ಟೊರೆಂಟೋ [ಆ. 30]  ತಮ್ಮ ಮಧುರ ಕಂಠದ ಮೂಲಕ ಖ್ಯಾತ ಗಾಯಕ ರಾಜೇಶ ಕೃಷ್ಣನ್ ಕೆನಡಾದ ಕನ್ನಡಿಗರಿಗೆ ಮೋಡಿ ಮಾಡಿದರು. ಸುಮಾರು 1200ಕ್ಕೂ ಹೆಚ್ಚು ಸಿನಿಮಾಗಳಿಗೆ 5000 ಹಾಡುಗಳನ್ನ ಹಾಡಿರುವ ರಾಜೇಶ್ ಕೃಷ್ಣನ್ ತಮ್ಮದೇ ಸೂಪರ್ ಹಿಟ್ ಹಾಡುಗಳ ಮೂಲಕ ಅಲ್ಲಿನ ಕನ್ನಡಿಗರನ್ನು ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿದರು. ಈ ಸಂಗೀತ ಕಾರ್ಯಕ್ರಮವನ್ನ ಟೊರೆಂಟೋ ಮೂಲದ ಮೈಸೂರು ಸ್ಟುಡಿಯೋ ಹೌಸ್ ಆಯೋಜನೆ ಮಾಡಿತ್ತು. 

ಕೆನಡಾ ಹಾಗೂ ಅನಿವಾಸಿ ಕನ್ನಡಿಗರು ರಾಜೇಶ್ ಕೃಷ್ಣನ್ ಕಂಠಕ್ಕೆ ಮಾರು ಹೋಗುವುದರ ಜೊತೆಗೆ ಅವರದೇ ಹಾಡಿದ ನೂರು ಜನ್ಮಕು, ಉಸಿರೇ..ಉಸಿರೇ.. ಹೊಂಬಾಳೆ.. ಹೊಂಬಾಳೆ ಮತ್ತು ಒಂದೊಂದೆ ಬಚ್ಚಿಟ್ಟ ಮಾತು ಹಾಡುಗಳಿಗೆ ಕುಣಿದು ಸಂಭ್ರಮಿಸಿದರು.  ರಾಜೇಶ್ ಕೃಷ್ಣನ್ ಹಾಡುಗಳೆಂದರೆ ಎಲ್ಲರೂ ಆನಂದಿಸುವದರೊಂದಿಗೆ ಕೊನೆಯ ಕ್ಷಣದವರೆಗೂ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಹೀಗಾಗಿ ಪ್ರತಿ ಹಾಡಿನ ನಂತರವೂ ಒನ್ಸ್.. ಒನ್ಸ್ ಮೋರ್ ಎಂಬ ಬೇಡಿಕೆ ಸರ್ವೇ ಸಾಮಾನ್ಯವಾಗಿಬಿಟ್ಟಿತ್ತು.

ತಮ್ಮ ಮಧುರ ಕಂಠದ ಮೂಲಕ ಮಂತ್ರ ಮುಗ್ಧಗೊಳಿಸುವುದರ ಜೊತೆಗೆ ಸುಂಟರಗಾಳಿ.. ಸುಂಟರಗಾಳಿ, ಸಂತೋಷಕೆ ಹಾಡು ಸಂತೋಷಕೆ ಹಾಗೂ ಡಾ ರಾಜ್ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳಿಗೆ ಕುಣಿಯುವಂತೆಯೂ ಮಾಡಿದರು. ಕಾರ್ಯಕ್ರಮದ ನಂತರವೂ ಪ್ರೇಕ್ಷಕರು ತಮ್ಮ ಮೆಚ್ಚಿನ ಗೀತೆಗಳನ್ನ ಹಾಡುವಂತೆ ಕೇಳಿಕೊಂಡರು. ಅವರಿಗೆ ನಿರಾಸೆ ಮಾಡದ ರಾಜೇಶ್ ಕೃಷ್ಣನ್ ಅವರು ಕೇಳಿದ ಹಾಡುಗಳನ್ನ ಹಾಡಿ ಮನರಂಜಿಸಿದರು.

ನೆರೆ ಸಂತ್ರಸ್ತರಿಗೆ 100 ಮನೆ, ನೆರವಿಗೆ ಬಂದ ‘ಅಕ್ಕ’

ಆರ್ ಕೆ ಸಂಗೀತ ಸಂಜೆ ಕಾರ್ಯಕ್ರಮವನ್ನ ಮೈಸೂರು ಸ್ಟುಡಿಯೋ ಹೌಸ್ ಆಯೋಜನೆ ಮಾಡಿತ್ತು. ಇದು ಕೆನಡಾದಲ್ಲಿ ಸಿನಿಮಾ ವಿತರಣೆ ಹಾಗೂ ಕಾರ್ಯಕ್ರಮ ಆಯೋಜಿಸುವ ಸಂಸ್ಥೆಯಾಗಿದೆ. ಮೈಸೂರು ಸ್ಟುಡಿಯೋ ಹೌಸ್ ಕೆನಡಾದ ಕನ್ನಡ ಸಿನಿಮಾ ಪ್ರೇಮಿಗಳಿಗೆಂದೆ ಮೊಟ್ಟ ಮೊದಲು ವಿತರಣೆ ಮಾಡಿದ ಚಿತ್ರ (ಕನ್ನಡ ಸಂಘ ಟೊರೆಂಟೋ ಸಹಯೋಗದೊಂದಿಗೆ) ನಾಗರಹಾವು (ಮರು ಬಿಡುಗಡೆ). ಆ ನಂತರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಕವಲುದಾರಿ, ಜಗ್ಗೇಶ್ ನಟನೆಯ ಪ್ರೀಮಿಯರ್ ಪದ್ಮಿನಿ ಮತ್ತು ಅಭಿಷೇಕ ಅಂಬರೀಷ್ ನಟನೆಯ ಮೊದಲ ಚಿತ್ರ ಅಮರ್ ಚಿತ್ರಗಳನ್ನ ಬಿಡುಗಡೆ ಮಾಡಿದ್ದಾರೆ.

