ರಾಜಸ್ಥಾನ (ಡಿ. 14):  ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ 3 ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಅದರಲ್ಲೊಂದು ರಾಜಸ್ಥಾನ. ಇಲ್ಲಿ ಬಿಜೆಪಿವಿರೋಧಿ ಅಲೆ ಇತ್ತಾದರೂ ಅಷ್ಟರಿಂದಲೇ ಕಾಂಗ್ರೆಸ್‌ನ ಗೆಲುವು ಸಾಧ್ಯವಿರಲ್ಲ. ರಾಹುಲ್ ಗಾಂಧಿಯ ಆಪ್ತ ಯುವ ನಾಯಕ ಸಚಿನ್ ಪೈಲಟ್‌ರ ರಾಜಕೀಯ ತಂತ್ರಗಾರಿಕೆಗಳು ಇಲ್ಲಿ ಕೆಲಸ ಮಾಡಿವೆ. ಅವರು ಮಾಡಿದ್ದೇನು? ಮುಂದಿನ ಸವಾಲುಗಳೇನು? ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

ಪಂಚರಾಜ್ಯ ಚುನಾವಣೆಗಳ ಫಲಿತಾಂಶವನ್ನು ಕಾಂಗ್ರೆಸ್ ಹೇಗೆ ನೋಡುತ್ತದೆ?

ಜನಾದೇಶ ಬಿಜೆಪಿಗೆ ವಿರುದ್ಧವಾಗಿದೆ ಎಂಬುದು ಸ್ಪಷ್ಟ. ನಾವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಸರ್ಕಾರ ರಚಿಸುತ್ತಿದ್ದೇವೆ. ರಾಜಸ್ಥಾನದಲ್ಲಿ ನಮಗೆ ಸ್ಪಷ್ಟ ಬಹುಮತ ಬಂದಿದೆ. ಇದು ವಸುಂಧರಾ ರಾಜೇ ಅವರ ಆಡಳಿತದ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಜನ ನೀಡಿರುವ ತೀರ್ಪು. ಹಾಗೂ ಕಾಂಗ್ರೆಸ್ ಪಕ್ಷದ ನಿಲುವು ಮತ್ತು ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿರುವ ಜನಾದೇಶ.

ಫಲಿತಾಂಶವು ವಸುಂಧರಾ ರಾಜೇ ವಿರುದ್ಧ ನೀಡಿದ ತೀರ್ಪೇ ಅಥವಾ ನರೇಂದ್ರ ಮೋದಿ ವಿರುದ್ಧದ ಜನಾದೇಶವೇ?

ಎರಡೂ ಹೌದು. ಒಂದನ್ನು ಇನ್ನೊಂದರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಮೋದಿ ಮತ್ತು ವಸುಂಧರಾ ರಾಜೇ ಇಬ್ಬರೂ ಬಿಜೆಪಿಯವರು. ಹಾಗಾಗಿ ಜನರು ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ. ಒಬ್ಬರು ಜೈಪುರದಲ್ಲಿ ಅಧಿಕಾರದಲ್ಲಿದ್ದರು, ಮತ್ತೊಬ್ಬರು ದೆಹಲಿಯಲ್ಲಿ ಅಧಿಕಾರದಲ್ಲಿದ್ದಾರೆ. 

ಈ ಫಲಿತಾಂಶ 2019 ರ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಾ?

ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. 3 ರಾಜ್ಯಗಳೂ ಬೈ ಪೋಲಾರ್ ಸ್ಟೇಟ್‌ಗಳು. ಬಿಜೆಪಿ ಮತ್ತು ಕಾಂಗ್ರೆಸ್ ನೇರಾನೇರ ಹಣಾಹಣಿ ನಡೆಸಿವೆ. ಅವರು ಮೂರನ್ನೂ ಕಳೆದುಕೊಂಡಿದ್ದಾರೆ. ಅದರರ್ಥ ಸ್ಪಷ್ಟವಾಗಿದೆ: ಬಿಜೆಪಿ ಮತ್ತು ಅದರ ಮೈತ್ರಿಕೂಟ 2019 ರಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬುದನ್ನು ಗೋಡೆಯಲ್ಲಿ ಬರೆದಿಟ್ಟಾಗಿದೆ.

ಬಿಜೆಪಿಗೆ ಮೋದಿಯ ವರ್ಚಸ್ಸೇ ಆಧಾರ. ಇದು ರಾಜ್ಯ ಸರ್ಕಾರದ ವಿರೋಧಿ ಅಲೆಯ ಫಲಿತಾಂಶ. ಹಾಗಾಗಿ 2019 ರ ಚುನಾವಣೆಯೇ ಬೇರೆ ಎಂದು ಹೇಳಲಾಗುತ್ತಿದೆಯಲ್ಲಾ? ಯಾವ ವರ್ಚಸ್ಸು?

ಪ್ರಧಾನಿ ನರೇಂದ್ರ ಮೋದಿ ಕೊನೆಯ ಚುನಾವಣಾ ರ‌್ಯಾಲಿಗೆ ರಾಜಸ್ಥಾನದ ದೌಸಾಗೆ ಬಂದಿದ್ದರು. ಆದರೆ ಕಾಂಗ್ರೆಸ್ ದೌಸಾದ 5 ಸೀಟುಗಳ ಪೈಕಿ ನಾಲ್ಕನ್ನು ಗೆದ್ದಿದೆ. ಕಳೆದ ೫ ವರ್ಷದಿಂದ ಅಧಿಕಾರದಲ್ಲಿದ್ದ ಪಕ್ಷವು ಬಹುತೇಕ ನೂರು ಸೀಟುಗಳನ್ನು ಕಳೆದುಕೊಂಡಿತು. ಫರೀದಾಬಾದ್ ಮುನ್ಸಿಪಲ್ ಎಲೆಕ್ಷನ್ ನೋಟ್ ಬಂದಿಗೆ ನೀಡಿದ ಪ್ರತಿಕ್ರಿಯೆ.

ಉತ್ತರ ಪ್ರದೇಶದಲ್ಲಿ ಅವರು ಗೆದ್ದಾಗ ಜನರು ನೋಟು ಅಮಾನ್ಯೀಕರಣವನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದರು. ಈಗ ಅವರು ಐದೂ ರಾಜ್ಯಗಳನ್ನು ಕಳೆದುಕೊಂಡಿದ್ದಾರೆ. ಅದರರ್ಥ ಸ್ಪಷ್ಟ, ಈ ಫಲಿತಾಂಶವು ಕೇಂದ್ರ ಮತ್ತು ರಾಜ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ.

ಆದರೆ, ನಿಮ್ಮ ನಿರೀಕ್ಷೆಗಳಿಗಿಂತ ಕಾಂಗ್ರೆಸ್‌ಗೆ ಸಿಕ್ಕ ಸೀಟುಗಳ ಸಂಖ್ಯೆ ಕಡಿಮೆಯಿದೆ. ಎಲ್ಲಿ ನಿಮ್ಮಿಂದ ತಪ್ಪಾಯಿತು?

ಏನೂ ತಪ್ಪಾಗಿಲ್ಲ. ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು ಮರೆಯಬಾರದು. ೫ ವರ್ಷದ ಹಿಂದೆ ನಮ್ಮ ಪಕ್ಷದ 21 ಎಂಎಲ್‌ಎ ಗಳಿದ್ದರು. ಅದೀಗ ೧೦೦ಕ್ಕೆ ಏರಿಕೆಯಾಗಿದೆ. ಇದಕ್ಕಿಂತ ಇನ್ನೇನು ಬೇಕು?

ಆದರೆ ರಾಜಸ್ಥಾನದಲ್ಲಿ ನಿಮಗೆ 140 ಸೀಟು ದಾಟುವ ನಿರೀಕ್ಷೆ ಇತ್ತಲ್ಲವೇ?

ನಿರೀಕ್ಷೆ ಜನರಿಗಿತ್ತು. ಏಕೆಂದರೆ ಕಾಂಗ್ರೆಸ್ ಪರ ಅಷ್ಟೊಂದು ಅಲೆಯಿತ್ತು. ಕಳೆದ 5 ವರ್ಷದಲ್ಲಿ ನಾವು ಎಲ್ಲಾ ಉಪಚುನಾವಣೆಗಳನ್ನೂ ಗೆದ್ದಿದ್ದೆವು. ಹಾಗಾಗಿ ನಮ್ಮ ಕಾರ್ಯಕರ್ತರು ಸ್ವಲ್ಪ ಹೆಚ್ಚೇ ವಿಶ್ವಾಸ ಹೊಂದಿದ್ದರು. ಈಗ ಜನಾದೇಶ ಸ್ಪಷ್ಟವಾಗಿದೆ. ಜನರ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಲ್ಲ. ನಾವೇನನ್ನು ನಿರೀಕ್ಷಿಸಿದ್ದೆವೋ ಅದನ್ನು ಪಡೆದಿದ್ದೇವೆ. ರಾಜಸ್ಥಾನದ ಸಮಸ್ತ ಜನರಿಗೆ, ಪಕ್ಷದ ಕಾರ‌್ಯಕರ್ತರಿಗೆ ಮತ್ತು ನಮ್ಮನ್ನು ಮುನ್ನಡೆಸಿದ ರಾಹುಲ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆಯಲ್ಲಿ ಸಮಸ್ಯೆ ಉಂಟಾಗಿತ್ತು. ಹೀಗಾಗಿ ನಿಮ್ಮ ಪಕ್ಷದಿಂದ ಹಲವರು ಬಂಡೆದ್ದು ಚುನಾವಣೆಗೆ ಸ್ಪರ್ಧಿಸಿದರು. ಅದರಿಂದ ನಿಮಗೆ ಕಡಿಮೆ ಸೀಟುಗಳು ಸಿಕ್ಕವು ಅಲ್ಲವೇ?

