ಜಿದ್ದಾ, ಸೌದಿ ಅರೇಬಿಯಾ (ಸೆ.13): ಕಳೆದ ಹಜ್ ಸಂದರ್ಭದಲ್ಲಿ ಭಾರತೀಯ ಹಜ್ ಯಾತ್ರಾರ್ಥಿಗಳಿಗೆ ಸೇವೆ ಸಲ್ಲಿಸಿದ ಸ್ವಯಂಸೇವಕರನ್ನು ಭಾರತೀಯ ರಾಯಭಾರಿ ಕಚೇರಿಯು ಸನ್ಮಾನಿಸಿತು.

ಗುರುವಾರ (ಸೆ.12)ರಂದು ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭಾರತೀಯ ರಾಯಭಾರಿ  ನೂರ್ ರಹಮಾನ್, ಹಜ್ ಸಸೂತ್ರವಾಗಿ ನಡೆಯಲು ಸಹಕರಿಸಿದ ಸ್ವಯಂಸೇವಕರ ಶ್ರಮವನ್ನು ಶ್ಲಾಘಿಸಿದರು.

ಭಾರತದಿಂದ ಈ ಬಾರಿ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಮಂದಿ ಹಜ್ ನಿರ್ವಹಿಸಿರುವುದು ದಾಖಲೆಯಾಗಿದೆ. ಸುಮಾರು 5000ಕ್ಕಿಂತಲೂ ಹೆಚ್ಚು ಟೀಂ ಇಂಡಿಯಾದ ಸ್ವಯಂಸೇವಕರು,  ಹಜ್ ಯಾತ್ರಿಗಳಿಗೆ ಸೌಲಭ್ಯ ಹಾಗೂ ಇನ್ನಿತರ ಸೇವೆಗಳನ್ನು ಕಲ್ಪಿಸಲು ಹಗಲಿರುಳು ದುಡಿದಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸೌದಿ ಅಧಿಕಾರಿಗಳು ಕೂಡಾ ಭಾರತೀಯ ಸ್ವಯಂ ಸೇವಕರನ್ನು ಪ್ರಶಂಸಿದ್ದಾರೆ ಎಂದು ರಹಮಾನ್  ತಿಳಿಸಿದರು.

ಮೆಕ್ಕಾ ಯಾತ್ರೆಗೆ ಇನ್ನಷ್ಟು ಭಾರತೀಯರಿಗೆ ಅವಕಾಶ
 
ಹಜ್ ಯಾತ್ರಾರ್ಥಿಗಳ ಬಗ್ಗೆ ಭಾರತ ಪ್ರಧಾನಿ ನರೇಂದ್ರ ಮೋದಿ ತೋರಿದ ಕಾಳಜಿಯನ್ನು ಸ್ಮರಿಸಿದ ನೂರ್ ರಹಮಾನ್ ಧನ್ಯವಾದಗಳನ್ನು ಸಲ್ಲಿಸಿದರು.      

2015ರಲ್ಲಿ ಹಜ್ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಭಾರತೀಯ ಸ್ವಯಂಸೇವಕ ನಿಯಾಝುಲ್ ಹಕ್ ಮನ್ಸೂರಿ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು. 2019ನೇ ಸಾಲಿನ ಉತ್ತಮ ಸ್ವಯಂಸೇವಕ ಪ್ರಶಸ್ತಿಗೆ ಅಬ್ದುಲ್ ಗಫ್ಫಾರ್ ಎಂಬವರಿಗೆ ಪ್ರದಾನಮಾಡಲಾಯಿತು.

ಹಜ್ ರಾಯಭಾರಿ ವೈ. ಸಾಬಿರ್ ಹಾಗೂ ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಇಂಡಿಯಾ ಫ್ರೆಟರ್ನಿಟಿ ಫೋರಂ, ನವೋದಯ, ಅಲ್ ರಿಸಾಲ ಮುಂತಾದ ಸಂಘ-ಸಂಸ್ಥೆಗಳ ಸ್ವಯಂ ಸೇವಕರು  ಭಾಗವಹಿದ್ದರು.

ಹಜ್ ಸಂದರ್ಭದಲ್ಲಿ ಭಾರತದಿಂದ ಮಕ್ಕಾಗೆ ತೆರಳುವ ಹಜ್ ಯಾತ್ರಿಗಳ ಸೇವೆಗಾಗಿ,  ಸೌದಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಸ್ವಯಂ ಸೇವಕರಾಗಿ ದುಡಿಯುತ್ತಾರೆ.