ಭಾರತದ ಅಪಾಯಕಾರಿ ಆದಿವಾಸಿ ಬುಡಕಟ್ಟುಗಳು

ಜರವಾ: ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ನಿಗ್ರಿಟಿ ಮತ್ತು ಮಂಗೋಲಾಯ್ಡ್‌ ಆದಿವಾಸಿಗಳ ಆವಾಸ ಸ್ಥಾನ. ಇವರಲ್ಲಿ ಜರವಾ ಬುಡಕಟ್ಟೂಒಂದು. ಈ ಜನಾಂಗವು ಅಂಡಮಾನ್‌ನ ದಕ್ಷಿಣ ಭಾಗದಲ್ಲಿ ಸಾವಿರಾರು ವರ್ಷಗಳಿಂದ ನೆಲೆಗೊಂಡಿದೆ. ಅಂದಾಜು 250ರಿಂದ 400 ಜನರು ಈ ಬುಡಕಟ್ಟುಗಳಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಬೇಟೆಯಾಡುವುದು, ಮೀನು ಹಿಡಿಯುವುದು, ಹಣ್ಣು ಹಂಪಲು ಅಥವಾ ಗಡ್ಡೆ ಗೆಣಸುಗಳಿಂದ ಇವರು ಬದುಕುತ್ತಾರೆ. ಇತ್ತೀಚೆಗೆ ಇವರ ಕಲ್ಯಾಣಕ್ಕೆ ಸರ್ಕಾರ ಕೆಲ ಆಧುನಿಕ ಸೌಕರ್ಯಗಳನ್ನು ಒದಗಿಸುತ್ತಿದ್ದರೂ ಇವರು ಬಾಹ್ಯ ಜಗತ್ತಿನಿಂದ ದೂರವೇ ಇರಲು ಬಯಸುತ್ತಿದ್ದಾರೆ.

ಸೆಂಟಿನೀಸ್‌: ಅಂಡಮಾನ್‌ನ ಉತ್ತರ ಸೆಂಟಿನೆಲ್‌ ದ್ವೀಪದಲ್ಲಿ ವಾಸವಾಗಿರುವ ಸೆಂಟಿನೀಸ್‌ ಬುಡಕಟ್ಟು ಜನಾಂಗದ ಜನರು ಪ್ರಾಚೀನ ಶಿಲಾಯುಗದ ಜನರಂತೆಯೇ ವಾಸಿಸುತ್ತಿದ್ದಾರೆ. ಇವರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕವೇ ಇಲ್ಲ. ಇವರನ್ನು ವಿಶ್ವದ ಅತ್ಯಂತ ಅಪಾಯಕಾರಿ ಬುಡಕಟ್ಟು ಜನಾಂಗಗಳಲ್ಲೊಂದು ಎಂದು ಗುರುತಿಸಲಾಗಿದೆ. ಈ ಬುಡಕಟ್ಟು ಜನಾಂಗದ ಪೂರ್ವಜರು 60,000 ವರ್ಷಗಳ ಹಿಂದಿನಿಂದಲೂ ಇಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. 2011ರ ಗಣತಿಯಲ್ಲಿ ಅಂದಾಜಿಸಿದ್ದ ಪ್ರಕಾರ ಇಲ್ಲಿ 40 ಮಂದಿ ಇದ್ದಾರೆ. ಆದರೆ, ತಜ್ಞರ ಪ್ರಕಾರ ಇಲ್ಲಿ 250ರಿಂದ 500 ಜನರು ವಾಸವಾಗಿದ್ದಾರೆ.

"

ಓಂಗೆ ಮತ್ತು ಶೋಂಪೆನ್‌: ಓಂಗೆ ಬುಡಕಟ್ಟು ಜನರು ಅಂಡಮಾನ್‌ ದ್ವೀಪದ ಸುತ್ತಲೂ ವಾಸವಾಗಿದ್ದಾರೆ. ಬೇಟೆಯಾಡಿಯೇ ಆಹಾರವನ್ನು ಪಡೆಯುತ್ತಾರೆ. ಶೋಂಪೆನ್‌ ಜನಾಂಗದ ಆದಿವಾಸಿಗಳು ನಿಕೋಬಾರ್‌ ದ್ವೀಪದಲ್ಲಿ ವಾಸವಾಗಿದ್ದಾರೆ.

ಜಂಗ್ಲಿ: ಜಂಗ್ಲಿ ಬುಡಕಟ್ಟು ಜನಾಂಗವನ್ನು ರೂತ್‌ಲ್ಯಾಂಡ್‌ ಜರವಾಗಳೆಂದೂ ಕರೆಯುತ್ತಾರೆ. ಇವರು ರೂತ್‌ಲ್ಯಾಂಡ್‌ ದ್ವೀಪದಲ್ಲಿ ವಾಸವಿದ್ದಾರೆ. ಇವರೂ ಕೂಡ ಅಂಡಮಾನ್‌ ಕಾಡುಗಳ ಮಧ್ಯೆ ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ.

