ಪಾಕಿಸ್ತಾನದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ಅವರನ್ನು ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ. ಬಹ್ರೇನ್‌ನಲ್ಲಿ ನಡೆದ ಖಾಸಗಿ ಪಂದ್ಯಾವಳಿಯಲ್ಲಿ ಎನ್‌ಒಸಿ ಇಲ್ಲದೆ ಭಾರತೀಯ ತಂಡಕ್ಕಾಗಿ ಆಡಿದ್ದು ಮತ್ತು ಭಾರತದ ಧ್ವಜವನ್ನು ಹೊದ್ದು ಸಂಭ್ರಮಿಸಿದ್ದರು.

ಕರಾಚಿ: ಭಾರತ ಹಾಗೂ ಪಾಕಿಸ್ತಾನ ತಂಡಗಳು ಸಾಂಪ್ರದಾಯಿಕ ಎದುರಾಳಿಗಳೆಂದು ಗುರುತಿಸಿಕೊಂಡಿವೆ. ಮೈದಾನದಲ್ಲಿ ಕಣಕ್ಕಿಳಿದರೇ ಎರಡು ದೇಶಗಳ ಕ್ರೀಡಾಪಟುಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಾ ಬಂದಿವೆ. ಆದರೆ ಡಿಸೆಂಬರ್ ಆರಂಭದಲ್ಲಿ ಬಹ್ರೇನ್‌ನಲ್ಲಿ ನಡೆದ ಖಾಸಗಿ ಪಂದ್ಯಾವಳಿಯಲ್ಲಿ ಭಾರತೀಯ ತಂಡಕ್ಕಾಗಿ ಆಡಿದ ನಂತರ ಪಾಕಿಸ್ತಾನದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ಅವರನ್ನು ರಾಷ್ಟ್ರೀಯ ಒಕ್ಕೂಟವು ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ. ಶನಿವಾರ (ಡಿಸೆಂಬರ್ 27, 2025) ನಡೆದ ತುರ್ತು ಸಭೆಯ ನಂತರ ಪಾಕಿಸ್ತಾನ ಕಬಡ್ಡಿ ಫೆಡರೇಶನ್ (ಪಿಕೆಎಫ್) ನಿಷೇಧ ಹೇರಿದೆ. ಇದರಲ್ಲಿ ರಜಪೂತ್ ಫೆಡರೇಶನ್ ಅಥವಾ ಅದಕ್ಕೆ ಸಂಬಂಧಿಸಿದ ಇತರ ಅಧಿಕಾರಿಗಳಿಂದ ಅಗತ್ಯವಿರುವ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯದೆ ಪಂದ್ಯಾವಳಿಯಲ್ಲಿ ಆಡಲು ವಿದೇಶಕ್ಕೆ ಪ್ರಯಾಣ ಮಾಡಿದ್ದು ತಪ್ಪು ಎನ್ನುವ ತೀರ್ಮಾನವನ್ನು ಕೈಗೊಂಡಿದೆ

ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ

ಇನ್ನು ಉಬೈದುಲ್ಲಾ ರಜಪೂತ್ ಶಿಸ್ತು ಸಮಿತಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಪಿಕೆಎಫ್ ಕಾರ್ಯದರ್ಶಿ ರಾಣಾ ಸರ್ವರ್ ಹೇಳಿದ್ದಾರೆ. ರಜಪೂತ್ ಎನ್‌ಒಸಿ ಇಲ್ಲದೆ ವಿದೇಶ ಪ್ರವಾಸ ಮಾಡಿದ್ದಲ್ಲದೆ, ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ ಎಂಬುದನ್ನು ಫೆಡರೇಶನ್ ಗಣನೆಗೆ ತೆಗೆದುಕೊಂಡಿದೆ ಎಂದು ಸರ್ವರ್ ಹೇಳಿದರು. ಪಂದ್ಯವನ್ನು ಗೆದ್ದ ನಂತರ ಅವರು ಭಾರತೀಯ ಜೆರ್ಸಿಯನ್ನು ಧರಿಸಿದ್ದರು ಮತ್ತು ಭಾರತದ ತ್ರಿವರ್ಣ ಧ್ವಜವನ್ನು ಹೆಗಲ ಮೇಲೆ ಸುತ್ತಿಕೊಂಡಿದ್ದರು. ಇದು ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿತ್ತು.

