್ ತಿರಸ್ಕರಿಸಿ ಓದಿದ್ದರು. ಆದರೆ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಾಗಿರಲಿಲ್ಲ. ಇದರಿಂದಲೂ ತೀವ್ರ ನಿರಾಸೆ ಅನುಭವಿಸಿದ್ದರು ಎಂದು ರೋಶನಿ ಕಲಂ ಹೇಳಿದ್ದಾರೆ. ಐದು ತಿಂಗಳ ಹಿಂದೆ ರೋಹನಿ ಕಲಂಗೆ ಸರ್ಜರಿಯಾಗಿತ್ತು. ಬಳಿಕ ರೋಹನಿ ಕಲಂ ಆರೋಗ್ಯದಲ್ಲಿ ಕೆಲ ಏರುಪೇರುಗಳಾಗಿತ್ತು. ಪ್ರಮುಖವಾಗಿ ಕೆಲಸದ ಒತ್ತಡ ಆಕೆಯನ್ನು ತೀವ್ರವಾಗಿ ಕಾಡುತ್ತಿತ್ತು ಎಂದಿದ್ದಾರೆ.
2007ರಿಂದ ಭಾರತದ ಪ್ರಮುಖ ಅಥ್ಲೀಟ್ ಆಗಿ ಗುರುತಿಸಿಕೊಂಡಿದ್ದಾರೆ. 2015ರಲ್ಲಿ ಜಿಯು ಜಿಸ್ತು ಮಾರ್ಶಿಯಲ್ ಆರ್ಟ್ಸ್‌ನಲ್ಲಿ ಸಾಧನೆ ಆರಂಭಿಸಿದ್ದರು. 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಡದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2024ರಲ್ಲಿ ಅಬುಧಾಬಿಯಲ್ಲಿ ನಡೆದ 8ನೇ ಜಿಯು ಜಿಸ್ತು ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ 2 ಪದಕ ಗೆದ್ದಿದ್ದರು. 2022ರ ಥಾಯ್ಲೆಂಡ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲೂ ಪದಕ ಸಾಧನೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರೋಹನಿ ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇತ್ತ ರೋಹನಿ ಕೆಲಸ ಮಾಡುತ್ತಿದ್ದ ಶಾಲೆ ಸೇರಿದಂತೆ ಆಪ್ತರಿಂದ ಮಾಹಿತಿ ಕಲೆ ಹಾಕಲಾಗಿದೆ. ರೋಹನಿ ಕಲಂ ಫೋನ್ ವಶಪಡಿಸಿಕೊಂಡಿರುವ ಪೊಲೀಸರು, ಸಾವಿನ ಹಿಂದಿನ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ.ಕೆಲಸದ ಒತ್ತಡ, ಆರೋಗ್ಯ, ಮಾನಸಿಕ ಒತ್ತಡ, ಆಪ್ತರ ಜೊತೆಗಿನ ಮಾತುಕತೆ, ಮೆಸೇಜ್ ಸೇರಿದಂತೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