ಇದನ್ನೂ ಓದಿ: ಬೆಚ್ಚಿ ಬೀಳಿಸಿದ ಅಂಡಮಾನಲ್ಲಿ ಆದಿವಾಸಿಗಳಿಗೆ ಬಲಿಯಾದ ಅಮೆರಿಕನ್ ಕಥೆ

ಸುನಾಮಿಯಿಂದಲೂ ಪಾರಾಗಿದ್ದವರು!

ಸೆಂಟೆನೆಲ್ ಸ್ವೀಪದಲ್ಲಿರುವ ಆದಿವಾಸಿಗಳು 2004ರ ಸುನಾಮಿಯಿಂದ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದರು. ಆ ಸುನಾಮಿಯಿಂದ ಇವರ ಪುಟ್ಟ ದ್ವೀಪ ಮುಳುಗಿ, ಅವರೆಲ್ಲಾ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಇವರಿಗೆ ಯಾವುದೇ ಅಪಾಯವಾಗಿರಲಿಲ್ಲ. ನಂತರ ಸಮೀಕ್ಷೆಗೆಂದು ಅಧಿಕಾರಿಗಳು ತೆರಳಿದ್ದಾಗ ಬಾಣ ಬಿಟ್ಟು ಓಡಿಸಿದ್ದರು.

ಇದನ್ನೂ ಓದಿ: ಆದಿವಾಸಿಗಳಿಂದ ಹತ್ಯೆಯಾದ ಅಮೆರಿಕ ವ್ಯಕ್ತಿಗೆ ಮೊದಲೇ ತಿಳಿದಿತ್ತು ಸಾವಿನ ಸೂಚನೆ

ಇತರ ದೇಶಗಳಲ್ಲಿರುವ ಅಪಾಯಕಾರಿ ಆದಿವಾಸಿಗಳು

  • ಯಾಯ್ಫೋ ಬುಡಕಟ್ಟು: ಇವರು ಹೊರಜಗತ್ತಿನೊಂದಿಗೆ ಸಂಪರ್ಕ ಇಲ್ಲದಂತೆ ಪಪುವಾ ನ್ಯೂ ಗಿನಿಯಾದ ಈಶಾನ್ಯ ಸೆಪಿಕ್‌ನಲ್ಲಿ ವಾಸವಾಗಿದ್ದಾರೆ. ಸಾಲಾಗಿ ಜೋಡಿಸಿಡಲಾದ ಎರಡು ರೀತಿಯ ಬಾಣಗಳನ್ನು ಬಳಸಿ ಮೀನು ಮತ್ತು ಹಂದಿಗಳನ್ನು ಬೇಟೆಯಾಡಿ ಬದುಕುತ್ತಾರೆ. ಇವರು ಸಣ್ಣಗಿರುವ ಮಹಿಳೆಯರನ್ನು ಹೊರಗಿನವರು ಬಂದಾಗ ಅವರ ಮೇಲೆ ಗೂಢಚಾರಿಕೆಗೆ ಬಳಸಿಕೊಳ್ಳುತ್ತಾರೆ.

  • ಕೊರೊವೈ ಜನಾಂಗ: 1974ರ ವರೆಗೂ ಇವರ ಇರುವಿಕೆ ಪತ್ತೆಯಾಗಿರಲಿಲ್ಲ. ಇವರೂ ಕೂಡ ಪಪುವಾ ನ್ಯೂ ಗಿನಿಯಾದಲ್ಲಿ ವಾಸವಾಗಿದ್ದಾರೆ. ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಬುಡಕಟ್ಟು ಜನಾಂಗಗಳಲ್ಲಿ ಇವರೂ ಒಂದು. ಆದಾಗ್ಯೂ ಬಾಹ್ಯ ಪ್ರಪಂಚದೊಂದಿಗೆ ಅಲ್ಪಮಟ್ಟಿಗೆ ಸಂಪರ್ಕದಲ್ಲಿದ್ದಾರೆ. ಈ ಜನರು ಹೊರಗಿನಿಂದ ಬಂದ ಜನರನ್ನು ಕೊಂದ ಉದಾಹರಣೆæಗಳು ಸಾಕಷ್ಟಿವೆ. ಬಿಳಿ ಜನರನ್ನು ಇವರು ದೆವ್ವಗಳೆಂದು ಭಾವಿಸುತ್ತಾರೆ.

  • ಸುರ್ಮಾ ಅಥವಾ ಸುರಿ: ಈ ಜನರು ಇಥಿಯೋಪಿಯಾದ ಬೆಂಚ್‌ ಮಾಝಿ ವಲಯದಲ್ಲಿ ವಾಸವಾಗಿದ್ದಾರೆ. ಈ ಆದಿವಾಸಿಗಳು ಹೊರಗಿನವರನ್ನು ಕಂಡಕೂಡಲೇ ಕೊಂದುಹಾಕುತ್ತಾರೆ ಎನ್ನಲಾಗುತ್ತದೆ.

