ಆತ್ಮೀಯ ಸಿದ್ಧಾರ್ಥ್,

ನಿಮ್ಮ ಆತ್ಮಹತ್ಯೆಯ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ. ನೀವು ನೈಸರ್ಗಿಕ ಕಾರಣಗಳಿಗೆ ಬಲಿಯಾಗಿದ್ದರೆ, ನನ್ನ ದುಃಖ ತಾಳಿಕೊಳ್ಳುವಂತಾಗುತ್ತಿತ್ತು. ಆದರೆ, ಪ್ರಸ್ತುತ ಹಂತದಲ್ಲಿ, ನಿಮ್ಮ ಸಾವಿನ ರೀತಿಯ ಮೇಲೆ ಆಕ್ರೋಶವುಂಟಾಗಿದೆ. ಜುಲೈ 27ರ ನಿಮ್ಮ ಪತ್ರದಲ್ಲಿ ನಮೂದಿಸಿದ ಕಾರಣಗಳನ್ನು ಗಮನಿಸಿದರೆ ಲೆಕ್ಕಾಚಾರ ಮಾಡಿದ ಆತ್ಮಹತ್ಯೆಯತ್ತ ಹೆಜ್ಜೆ ಇಡಲು ನಿಮ್ಮನ್ನು ನಿಮ್ಮ ಆಂತರ್ಯ ಪ್ರೇರೇಪಿಸಿದೆ ಎಂದೆನಿಸುತ್ತದೆ.

ಕಣ್ಮರೆಯಾದ ಕಾಫಿ ಕನ್ನಡಿಗ ಸಿದ್ಧಾರ್ಥ, ಒಂದು ಚಿತ್ರ ಯಾತ್ರೆ

ಜುಲೈ 27ರ ನಿಮ್ಮ ವಿದಾಯ ಪತ್ರವು ನಿಮ್ಮ ಮನಸ್ಸಿನ ಬೇಗುದಿ, ಅಸಹಾಯಕತೆ ಮತ್ತು ಮುಂಬರುವ ವಿನಾಶವನ್ನು ಪ್ರದರ್ಶಿಸಿದೆ. ವರಮಾನ ತೆರಿಗೆ ಅಧಿಕಾರಿಗಳಿಂದಾದ ಕಿರುಕುಳ, ಮೈಂಡ್‌ ಟ್ರೀ ಷೇರುಗಳ ಮಾರಾಟದ ಸಂಬಂಧದಲ್ಲಾದ ನಿರಾಸೆ, ವರಮಾನ ತೆರಿಗೆಯಲ್ಲಿನ ನಿರಂತರ ಹೆಚ್ಚಳ, ಷೇರುಗಳನ್ನು ಮರಳಿ ಖರೀದಿಸಲು ಖಾಸಗಿ ಇಕ್ವಿಟಿ ಸಂಸ್ಥೆಗಳಿಂದ ಹೆಚ್ಚುತ್ತಿದ್ದ ಒತ್ತಡಗಳು ಮತ್ತು ಸಾಲಗಳ ಮೇಲಿನ ಸುರುಳಿಯಾಕಾರದಂತಹ ಬಡ್ಡಿ ಹಾಗೂ ಅನೇಕ ಅಂಶಗಳನ್ನು ನೀವು ಪತ್ರದಲ್ಲಿ ಉಲ್ಲೇಖಿಸಿದ್ದೀರಿ. ಇವೆಲ್ಲವೂ ನಿಮ್ಮ ಮೇಲೆ ನಡೆಸಿದ ಹೋರಾಟದ ಫಲ ನಿಮ್ಮನ್ನು ನೀವೆ ‘ಮುಕ್ತ’ರನ್ನಾಗಿಸಿಕೊಳ್ಳುವಂತೆ ಮಾಡಿತು. ನೀವು ಸಜ್ಜನ ವ್ಯಕ್ತಿ, ಎಲ್ಲ ಹಣಕಾಸು ಅಡಚಣೆಗಳ ಜವಾಬ್ದಾರಿಗಳಿಂದ ನೀವು ಎಲ್ಲರನ್ನೂ ಮುಕ್ತಗೊಳಿಸಿದ್ದೀರಿ, ಪರಿಸ್ಥಿತಿಗೆ ನೀವು ‘ಒಬ್ಬರೇ’ ಕಾರಣ ಎಂದು ಹೇಳಿಕೊಂಡಿರುವಿರಿ.

ನಿಮ್ಮ ಪತ್ರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದ್ದಲ್ಲಿ ತಮ್ಮ ಮನದಾಳದಲ್ಲಿ ತೀವ್ರವಾಗಿ ಕಾಡಿದ ಅಂಶವೊಂದು ಗೋಚರವಾಗುತ್ತದೆ. ಉದ್ಯಮಿಯಾಗಿ ವಿಫಲಗೊಂಡದ್ದು ಮತ್ತು ಲಾಭದಾಯಕ ವ್ಯಾಪಾರ ಮಾದರಿಯನ್ನು ರೂಪಿಸಲು ಅಸಮರ್ಥರಾದ ಬಗ್ಗೆ ವಿಷಾದವಿದೆ. ಮನದ ಬೇಗುದಿಯನ್ನು ಅರ್ಥಮಾಡಿಕೊಂಡು ‘ನನ್ನನ್ನು ಕ್ಷಮಿಸಿ ಬಿಡಿ’ ಎಂದು ಉತ್ತರಾಧಿಕಾರಿಗಳಲ್ಲಿ ತಾವು ಮಾಡಿಕೊಂಡಿರುವ ವಿನಂತಿ ಮನವನ್ನು ಕಲುಕುತ್ತದೆ. ಯಾರನ್ನೂ ಮೋಸ ಮಾಡುವುದು ಅಥವಾ ದಾರಿ ತಪ್ಪಿಸುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ.

ನಿಮ್ಮ ಜೀವನವನ್ನು ಅಂತ್ಯಗೊಳಿಸುವ ಸಲುವಾಗಿ ನೀವು ಉನ್ನತ ಮಟ್ಟದ ಯೋಜನೆಯನ್ನು ರೂಪಿಸಿಕೊಂಡಿರಿ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಮ್ಮ ಬದುಕನ್ನು ಕೊನೆಗೊಳಿಸಿಕೊಳ್ಳುವ ನಿಮ್ಮ ಮಹತ್ವಾಕಾಂಕ್ಷೆಯ ಆ ದಿನದಂದು ತೆರೆದುಕೊಳ್ಳುವ ಘಟನೆಗಳು ವ್ಯವಸ್ಥಿತ ರೀತಿಯಲ್ಲಿ ಎಚ್ಚರಿಕೆಯಿಂದಿದ್ದವು ಮತ್ತು ರಹಸ್ಯವಾಗಿದ್ದವು. ಉಪಾಯ ಹೂಡಿ ಸಕಲೇಶಪುರದ ಕಡೆ ಹೋಗುವುದಾಗಿ ಹೇಳಿ ನಿಮ್ಮ ಪತ್ನಿಯನ್ನು ನಂಬಿಸಿದಿರಿ. ಸಕಲೇಶಪುರ ಬಿಟ್ಟು, ನೀವು ಚಾಲಕನನ್ನು ನೇತ್ರಾವತಿಯ ಮೇಲಿರುವ ಸೇತುವೆಯತ್ತ ಕರೆದೊಯ್ದಿದ್ದೀರಿ, ಈ ಗಮ್ಯ ಸ್ಥಳ ತಮ್ಮ ಮನೋನಿಶ್ಚಯದಂತೆಯೇ ಇತ್ತು. ಆ ದಿನ ಬೆಂಗಳೂರಿನಿಂದ 7 ಗಂಟೆಗಳ ಕಾಲ ಕಾರನ್ನು ಚಾಲಿಸಲು ಹಲವಾರು ವರ್ಷಗಳ ಕಾಲ ನಿಮ್ಮೊಂದಿಗೆ ಇದ್ದ ಚಾಲಕನ ಸೇವೆಯನ್ನು ಬದಿಗೊತ್ತಿ ಹೊಸ ಚಾಲಕನನ್ನು ಬಳಸಿಕೊಂಡಿರಿ. ನೀವು ಬೆಂಗಳೂರಿನಿಂದ ಏಕಾಂಗಿಯಾಗಿ ಪಯಣಿಸಿದ್ದಿರಿ, ಬಹುಶಃ ಜೀವನವನ್ನು ಕೊನೆಗೊಳಿಸುವ ನಿಮ್ಮ ದೃಢ ಸಂಕಲ್ಪದಂತೆ ಎಲ್ಲವೂ ನಡೆದುಹೋಯಿತು.

