ಉಡುಪಿ (ಮಾ.01):    ನಾನು ದೇಶಕ್ಕಾಗಲಿ, ಬ್ಯಾಂಕುಗಳಿಗಾಗಲಿ ಯಾವುದೇ ಮೋಸ ಮಾಡಿಲ್ಲ, ನನ್ನ ಜೊತೆ ಇದ್ದವರೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ, ಆದರೇ ನಾನು ಎಲ್ಲವನ್ನೂ ಎದುರಿಸುತ್ತೇನೆ, ಗೆದ್ದು ಬರುತ್ತೇನೆ  ಎಂದು ಖ್ಯಾತ ಉದ್ಯಮಿ ಬಿ.ಆರ್.ಶೆಟ್ಟಿ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇಶದಾದ್ಯಂತ ಬಹಳ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದ್ದೆ. ಈ ಬಗ್ಗೆ ಪ್ರಧಾನಿ ಮೋದಿ ಅವರ ಬಳಿಯೂ ಹೇಳಿಕೊಂಡಿದ್ದೆ. ನಿಮ್ಮ ಒಂದು ಪದದ ಮೇಲೂ ನನಗೆ ಭರವಸೆ ಇದೆ ಶೆಟ್ಟಿ ಎಂದಿದ್ದರು ಮೋದಿ. ಆದರೇ ಈಗ ಮೋದಿ ಅವರಿಗೆ ಹೇಗೆ ಮುಖ ತೋರಿಸಲಿ ಎಂದು ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ ದೇಶದ ಎಲ್ಲಾ ಬ್ಯಾಂಕುಗಳು ನನಗೆ ಸಾಲ ಪಡೆಯುವಂತೆ ದಂಬಾಲು ಬಿದ್ದಿದ್ದವು. ಇಂದು ಅದೇ ಬ್ಯಾಂಕುಗಳು ನನ್ನ ಮೇಲೆ ಮೊಕದ್ದಮೆ ಹೂಡಿವೆ. ಆದರೇ ಸತ್ಯ ಹೊರಗೆ ಬರುತ್ತದೆ. ಸಾಲಕ್ಕಿಂತಲೂ ಹೆಚ್ಚು ನನ್ನ ಆಸ್ತಿ ಇದೆ ಎಂದು ಬಿಆರ್‌ ಶೆಟ್ಟಿ ಹೇಳಿದರು. 

ಉದ್ಯಮಿ ಬಿ. ಆರ್‌. ಶೆಟ್ಟಿಯ ವಿಶ್ವದೆಲ್ಲೆಡೆ ಆಸ್ತಿ ಜಪ್ತಿ ಆದೇಶ! .

 ಲಕ್ಷ್ಮೀ ಸದಾ ಚಂಚಲೆ. ಆದ್ದರಿಂದ ಸ್ವಲ್ಪ ಆಚೀಚೆ ಓಡುತ್ತಾಳೆ. ಆದರೇ ನಾನು ಮಾತ್ರ ಸ್ಟ್ರಾಂಗ್ ಆಗಿ ಸ್ಟೇಬಲ್ ಆಗಿದ್ದೆನೆ . 400 ಕೋಟಿ ರು.ಗಳ ಜೋಗ್ ಜಲಪಾತ ಟೂರಿಸಂ ಯೋಜನೆಯನ್ನು ಸರ್ಕಾರದ ಅಸಹಾಕಾರದಿಂದ ಕೈಬಿಟ್ಟಿದ್ದೇನೆ.  ಕಾಶ್ಮೀರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರಿಂದ ಪ್ರಸ್ತಾಪ ಬಂದಿದ್ದಾಗಿ ಬಿಆರ್‌ ಶೆಟ್ಟಿ ಹೇಳಿದರು. 

ಪ್ರಸಿದ್ಧ ಉದ್ಯಮಿಯಾಗಿ ಬೆಳೆದು,  ದುಬೈನ ಬುರ್ಜ್ ಖಲಿಫಾದಲ್ಲಿಯೂ ಒಂದು ಅಂತಸ್ತಿನ ಒಡೆಯರಾಗಿದ್ದ ಶೆಟ್ಟಿ ಇಂದು ಭಾರಿ ನಷ್ಟದ ಹಾದಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ತಾವು ಮತ್ತೆ ಎಲ್ಲವನ್ನೂ ಎದುರಿಸಿ ಎದ್ದು ನಿಲ್ಲುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.