ಕೋಟಿ ಕನಸಿನೊಡೆಯ ಸಿದ್ಧಾರ್ಥ ಜೊತೆಗಿನ ಮರೆಯಲಾಗದ ಕ್ಷಣಗಳು!
ಕೆಫೆ ಕಾಫಿಡೇಯ ಸಂಶೋಧನಾ ನಿರ್ದೇಶಕರಾಗಿರುವ ಪ್ರದೀಪ್ ಕೆಂಜಿಗೆ ಅವರು ತೇಜಸ್ವಿ ಅವರ ಒಡನಾಡಿಯಾಗಿದ್ದವರು. ಪಾಪಿಲಾನ್, ಹೆಬ್ಬಾವಿನೊಡನೆ ಹೋರಾಟ, ವಿಸ್ಮಯ ಸರಣಿ, ಬರ್ಮುಡಾ ಟ್ರಯಾಂಗಲ್ ಹೀಗೆ ಹತ್ತಾರು ಸೊಗಸಾದ ಪುಸ್ತಕಗಳನ್ನು ಬರೆದವರು. ಸಂಶೋಧನೆ, ಪ್ರವಾಸ, ಕ್ರಿಕೆಟ್ ಮತ್ತು ಓದು ಹವ್ಯಾಸವಾಗಿರುವ ಪ್ರದೀಪ್ ಕೆಂಜಿಗೆ ಬೆರಗುಗಣ್ಣಿನ ಪರಿಸರವಿಜ್ಞಾನಿ ಕೂಡ. ಸಿದ್ಧಾರ್ಥ ಅವರ ಬಳಗದಲ್ಲಿದ್ದ ಅವರು ಕೆಲವು ಅಪರೂಪದ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ
ಪ್ರದೀಪ ಕೆಂಜಿಗೆ
ನನ್ನ ಮಟ್ಟಿಗಂತೂ ಅದೊಂದು ವಿಶೇಷ ಸಂಗತಿ. 2005ರ ಸುಮಾರಿಗೆ ನಡೆದದ್ದು, ಅಂದು ಪೂರ್ಣಚಂದ್ರ ತೇಜಸ್ವಿಯವರು ನಮ್ಮ ಸಂಶೋಧನಾ ಕೇಂದ್ರಕ್ಕೆ ಬಂದಿದ್ದರು. ‘ಆ ಲ್ಯಾಬ್‌ನಲ್ಲಿ ಕೂತುಕೊಂಡು ದಿನವಿಡೀ ಅದೇನು ಕಡೀತೀಯಾ ಅಂತ ನೋಡಬೇಕು’ ಎಂದು ಸದಾ ನನ್ನ ಕಾಲೆಳೆಯುತ್ತಿದ್ದ ತೇಜಸ್ವಿಯವರು, ಆ ದಿನ ತಮ್ಮ ವೈದ್ಯಕೀಯ ತಪಾಸಣೆಗೆ ಅಂತ ಚಿಕ್ಕಮಗಳೂರಿಗೆ ಬಂದಿದ್ದರು; ಒತ್ತಾಯಪೂರ್ವಕ ಲ್ಯಾಬ್‌ಗೆ ಕರೆದುಕೊಂಡು ಬಂದಿದ್ದೆ. ಕುಳಿತು ಹೊಸ ಸಂಶೋಧನೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದೆವು ಅಷ್ಟೇ, ತಟ್ಟನೆ ಸಿದ್ದಾರ್ಥ ಒಳ ಅಡಿ ಇಟ್ಟರು.
ಸಿದ್ಧಾರ್ಥ ಎಂದೂ ಸೂಚನೆ ಕೊಡದೇ, ವೇಳೆ ನಿಗದಿಪಡಿಸದೇ ಬಂದವರಲ್ಲ. ಆದರೆ ಆ ದಿನ ಬೇರೇನೋ ತುರ್ತು ವಿಚಾರಕ್ಕೆ ಬೆಂಗಳೂರಿನಿಂದ ಬಂದವರು ಹೊಸ ಪೇಯಗಳ ಬಗ್ಗೆ ಚರ್ಚಿಸಲು ನಮ್ಮಲ್ಲಿಗೆ ಭೇಟಿ ಇತ್ತರು. ಅವರ ಆಗಮನದಿಂದ ನಮಗೆ ಆದ ಅಚ್ಚರಿಗಿಂತ ಹೆಚ್ಚು ಅವರಿಗೆ, ಅಲ್ಲಿ ತೇಜಸ್ವಿಯನ್ನು ಕಂಡು ಆಗಿರಬೇಕು.
ಕಣ್ಮರೆಯಾದ ಕಾಫಿ ಕನ್ನಡಿಗ ಸಿದ್ಧಾರ್ಥ, ಒಂದು ಚಿತ್ರ ಯಾತ್ರೆ
‘ಅರೇ ತೇಸಣ್ಣ’ ಅಂತ ಅಲ್ಲೇ ಬಾಗಿಲಲ್ಲೇ ನಿಂತರು! ಸಿದ್ಧಾರ್ಥ ತೇಜಸ್ವಿ ಅವರನ್ನು ಹಾಗೇ ಕರೆಯುತ್ತಿದ್ದದ್ದು.
