ಬೆಂಗಳೂರು(ಅ.12): ಒಬ್ಬರು ಮಾಡುವ ರಕ್ತದಾನದಿಂದ ಮೂರು ಜನರನ್ನು ಉಳಿಸಬಹುದು ಎಂದು ಹಮಾದ್‌ ವೈದ್ಯಕೀಯ ಕೇಂದ್ರದ ಹೆರಿಗೆ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ರಮ್ಯಾ ನುಡಿದರು.

ಕತಾರ್‌ನಲ್ಲಿ ಹಮಾದ್‌ ವೈದ್ಯಕೀಯ ಕೇಂದ್ರದಲ್ಲಿ ‘ಕರ್ನಾಟಕ ಸಂಘ ಕತಾರ್‌’ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಒಬ್ಬ ದಾನಿಯ ರಕ್ತ ಕೇವಲ ಒಬ್ಬರಿಗೆ ಸೀಮಿತವಾಗುವುದಿಲ್ಲ. ರಕ್ತವನ್ನು ಪ್ಲಾಸ್ಮಾ, ಆರ್‌ಬಿಸಿ ಮತ್ತು ಪ್ಲೇಟ್ಲೆಟ್‌ ಆಗಿ ವಿಂಗಡಿಸಿ ಅಗತ್ಯ ಸಂದರ್ಭದಲ್ಲಿ ಮೂವರಿಗೆ ಕೊಡಲಾಗುತ್ತದೆ. ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂರು ಜೀವಗಳನ್ನು ರಕ್ಷಿಸಬಹುದು ಎಂದು ರಕ್ತದಾನದ ಮಹತ್ವ ತಿಳಿಸಿದರು.

ಇಟಲಿಯ ಪಿಯಾ​ಸೆಂಜಾ ಮ್ಯೂಸಿಯಂನಲ್ಲಿ ಕನ್ನಡದ ಕವಿತೆ

ಕೊರೋನಾ ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಹಿಳೆ ಹಾಗೂ ಪುರುಷರು ಸೇರಿ ಆರೋಗ್ಯವಂತ ಒಟ್ಟು 50 ದಾನಿಗಳಿಂದ ರಕ್ತ ಸಂಗ್ರಹಿಸಲಾಯಿತು.

ಶಿಬಿರದಲ್ಲಿ ತುಳು ಕೂಟ, ಬಂಟರ ಸಂಘ, ಎಸ್‌ಕೆಎಂಡಬ್ಲ್ಯುಎ, ಕೆಎಂಸಿಎ, ಯುಕೆಬಿ ಮತ್ತು ಕತಾರ್‌ ಬಿಲ್ಲವಾಸ್‌ ಸೇರಿದಂತೆ ರಾಜ್ಯದ ವಿವಿಧ ಸಂಸ್ಥೆಗಳು, ಕರ್ನಾಟಕ ಸಂಘ ಕತಾರ್‌ ಅಧ್ಯಕ್ಷ ನಾಗೇಶ್‌ ರಾವ್‌, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಉಪಾಧ್ಯಕ್ಷ ಮಹೇಶ್‌ ಗೌಡ, ಜಂಟಿ ಕಾರ್ಯದರ್ಶಿ ಸುಬ್ರಮಣ್ಯ ಹೆಬ್ಬಾಗಿಲು, ಭಾರತೀಯ ರಾಯಭಾರಿ ಕಾರ್ಯಾಲಯದಿಂದ ಪ್ರಥಮ ಕಾರ್ಯದರ್ಶಿ- ಸಾಮಾಜಿಕ ವಿಚಾರಗಳ ವಿಭಾಗದ ಅಧಿಕಾರಿ ಜೇವಿಯರ್‌ ಧನರಾಜ್‌ ಮತ್ತಿತರರು ಭಾಗವಹಿಸಿದ್ದರು.