ಸಮಸ್ಯೆಯಾಗಿತ್ತು ಅಂತ ನನಗೇನೂ ಅನ್ನಿಸುವುದಿಲ್ಲ. ಪ್ರತಿ ಬಾರಿಯೂ ಕೆಲ ಸ್ವತಂತ್ರ ಮತ್ತು ಸ್ಥಳೀಯ ಪಕ್ಷಗಳು ಜೊತೆಗಿರುತ್ತವೆ. ರಾಜಸ್ಥಾನದಲ್ಲಿ ಪ್ರತಿ ಬಾರಿಯೂ 15-20 ಸೀಟುಗಳನ್ನು ಸ್ವತಂತ್ರ ಮತ್ತು ಸ್ಥಳೀಯ ಪಕ್ಷಗಳು ಪಡೆದುಕೊಳ್ಳುತ್ತವೆ. ಅದರಲ್ಲಿ ಹೊಸತೇನೂ ಇಲ್ಲ. ನಾವು ಸ್ಪಷ್ಟ ಬಹುಮತ ಪಡೆದಿದ್ದೇವೆ. ಆದರೆ ರಾಜಸ್ಥಾನದಲ್ಲಿ ಬಿಜೆಪಿ ವಿರೋಧಿ ಅಲೆಯನ್ನು ಇನ್ನಷ್ಟು ಜೋರು ಮಾಡಲು ನಾವೀಗಲೂ ಪ್ರಯತ್ನಿಸುತ್ತಿದ್ದೇವೆ.

ಯಾರು ಬಿಜೆಪಿಯನ್ನು ವಿರೋಧಿಸುತ್ತಾರೋ, ಯಾರು ಜಾತ್ಯತೀತ ಚೌಕಟ್ಟಿನ ಸಂಸ್ಥೆಗಳ ರಕ್ಷಣೆಗಾಗಿ ಪ್ರಯತ್ನಿಸುತ್ತಾರೋ ಅವರೊಂದಿಗೆ ಕೈಜೋಡಿಸಲು ನಾವು ಸದಾ ಸಿದ್ಧರಿದ್ದೇವೆ. ಸ್ಪಷ್ಟ ಬಹುಮತದ ಹೊರತಾಗಿಯೂ ಲೋಕಸಭಾ ಚುನಾವಣೆಗೆ ಒಗ್ಗಟ್ಟಿನಿಂದ ಸ್ಪರ್ಧಿಸಲು ಚಿಂತಿಸುತ್ತಿದ್ದೇವೆ.

ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಕಗ್ಗಂಟಾಗಿದೆಯಲ್ಲವೇ?

ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ. ಅದೇ ರೀತಿ, ಸರ್ಕಾರವನ್ನು ಮುನ್ನಡೆಸುವ ನಾಯಕ ಯಾರಾಗಬೇಕು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಕೂಡ ನಿರ್ಣಯಿಸುತ್ತದೆ. ಅದರ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ.

ಸರ್ಕಾರ ಬಂದ 100 ದಿನದ ಒಳಗಾಗಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಿರಿ. ಇದರ ಜೊತೆಗೆ ಮತ್ತಿತರ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೀರಿ? ಆರ್ಥಿಕ ಪರಿಸ್ಥಿತಿ ಸಾಮಾನ್ಯ ಮಟ್ಟದಲ್ಲಿರುವಾಗ ಯುವ ಜನತೆಗೆ ಉದ್ಯೋಗ ಹೇಗೆ ನೀಡುತ್ತೀರಿ?

