ಭೋಪಾಲ್(ಡಿ.12): ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಂಪರ್ ಲಾಟರಿ ಹೊಡೆದಿದೆ. 15 ವರ್ಷಗಳ ಕಾಲ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಮಧ್ಯಪ್ರದೇಶದಲ್ಲಿ ಮರೆತೇ ಹೊಗಿದ್ದ ಕಾಂಗ್ರೆಸ್ ಪಕ್ಷವನ್ನು ಜನರ ಪಕ್ಷವನ್ನಾಗಿ ಬದಲಾಯಿಸಿದ ನಾಯಕರಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಮುಖರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಹಗಲಿರುಳು ದುಡಿದವರು ಈ ಯುವ ನಾಯಕ.

ಅತ್ಯಂತ ಕಷ್ಟ ಕಾಲದಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈ ಬಿಡದೆ ಗಟ್ಟಿಯಾಗಿ ನಿಂತ ಸಿಂಧಿಯಾ, ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಿದರು. ಇದೀಗ ಮುಖ್ಯಮಂತ್ರಿ ಗಾದಿಯ ಪ್ರಬಲ ದಾವೆದಾರರಾಗಿದ್ದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಮೂಲಕ ತಾವೊಬ್ಬ ನೈಜ ಕಾಂಗ್ರೆಸ್ಸಿಗ ಎಂಬುದನ್ನು ಸಿಂಧಿಯಾ ಸಾಬೀತುಪಡಿಸಿದ್ದಾರೆ.

ಜಮ್ಮು ಕಾಶ್ಮೀರ ಸಿಎಂರನ್ನೇ ಎದುರಾಕ್ಕೊಂಡು ಮದುವೆಯಾದ ಪೈಲಟ್

ಎಲ್ಲರಿಗೂ ಗೊತ್ತಿರುವಂತೆ ಜ್ಯೋತಿರಾದಿತ್ಯ ಸಿಂಧಿಯಾ ರಾಜಮನೆತನದ ಹಿನ್ನೆಲೆಯುಳ್ಳವರು. ಸಿಂಧಿಯಾ ರಾಜಮನೆತನ ಮಧ್ಯಪ್ರದೇಶದಲ್ಲಿ ಸಾಕಷ್ಟು ಹೆಸರು ಗಳಿಸಿದೆ.

ಸಿಂಧಿಯಾ ಹಿನ್ನೆಲೆ:

ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾ ಜನಿಸಿದ್ದು 1971, ಜನವರಿ 1 ರಂದು. ಇವರ ತಂದೆ ಮಾಧವರಾವ್ ಸಿಂಧಿಯಾ ಕೂಡ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು 2001, ಡಿಸೆಂಬರ್ 30 ರಂದು ಮಾಧವರಾವ್ ಸಿಂಧಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.

ವಿದ್ಯಾರ್ಥಿ ದೆಸೆಯಿಂದಲೇ ಚುರುಕುತನದಿಂದ ಕೂಡಿದ್ದ ಜ್ಯೋತಿರಾದಿತ್ಯ ಮುಂದೆ ಹಾವರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. 2001ರಲ್ಲಿ ಸ್ಟೆನ್ ಫೋರ್ಡ್ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಬಿಸಿನೆಸ್ ನಿಂದ ಎಂಬಿಎ ಪದವಿ ಪಡೆದರು. ತಂದೆ ನಿಧನದಿಂದಾಗಿ ಜ್ಯೊತಿರಾದಿತ್ಯ ರಾಜಕೀಯಕ್ಕೆ ಪ್ರವೇಶ ಮಾಡಿದರು.

ಮದುವೆ:

1994, ಡಿಸೆಂಬರ್ 12 ರಂದು ಜ್ಯೋತಿರಾದಿತ್ಯ ಅವರು ಬಡೋದಾದ ಗಾಯಕವಾಡ್ ರಾಜಮನೆತನ ರಾಜಕುಮಾರಿ ಪ್ರಿಯದರ್ಶಿನಿ ಅವರೊಂದಿಗೆ ವಿವಾಹವಾದಾರು. ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾಳೆ.

ಜ್ಯೋತಿರಾದಿತ್ಯ ಸಿಂಧಿಯಾ ಪತ್ನಿ ಪ್ರಿಯದರ್ಶಿನಿ ರಾಜೇ ಸಿಂಧಿಯಾ ವಿಶ್ವದ 50 ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಗನ ಹೆಸರು ಮಹಾಆರ್ಯಮನ್ ಸಿಂಧಿಯಾ ಮತ್ತು ಮಗಳ ಹೆಸರು ಅನನ್ಯಾರಾಜೇ ಸಿಂಧಿಯಾ.

400 ಕೋಣೆಗಳ ಭವ್ಯ ಬಂಗಲೆ:

ಹೌದು, ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾ 400 ಕೋಣೆಗಳ ಭವ್ಯ ಅರಮನೆಯಲ್ಲಿರುತ್ತಾರೆ. 1874 ರಲ್ಲಿ ಸಿಂಧಿಯಾ ವಂಶಜರು ಈ ಮನೆಯನ್ನು ನಿರ್ಮಿಸಿದ್ದರು. ಈ ಅರಮನೆಯ ಹೆಸರು ಜಯವಿಲಾಸ್ ಪ್ಯಾಲೆಸ್.

ಈ ಅರಮನೆಯ ದರ್ಬಾರ್ ಹಾಲ್ ಇಂದಿಗೂ ಮಧ್ಯಪ್ರದೇಶದ ಜನರ ಕೇಂದ್ರ ಬಿಂದುವಾಗಿದೆ. 100 ಉದ್ದ ಎತ್ತರ, 50 ಅಡಿ ಅಗಲ, 41 ಅಡಿ ಎತ್ತರವಿರುವ ಈ ದರ್ಬಾರ್ ಹಾಲ್‌ನಲ್ಲಿ 140 ವರ್ಷಗಳಷ್ಟು ಹಳೆಯದಾದ 3500 ಕೆಜಿ ತೂಕದ ಜೂಮರ್ ಗಳಿವೆ.

ಒಟ್ಟು ಆಸ್ತಿ:

ಜ್ಯೋತಿರಾದಿತ್ಯ ಸಿಂಧಿಯಾ 2014 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್ ಪ್ರಕಾರ ಅವರ ಆಸ್ತಿ ಮೌಲ್ಯ 32 ಕೋಟಿ ರೂ. ಇದರಲ್ಲಿ ವಂಶಪಾರಂಪರ್ಯವಾಗಿ ಬಂದ 200 ಮಿಲಿಯನ್ ಯುಎಸ್ ಡಾಲರ್ ಬೆಲೆಯ ಅರಮನೆ ಸೇರಿಲ್ಲ.

ಹವ್ಯಾಸ:

ಹೇಳಿ ಕೇಳಿ ರಾಜಮನೆತನದವರದ ಜ್ಯೋತಿರಾದಿತ್ಯ ಸಿಂಧಿಯಾ, ಕುದುರೆ ಸವಾರಿ, ಶೂಟಿಂಗ್, ಆರ್ಚರಿ, ಕ್ರಿಕೆಟ್ ಮುಂತದ ಕ್ರೀಡೆಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ.