ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ ಮಲೆನಾಡಿನ ಭಾಗದಲ್ಲಿ ಈ ಯೋಜನೆ ಅನುಷ್ಠಾನ ವಿರೋಧಿಸಿ ವ್ಯಾಪಕ ಹೋರಾಟ ಶುರುವಾಗಿದೆ. ಪರಿಸರವಾದಿಗಳು, ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ವಿರೋಧಿಸುತ್ತಿದ್ದಾರೆ. ಈ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ತಿಳಿದುಕೊಳ್ಳಬೇಕಾದ ವಿಚಾರಗಳಿವು. 

1. 1964 ರಲ್ಲಿ ನಿರ್ಮಾಣವಾದ ಲಿಂಗನಮಕ್ಕಿ ಕಳೆದ ಐವತ್ತೈದು ಮಳೆಗಾಲಗಳಲ್ಲಿ ತುಂಬಿರುವುದು ಕೇವಲ ಹದಿನೈದು ಬಾರಿ ಮಾತ್ರ. ಅಂದರೆ ಅಲ್ಲಿಯೇ ನೀರಿನ ಕೊರತೆ ಇದೆ. ಕೃತಕ ಮಳೆ ಪ್ರಯತ್ನದಿಂದಲೂ, ಪೂಜೆ, ಪುನಸ್ಕಾರ, ಯೋಗಿ ಮಹಾತ್ಮರ ಪ್ರವೇಶದಿಂದಲೂ ಲಿಂಗನಮಕ್ಕಿಯನ್ನು ತುಂಬಲಾಗದೆ ಸರ್ಕಾರ ಕೈಸೋತ ಘಟನೆಗಳು ನಮ್ಮೆದುರು ಹಸಿ ಹಸಿಯಾಗಿದೆ.

ಶರಾವತಿ ಬೆಂಗಳೂರಿಗೆ, ಮಲೆನಾಡಿಗೆ ಏನ್ ಗತಿ?

2. ರಾಜ್ಯದ ವಿದ್ಯುತ್ ಬೇಡಿಕೆ ಅಪಾರವಾಗಿ ಹೆಚ್ಚಿದ ಈ ಕಾಲದಲ್ಲೂ ಶರಾವತಿ ಯೋಜನೆ ರಾಜ್ಯದ ಆರನೇ ಒಂದು ಪಾಲು ವಿದ್ಯುತ್ ಒದಗಿಸುತ್ತಿದೆ. ಶರಾವತಿಯಂತಹ ಅಗ್ಗದ ವಿದ್ಯುತ್ ಲಭಿಸುತ್ತಿರುವುದರಿಂದಲೇ ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಕೊಡುವುದು ಸಾಧ್ಯವಾಗುತ್ತಿದೆ. (ಹಾಗೆಂದು ಸರ್ಕಾರವೇ ಅನೇಕ ಬಾರಿ ಹೇಳಿಕೊಂಡಿದೆ)

ಶರಾವತಿ ನೀರೆತ್ತಿ ಸಾಗಿಸುವುದರಿಂದ ವಿದ್ಯುತ್ ಲಭ್ಯತೆಯೂ ಕುಸಿಯುತ್ತದೆ ಮತ್ತು ಉಚಿತ ವಿದ್ಯುತ್ ಒದಗಿಸುವ ಕಾರ್ಯಕ್ಕೂ ಧಕ್ಕೆಯಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇಷ್ಟೊಂದು ಅಗಾಧ ಎತ್ತರಕ್ಕೆ, ಇಷ್ಟೊಂದು ದೂರಕ್ಕೆ ನೀರು ರವಾನಿಸಲು ಗಣನೀಯ ಪ್ರಮಾಣದ ವಿದ್ಯುತ್ ಬೇಕು. ಉತ್ಪತ್ತಿಯಾದ ವಿದ್ಯುತ್ತಿನಲ್ಲಿ ಸಾಕಷ್ಟು ವಿದ್ಯುತ್ ಅಲ್ಲೇ ಬಳಕೆಯಾಗುವುದರಿಂದ ವಿದ್ಯುತ್ ಕೊರತೆ ಮತ್ತಷ್ಟು ಬಿಗಡಾಯಿಸುವುದಲ್ಲವೇ? ಅಜ್ಜಿ ನೂತದ್ದೆಲ್ಲ ಅಜ್ಜನ ಉಡುದಾರಕ್ಕೇ ಮುಡುಪು ಎಂದಂತಾಗದೇ?

