ಜಾತ್ಯಾತೀತ ಭಾರತದ ಸ್ವರೂಪ ಬದಲಾಗಿದೆ: ನುಸ್ರತ್ ಬಂದ್ಮೇಲೆ ಏನೇನಾಗಿದೆ?
ಬದಲಾಗಿದೆ ಭಾರತದ ಜಾತ್ಯಾತೀತೆಯ ವ್ಯಾಖ್ಯಾನ| ಜಾತ್ಯಾತೀತ ಭಾರತದ ಸ್ವರೂಪದಲ್ಲಿ ಭಾರೀ ಬದಲಾವಣೆ| ಬಹುಸಂಖ್ಯಾತ ಸಂಸ್ಕೃತಿ ಅಪ್ಪಿಕೊಂಡರೆ ರಾಷ್ಟ್ರವಾದಿ| ಅಲ್ಪಸಂಖ್ಯಾತರ ಪದ್ದತಿ ಗೌರವಿಸಿದರೆ ಒಲೈಕೆ ರಾಜಕಾರಣ| ಟಿಎಂಸಿ ಸಂಸದೆ ನುಸ್ರತ್ ಜಹಾನ್ ಮೆಚ್ಚಿಕೊಂಡ ಬಹುಸಂಖ್ಯಾತ ವರ್ಗ| ನುಸ್ರತ್ ಜಾತ್ಯಾತೀತತೆ ಕೊಂಡಾಡುವವರು ಮಮತಾ ಜಾತ್ಯಾತೀತತೆ ಕಂಡು ಸಿಟ್ಟು| ನುಸ್ರತ್ ಅವರ ಏಕಾಏಕಿ ಜನಪ್ರಿಯತೆಗೆ ಕಾರಣಗಳೇನು?|
ಕೋಲ್ಕತ್ತಾ(ಜು.09): ನುಸ್ರತ್ ಜಹಾನ್..ಕಳೆದ ಜೂ.25ರಂದು ಲೋಕಸಭೆಯಲ್ಲಿ ಎಲ್ಲರೆದುರು ನಿಂತು ಈಕೆ ಸಂಸದೆಯಾಗಿ ಅಧಿಕಾರ ಸ್ವೀಕರಿಸುವ ಮೊದಲು, ದೇಶ ಬಿಡಿ ಇಡೀ ಪ.ಬಂಗಾಳಕ್ಕಾದರೂ ಈಕೆಯ ಪರಿಚಯ ಇತ್ತೋ ಇಲ್ಲವೋ ಹೇಳುವುದು ಕಷ್ಟ.
ಟಿಎಂಸಿಯ ಮೊದಲ ಮುಸ್ಲಿಂ ಸಂಸದೆ ಎಂಬ ಖ್ಯಾತಿಗೆ ಪಾತ್ರರಾಗಿರುವ ನುಸ್ರತ್ ಜಹಾನ್ ಬಂಗಾಳಿ ಸಿನಿಮಾನದಲ್ಲಿ ಚಿರಪರಿಚಿತ ಹೆಸರು. ತಮ್ಮ ಅಭಿನಯ, ಅಂಗ ಸೌಷ್ಠವದಿಂದ ಬಂಗಾಳಿಗರ ಮನಗೆದ್ದ ಈಕೆ, ಇದೀಗ ದೇಶದ ಗಮನ ಸೆಳೆಯುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.
ಸಿನಿಮಾ ರಂಗದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ರಂಗ ಪ್ರವೇಶಿಸಿದ ಈಕೆ, ಸದ್ಯ ದೇಶದ ಅತ್ಯಂತ ಚರ್ಚಾಸ್ಪದ ರಾಜಕಾರಣಿಯಲ್ಲಿ ಒಬ್ಬಳಾಗಿ ಹೊರ ಹೊಮ್ಮಿದ್ದಾಳೆ.
ಅದರಲ್ಲೂ ಪ್ರಮಾಣವಚನ ಸಂದರ್ಭದಲ್ಲಿ ವಂದೇ ಮಾತರಂ ಘೋಷಣೆ ಕೂಗಿದ ಬಳಿಕ, ನುಸ್ರತ್ ಹೆಸರು ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಯಿತು. ಮುಸ್ಲಿಮ್ ಸಮುದಾಯದ ಮಹಿಳೆಯಾಗಿ ಸಂಸತ್ತಿನಲ್ಲಿ ವಂದೇ ಮಾತರಂ ಘೋಷಣೆ ಕೂಗಲೊಲ್ಲೆ ಎನ್ನುವ ಸದಸ್ಯರ(ಅಸದುದ್ದೀನ್ ಒವೈಸಿ) ಮಧ್ಯೆ ನಿಂತು, ವಂದೇ ಮಾತರಂ ಎಂದಾಗ ಇಡೀ ದೇಶ ನುಸ್ರತ್ ಜಹಾನ್ ಅವರನ್ನು ಭಲೇ ಹೆಣ್ಣೇ ಎಂದು ಕೊಂಡಾಡಿತು.
