ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಆರ್ಯನ್ ವಸ್ತ್ರದ ಎಂಬ ಯುವಕ, ತನ್ನ ಹುಟ್ಟುಹಬ್ಬದ ದಿನವೇ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ದುಃಖದ ನಡುವೆಯೂ, ಕುಟುಂಬಸ್ಥರು ಆಸ್ಪತ್ರೆಯಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದು, ನಂತರ ಮಗನ ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದರು

ಬೆಂಗಳೂರು (ಅ.25): ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ ಯುವಕನಿಗೆ ಕುಟುಂಬಸ್ಥರು ಸೇರಿ ಆಸ್ಪತ್ರೆಯಲ್ಲೇ ಕೇಕ್ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ದೃಶ್ಯ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿದೆ.

ಕನಕಗಿರಿ ಮೂಲದ ಆರ್ಯನ್ ವಸ್ತ್ರದ ನಿನ್ನೆ ತನ್ನ ಹುಟ್ಟುಹಬ್ಬದ ದಿನವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಆರ್ಯನ್:

ಬೆಂಗಳೂರಿನಲ್ಲೇ ವಾಸವಿದ್ದ ಆರ್ಯನ್ ವಸ್ತ್ರದ, ಇತ್ತೀಚೆಗೆ ಹಾಸನಕ್ಕೆ ಹೋಗುವ ವೇಳೆ ಬೈಕ್ ಅಪಘಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆರ್ಯನ್ ಮೃತಪಟ್ಟಿದ್ದ.

ಹುಟ್ಟುಹಬ್ಬದಂದೇ ಸಾವು:

ನಿನ್ನೆಯೇ ಆರ್ಯನ್ ವಸ್ತ್ರದ್ ಬರ್ತಡೇ ಇತ್ತು. ಹೀಗಾಗಿ ಆರ್ಯನ್ ಕೈಯಿಂದಲೇ ಕೇಕ್ ಕತ್ತರಿಸಿದ ಕುಟುಂಬಸ್ಥರು. ಈ ದೃಶ್ಯ ಕಂಡು ನೆರೆದಿದ್ದ ಜನರು ವೈದ್ಯರ ಕಣ್ಣಲ್ಲಿ ನೀರು ತರಿಸಿತು. ಒಂದು ಕಡೆ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತು.

ಸಾವಿನಲ್ಲಿಯೂ ಸಾರ್ಥಕತೆ:

ಆರ್ಯನ್ ಕುಟುಂಬ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ, ಬೇರೆಯವರ ಬದುಕಿಗೆ ಜೀವದಾನ ನೀಡಿದೆ. ಆ ಮೂಲಕ ಆರ್ಯನ್ ಕುಟುಂಬಸ್ಥರು ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.