GCC ಕಪ್ ಸಮಯದಲ್ಲಿ ರಜಪೂತ್ ಭಾರತೀಯ ಜೆರ್ಸಿ ಧರಿಸಿ ಭಾರತೀಯ ಧ್ವಜವನ್ನು ಬೀಸುತ್ತಿರುವ ವಿಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಪಾಕಿಸ್ತಾನದಾದ್ಯಂತ ಜೋರಾಗಿತ್ತು. ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯದೆ ಈವೆಂಟ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಇತರ ಆಟಗಾರರನ್ನು ಸಹ ನಿಷೇಧಿಸಲಾಗಿದೆ ಮತ್ತು ದಂಡ ವಿಧಿಸಲಾಗಿದೆ. NOC ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರಾಗಿದ್ದಾರೆ ಎಂದು ಸರ್ವರ್ ಹೇಳಿದ್ದಾರೆ.

ತನ್ನ ನಡೆಯನ್ನು ಸಮರ್ಥಿಸಿಕೊಂಡ ರಜಪೂತ್

ಇನ್ನು ಈ ಘಟನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಂತೆಯೇ ಉಬೈದುಲ್ಲಾ ರಜಪೂತ್ ಈ ಹಿಂದೆ ಕ್ಷಮೆಯಾಚಿಸಿದ್ದರು. ಬಹ್ರೇನ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಆಡಲು ಆಹ್ವಾನಿಸಲಾಗಿತ್ತು ಮತ್ತು ಖಾಸಗಿ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು ಎಂದು ಹೇಳಿದ್ದರು. "ಆದರೆ ನಂತರ ಅವರು ತಂಡವನ್ನು ಭಾರತೀಯ ಎಂದು ಹೆಸರಿಸಿದ್ದಾರೆ ಎಂದು ನನಗೆ ತಿಳಿದುಬಂದಿತು, ಮತ್ತು ಭಾರತ ಮತ್ತು ಪಾಕಿಸ್ತಾನದ ಹೆಸರುಗಳನ್ನು ಬಳಸದಂತೆ ನಾನು ಸಂಘಟಕರನ್ನು ಕೇಳಿಕೊಂಡೆ. ಖಾಸಗಿ ಪಂದ್ಯಾವಳಿಗಳಲ್ಲಿ, ಭಾರತೀಯ ಮತ್ತು ಪಾಕಿಸ್ತಾನಿ ಆಟಗಾರರು ಖಾಸಗಿ ತಂಡಕ್ಕಾಗಿ ಒಟ್ಟಿಗೆ ಆಡಿದ್ದಾರೆ, ಆದರೆ ಎಂದಿಗೂ ಭಾರತ ಅಥವಾ ಪಾಕಿಸ್ತಾನ ಹೆಸರಿನಲ್ಲಿ ಆಡಿಲ್ಲ ಎಂದು ರಜಪೂತ್ ಸಮರ್ಥಿಸಿಕೊಂಡಿದ್ದರು "ಈ ವಿವಾದದ ನಂತರ ನಾನು ಭಾರತೀಯ ತಂಡಕ್ಕಾಗಿ ಆಡುತ್ತಿದ್ದೇನೆ ಎಂದು ತಪ್ಪಾಗಿ ಚಿತ್ರಿಸಲಾಗಿದೆ ಎಂದು ನನಗೆ ನಂತರ ತಿಳಿದುಬಂದಿತು, ಅದನ್ನು ನಾನು ಊಹಿಸಲೂ ಸಾಧ್ಯವಿಲ್ಲ" ಎಂದು ಉಬೈದುಲ್ಲಾ ರಜಪೂತ್ ಹೇಳಿದ್ದಾರೆ.