  • ಕೊರುಬೊ ಅಥವಾ ಸಲಾಲಾ: ಪಶ್ಚಿಮ ಅಮೆಜಾನ್‌ ಕಾಡುಗಳಲ್ಲಿ ವಾಸವಿರುವ ಕೊರುಬೋ ಜನಾಂಗದವರು ತಮ್ಮ ಜನರೊಂದಿಗೇ ಹಿಂಸಾತ್ಮಕವಾಗಿ ಸಂಘರ್ಷ ನಡೆಸುತ್ತಾ ಬದುಕುತ್ತಾರೆ. ಇವರನ್ನು ಸಂಪರ್ಕಿಸಲು ಬ್ರೆಜಿಲ್‌ ಸರ್ಕಾರ ಯತ್ನಿಸಿತ್ತು. ಆದರೆ, ಅಲ್ಲಿಗೆ ಹೋದ 7 ಸರ್ಕಾರಿ ಅಧಿಕಾರಿಗಳನ್ನೇ ಇವರು ಕೊಂದುಹಾಕಿದ್ದರು. ನಂತರ ಸರ್ಕಾರ ಅವರನ್ನು ಅಪಾಯಕಾರಿ ಎಂದು ಪರಿಗಣಿಸಿ, ಆ ಪ್ರದೇಶಕ್ಕೆ ಪ್ರವೇಶ ನಿಷೇಧಿಸಿದೆ.

  • ವಾಲೇ ಡೊ ಜವಾರಿ: ಬ್ರೆಜಿಲ್‌ನ ಜವಾರಿ ವ್ಯಾಲಿಯಲ್ಲಿ ಆಸ್ಟ್ರಿಯಾದಷ್ಟುವ್ಯಾಪ್ತಿ ಇರುವ ಪ್ರದೇಶದಲ್ಲಿ ಅಂದಾಜು 20 ಆದಿವಾಸಿ ಬುಡಕಟ್ಟು ಜನರಿದ್ದಾರೆ. ಸದ್ಯ ಬ್ರೆಜಿಲ್‌ ಸರ್ಕಾರ ಇವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಿದೆ.

  • ಕಾಂಗೋ: ಕಾಂಗೋಗಳು ಶತಮಾನದಿಂದೀಚೆಗೆ ಹೊರಜಗತ್ತಿನೊಂದಿಗೆ ಸ್ವಲ್ಪಮಟ್ಟಿಗೆ ಸಂಪರ್ಕದಲ್ಲಿದ್ದಾರೆ. ಆದರೂ ಈ ಬುಡಕಟ್ಟು ಜನಾಂಗದ ಬಹಳಷ್ಟುಜನರು ನಾಗರಿಕ ಸಮಾಜದಿಂದ ದೂರವೇ ಉಳಿದಿದ್ದಾರೆ.

ಇದನ್ನೂ ಓದಿ:  ಮತಾಂತರಕ್ಕೆ ಬಂದವ ಆದಿವಾಸಿ ಬಾಣಕ್ಕೆ ಬಲಿ

ಅಪಾಯಕಾರಿ ಬುಡಕಟ್ಟು ಜನರು ಹೇಗೆ ಬದುಕುತ್ತಾರೆ?

ಸಾಮಾನ್ಯವಾಗಿ ಭಾರತದ ಅಂಡಮಾನ್‌ ನಿಕೋಬಾರ್‌ ದ್ವೀಪಗಳಲ್ಲಿ, ದಕ್ಷಿಣ ಅಮೆರಿಕದ ಅಮೆಜಾನ್‌ ಕಾಡುಗಳಲ್ಲಿ, ಬ್ರೆಜಿಲ್‌ನಲ್ಲಿ, ಪಪುವಾ ನ್ಯೂ ಗಿನಿಯಾದ ಕಾಡುಗಳಲ್ಲಿ, ಜಗತ್ತಿನ ಬೇರೆ ಬೇರೆ ಕಡೆ ಇರುವ ಹಿಮ ಪರ್ವತಗಳಲ್ಲಿ ಹೊರಜಗತ್ತಿನ ಸಂಪರ್ಕಕ್ಕೆ ಬಾರದೆ ಬದುಕುತ್ತಿರುವ ಅಪಾಯಕಾರಿ ಬುಡಕಟ್ಟು ಜನರಿದ್ದಾರೆ. ಇವರೆಲ್ಲ ಬೇಟೆಯಾಡಿ, ಗಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಾರೆ. ಇವರನ್ನು ನಾಗರಿಕ ಸಮಾಜಕ್ಕೆ ಸೇರಿಸಲು ಆಯಾ ದೇಶದ ಸರ್ಕಾರಗಳು ನಿರಂತರವಾಗಿ ಯತ್ನಿಸಿ, ಕೊನೆಗೆ ಕೈಚೆಲ್ಲಿವೆ.