ಚಿಕ್ಕಪ್ಪನನ್ನು ನೆನೆದು ಭಾವುಕರಾದ ರಾಧಾ ’ರಮಣ್’

‘ಕ್ಷಮಿಸಿ’ ಜೀವನವನ್ನು ಕೊನೆಗೊಳಿಸುವ ಮಾನಸಿಕ ತುಮುಲಗಳನ್ನು ಹೊಂದಿ, ಆತ್ಮಹತ್ಯೆಯಂತಹ ಅಸಾಧಾರಣ ಕ್ರಿಯೆಯನ್ನು ಮನದಾಳದಲ್ಲಿ ಆಲೋಚಿಸುವ ವ್ಯಕ್ತಿಯ ವರ್ತನೆ ಮೇಲ್ನೋಟಕ್ಕೆ ಸಾಮಾನ್ಯವಾಗಿಯೇ ಕಾಣಬಹುದೇ? ಈ ಕ್ರಿಯೆಯ ಜೊತೆ ವಿಧಿಯ ಕ್ರೂರ ಕೈವಾಡವೂ ಇರಬಹುದೇ? ಹಾಗೆಂದೆ, ವಾಹನ ಚಾಲಕ ಮುಸ್ಸಂಜೆಯಲ್ಲಿ ಸೇತುವೆಯ ದೂರದ ಮೂಲೆಯಲ್ಲಿ ಉಳಿಯುವಂತೆ ಮಾಡಲಾಯಿತೆ? ಆ ಚಾಲಕ ಇದನ್ನು ಅಸಾಮಾನ್ಯವೆಂದು ಭಾವಿಸಲಿಲ್ಲವೇಕೆ ಮತ್ತು ನಿಮ್ಮೊಂದಿಗೆ ಬರಲು ಒತ್ತಾಯ ಮಾಡಲಿಲ್ಲವೇಕೆ?

ಸ್ಪಷ್ಟವಾಗಿ ಹೇಳುವುದಾದರೆ, ನಾನು ಕೇಳಲ್ಪಟ್ಟಂತೆ, ನೀವು ಹಲವಾರು ತಿಂಗಳುಗಳಿಂದ ಹಿಂದಕ್ಕೆ ಸರಿಯುವ ಮನಃಸ್ಥಿತಿಯನ್ನು ಹೊಂದಿದ್ದಿರಿ. ನೀವು ಧೈರ್ಯಶಾಲಿ ಎಂದು ಬಿಂಬಿಸಿಕೊಂಡು ಎಲ್ಲವೂ ಸಾಮಾನ್ಯವಾಗಿದೆ ಎಂಬಂತೆ ನಟಿಸಿದರೂ, ನಿಮಗೆ ಅತಿ ಸಮೀಪವಿದ್ದವರು ನಿಮ್ಮಲ್ಲಿನ ಖಿನ್ನತೆಯ ಲಕ್ಷಣಗಳನ್ನು ಗುರುತಿಸಲಾರದೆ ಹೋದರೆ.. ಸಿದ್ಧಾರ್ಥ್, ಎಂತಹುದೇ ಖಿನ್ನತೆಯನ್ನು ಇಂದು ವೈದ್ಯರು ವಾಸಿ ಮಾಡಬಲ್ಲರು, ಆದರೆ ಸಕಾಲದಲ್ಲಿ ವೈದ್ಯರ ಮೊರೆ ಹೋಗಬೇಕಷ್ಟೆ. ಜಗತ್ತಿನಲ್ಲಿಯೇ ಅಸಾಧ್ಯವೆಂದು ಭಾವಿಸಿದ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದ್ದಲ್ಲಿ ಈ ದುರಂತ ಸಂಭವಿಸದಂತೆ ತಡೆಯಬಹುದಾಗಿತ್ತು. ಸಕಲೇಶಪುರ ಪ್ರವಾಸದ ನಂತರದ ದಿನದಂದು ನಿಮ್ಮ ಪತ್ರವನ್ನು ಬಿಡುಗಡೆ ಮಾಡಬೇಕೆಂದು ಕಾರ್ಯದರ್ಶಿಗಳಿಗೆ ನೀಡಿದ್ದ ಸೂಚನೆಯ ಹಿಂದೆ ಅನೇಕ ನಿಗೂಢಗಳು ಅಡಗಿದ್ದವಲ್ಲವೇ? ಇಂತಹ ಸೂಕ್ಷ್ಮಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ ಎಂಬ ಆಕ್ರೋಶ ಈಗ ಎಲ್ಲೆಡೆ ವ್ಯಾಪಿಸಿಕೊಂಡಿದೆ.

