ಮುಂಬೈ(ಸೆ.18): ಒಂದು ವೇಳೆ ವೀರ್ ಸಾವರ್ಕರ್ ಈ ದೇಶದ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ರಚನೆಯಾಗುತ್ತಿರಲಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ವಿಭಜನೆ ವೇಳೆ ಸಾವರ್ಕರ್ ದೇಶದ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ರಚನೆಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದರು.

ಇದೇ ವೇಳೇ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿರುವ ಉದ್ಧವ್ ಠಾಕ್ರೆ, ಈ ದೇಶಕ್ಕೆ ಗಾಂಧಿ, ನೆಹರೂ ಅವರ ಕೊಡುಗೆ ಎಷ್ಟಿದೆಯೋ ಅಷ್ಟೇ ಕೊಡುಗೆ ಸಾವರ್ಕರ್ ಅವರದ್ದೂ ಇದೆ ಎಂದು ಹೇಳಿದ್ದಾರೆ.

ಸಾವರ್ಕರ್ 14 ವರ್ಷಗಳ ಕಾಲ ಕರಿನೀರಿನ ಶಿಕ್ಷೆಗೆ ಗುರಿಯಾಗಿದ್ದರು. ನೆಹರೂ ಒಂದು ವೇಳೆ 14 ದಿನ ಜೈಲಿನಲ್ಲಿ ಕಳೆದಿದ್ದರೂ ನಾನು ಅವರನ್ನು 'ವೀರ' ಎಂದು ಕರೆಯುತ್ತಿದ್ದೆ ಎಂದು ಠಾಕ್ರೆ ನುಡಿದಿದ್ದಾರೆ.

ಇನ್ನು ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲು ಪ್ರತಿಪಾದಿಸಿದ್ದೇ ಸಾವರ್ಕರ್ ಅಲ್ಲವೇ ಎಂದು ಠಾಕ್ರೆ ಅವರನ್ನು ಪ್ರಶ್ನಿಸಿದೆ.