ಸಿದ್ಧಾರ್ಥ ಸೃಷ್ಟಿಸಿದ್ದ ಕೌತುಕ: ಕಾಫಿ ಡೇ ಅನುಭವ ಬಿಚ್ಚಿಟ್ಟ ಮಲೆನಾಡ ಯುವಕ!
ಮಲೆನಾಡಿಗೂ ಕಾಫಿಗೂ ಅವಿನಾಭಾವ ಸಂಬಂಧ. ಕೆಲಸ ಅರಸಿ ಬೆಂಗಳೂರಿಗೆ ಆಗಮಿಸೋ ಹಳ್ಳಿ ಹುಡುಗರಿಗೆ ಕಾಫಿ ಡೇ ಒಂದು ಕೌತುಕ. ಮೊದ ಮೊದಲು ಒಳ ಹೊಕ್ಕಲು ಅಳುಕುವ ಮಂದಿ, ನಂತರ ಕೆಫೆ ಕಾಫಿ ಡೇಯೊಂದಿಗೆ ವಿಶೇಷ ಬಾಂಧವ್ಯ ಬೆಳೆಯಿಸಿಕೊಳ್ಳುತ್ತಾರೆ. ಸಿಸಿಡಿ ಮಾಲೀಕರು ಮಲೆನಾಡಿನವರಾಗಿದ್ದು, ಅವರ ಟೇಸ್ಟ್ ಅದೇ ರೀತಿ ಇತ್ತು ಎನ್ನೋ ಕಾರಣಕ್ಕೋ?
ಅದು ತೊಂಭತ್ತರ ದಶಕ. ಬೆಂಗಳೂರಿಗೆ ನಾನು ಕೆಲಸಕ್ಕೆಂದು ಹೊಸದಾಗಿ ಹೋಗಿದ್ದೆ. ಶಿವಮೊಗ್ಗದಂಥ ಸಣ್ಣ ಊರುಗಳಿಂದ ಹೊಟ್ಟೆಪಾಡಿಗಾಗಿ ಬಂದ ನಮಗೆ ಬೆಂಗಳೂರು ಒಂದು ಮಹಾ ಕೌತುಕದ ಆಗರ! ಭಾನುವಾರ ಬಂತೆಂದರೆ ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಇರುವ ಚಿಲ್ಲರೆ ಕಾಸಿನಲ್ಲಿಯೇ ಸಿಟಿಬಸ್ಸು ಹಿಡಿದು ಎಂಜಿ ರೋಡೆಂಬ ಮಾಯಲೋಕದಲ್ಲಿ ದಿಕ್ಕು ದೆಸೆ ಇಲ್ಲದೆ ಮನ ಬಂದಂತೆ ಅಂಡಲೆಯುವುದೇ ನಮ್ಮ ಕೆಲಸವಾಗಿತ್ತು. ಪ್ರತಿ ವಾರವೂ ಅಲ್ಲಿನ ರಸ್ತೆಗಳಲ್ಲಿ ಕೋರೈಸುವ ಅಂಗಡಿಗಳನ್ನು ಹೊರಗಿನಿಂದಲೇ ಕಣ್ಣು ತುಂಬಿಕೊಳ್ಳುತ್ತಿದ್ದೆವು. ಹಾಗೆ ಓಡಾಡುವಾಗ ಬ್ರಿಗೇಡ್ ರೋಡಿನ ಆ 'ಕೆಫೆ ಕಾಫಿ ಡೇ' ಅಂಗಡಿಯ ವೈಭವ ಕಣ್ಣು ಕುಕ್ಕುತಿತ್ತು. ಯಾರೋ ಓಳಗೆ ಹೋದವರು ಒಂದು ಕಾಫಿಗೆ ಇನ್ನೂರು ರುಪಾಯಿ ಎಂದು ಹೇಳಿದಾಗ ಕೇಳಿ ದಂಗಾಗಿದ್ವಿ!
