ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿ ಹೊಸ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿ ಹಾರ್ಟ್‌ಲ್ಯಾಂಡ್‌ ಎಂದೇ ಕರೆಯುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ಯಾರು ಎಂಬ ಒಂದೆರಡು ದಿನಗಳ ರಹಸ್ಯವೂ ಬಗೆಹರಿದಿದೆ. ಬಹಳ ಕುತೂಹಲ ಮೂಡಿಸಿದ್ದ ಎರಡು ರಾಜ್ಯಗಳ ಪೈಕಿ ಮಧ್ಯಪ್ರದೇಶದಲ್ಲಿ ಕಮಲನಾಥ್‌ ಮತ್ತು ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಸಾಕಷ್ಟುಯೋಚಿಸಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ರಾಜಸ್ಥಾನದ ಯುವ ನಾಯಕ ಸಚಿನ್‌ ಪೈಲಟ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ‘ಸಮಾಧಾನಕರ’ ಬಹುಮಾನ ನೀಡಿದೆ. ಇದು ಯುವಕರ ಕೈಗೆ ಕಾಂಗ್ರೆಸ್‌ ಕಹಳೆ ನೀಡುತ್ತದೆ ಎಂದು ಕಾದು ಕೂತಿದ್ದ ಹಲವರಿಗೆ ರೋಮಾಂಚಕ ಅನ್ನಿಸಲಿಲ್ಲ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದ್ದರ ಗುಟ್ಟೇನು?

‘ಕೈ’ ಸಿಎಂ ನಿರ್ಧಾರದ ಲೆಕ್ಕಾಚಾರ

ರಾಜಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್‌ ಮತ್ತು ಮಧ್ಯಪ್ರದೇಶಕ್ಕೆ ಕಮಲನಾಥ್‌ ಅವರನ್ನು ರಾಹುಲ್‌ ಗಾಂಧಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ನಿರ್ಧಾರದ ಮೂಲಕ ತಮ್ಮ ಪಕ್ಷದಲ್ಲಿ ಹಳಬರು ಇನ್ನೂ ಕೂಡ ತಮ್ಮ ಹಿಡಿತವನ್ನು ಚೆನ್ನಾಗಿಯೇ ಉಳಿಸಿಕೊಂಡಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಕಮಲನಾಥ್‌ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು ಇಂದಿರಾ ಗಾಂಧಿಯವರ ಮಗ ಸಂಜಯ್‌ ಗಾಂಧಿ. ಅನಂತರದಲ್ಲಿ ಕಮಲನಾಥ್‌ ಅವರು ಸಂಜಯ್‌ ಗಾಂಧಿಯ ಅತ್ಯಾಪ್ತರಾಗಿದ್ದರು. ಸಂಜಯ್‌ ಗಾಂಧಿ ಮರಣದ ನಂತರವೂ ಗಾಂಧಿ ಕುಟುಂಬಕ್ಕೆ ಕಟ್ಟಾವಿಧೇಯರಾಗಿಯೇ ಕಮಲ್‌ ಮುಂದುವರೆದರು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಕಾಂಗ್ರೆಸ್‌ನ ‘ದಿಲ್ಲಿ ದರ್ಬಾರ್‌’ನಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಕಮಲ್‌ನಾಥ್‌ 9 ಬಾರಿ ಸಂಸದರಾದವರು, 5 ಬಾರಿ ಕೇಂದ್ರದಲ್ಲಿ ಮಂತ್ರಿಯಾದವರು. ಇಷ್ಟೊಂದು ಸುದೀರ್ಘ ಅನುಭವದ ಸರಕು ಹೊತ್ತು ಇನ್ನೂ ಮುನ್ನಡೆಯುತ್ತಿರುವವರು.

ಮತ್ತೊಂದೆಡೆ ರಾಹುಲ್‌ ಗಾಂಧಿ ತಮ್ಮನ್ನು ತಾವು ‘ಲೀಡರ್‌ ಆಫ್‌ ಮಿಲೇನಿಯಲ್ಸ್‌’ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಹೊಸ ತಲೆಮಾರಿನವರ ನಾಯಕ ಎಂದರ್ಥ. ಉದಾರವಾದಿ ನಿರ್ಣಯಗಳೊಟ್ಟಿಗೆ ತಮ್ಮ ಹಳೆಯ ಪಕ್ಷವನ್ನು ಪುನರುಜ್ಜೀವನಗೊಳಿಸಿ ಬಿಜೆಪಿಗೆ ಪರ್ಯಾಯವಾಗಿ ತಂದು ನಿಲ್ಲಿಸುವುದಾಗಿ ಅವರು ಹೇಳುತ್ತಾರೆ. ಆದರೆ ಮಾತಿನಂತೆ ಅವರ ನಡೆ ಕಾಣಿಸುತ್ತಿಲ್ಲ. ಮತ್ತೊಮ್ಮೆ ಹಳಬರಿಗೇ ಮಣೆ ಹಾಕಿ ಗ್ರಾಂಡ್‌ ಓಲ್ಡ್‌ ಪಾರ್ಟಿಯಲ್ಲಿ ಯುವ ನಾಯಕರನ್ನು ಸೈಡ್‌ಲೈನ್‌ ಮಾಡಿದ್ದಾರೆ.