ಮೈಸೂರು ಸ್ಟುಡಿಯೋ ಹೌಸ್‍ನ ಕಾರ್ತಿಕ್ ಗೌಡ ಮಾತನಾಡಿ “ ನಾವು ಸಂಗೀತ ಕಾರ್ಯಕ್ರಮವನ್ನ ಆಯೋಜಿಸಬೇಕು ಎಂದು ನಿರ್ಧರಿಸಿದಾಗ ಖಂಡಿತಾ ನಮ್ಮ ಮೊದಲ ಆಯ್ಕೆ ಕನ್ನಡವೇ ಆಗಿತ್ತು. ನಮ್ಮ ಪ್ರಥಮ ಆಯ್ಕೆಯೇ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರ ಜೊತೆಗೆ ಎಂದು ನಿರ್ಧರಿಸಿದ್ದೆವು.  28 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದರು ಈ ಸಂಗತಿ ನಿಮಗೆ ಆಶ್ಚರ್ಯವುಂಟು ಮಾಡಬಹುದು, ಅವರು ಯಾವತ್ತೂ ವಿದೇಶಿ ನೆಲದಲ್ಲಿ ಸಂಗೀತ ಕಾರ್ಯಕ್ರಮ ನೀಡಿರಲಿಲ್ಲ. ಅವರ ಹಾಡುಗಳನ್ನೇ ಕೇಳುತ್ತಾ ಬೆಳದ ನಮಗೆ ನಮ್ಮ ಮೊದಲ ಕಾರ್ಯಕ್ರಮವೇ ಅವರೊಂದಿಗೆ ಆಗಬೇಕು ಎಂಬುದಾಗಿತ್ತು. ನಾವು ಅವರನ್ನ ಸಂಪರ್ಕಿಸಿದಾಗ ಖುಷಿಯಿಂದಲೇ ಒಪ್ಪಿಕೊಂಡ ಅವರು ಕಾರ್ಯಕ್ರಮ ಆಯೋಜನೆಗೆ ಸಾಕಷ್ಟು ಹುರಿದುಂಬಿಸಿದರು”, ಎಂದರು.

ಕೆನಡಾದ ಕನ್ನಡಿಗರು ರಾಜೇಶ್ ಕೃಷ್ಣನ್ ಹಾಡುಗಳನ್ನ ಸವಿಯಬೇಕು ಎಂಬ ಆಶಯದಿಂದ ತಂಡದ ಸದಸ್ಯರಾದ ಉಷಾ ಜಯರಾಂ, ಗೀತಾ ಬಸವರಾಜು, ಕಾರ್ತಿಕ್ ಗೌಡ, ಮಧುಕರ ಹೆಚ್ ಸಿ, ಮಹೇಶ ವಿ ಮತ್ತು ದಿನೇಶ ಮಂಡ್ಯ ಸೇರಿಕೊಂಡು ಡಾ ವಿನೋದ ಚಿನ್ನಪ್ಪಾ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ರೂಪಿಸಿದರು. “ನಮ್ಮ ನಂಬಿಕೆ ಹುಸಿಯಾಗಲಿಲ್ಲ. ಆರ್‍ಕೆ ಸಂಗೀತ ಸಂಜೆ ಭಾರೀ ಯಶಸ್ಸು ಕಂಡಿತು. ಮೊಟ್ಟ ಮೊದಲ ಬಾರಿಗೆ ಎರಡೇ ವಾರಗಳಲ್ಲಿ ಈ ಕಾರ್ಯಕ್ರಮದ ಎಲ್ಲಾ ಟಿಕೇಟ್‍ಗಳು ಮಾರಾಟವಾದವು. 400 ಆಸನಗಳ ವ್ಯವಸ್ಥೆಯಿರುವ ಮಿಸ್ಸಿಸುಗಾದ ಮೆಡೊವ್ಲೆ ಸಭಾಂಗಣದಲ್ಲಿ ಮೈಸೂರು ಸ್ಟುಡಿಯೋ ಹೌಸ್ ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಅದೆಂಥಹ ಬೇಡಿಕೆ ಸೃಷ್ಟಿಯಾಗಿತ್ತೆಂದರೆ ಎರಡನೇ ಶೋ ನಡೆಸಬೇಕೆಂದು ಕನ್ನಡಿಗರಿಂದ ಭಾರೀ ಒತ್ತಾಯ ಕೇಳಿಬಂದಿತು”, ಎಂದು ತಂಡ ಹೇಳಿತು.

ಕೆನಡಾದಲ್ಲಿ ರಾಜೇಶ್ ಕೃಷ್ಣನ್ ಅವರ ಮೊದಲ ಕಾರ್ಯಕ್ರಮವನ್ನ ಆಯೋಜಿಸುವ ಅವಕಾಶ ಮೈಸೂರು ಸ್ಟುಡಿಯೋ ಹೌಸ್‍ಗೆ ದೊರಕಿದ್ದು ನಿಜಕ್ಕೂ ಅದೃಷ್ಟ. ಈ ಯಶಸ್ಸು ಮತ್ತಷ್ಟು ಮನರಂಜನೆಯ ಕಾರ್ಯಕ್ರಮಗಳನ್ನ ಕನ್ನಡಿಗರಿಗಾಗಿ ಆಯೋಜಿಸಲು ಸ್ಫೂರ್ತಿ ತುಂಬಿತು.