ಒಂದೆರಡು ವರ್ಷಗಳು ಉರುಳಿ ನಮ್ಮ ಜೇಬುಗಳು ಕೊಂಚ ತುಂಬಿದಾಗ ಆ ಅಂಗಡಿಯ ಒಳಗೆ ಹೋಗುವ ಧೈರ್ಯ ಮಾಡಿದ್ವಿ. ಒಳಗೆ ಹೋದಾಗ ನಮ್ಮ ಚಿತ್ತ ಸೆಳೆದದ್ಡು ಒಪ್ಪಓರಣವಾಗಿ ಜೋಡಿಸಿಟ್ಟ ಕುರ್ಚಿ ಮೇಜುಗಳು, ಬೆತ್ತದ ಸೋಫಾಗಳು. ಮಾಮೂಲಿ ಹೋಟೆಲ್ಲಿನ ಗೌಜಿಲ್ಲದ ಮುದ ನೀಡುವ ವಾತಾವರಣ. ಯಾವುದೋ ಅರ್ಥವಾಗದ ಐಟಂಗಳನ್ನು ಬರೆದ ಮೆನು ಕಾರ್ಡ್ ಓದಿ ಕಸಿವಿಸಿಗೊಂಡಿದ್ದು ಸುಳ್ಳಲ್ಲ. ಲ್ಯಾಟೆ, ಕೆಪೆಚಿನೋ, ಐರಿಷ್ ಕಾಫಿ.....ಅಬ್ಬಾ! ಅದೆನೇನೋ ಹೆಸ್ರು.
ಕುಪ್ಪಳ್ಳಿಯ ಕವಿಶೈಲದ ಶಿಲ್ಪವೂ ಸಿದ್ಧಾರ್ಥರ ಕನಸು
ರಸ್ತೆ ಮೂಲೆಯಲ್ಲಿನ ದರ್ಶಿನಿಯಲ್ಲಿ ಬೈಟು ಕಾಫಿ ಕುಡಿಯುತ್ತಿದ್ದ ನಮಗೆ ಕಾಫಿಯಲ್ಲೂ ಇಷ್ಟು ಬಗೆ ಇದೆ ಅಂತ ಗೊತ್ತಾಗಿದ್ದೇ ಈ ಕೆಫೆ ಕಾಫಿ ಡೇ ಎಂಬ ಅದ್ಭುತ ಜಗತ್ತನ್ನು ಪ್ರವೇಶಿಸಿದಾಗ. ದೊಡ್ಡ ದೊಡ್ಡ ಪಿಂಗಾಣಿ ಲೋಟಗಳನ್ನು ಮಗ್ಗ್ ಅಂತ ಕರೀತಾರೆ. ನೊರೆ ನೊರೆಯಾದ ಹಾಲಿನ ಮೇಲೆ ಕಾಫಿ ಕಷಾಯದಿಂದ ಬರೆದ ಹೃದಯದ ಚಿತ್ರ ನೋಡುವುದೇ ಚಂದ! ನಮಗೆ ಬೇಕಾದಷ್ಟು ಸಕ್ಕರೆ ಬೆರೆಸಿ ಪ್ಲಾಸ್ಟಿಕ್ಕಿನ ಕಡ್ಡಿಯಿಂದ ಆ ಸಕ್ಕರೆಯನ್ನು ನಿಧಾನವಾಗಿ ಕರಗಿಸುತ್ತಾ ಸಾವಕಾಶವಾಗಿ ಅಲ್ಲಿಯೇ ಕೂತು ಕಾಫಿ ಹೀರಿ ನಿರುಮ್ಮಳವಾದ ಕ್ಷಣಗಳು ಲೆಕ್ಕವಿಲ್ಲದಷ್ಟು.