3. ಈಗ ಮಲೆನಾಡಿನಲ್ಲೇ ನೀರಿನ ಕೊರತೆ ತಾಂಡವವಾಡುತ್ತಿದೆ. ಲಿಂಗನಮಕ್ಕಿ ಜಲಾಶಯವಿರುವ ಸಾಗರ ತಾಲೂಕಿನಲ್ಲೇ ಹಲವು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಹೊಸನಗರ ಸೊರಬವಷ್ಟೇ ಅಲ್ಲ ತುಂಗಾ ತೀರದ ಶಿವಮೊಗ್ಗಕ್ಕೇ ನೀರಿನ ಅಭಾವದ ಬಿಸಿ ತಟ್ಟುತ್ತಿದೆ. ತಮಗೇ ನೀರಿಲ್ಲದಿರುವಾಗ ದೂರದ ಬೆಂಗಳೂರಿಗೆ ನೀರೊಯ್ಯುವುದಕ್ಕೆ ಜನ ವಿರೋಧಿಸುವುದು ತಪ್ಪೇ?

4. ಲಿಂಗನಮಕ್ಕಿ ಮತ್ತು ಬೆಂಗಳೂರಿನ ನಡುವೆ ನೀರು ಬರುವ ಮಾರ್ಗದಲ್ಲಿರುವ ಕಡೂರು, ಬೀರೂರು, ಬಾಣಾವರ, ಅರಸೀಕೆರೆ, ತಿಪಟೂರು, ಗುಬ್ಬಿ, ತುಮಕೂರು ಮುಂತಾದ ಅನೇಕ ನಗರ ಪಟ್ಟಣಗಳಲ್ಲಿ ಕುಡಿಯುವ ನೀರಿಗಾಗಿ ಜನ ಹಪಹಪಿಸುತ್ತಿದ್ದಾರೆ. ಅವರನ್ನೆಲ್ಲ ಬಿಟ್ಟು ಬೆಂಗಳೂರಿಗಷ್ಟೇ ನೀರು ತರುವುದು ನ್ಯಾಯವೇ? ಕಾರ್ಯಸಾಧ್ಯವೇ?

5. ನಾಲ್ಕು ನೂರು ಕಿಲೋಮೀಟರ್ ದೂರ ಪೈಪ್‌ಲೈನ್ ಹಾಕಲು ಅದೆಷ್ಟು ವಿಸ್ತೀರ್ಣದ ಭೂಮಿ ಬೇಕು. ಈಗಾಗಲೇ ಶರಾವತಿ, ಕಾಳಿ, ಕೈಗಾ, ಕದ್ರಾ ,ಕೊಡಸಳ್ಳಿ, ಗೇರುಸೊಪ್ಪೆ ಸ್ಥಾವರಗಳಿಂದ ವಿದ್ಯುತ್ ತರಲು ನಿರ್ಮಿಸಲ್ಪಟ್ಟ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಪುಕ್ಕಟೆ ಜಮೀನು ಬಿಟ್ಟ ಮುಗ್ಧ ರೈತವರ್ಗ ಇದಕ್ಕೂ ಜಮೀನು ತ್ಯಾಗ ಮಾಡಬೇಕೇ?

ಸುವರ್ಣ ಚಿಟ್ ಚಾಟ್’ನಲ್ಲಿ ಶರಾವತಿ ನದಿ ತಿರುವು ಕುರಿತು ಏನಂದ್ರು ಸಿಎಂ?

6. ಈಗಾಗಲೇ ಮಲೆನಾಡು ಬೆಂಗಾಡಾಗುತ್ತಿದೆ. ವಿಶ್ವದ ಅತಿ ಸೂಕ್ಷ್ಮ ಪರಿಸರ ಪ್ರದೇಶವೆಂದು ಉದ್ಘೋಷಿಸಲ್ಪಟ್ಟಿರುವ ಪಶ್ಚಿಮಘಟ್ಟ ಅಪಾಯದ ಅಂಚಿನಲ್ಲಿದೆ. ಬಯಲು ಸೀಮೆಯ ತುಂಬ ಸಮೃದ್ದ ನೀರಿನ ಕನಸು ಮತ್ತು ಭರವಸೆಯನ್ನು ಹುಟ್ಟುಹಾಕಿದ ಎತ್ತಿನಹೊಳೆ ಯೋಜನೆ ನೇತ್ರಾವತಿಯನ್ನು ಸಾಯಿಸುವ ಪವಿತ್ರ ಕಾರ್ಯಕ್ಕಷ್ಟೇ ಸೀಮಿತವಾದಂತೆ ಕಾಣುತ್ತಿದೆ. ಹದಿಮೂರು ಸಾವಿರ ಕೋಟಿಯ ಅಂದಾಜು ವೆಚ್ಚ ಈಗ ಇನ್ನಷ್ಟು ಹೆಚ್ಚಿದೆ. ಆದರೆ ಯೋಜನೆಯಲ್ಲಿ ಹಣ ಹರಿಯುತ್ತಿದೆಯೇ ಹೊರತು ನೀರು ಹರಿಯುವ ಲಕ್ಷಣ ಕಾಣುತ್ತಿಲ್ಲ. ಶರಾವತಿ ಎತ್ತಿಹೊಳೆ ಹಾದಿ ಹಿಡಿಯುವುದಿಲ್ಲ ಎಂಬ ಭರವಸೆ ನೀಡುವವರಾರು?

