ಅಯೋಧ್ಯೆ ದಾವೆ ಹಿಂಪಡೆಯಲಿದೆ ಸುನ್ನಿ ವಕ್ಫ್ ಮಂಡಳಿ?: ಬಂದಿದೆ ಸಂಧಾನದ ಪಾಳಿ?
ಅಯೋಧ್ಯೆ ಪ್ರಕರಣದ ಪ್ರತಿದಿನದ ವಿಚಾರಣೆ ಅಂತ್ಯ| ಅಯೋಧ್ಯೆ ಭೂವಿವಾದ ಪ್ರಕರಣದ ತೀರ್ಪು ಕಾಯ್ದಿರಿಸಿದ ಸುಪ್ರೀಂಕೊರ್ಟ್| ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ಮುಂದಾದ ಸುನ್ನಿ ವಕ್ಫ್ ಮಂಡಳಿ?| ವಕ್ಫ್ ಮಂಡಳಿ ಅಧ್ಯಕ್ಷ ಝಡ್.ಎ ಫಾರುಖಿ ವಿರುದ್ಧ ದೂರು ದಾಖಲು ಹಿನ್ನೆಲೆ| ವಿವಾದಿತ ಜಾಗದ ಕುರಿತು ಹೂಡಿದ್ದ ದಾವೆ ಹಿಂಪಡೆಯಲು ಮುಂದಾದ ವಕ್ಫ್ ಬೋರ್ಡ್| ಮಧ್ಯಸ್ಥಿಕೆ ಸಮಿತಿಯ ಸದಸ್ಯರಾದ ಶ್ರೀರಾಮ್ ಪಂಚು ಅವರಿಗೆ ಅಫಿಡವಿಟ್ ಸಲ್ಲಿಸಿದ ಮಂಡಳಿ|
ನವದೆಹಲಿ(ಅ.16): ಸುಪ್ರೀಂಕೋರ್ಟ್'ನಿಂದ ಅಯೋಧ್ಯೆ ಪ್ರಕರಣದ ಅರ್ಜಿಯನ್ನು ಹಿಂಪಡೆಯಲು ಸುನ್ನಿ ವಕ್ಫ್ ಮಂಡಳಿ ನಿರ್ಧರಿಸಿದೆ. ಮಂಡಳಿಯ ಅಧ್ಯಕ್ಷರು ಮಧ್ಯಸ್ಥಿಕೆ ಸಮಿತಿಯ ಸದಸ್ಯರಾದ ಶ್ರೀರಾಮ್ ಪಂಚು ಅವರಿಗೆ ಪ್ರಕರಣವನ್ನು ಹಿಂಪಡೆಯಲು ಅಫಿಡವಿಟ್ ಕಳುಹಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಅಯೋಧ್ಯೆ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್'ನಲ್ಲಿ ಇಂದು ಅಂತ್ಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ಆದರೆ ವಿಚಾರಣೆ ವೇಳೆ ಅರ್ಜಿಯನ್ನು ಹಿಒಂಪಡೆಯುವ ಸುನ್ನಿ ವಕ್ಫ್ ಬೋರ್ಡ್ ಮೇಲ್ಮನವಿಯ ಕುರಿತು ಯಾವುದೇ ಚರ್ಚೆಯಾಗಿಲ್ಲ.
ಈ ಬೆಳವಣಿಗೆಗೆ ಕಾರಣ ವಕ್ಫ್ ಮಂಡಳಿ ಅಧ್ಯಕ್ಷ ಝಡ್.ಎ ಫಾರುಖಿ ವಿರುದ್ಧ ದೂರು ದಾಖಲಾಗಿರುವುದು ಸದಸ್ಯರೊಳಗೆ ಅಸಮಾಧಾನ ತಂದಿದೆ ಎನ್ನಲಾಗಿದೆ. ವಕ್ಫ್ ಮಂಡಳಿ ಕಾನೂನು ಬಾಹಿರವಾಗಿ ಜಾಗವನ್ನು ಮಾರಾಟ ಮತ್ತು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾರುಖಿ ವಿರುದ್ಧ ತನಿಖೆ ನಡೆಸುವಂತೆ ಉತ್ತರಪ್ರದೇಶ ಸರಕಾರ ಸಿಬಿಐಗೆ ಶಿಫಾರಸು ಮಾಡಿದೆ.
ಈ ಹಿನ್ನೆಲೆಯಲ್ಲಿ ವಿವಾದಿತ ಜಾಗದ ಕುರಿತು ಹೂಡಿದ್ದ ದಾವೆ ಹಿಂಪಡೆಯಲು ವಕ್ಫ್ ಬೋರ್ಡ್ ಸಲಹೆ ನೀಡಿದೆ ಎನ್ನಲಾಗಿದೆ.
ಆದರೆ ದಾವೆ ಹಿಂಪಡೆಯುವ ಕುರಿತು ಸುನ್ನಿ ವಕ್ಫ್ ಬೋರ್ಡ್ ಇದುವರೆಗೂ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಸುಪ್ರೀಂಕೋರ್ಟ್‌ಗೂ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ವಕ್ಫ್ ಬೋರ್ಡ್ ಪರ ವಕೀಲ ಜಫರಯಬ್ ಗಿಲಾನಿ ಸ್ಪಷ್ಟಪಡಿಸಿದ್ದಾರೆ.