ಜೈಪುರ : ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸಚಿನ್ ಪೈಲಟ್ ಇಬ್ಬರೂ ಕೂಡ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.  

ಅಲ್ಲದೇ ಇಬ್ಬರನ್ನೂ ಕೂಡ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಗಳು ಎಂದು ಪರಿಗಣಿಸಿದೆ. ಇದೇ ಡಿಸೆಂಬರ್ 7 ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಸೂಕ್ತ ತಯಾರಿಯಲ್ಲಿ ತೊಡಗಿದೆ. 

ಇನ್ನು ಮಧ್ಯ ಪ್ರದೇಶದಲ್ಲಿಯೂ ಕೂಡ ಚುನಾವಣೆ ನಡೆಯುತ್ತಿದ್ದು ಇಲ್ಲಿ ಕಮಲ್ ನಾಥ್ ಆಗಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನಾಗಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಇನ್ನಾದರೂ ಪರಿಗಣಿಸಿಲ್ಲ. ಆದರೆ ಇಬ್ಬರೂ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. 

ಸದ್ಯ ರಾಜಸ್ಥಾನ ಚುನಾವಣೆಯಲ್ಲಿ ಸಚಿನ್ ಪೈಲಟ್ ಅವರು ಸ್ಪರ್ಧೆ ಮಾಡುತ್ತಿದ್ದು, ರಾಹುಲ್ ಗಾಂಧಿ ಅವರು ಕೇಳಿಕೊಂಡ ಹಿನ್ನೆಲೆಯಲ್ಲಿ ತಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಗೆಹ್ಲೋಟ್ ಹೇಳಿದ್ದಾರೆ. 

ಸದ್ಯ ಗೆಹ್ಲೋಟ್ ಅವರು ಜೋಧ್ ಪುರದ ಸರ್ದಾಪುರ ಕ್ಷೇತ್ರದ  ಶಾಸಕರಾಗಿದ್ದಾರೆ, ಸಿಂಧಿಯಾ ಅವರು ಇದುವರೆಗೂ ಕೂಡ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆದರೆ ಅಜ್ಮೀರ್ ಕ್ಷೇತ್ರದ ಸಂಸದರಾಗಿರುವ ಅವರು ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯ ಸ್ಪರ್ಧೆಗೆ ತಯಾರಾಗಿದ್ದಾರೆ.