ಸದ್ಯ ಕೃಷಿಕರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುತ್ತೇವೆ. ಅದ್ದರಿಂದ ಆ ವಿಷಯವನ್ನು ಪಕ್ಕಕ್ಕಿಡಿ. ಇನ್ನು ಉದ್ಯೋಗ ನಿರ್ಮಾಣಕ್ಕಾಗಿ ನಾವು ಬಂಡವಾಳ ಹೂಡಿಕೆಗೆ ಆದ್ಯತೆ ನೀಡುತ್ತೇವೆ. ಆದರೆ ಬಹು ರಾಷ್ಟ್ರೀಯ ಕಂಪನಿಗಳಲ್ಲ. ನಮ್ಮ ಆದ್ಯತೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು. ನಮ್ಮ ದೇಶದ ನಿಜವಾದ ಬೆನ್ನುಲುಬು ಅವೇ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಬಲೀಕರಣದಿಂದ ಸಹಜವಾಗಿಯೇ ಉದ್ಯೋಗ ಸೃಷ್ಟಿಯಾಗುತ್ತದೆ. ಜೊತೆಗೆ ವ್ಯಾಪಾರ ಉದ್ದಿಮೆಗಳ ಏಳಿಗೆಗೆ ಆ ವಾತಾವರಣ ಸಹಕಾರಿಯಾಗುತ್ತದೆ. ಸಮಾಜವೂ ಶಾಂತ ವಾಗಿರುತ್ತದೆ. ಇದರಿಂದ ಜನರಿಗೆ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂಬ ಭಾವನೆ ಬರುತ್ತದೆ. ಜೊತೆಗೆ ಆರ್ಥಿಕತೆಗೂ ವೇಗ ಬರುತ್ತದೆ.

ರಾಜಸ್ಥಾನದಲ್ಲಿ ಕುಡಿಯುವ ನೀರನ್ನೂ ಕೊಳ್ಳುವ ಪರಿಸ್ಥಿತಿ ಇದೆ. ಸಮಸ್ಯೆ ಪರಿಹಾರಕ್ಕೆ ನಿಮ್ಮ ಸರ್ಕಾರ ಏನು ಮಾಡಲಿದೆ?

ಹೌದು. ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ಬೇಕು. ಕಾಂಗ್ರೆಸ್ ಈಗಾಗಲೇ ಅಂತರ್ಜಲ, ಕೃಷಿ, ನೀರಾವರಿ, ಕಾಲುವೆಗಳ ವಿಸ್ತರಣೆ, ಗಣಿಗಾರಿಕೆ ಬಗ್ಗೆ ಚಿಂತಿಸುತ್ತಿದೆ. ನದಿ ಗಣಿಗಾರಿಕೆ ವಿಷಯವನ್ನು ಪುನರ್‌ಪರಿಶೀಲಿಸಬೇಕಿದೆ.

ಜನರ ಸಮಸ್ಯೆಗಳು ಮಾತ್ರ ನಿಮ್ಮ ಏಕಮಾತ್ರ ಆದ್ಯತೆ ಯಾಗಿದ್ದರೆ ಕಾಂಗ್ರೆಸ್ ಏಕೆ ದೇವಸ್ಥಾನಗಳು, ಗೋತ್ರದ ವಿಷಯವನ್ನು ಎತ್ತಿಕೊಂಡಿತು?

ಬಿಜೆಪಿಯವರು ದೇವಾಲಯಗಳನ್ನು ಏಕಸ್ವಾಮ್ಯ ಮಾಡಿಕೊಂಡಿದ್ದಾರೆಯೇ? ಕಾಂಗ್ರೆಸ್ ನಾಯಕರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಾರದೆ? ನಂಬಿಕೆಗಳನ್ನು ವ್ಯಕ್ತಪಡಿಸಬಾರದೆ? ನಮಗೆ ಯಾವುದೇ ತಾರತಮ್ಯ ಇಲ್ಲ ಎಂಬುದೇ ನಮ್ಮ ಅಂತರ್ಗತ ಸಂದೇಶ.

ನಿಮ್ಮ ಮತ್ತು ಗೆಹ್ಲೋಟ್ ನಡುವಿನ ಹಣಾಹಣಿ ನಡೆಯುತ್ತಿದೆ, ಜಾತಿ ಸಂಘರ್ಷವಿದೆ, ಎರಡೂ ಸಮುದಾಯದವರು ಈ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ...

ಅರ್ಥವಿಲ್ಲದ ಊಹೆಗಳ ಬಗ್ಗೆ ಮಾತನಾಡಲು ಇಷ್ಟವಲ್ಲ. ಗೆಹ್ಲೋಟ್ ಸಾಬ್ ಮತ್ತು ನಾನು ಒಟ್ಟಿಗೇ ಕೆಲಸ ಮಾಡಿದ್ದೇವೆ. ಅವರು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಕೇವಲ ಜಾತಿ ಮುಖಂಡ ಅಲ್ಲ. 

- ಸಚಿನ್ ಪೈಲಟ್, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