ಸೋನಿಯಾ ನಿರ್ಧಾರ ಕೇಳಿ ರೇಗಾಡಿದ್ದ ಪೈಲೆಟ್: ಮುಗಿದಿಲ್ವಾ ರಾಜಸ್ಥಾನ ಫೈಟ್?

ಇನ್ನೂ ಎಷ್ಟು ಸಮಯ ಕಾಯಬೇಕು?

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.66ರಷ್ಟುಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಸದ್ಯ ಭಾರತೀಯರ ಸರಾಸರಿ ವಯೋಮಾನ 29. ಇದಕ್ಕೆ ತದ್ವಿರುದ್ಧವಾಗಿ ಭಾರತದ ಸಚಿವರ ಸರಾಸರಿ ವರ್ಷ 65.

ಭಾರತದಲ್ಲಿ ಯುವ ನಾಯಕರು ಮೂಲೆಗುಂಪಾಗಿ ಹಳಬರೇ ಏಕೆ ಮೇಲಿಂದ ಮೇಲೆ ಕುರ್ಚಿ ಹಿಡಿಯುತ್ತಾರೆ? ಹೀಗೇ ಮುಂದುವರೆದರೆ ಯುವ ಜನರನ್ನು ಪ್ರತಿನಿಧಿಸುವ, ಭಾರತದ ಜನಸಂಖ್ಯೆಯಲ್ಲಿಯೇ ಬಹುಸಂಖ್ಯಾತರಾಗಿರುವ ಯುವಕರು ಸರ್ಕಾರದಲ್ಲಿ ಪ್ರಮುಖ ಸ್ಥಾನಕ್ಕೇರಲು ಇನ್ನೆಷ್ಟುವರ್ಷ ಕಾಯಬೇಕು? ಮಧ್ಯಪ್ರದೇಶದಲ್ಲಿ ಉಪಮುಖ್ಯಮಂತ್ರಿಯಾಗಲು ಒಲ್ಲೆ ಎಂದು ನಿರಾಕರಿಸಿದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇತ್ತ ರಾಜಸ್ಥಾನದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಸಚಿನ್‌ ಪೈಲಟ್‌ ಆಯಾ ರಾಜ್ಯಗಳಲ್ಲಿ ಈ ಬಾರಿ ಮುಖ್ಯಮಂತ್ರಿ ಹುದ್ದೆಯ ಸಮೀಪಕ್ಕೆ ಹೋದವರು. ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ದೊಡ್ಡ ವರ್ಗವೊಂದು ಸಾಕಷ್ಟುಒತ್ತಡವನ್ನೂ ಹಾಕಿತ್ತು. ಆದರೆ, ಹಿರಿಯರ ಎದುರು ಅವರು ಸೋಲಬೇಕಾಯಿತು. ಸಿಂಧಿಯಾ ಹಾಗೂ ಸಚಿನ್‌ ಪೈಲಟ್‌ ಇಬ್ಬರಿಗೂ ಈಗಾಗಲೇ 40 ವಯಸ್ಸು ದಾಟಿದೆ. ಸಮಯ ಕಳೆದಂತೆ ಅವರೂ ಅಧಿಕಾರಕ್ಕೇರುವ ಅವಕಾಶವನ್ನು ಪಡೆಯುತ್ತಾರೆ ಎಂದು ಸಮಜಾಯಿಷಿ ನೀಡಲಾಗುತ್ತದೆ. ಆದರೆ ಅದು ತುಂಬಾ ತಡವಾಗಿರುತ್ತದೆ. ಅಷ್ಟುಹೊತ್ತಿಗೆ ಇವರು ಯುವಕರಾಗಿರುವುದಿಲ್ಲ.