ಸಿದ್ಧಾರ್ಥ್, ನೀವು ಅನೇಕ ಸಾಧನೆಗಳ ವ್ಯಕ್ತಿ ಮತ್ತು ವಿಶ್ವ ಗುರುತಿಸಿದ ಮನುಷ್ಯ. ನಿಮ್ಮ ವೃತ್ತಿಪರ ಜೀವನದ ಮೂರು ದಶಕಗಳಲ್ಲಿ, ನೀವು ಅಪಾರ ಸಂಖ್ಯೆಯ ವ್ಯಕ್ತಿಗಳನ್ನು ಬಲ್ಲವರಾಗಿದ್ದಿರಿ. ಅವರಲ್ಲಿ ಅನೇಕರು ನಿಮ್ಮನ್ನು ಮೆಚ್ಚಿದ್ದಾರೆ. ನೀವು ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಹೊಂದಿದ್ದೀರಿ. ಕಾರ್ಪೊರೇಟ್‌ ವಲಯದ ಕೆಲವು ನಿಕಟವರ್ತಿಗಳು ಯಶಸ್ಸಿನ ತುಟ್ಟತುದಿಯಲ್ಲಿದ್ದರು. ಹತಾಶರಾಗಿದ್ದ ತಾವು ನಿಮ್ಮ ಸಂಕಟ ಆಂತರಿಕ ತುಮುಲಗಳನ್ನು ಹೇಳಿಕೊಳ್ಳಲು ಏಕೆ ಯಾರನ್ನೂ ಸಂಪರ್ಕಿಸಲಿಲ್ಲ? ಕೇಳಿದ್ದಲ್ಲಿ ಅವರಲ್ಲಿ ಹಲವರು ತಮಗೆ ಖಂಡಿತ ಸಹಾಯಹಸ್ತ ಚಾಚುತ್ತಿದ್ದರೆಂಬ ಅಂಶ ನನಗೆ ತಿಳಿದಿದೆ. ನಿಮ್ಮ ಬೆಂಬಲಕ್ಕಾಗಿ ವಿಶ್ವದ ಅನೇಕ ಮಂದಿ ತಮ್ಮ ಭುಜ ನೀಡುತ್ತಿದ್ದರು. ನಿಮ್ಮ ಕಡೆಯಿಂದಾದ ಈ ಸಂವಹನ ಕೊರತೆಯು ಒಂಟಿತನದ ವ್ಯಕ್ತಿತ್ವದ ಲಕ್ಷಣವಾಗಿದೆ ಮತ್ತು ಅತ್ಯಂತ ಯಶಸ್ವಿ ವ್ಯಕ್ತಿಯ ಚಿತ್ರವನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳುತ್ತದೆ. ಇಂತಹ ವ್ಯಕ್ತಿತ್ವವು ಅಸಾಧರಣತೆಯನ್ನು ಒಳಗೊಂಡಿರುತ್ತದೆ.

ಸಿದ್ಧಾರ್ಥ ಸೃಷ್ಟಿಸಿದ್ದ ಕೌತುಕ: ಕಾಫಿ ಡೇ ಅನುಭವ ಬಿಚ್ಚಿಟ್ಟ ಮಲೆನಾಡ ಯುವಕ!