7. ಶರಾವತಿಯಿಂದ ನೀರೆತ್ತುವ ಸ್ಥಾವರ ಸ್ಥಾಪಿಸಲ್ಪಡುವ ಹಸಿರುಮಕ್ಕಿ ಶರಾವತಿ ಅಭಯಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ.ಅಲ್ಲಿಂದ ಯಗಚಿಗೆ ನೀರೊಯ್ಯುವ ಮಾರ್ಗ ಅರಣ್ಯ ಪ್ರದೇಶ. ಅಂದರೆ ಯೋಜನೆಯಿಂದ ಮಲೆನಾಡು ಇನ್ನಷ್ಟು ಬೆಂಗಾಡಾಗುವುದಿಲ್ಲವೇ? 

8. ಸರ್ಕಾರದ ಕೆಲವು ಮೂಲಗಳು ಮಳೆಗಾಲದಲ್ಲಿ ಮಾತ್ರ ನೀರು ತರುತ್ತೇವೆ ಎನ್ನುತ್ತಿವೆ. ಅದು ನಿಜವಾದರೆ ಹತ್ತು ಟಿ ಎಂ ಸಿ ನೀರನ್ನು ಎಲ್ಲಿ ಸಂಗ್ರಹಿಸುತ್ತೀರಿ? ತಿಪ್ಪಗೊಂಡನಹಳ್ಳಿ ಜಲಾಶಯದ ಸಾಮರ್ಥ್ಯ ಮೂರೂ ಚಿಲ್ಲರೆ ಟಿ ಎಂ ಸಿ ಮಾತ್ರ. ನಿಮ್ಮ ಬಳಿ ಇನ್ನೆಲ್ಲಿದೆ ಜಲಸಂಗ್ರಹ ತಾಣ? ಹೀಗೆ ಇನ್ನೂ ಹಲವಾರು ಪ್ರಶ್ನೆಗಳಿವೆ. ಗೊಂದಲಗಳಿವೆ. ತವಕ ತಲ್ಲಣಗಳಿವೆ. ಇದನ್ನೆಲ್ಲ ಗಮನಿಸಿದಾಗ ಇದೊಂದು ಅವೈಜ್ಞಾನಿಕ ಯೋಜನೆ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.

ಲಿಂಗನಮಕ್ಕಿ ಟು ಬೆಂಗಳೂರು; ಶರಾವತಿ ನೀರು ತರೋದಕ್ಕೆ ವಿರೋಧ ಏಕೆ?

ಸರ್ಕಾರದ ದುಡುಕಿನ ಮತ್ತು ಅವಿವೇಕದ ನಿರ್ಧಾರ ಎನ್ನಬಹುದಾಗಿದೆ. ಅಧ್ಯಯನದ ಕೊರತೆ ಕಾಣುತ್ತಿದೆ. ಈ ಕಾರಣಗಳಿಂದಾಗಿಯೇ ಮಲೆನಾಡಿನ ಮಂದಿ ಮುನಿದೆದ್ದಿದ್ದಾರೆ. ಸರ್ಕಾರಕ್ಕೆ ಕೂಗಿ ಹೇಳುತ್ತಿದ್ದಾರೆ- ಎತ್ತಿನಹೊಳೆ ಕೈಗೆತ್ತಿಕೊಂಡು ಕರಾವಳಿಯನ್ನು ಕೊಂದ ಮಹಾನುಭಾವರೇ ಶರಾವತಿಗೂ ಕೈಯ್ಯಿಕ್ಕಿ ಮಲೆನಾಡನ್ನು ಮಸಣವಾಗಿಸದಿರಿ ಎಂದು.