ಬೆಂಗಳೂರು[ಸೆ.26] ದೂರದ ಗಲ್ಫ್ ರಾಷ್ಟ್ರದಲ್ಲಿ ಕನ್ನಡ ನುಡಿ ಹಬ್ಬದ ಸಂಭ್ರಮ. ಗಲ್ಫ್ ರಾಷ್ಟ್ರದಲ್ಲಿ ವಾಸವಾಗಿರುವ ಎಲ್ಲ ಕನ್ನಡಿಗರು ಒಂದೇ ಕಡೆ ಸೇರಲಿದ್ದಾರೆ. ಕನ್ನಡದ ಸಾಹಿತಿಗಳ ಜತೆ ಬೆರೆಯಲಿದ್ದಾರೆ. ನಾಡು-ನುಡಿಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ.

ಅಕ್ಟೋಬರ್ 5 ಮತ್ತು 6 ಅಂದರೆ ಶುಕ್ರವಾರ ಮತ್ತು ಶನಿವಾರ  ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ  ಬಹರೇನ್‌ ನಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಚ ಡಾ. ಮನು ಬಳಿಗಾರ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಡಾ.ಜಯದೇವಿ ಶೆಟ್ಟಿ ಮತ್ತು ತಂಡ ನಡೆಸಿಕೊಟ್ಟರೆ  ಬಹರೇನ್ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

ಸಾಹಿತಿ ಡಾ.ಎಚ್‌.ಎಸ್‌.ವೆಂಕಟೇಶ ಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಂಪಿ ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಮತ್ತು ಬಹರೇನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಭಾಗವಹಿಸಲಿದ್ದಾರೆ.

ಗಲ್ಫ್ ಕನ್ನಡಿಗರ ಸ್ಥಿತಿಗತಿ ಕುರಿತು ಗೋಷ್ಠಿ ನಡೆಯಲಿದ್ದು ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅಧ್ಯಕ್ಷತೆ ವಹಿಸಲಿದ್ದಾರೆ. ಗಲ್ಫ್ ಕನ್ನಡಿಗರ ಮುಂದಿನ ಸಾಂಸ್ಕೃತಿಕ ಸವಾಲುಗಳು ವಿಚಾರದ ಮೇಲೆ ಎಸ್‌.ಆರ್‌.ವಿಜಯ ಶಂಕರ, ಬಹರೇನ್ ನಲ್ಲಿ ಕನ್ನಡ ಕಟ್ಟುವ ಬಗೆ ಕುರಿತಾಗಿ ಕೃಷ್ಣ ಭಟ್, ಕನ್ನಡ ಸಾಹಿತ್ಯಕ್ಕೆ ಗಲ್ಫ್ ಕನ್ನಡಿಗರ ಕೊಡುಗೆ ಕುರಿತಾಗಿ ಆಸ್ಟೀನ್ ಸಂತೋಷ್ ಪ್ರಬಂಧ ಮಂಡಿಸಲಿದ್ದಾರೆ. ಪ್ರಕಾಶ್ ರಾವ್ ಪೈಯಾರ್ ಮತ್ತು ಬಿ.ಎಚ್.ಸತೀಶ್ ಪ್ರತಿಕ್ರಿಯೆ ಹಂಚಿಕೊಳ್ಳಲಿದ್ದಾರೆ. ಇದಾದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಅಕ್ಟೋಬರ್ 6 ಶನಿವಾರ ಬೆಳಗ್ಗೆ ಕವಿಗೋಷ್ಠಿ ನಡೆಯಲಿದ್ದು ಸಾಹಿತಿ ಡಾ.ದೊಡ್ಡರಂಗೇಗೌಡ , ಕವಿ ಬಿ.ಆರ್. ಲಕ್ಷಣರಾವ್ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಡಾ.ಬಿ.ಟಿ.ಲಲಿತಾ ನಾಯಕ, ಸುಬ್ಬು ಹೊಲೆಯಾರ್, ವಿಕ್ರಮ್ ವಿಸಾಜಿ, ಕೆ.ಷರೀಫಾ, ಜರಗನಹಳ್ಳಿ ಶಿವಶಂಕರ್, ರಂಜಾನ್ ದರ್ಗಾ, ಡಾ.ಟಿ.ಸಿ.ಪೂರ್ಣಿಮಾ ಮತ್ತು ಚಂದ್ರಶೇಖರ್ ವಸ್ತ್ರದ ಭಾಗವಿಸಲಿದ್ದಾರೆ.

‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ವಿಚಾರದ ಮೇಲೆ ಗೋಷ್ಠಿ ನಡೆಯಲಿದ್ದು ಕವಿ ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಚುಟುಕು ಕವಿ ಎಚ್.ದುಂಡಿರಾಜ್ ಆಶಯ ನುಡಿಗಳನ್ನು ಆಡಿದರೆ ಜಾನಪದ ಸಾಹಿತ್ಯದಲ್ಲಿ ಹಾಸ್ಯ ಕುರಿತಾಗಿ ಡಾ.ಶಂಭು ಬಳಿಗಾರ್, ನಿತ್ಯಜೀವನದಲ್ಲಿ ಹಾಸ್ಯ ಕುರಿತಾಗಿ ಎಸ್.ಷಡಕ್ಷರಿ ಮಾತನಾಡಲಿದ್ದಾರೆ.

ಶನಿವಾರ ಮಧ್ಯಾಹ್ನ ಹಿರಿಯ ಸಾಹಿತಿಗಳೊಂದಿಗೆ ಸಂವಾದ ನಡೆಯಲಿದೆ.  ಮನು ಬಳಿಗಾರ್ ಅಧ್ಯಕ್ಷತೆ ವಹಿಸಿದರೆ ಡಾ.ಬೈರಮಂಗಲ ರಾಮೇಗೌಡ, ಡಾ.ಅಮರೇಶ್ ನುಗಡೋಣಿ, ಡಾ.ಕೆ.ರವೀಂದ್ರನಾಥ, ಡಾ.ಪದ್ಮರಾಜ ದಂಡಾವತಿ, ಡಾ. ಮೋಹನ್ ಕುಂಟಾರ, ರಾಮಚಂದ್ರ ಎಚ್.ಎಂ ಮತ್ತು ಶಿವಾನಂದ ವಿರಕ್ತಮಠ ಭಾಗವಹಿಸಲಿದ್ದಾರೆ.

ಎನ್‌ ಆರ್‌ಐಗೆ ಸಂಬಂಧಿಸಿದ ಎಲ್ಲ ಸುದ್ದಿಗಳು