ಬೆಂಗಳೂರು :  ಕೊಡಗು ಮತ್ತು ಕೇರಳಕ್ಕೆ ಕಳೆದ ವರ್ಷ ದುಸ್ವಪ್ನವಾಗಿ ಕಾಡಿದ್ದ ಕುಂಭದ್ರೋಣ ಮಳೆ ಈ ಬಾರಿಯೂ ಸಂಭವಿಸಲಿದೆಯಾ? ಜಲಪ್ರಳಯ, ಅನಾಹುತ ಮತ್ತೆ ಉಂಟಾಗುವ ಸಾಧ್ಯತೆಗಳಿವೆಯಾ?

‘ಹೌದು’ ಎನ್ನುತ್ತಿದೆ ಹಿರಿಯ ಭೂಗರ್ಭ ವಿಜ್ಞಾನಿ ಎಚ್‌.ವಿ.ಎಂ. ಪ್ರಕಾಶ್‌ ಅವರ ನೇತೃತ್ವದ ವಿಜ್ಞಾನಿಗಳ ತಂಡ ನೀಡಿರುವ ವರದಿ.

ಈ ತಂಡವು ಈಗಾಗಲೇ ರಾಜ್ಯ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತಕ್ಕೆ ಈ ಮಾಹಿತಿ ನೀಡಿದೆ. ಸಂಭಾವ್ಯ 42 ಅಂಶಗಳನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಿದ್ದು, ಅನೇಕ ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ.

ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ ಮಾತ್ರ ದುರಂತ ಸಂಭವಿಸಿತ್ತು. ಈ ಬಾರಿ ಅದು ಉತ್ತರ ಕನ್ನಡ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ವಿಸ್ತಾರವಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಸುಮಾರು 103 ಸ್ಥಳಗಳಲ್ಲಿ ಈ ಸಲವೂ ಕುಂಭದ್ರೋಣ ಮಳೆಯಾಗುವ ಸಂಭವಗಳಿವೆ. ಈ ಪೈಕಿ 80ಕ್ಕೂ ಹೆಚ್ಚಿನ ಪ್ರದೇಶಗಳು ಅತ್ಯಂತ ಅಪಾಯಕಾರಿಯಾಗಿವೆ. ಜೂನ್‌ ತಿಂಗಳಿನಿಂದ ಆಗಸ್ಟ್‌ ನಡುವಿನ ಸಮಯದಲ್ಲಿ ಈ ಘಟನೆಗಳು ಸಂಭವಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಾರಣಗಳೇನು?:

ಕಳೆದ ಬಾರಿ ಕೊಡಗಿನಲ್ಲಿ ಭಾರಿ ಮಳೆ ಸಂಭವಿಸುವುದಕ್ಕೂ ಮುನ್ನ ಐದು ಬಾರಿ ದೊಡ್ಡ ಮಳೆಯಾಗಿತ್ತು. ಹೆಚ್ಚಿನ ಮಳೆಯಾಗಿದ್ದರಿಂದ ಮಳೆ ನೀರನ್ನು ಮಣ್ಣಿನ ಕಣಗಳು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಭೂ ಕುಸಿತ ಉಂಟಾಗಿತ್ತು. ಈ ಬಾರಿ ಕೇರಳ ಮತ್ತು ಕೊಡಗಿನಲ್ಲಿ ಈಗಾಗಲೇ ಎರಡು ಸಲ ಭಾರಿ ಮಳೆಯಾಗಿದೆ. ಉದಾಹರಣೆಗೆ ಕಳೆದ ಮಂಗಳವಾರ ಬೆಂಗಳೂರಿನಲ್ಲಿ ಏಕಾಏಕಿ 150 ಮಿ.ಮೀ. ಮಳೆ ಸುರಿದದ್ದು. ಇಂತಹ ಮಳೆಯನ್ನು ‘ಮಹಾ ಮಳೆ’ ಎಂದು ಕರೆಯಲಾಗುತ್ತಿದೆ. 15-20 ದಿನಗಳಿಗೊಮ್ಮೆ ದಿಢೀರ್‌ ಜೋರು ಮಳೆ ಸುರಿಯುವ ಲಕ್ಷಣಗಳು ಈ ಬಾರಿಯೂ ಕಂಡುಬರುತ್ತಿವೆ. 2018ರ ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗೆ ವಾತಾವರಣದಲ್ಲಿ ಉಂಟಾಗಿದ್ದ ಘಟನೆಗಳು ಈ ಬಾರಿಯೂ ಸಂಭವಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮುಂಗಾರು ಮಳೆಗೂ ಭಾರೀ ಮಳೆಗೂ ಸಾಕಷ್ಟುವ್ಯತ್ಯಾಸವಿದೆ. ಮುಂಗಾರು ಮಳೆ ಜಾಲರಿಯಲ್ಲಿ ನೀರು ಸುರಿದಂತೆ ಸುರಿಯುತ್ತದೆ. ಭಾರಿ ಮಳೆಯು ಬಿಂದಿಗೆಯಿಂದ ನೀರು ಸುರಿದಂತೆ ಆಗುತ್ತದೆ. ಕೊಡಗು, ಕೇರಳ, ಕೇದಾರನಾಥದಲ್ಲಿ ಸಂಭವಿಸಿದ್ದು ಕೂಡ ಇದೇ ರೀತಿಯ ಮಳೆ ಎನ್ನುತ್ತದೆ ವರದಿ.

ಈ ಬಾರಿಯ ಪರಿಸ್ಥಿತಿ ಏನು?:

ಕಳೆದ ಬಾರಿ ಸುರಿದಿರುವ ಮಳೆಗೆ ಮಣ್ಣಿನ ಮೇಲ್ಪದರ ಹಾಳಾಗಿದೆ. ತೊರೆ, ಹಳ್ಳಗಳಲ್ಲಿ ಮಣ್ಣು ತುಂಬಿಕೊಂಡಿದೆ. ಈ ಬಾರಿ ಅಂತಹ ಮಳೆ ಸಂಭವಿಸಿದರೆ, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಗಳಿರುತ್ತವೆ. ಪಶ್ಚಿಮ ಘಟ್ಟದ ಬೆಟ್ಟಗಳು 45-50 ಅಡಿಗಳಷ್ಟುಕಡಿದಾದ ಇಳಿಜಾರು ಹೊಂದಿರುವುದರಿಂದ ಸಮಸ್ಯೆ ಹೆಚ್ಚಳವಾಗುತ್ತದೆ ಎಂದು ತಿಳಿಸಿದೆ.

ಕಳೆದ ಬಾರಿಯದ್ದು ಶತಮಾನದ ಮಳೆ ಎಂದು ಕೆಲವರು ಹೇಳುತ್ತಾರೆ. ಆದರೆ, ಕೊಡಗಿನ ಪರಿಸ್ಥಿತಿ ನೋಡಿದರೆ, ಪ್ರಕೃತಿ ಸಮತೋಲನವಾಗಿಲ್ಲ ಎಂಬುದು ತಿಳಿದು ಬರುತ್ತದೆ. ಈ ಬಾರಿಯೂ ಅದೇ ಮಳೆ ಸುರಿದರೆ, ಅನಾಹುತ ಸಂಭವಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ ಎಂದು ಹೇಳಿದೆ.