ವಿಧಾನಸಭಾ ಚುನಾವಣೆ : ಸಿಎಂ ರೇಸ್ ನಲ್ಲಿ ಇಬ್ಬರು ಕೈ ಮುಖಂಡರು

ಭಾರತ ಜನಸಂಖ್ಯೆಯಲ್ಲಿ ಯುವಕರು ಬಹುಸಂಖ್ಯಾತರಾಗಿದ್ದರೂ ಪ್ರಾತಿನಿಧಿತ್ವದ ಕೊರತೆ ಎದ್ದು ಕಾಣುತ್ತಿದೆ. ಸದ್ಯದ ಸಂದರ್ಭದಲ್ಲಿ ಯುವ ಜನತೆಯ ಬಗ್ಗೆ ಚಿಂತಿಸುವ, ಅವರಿಗಾಗಿ ಯೋಜನೆಗಳ್ನು ರೂಪಿಸುವ, ಯುವ ಜನರಿಗಾಗಿ ದೇಶ ಕಟ್ಟುವ ರಾಜಕೀಯ ನಾಯಕರ ಮತ್ತು ಸರ್ಕಾರದ ಅಗತ್ಯವಿದೆ. ಎಲ್ಲವನ್ನೂ ಹಳಬರಿಗೆ ಬಿಟ್ಟುಕೊಡುವ ಐಡಿಯಾ ಭಾರತದ ಭವಿಷ್ಯಕ್ಕೆ ಉತ್ತಮವಾದುದಲ್ಲ.

ಹಳಬರ ಪ್ರಭಾವ ಇನ್ನೂ ಸಾಕಷ್ಟಿದೆ

ಭಾರತದಲ್ಲಿ ಒಬ್ಬ ವ್ಯಕ್ತಿ ಶಾಸಕನಾಗಲು ಆತನಿಗೆ ಇರಬೇಕಾದ ಅರ್ಹತೆ ಏನು? ಪ್ರಸ್ತುತ ಚುನಾಯಿತ ಪ್ರತಿನಿಧಿಯಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಅದಿರಲಿ, ಈಗ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಆಯ್ಕೆ ಬಗ್ಗೆಯೇ ಮಾತನಾಡೋಣ. ಕಾಂಗ್ರೆಸ್‌ ಪಕ್ಷದಲ್ಲಿ ಹಳೆಯ ತಲೆಮಾರಿನ ನಾಯಕರಿಗೆ ಇರುವ ಪ್ರಭಾವ ಮತ್ತು ಅಧಿಕಾರವನ್ನೂ ಈ ಆಯ್ಕೆ ಪ್ರತಿನಿಧಿಸುತ್ತದೆ. ಹೈಕಮಾಂಡ್‌ ಹಳಬರು ಅನುಭವವುಳ್ಳವರು ಎಂಬ ಬಲವಾದ ಅಭಿಪ್ರಾಯವನ್ನೇ ಹೊಂದಿದೆ. ಇದು ಎರಡು ರಾಜ್ಯಗಳಲ್ಲಿ ನಿರ್ವಹಣೆಗೆ ಮಾತ್ರವಲ್ಲದೆ, 2019ರ ಚುನಾವಣೆಗೆ ತಳಮಟ್ಟದ ಸಿದ್ಧತೆ ಕೂಡ ಹೌದು ಎಂಬುದು ಪಕ್ಷದ ನಾಯಕತ್ವದ ಸ್ಪಷ್ಟಅಭಿಪ್ರಾಯ.

ಗೈಡ್‌ ಆಗಲು ಹಿರಿಯರಿಗೆ ಇಷ್ಟವಿಲ್ಲವೆ?

ಆದರೆ ಹಳೆಯ ಮಾರ್ಗದರ್ಶಕರು ಯುವ ನಾಯಕರಿಗೆ ಬೆನ್ನೆಲುಬಾಗಿ, ಮಾರ್ಗದರ್ಶಕರಾಗಿರಲು ನಿರಾಕರಿಸುತ್ತಾರೆ. ‘ಮಾರ್ಗ-ದರ್ಶಕ’ರಾಗಿ ಮುಂದುವರೆಯುವುದು ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತಿದೆ. ಒಬ್ಬನೇ ಒಬ್ಬ ಯುವ ನಾಯಕ ಅಧಿಕಾರ ಹಿಡಿದು ಅನುಭವಿಯಾಗದೆ ಮಾರ್ಗದರ್ಶಕರು ನಿರ್ಗಮಿಸಿದರೆ ಗ್ರಾಂಡ್‌ ಓಲ್ಡ್‌ ಪಾರ್ಟಿ ಹೇಗೆ ಕೆಲಸ ಮಾಡುತ್ತದೆ? ಇಂತಹ ದೂರದೃಷ್ಟಿಇಲ್ಲದ ಕೆಲ ನಿರ್ಧಾರಗಳು ಭವಿಷ್ಯದಲ್ಲಿ ಪಕ್ಷದ ಭವಿಷ್ಯಕ್ಕೆ ತೊಡಕಾಗಬಹುದು.