ತೀರ ಇತ್ತಿಚೀಗೆ ಕೋಲ್ಕತ್ತಾದಲ್ಲಿ ಇಸ್ಕಾನ್ ಹಮ್ಮಿಕೊಂಡಿದ್ದ ರಥಯಾತ್ರೆಯಲ್ಲಿ ನುಸ್ರತ್ ಪಾಲ್ಗೊಂಡು ಗಮನ ಸೆಳೆದರು. ರಥಯಾತ್ರೆ ವೇಳೆ ಹಿಂದೂ ಸಂಪ್ರದಾಯದಂತೆ ಸೀರೆಯುಟ್ಟು, ಹಣೆಗೆ ಕುಂಕುಮವಿಟ್ಟು, ಮಂಗಳ ಸೂತ್ರ ಧರಿಸಿದ ನುಸ್ರತ್ ವಿರುದ್ಧ ಕೆಲವು ಮೌಲ್ವಿಗಳು ಫತ್ವಾ ಹೊರಡಿಸಿದ್ದೂ ಆಯಿತು.
ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ನುಸ್ರತ್, ತಾನು ಯುವ ಭಾರತದ ಯುವ ಚಿಂತನೆಯನ್ನು ಪ್ರತಿನಿಧಿಸುವುದಾಗಿ ಹೇಳಿ ಮೌಲ್ವಿಗಳ ಬಾಯಿ ಮುಚ್ಚಿಸಿದರು. ಜಾತ್ಯಾತೀತತೆ, ಆಧುನಿಕ ಚಿಂತನೆಗಳ ಆಗರವಾಗಿರುವ ನುಸ್ರತ್ ಜಹಾನ್ ಪತಿಯ ಹೆಸರೂ ಕೂಡ ನಿಖಿಲ್ ಜೈನ್.
ಇದೆಲ್ಲಾ ನುಸ್ರತ್ ಜಹಾನ್ ಮಾತಾಯಿತು. ನುಸ್ರತ್ ಜಾತ್ಯಾತೀತತೆಯನ್ನು ಕೊಂಡಾಡುವವರ ಸಂಖ್ಯೆ ಬಹುಸಂಖ್ಯಾತರಲ್ಲೂ ಕಮ್ಮಿ ಏನಿಲ್ಲ. ನುಸ್ರತ್ ಅವರನ್ನು ನೈಜ ಮುಸ್ಲಿಮ್ ಎಂದೂ, ರಾಷ್ಟ್ರವಾದಿ ಚಿಂತನೆಯುಳ್ಳ ಸಂಸದೆ ಎಂದೂ ಆಕೆಯನ್ನು ಹೊಗಳಲಾಗುತ್ತದೆ.
ಆದರೆ ಇದೇ ಜಾತ್ಯಾತೀತ ರಾಜಕಾರಣವನ್ನು ತಮ್ಮ ಜೀವಮಾನವೀಡಿ ಮಾಡಿಕೊಂಡು ಬಂದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ದೇಶದ ಇತರ ರಾಜಕಾರಣಿಗಳ ನಡೆಯನ್ನು ಮಾತ್ರ ಅಲ್ಪಸಂಖ್ಯಾತ ಒಲೈಕೆ ರಾಜಕಾರಣ ಎಂದು ಕರೆಯವುದು ಮಾತ್ರ ವಿಚಿತ್ರ ಎನಿಸದಿರದು.
ಮುಸ್ಲಿಮ್ ಸಂಸದೆಯೋರ್ವರು ಹಿಂದೂ ಸಂಪ್ರದಾಯ ಪಾಲಿಸಿದರೆ ಅದನ್ನು ರಾಷ್ಟ್ರವಾವೆಂದೂ, ಹಿಂದೂ ನಾಯಕನೋರ್ವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಇಫ್ತಾರ್ ಕೂಟದಲ್ಲಿ ಭಾಗವಹಿಸಿದರೆ ಅದನ್ನು ಅಲ್ಪಸಂಖ್ಯಾತರ ಒಲೈಕೆ ಎಂದು ಕರೆಯುವ ದ್ವಂದ್ವ ನಿಲುವು ಕಂಡು ಬರುತ್ತಿದೆ.
ಅದೇನೆ ಇರಲಿ ಬಹುತ್ವವನ್ನು ಒಪ್ಪಿಕೊಂಡ ಭಾರತೀಯ ಸಮುದಾಯದಲ್ಲಿ, ಈ ರೀತಿಯ ಸಾಂಸ್ಕೃತಿಕ ಭಿನ್ನತೆಗಳನ್ನು ಅಪ್ಪಿಕೊಳ್ಳುವ ನಡೆಯನ್ನು ಪ್ರಶಂಸಿಸಲೇಬೇಕು ಎಂಬುದು ಎಲ್ಲರೂ ಒಪ್ಪತಕ್ಕದ್ದು.