ಸಮಯದ ಹಂಗಿಲ್ಲದ ಕಾಡು ಹರಟೆಗಾಗಿ, ಅಪರೂಪದ ಆತ್ಮೀಯರ ಜೊತೆ ಅಬಾಧಿತ ಭೇಟಿಗಾಗಿ, ಒಮ್ಮೊಮ್ಮೆ ಮನಸ್ಸು ಬಯಸಿದ ಏಕಾಂತಕ್ಕಾಗಿ ಕೆಫೆ ಕಾಫಿ ಡೇ ಆವರಣ ಹೇಳಿ ಮಾಡಿಸಿದಂತಿತ್ತು. ಒಮ್ಮೊಮ್ಮೆ ಅಲ್ಲಿ ಬೇರೆ ಬೇರೆ ಹುದ್ದೆಗಾಗಿ ಸಂದರ್ಶನಗಳನ್ನೂ ಎದುರಿಸಿದ್ದಿದೆ. ಮೊದ ಮೊದಲು ತುಂಬಾ ಬೆಲೆ ಅಂತ ಅನ್ನಿಸಿದ್ದರೂ ಅಲ್ಲಿನ ವಾತಾವರಣ ಹಿತವಾಗಿ, ಬೆಲೆಯ ಬಾಧೆ ಮನಸ್ಸಿನಿಂದ ಮರೆಯಾಗಿತ್ತು. ದೂರ ದೂರದ ಊರಿಗೆ ಹೋಗುವಾಗ ಮಾರ್ಗದ ಮಧ್ಯೆ ಕೆಫೆ ಕಾಫಿ ಡೇ ಕಂಡರೆ ಮನಸ್ಸಿಗೆ ಅದೇನೋ ನಿರಾಳ. ಈ ಕೆಫೆ ಕಾಫಿ ಡೇ ವೈಯಕ್ತಿಕವಾಗಿ ನನ್ನಂಥವರಿಗೆ ಇಷ್ಟವಾಗಲು ಕಾರಣ ಅದರ ಪರಿಸರ ಹಾಗೂ ಶುಚಿತ್ವ. ಸಾರ್ವಜನಿಕ ಸ್ಥಳಗಳಲ್ಲಿ ದುರ್ಲಭವಾದ ಸ್ವಚ್ಛ ಶೌಚಾಲಯಗಳು ಕೆಫೆ ಕಾಫಿ ಡೇ ಆವರಣದಲ್ಲಿ ಸಿಗುತ್ತದೆ. ಈ ಎಲ್ಲ ಕಾರಣಕ್ಕಾಗಿಯೇ ಹೊಸ ಪೀಳಿಗೆಯಲ್ಲಿ ಕೆಫೆ ಕಾಫಿ ಡೇ ಸಂಸ್ಕೃತಿ ನಿಧಾನವಾಗಿ ಆವರಿಸುತ್ತಿತ್ತು. ಈ ಬೆಳವಣಿಗೆಯನ್ನು ಕಂಡು ಬಯ್ಯುವವರಿಗೇನೂ ಕಡಿಮೆ ಇಲ್ಲ. ಆದರೆ, ಪೆಪ್ಸಿ-ಕೋಲಾ ಭರಾಟೆಯ ನಡುವೆಯೂ ಹೊಸ ಪೀಳಿಗೆ ಕಾಫಿ ಕುಡಿಯುಂತೆ ಮಾಡಿದ್ದು ಇದೇ ಕೆಫೆ ಕಾಫಿ ಡೇ! ಕಾಫಿ ಕುಡಿಯುವ, ಅದನ್ನು ಆಸ್ವಾದಿಸುವ ಹೊಸ ವಿಧಾನ ದೊರೆತದ್ದು ಇದೇ ಕೆಫೆ ಕಾಫಿ ಡೇಯ ಪರಿಸರದಲ್ಲಿ ಎಂದರೆ ಅತಿಶಯೋಕ್ತಿ ಏನಲ್ಲ ಬಿಡಿ.
ಚಿಕ್ಕಪ್ಪನನ್ನು ನೆನೆದು ಭಾವುಕರಾದ ರಾಧ 'ರಮಣ್'
ಅಂಥ ಹೊಸ ಜಗತ್ತನ್ನೇ ಸೃಷ್ಟಿಸಿದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಬಹಳ ಖೇದವಾಯಿತು. ಅರ್ಥವನ್ನು ಸಿದ್ಧಿಸಿಕೊಳ್ಳಲಾಗದೇ ಒಬ್ಬ ಕನಸುಗಾರ ಸೋಲದಿದ್ದರೂ, ಸೋತಿದ್ದೇನೆ ಎಂದುಕೊಂಡಿದ್ದು ನಿಜಕ್ಕೂ ನೋವಾಯಿತು. ಎಲ್ಲವೂ ಇದ್ದು ಏನು ಇಲ್ಲದಂತಾಗುವ ಜೀವನದ ಈ ವೈಪರೀತ್ಯಕ್ಕೇನು ಹೇಳುವುದು? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನವೇ? ಒಟ್ಟಿನಲ್ಲಿ ನಮ್ಮ ಕರ್ನಾಟಕದ ಅದರಲ್ಲೂ ನಮ್ಮ ಮಲೆನಾಡಿನ ಒಂದ್ ಬ್ರ್ಯಾಂಡ್ ರುವಾರಿಯ ಅಂತ್ಯ ಈ ರೀತಿಯಾಗಿದ್ದು ಮಾತ್ರ ಹಾಲು-ಸಕ್ಕರೆ ಇಲ್ಲದ ಕಡು ಕಹಿ ಕಾಫಿ ಕುಡಿದಂತಾಗಿದೆ.
~ವಿನಯ್ ಶಿವಮೊಗ್ಗ