ಕಿರಿಯರ ಶ್ರಮಕ್ಕೆ ಇದು ಬಹುಮಾನವಲ್ಲ

ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿಜಯ ಸಾಧಿಸಿದೆ. ಆದರೆ ಈ ವಿಜಯದ ಹಿಂದೆ ಯುವ ನಾಯಕ ಸಚಿನ್‌ ಪೈಲಟ್‌ ಅವರ ಶ್ರಮ ಎಷ್ಟಿದೆ ಎಂಬುದು ಗಮನಾರ್ಹ. ಬಹುದೊಡ್ಡ ಸಂಖ್ಯೆಯ ಯುವ ಮತದಾರರು ಅವರ ಹಿಂದೆ ಇದ್ದರು. ಮತ್ತು ವಸುಂಧರಾ ರಾಜೇ ಆಡಳಿತದ ವಿರುದ್ಧ ಕೆರಳಿದ್ದ ಬಿಜೆಪಿ ಬೆಂಬಲಿಗರ ಒಂದು ಸೆಕ್ಷನ್‌ ಕೂಡ ಸಚಿನ್‌ ಪೈಲಟ್‌ ಅವರ ಶ್ರಮ, ಚೈತನ್ಯಕ್ಕೆ ಮನಸೋತಿತ್ತು. ಈಗ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೊರಗಿಟ್ಟಿರುವುದು ಹೊಸದಾಗಿ ಸೇರ್ಪಡೆಯಾಗಿದ್ದ ಬೆಂಬಲಿಗರನ್ನು ದೂರ ಅಟ್ಟುತ್ತದೆ ಮತ್ತು ಅದು 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆಯೂ ಇದೆ. ಅದು ಹೇಗೋ ಅಸಮಾಧಾನವನ್ನು ಸರಿಪಡಿಸಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಆದರೆ ಪೈಲಟ್‌ ಪಟ್ಟಶ್ರಮಕ್ಕೆ ಅದು ಸೂಕ್ತ ಬಹುಮಾನ ಅಲ್ಲ.

ಪತ್ನಿ, ಅರಮನೆ, ಶ್ರೀಮಂತಿಕೆ: ಜ್ಯೋತಿರಾದಿತ್ಯ ಸಿಂಧಿಯಾ ಲೈಫ್ ಸ್ಟೈಲ್!

ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಒಂದು ವರ್ಷ ಸಂದಿದೆ. ಅವರು ಮುಳುಗಿದ್ದ ಪಕ್ಷವನ್ನು ಪುನರ್‌ ರೂಪಿಸುವ ಭರವಸೆ ನೀಡಿದ್ದರು. ಆದರೆ ಅದು ಸಂಪೂರ್ಣವಾಗಿ ಕಾರ್ಯಗತವಾಗಿಲ್ಲ. ಹಲವರಿಗೆ ಸದ್ಯದ ಮುಖ್ಯಮಂತ್ರಿ ಆಯ್ಕೆ ವಿದ್ಯಮಾನ ಒಂದು ರೀತಿಯ ಉದ್ಯಮ ಎನಿಸುತ್ತದೆ. ಹಿರಿಯರು ತಮಗಿರುವ ಪ್ರಭಾವ ಬಳಸಿ ಪ್ರಮುಖ ಸ್ಥಾನವನ್ನು ಅಲಂಕರಿಸುತ್ತಾರೆ. ಅವರ ಹಿಂಬಾಲಕರಾದ ಯುವ ನಾಯಕರು ಮೂಲೆಗುಂಪಾಗುತ್ತಿದ್ದಾರೆ.

ನನ್ನಂತಹ ಹಲವರು ಯುವಕರು ಕಾಂಗ್ರೆಸ್‌ನ ಸಿದ್ಧಾಂತವನ್ನು ನಂಬುತ್ತೇವೆ. ಕಾಂಗ್ರೆಸ್‌ನ ಪುನರುಜ್ಜೀವನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ. ಉದಾರ ಮತ್ತು ಪರ್ಯಾಯ ನಾಯಕತ್ವ ಈ ಪಕ್ಷಕ್ಕೆ ಬೇಕಿದೆ. ‘ಯುವ’ ಮುಖ್ಯಸ್ಥನ ಅಡಿಯಲ್ಲಿ ಮಾತ್ರ ಆ ಉದಾರ, ಪರ್ಯಾಯ ಮತ್ತು ಜಾತ್ಯತೀತ ರಾಷ್ಟ್ರ ಕಟ್ಟಲು ಸಾಧ್ಯ.

-ಸೌರ್ಯ ಕಾಸಿಂ, ರಾಜಕೀಯ ಸಂಶೋಧಕಿ