ಅಂತಿಮವಾಗಿ, ನಿಮ್ಮ ಸ್ವಯಂ ಚಿತ್ರಣವು ನಿಮ್ಮ ಪರವಾಗಿಯೇ ಉಳಿದುಕೊಂಡಿದೆ ಮತ್ತು ನಿಮ್ಮತನಕ್ಕೆ ಕೊಂಕನ್ನು ತರಲಿಲ್ಲ. ಯಾರ ಸಹಾಯವೂ ತಮಗೆ ಅನಿವಾರ್ಯವೆನಿಸಲಿಲ್ಲ. ಸಿದ್ಧಾರ್ಥ್, ನಿಮಗೆ ಏನಾಗಿರಬಹುದು ಮತ್ತು ನಿಮ್ಮ ಜೀವನದ ಅಂತಿಮ ಗಂಟೆಗಳಲ್ಲಿ ನಿಮ್ಮನ್ನು ಏನು ಕಾಡಿಸಿರಬಹುದು ಎಂಬ ಬಗ್ಗೆ ನನ್ನಂತೆಯೇ ಇತರರು ಯೋಚಿಸುವ ಮೂಲಕ ಭಯಭೀತರಾಗಿದ್ದಾರೆ. ನಿಮ್ಮ ಸಾವಿನ ಬಗ್ಗೆ ಅಪರಿಚಿತರು ಸೇರಿದಂತೆ ಹಲವಾರು ಲಕ್ಷ ಜನರು ಸಂಪೂರ್ಣವಾಗಿ ನಿರಾಶೆಗೊಂಡರು ಮತ್ತು ಆಘಾತಕ್ಕೀಡಾದರು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ನಿರ್ಜೀವ ದೇಹವನ್ನು ನೋಡಿದ ಮೇಲೆ ನಿಮಗೆ ಅನೇಕ ವಿಧಗಳಲ್ಲಿ ಅಪ್ಯಾಯಮಾನವಾಗಿದ್ದ ಚಿಕ್ಕಮಗಳೂರು ಪ್ರಾಂತ್ಯದ ಹಲವಾರು ಕುಟುಂಬಗಳು ಕಣ್ಣೀರು ಸುರಿಸಿದ ಸಂಗತಿ ನಿಮಗೆ ತಿಳಿದಿದೆಯೇ? ನಿಮ್ಮ ದುಃಖಿತ ಕುಟುಂಬ, ವಯಸ್ಸಾದ ಪೋಷಕರು ಮತ್ತು ಇಬ್ಬರು ಯುವ ಪುತ್ರರು, ಪ್ರೀತಿಸುವ ಜನರ ಬಗ್ಗೆ ಒಂದು ಕ್ಷಣವೂ ಯೋಚಿಸದೆ, ಘಟನೆಗಳ ತಿರುವಿನಲ್ಲಿ ಸಿಲುಕಿಕೊಂಡು, ಸಂಪೂರ್ಣವಾಗಿ ದಿಗ್ಭ್ರಮೆಗೊಳ್ಳುವ ಮೂಲಕ ಎಲ್ಲರಲ್ಲೂ ನಿರಾಸೆಯ ಕಾರ್ಮೋಡದಲ್ಲಿ ದೂಡಿದಿರಿ.

ಲಾಭದಾಯಕ ವ್ಯಾಪಾರ ಮಾದರಿಯನ್ನು ರಚಿಸಲು ಸಾಧ್ಯವಾಗದೆ ನೀವು ನಿಮ್ಮನ್ನು ವಿಫಲ ಉದ್ಯಮಿ ಎಂದು ಲೇಬಲ್‌ ಮಾಡಿಕೊಂಡಿದ್ದು ಕೇಳಿ ಎಂದು ನನಗೆ ಆಶ್ಚರ್ಯವಾಗಿದೆ. ಸಂಕೀರ್ಣವಾದ ನಿಮ್ಮ ಎಲ್ಲಾ ವ್ಯಾಪಾರ, ವ್ಯವಹಾರಗಳ ಬಗ್ಗೆ ನನಗೆ ತಿಳಿದಿಲ್ಲ. ಕಾಫಿ ಡೇ ಘಟಕವನ್ನು ನೋಡುವಾಗ, ನೀವು ಖಂಡಿತವಾಗಿಯೂ ಯಾರಿಂದಲೂ ಸಾಧ್ಯವಾಗದಂತಹ ಅದ್ಭುತವಾದ ದೊಡ್ಡ ಬ್ರ್ಯಾಂಡ್‌ ರೂಪಿಸಿದಿರಿ ಎಂಬುದಂತೂ ಸತ್ಯ. ಅದು ಸ್ಟಾರ್‌ಬಕ್ಸ್‌ಗೆ ಸವಾಲು ಹಾಕುವಷ್ಟುದೃಢವಾದ ಸಂಸ್ಥೆಯಾಗಿ ಬೆಳೆಯಿತು. ನಿಮ್ಮ ದೂರದೃಷ್ಟಿಗೆ ಧನ್ಯವಾದಗಳು. ಹಲವಾರು ಸಾವಿರ ಉದ್ಯೋಗಗಳನ್ನು ಸೃಷ್ಟಿಸಿದಿರಿ, ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದಿರಿ. ವಿಶ್ವ ದರ್ಜೆಯ ಲೆಕ್ಕಾಚಾರವನ್ನು ಹೊಂದಿರುವ ಮೈಂಡ್‌ ಟ್ರೀ ಸಂಸ್ಥೆಯಂತಹ ಹಲವಾರು ಕಂಪನಿಗಳಿಗೆ ನೀವು ಪ್ರವರ್ತಕರಾಗಿದ್ದೀರಿ. ಸಿಸಿಡಿ ಮಹತ್ವಾಕಾಂಕ್ಷೆಯ ಭಾರತದ ಹೊಳೆಯುವ ಉದಾಹರಣೆಯಾಗಿದೆ. ವಿದೇಶಿ ಅಥವ ಅತ್ಯಾಧುನಿಕತೆಯ ಮಿಥ್ಯ ಆಕರ್ಷಣೆಗಳನ್ನು ಮೆಟ್ಟಿನಿಂತು ಸ್ವದೇಶಕ್ಕೆ ಕೊಡುಗೆ ನೀಡಿದ ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇತ್ತು. ನಿಮ್ಮ ವಿಫಲತೆಯ ಬಗ್ಗೆ ಕೇಳುವುದು ಕ್ರೂರವಾಗಿ ಪರಿಣಮಿಸಿದೆ.

ಇತರ ಸ್ನೇಹಿತರು ಹೇಳುತ್ತಾರೆ ‘ಸಿದ್ಧಾರ್ಥ್ ಎಂತಹುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದಿತ್ತು, ನಿರಾಶವಾದಿಯಾಗಬೇಕಾಗಿರಲಿಲ್ಲ’ ಎಂದು. ಹಾಗಾದರೆ ಈ ಹತಾಶೆ ಏಕೆ? ನಾನು ಈ ಮೊದಲು ನಿಮ್ಮ ದೃಢ ಸಂಕಲ್ಪವನ್ನು ಹಾಗೂ ನಿಶ್ಚಯ ಪರಿಹಾರೋಪಾಯಗಳನ್ನು ಕಂಡಿದ್ದೇನೆ. ಹಾಗೆಯೇ ಆರ್ಥಿಕ ಸಂಕಷ್ಟಗಳನ್ನು ತಾವು ಪರಿಹರಿಸಿಕೊಳ್ಳಬಹುದಿತ್ತು. ಉತ್ತಮ ಕಾನೂನು ಮನಸ್ಸುಗಳು ಹಾಗೂ ನ್ಯಾಯಾಲಯ ಮುಂದೆ ನಿಮ್ಮನ್ನು ಖಂಡಿತ ರಕ್ಷಿಸುತ್ತಿತ್ತು. ನಿಮ್ಮ ನಗುಮೊಗ, ನಮ್ರತೆ, ಸೌಜನ್ಯಗಳನ್ನು ನೀವು ಹಿಂದೆಂದೂ ಕೈಬಿಡಲಿಲ್ಲ. ನಿಮ್ಮ ನಿರಾಶೆಗೆ ಈಗ ಯಾವುದೇ ತರ್ಕಬದ್ಧ ವಿವರಣೆಗಳಿಲ್ಲ.

ಕೋಟಿ ಕನಸಿನೊಡೆಯ ಸಿದ್ಧಾರ್ಥ ಜೊತೆಗಿನ ಮರೆಯಲಾಗದ ಕ್ಷಣಗಳು!

ನಿಮ್ಮ ಅಕಾಲಿಕ ಮರಣವು ಪ್ರೀತಿ ಮತ್ತು ರಕ್ತಸಂಬಂಧವನ್ನೂ ಮೀರಿಸಿದ ಅತಿಯಾದ ನೋವನ್ನು ಹೊರಹಾಕಿತು. ಪುರಂದರ ದಾಸರು ‘ಈಸಬೇಕು ಇದ್ದು ಜೈಸಬೇಕು’ ಎಂದು ಹಾಡಿದ್ದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿತ್ತು. ನೀವು ಬದುಕುವ ಮೂಲಕ ನಿಮ್ಮ ಜೀವನದ ಉಡುಗೊರೆಯನ್ನು ನಮಗೆ ನೀಡಬೇಕಾಗಿತ್ತು. (ಲೈವ್‌ ಅಂಡ್‌ ವಿನ್‌). ಅಯ್ಯೋ, ಈ ದುರಂತ ಬದುಕಿರುವವರಿಗೆ ಕಾಡದೇ ಬಿಡದು. ಸಿದ್ಧಾರ್ಥ್ ನಿಮಗೆ ಕೊನೆಯ ವಿದಾಯ.

- ಕೆ.ಜೈರಾಜ್‌, ಐಎಎಸ್‌ (ನಿ)