ಅವರಿಬ್ಬರೂ ಹತ್ತಿರ ಸಂಬಂಧಿಗಳು. ಸಿದ್ದಾರ್ಥರನ್ನು ತೇಜಸ್ವಿ ಚಡ್ಡಿ ಹಾಕುವ ಕಾಲದಿಂದ ಬಲ್ಲವರು. ಹಾಗೇ ತೇಜಸ್ವಿಯವರ ಮದುವೆಯಲ್ಲಿ, (ಆಗ ನಿಷಿದ್ದವೆನಿಸಿದ್ದ ) ಹಂದಿ ಮಾಂಸದ ಬಾಡೂಟವನ್ನು ಸವಿದ ಬೆರಳೆಣಿಕೆಯ ಕೆಲವೇ ಆಹ್ವಾನಿತರಲ್ಲಿ ಸಿದ್ದಾರ್ಥ ಸಹ ಒಬ್ಬರು. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ, ವಯಸ್ಸಿನ ಅಂತರವಿದ್ದರೂ, ಇಬ್ಬರಲ್ಲಿ ಪರಸ್ಪರ ಸ್ನೇಹ ಇತ್ತು .
ಕುಪ್ಪಳ್ಳಿಯ ಕವಿಶೈಲ ನಿರ್ಮಾಣದಲ್ಲಿ , ಸಿದ್ಧಾರ್ಥ ತೋರಿಸಿದ ಆಸ್ಥೆ , ಯಾವ ಪ್ರಚಾರದ ಆಸೆ ಇಲ್ಲದೆ ಲಕ್ಷಾಂತರ ರೂಪಾಯಿಗಳ ಗ್ರಾನೈಟ್ ಬಂಡೆಗಳನ್ನು ತಂದು ಇಳಿಸಿದ ಅವರ ಕೊಡುಗೈ ಮನಸ್ಸು , ಒಟ್ಟು ಅವರ ಕ್ರಿಯಾಶೀಲ ವ್ಯಕ್ತಿತ್ವದ ಬಗ್ಗೆ ತೇಜಸ್ವಿಗೆ ಮೆಚ್ಚುಗೆ ಇತ್ತು.
ಎರಡೂ ಅತೀವ ಪ್ರಯೋಗಶೀಲ ಮನಸ್ಸುಗಳು. ಮಾತು ಲೋಕಾಭಿರಾಮದತ್ತ ಹೊರಳಲೇ ಇಲ್ಲ; ಬದಲಿಗೆ ಸೀದಾ ಹೊಸ ವಿಚಾರಗಳತ್ತ ತಿರುಗಿತು. ಸಿದ್ದಾರ್ಥ ಹಿಂದಿನ ದಿನವಷ್ಟೇ ತಾವು ಕೊಂಡಿದ್ದ ಬ್ಲಾಕ್ ಬೆರ್ರಿ ಫೋನ್ ತೋರಿಸುತ್ತಾ ರಿಯಲ್ ಟೈಮ್ ಡೇಟಾ ಪ್ರೊಸೆಸಿಂಗ್‌ನಿಂದ ಕಾಫಿ ಡೇಯ ಆಡಳಿತಕ್ಕೆ ಆಗುವ ಅನುಕೂಲಗಳನ್ನು ವಿವರಿಸತೊಡಗಿದರು. ತಮ್ಮ ಕಚೇರಿಯಲ್ಲೇ ಕುಳಿತು, ಒಂದು ಸಾವಿರ ಕೆಫೆಗಳನ್ನು ಹೇಗೆ ಸೂಕ್ಷ್ಮವಾಗಿ ಗಮನಿಸುತ್ತಾ ನಿಯಂತ್ರಣದಲ್ಲಿ ಇಡಬಹುದು ಎಂದು ಹೇಳತೊಡಗಿದ್ದರು. ಮಾಹಿತಿ ತಂತ್ರಜ್ಞಾನದಲ್ಲಿ ತೇಜಸ್ವಿಯವರ ಪರಿಣತಿಯೂ ಏನೂ ಕಡಿಮೆಯದಲ್ಲ. ಈ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಜನಸಾಮಾನ್ಯರ ಜ್ಞಾನವನ್ನು, ಜೀವನವನ್ನು ಉತ್ತಮಗೊಳಿಸುವ ಸಾಧ್ಯತೆ ಬಗ್ಗೆ ಅವರಿಗೆ ಅಪಾರ ಆಸಕ್ತಿ. ಭಾರತೀಯರ ಮನದಾಳದಲ್ಲಿ ಮನೆಮಾಡಿರುವ ಜಾತಿ ವ್ಯವಸ್ಥೆಯನ್ನು ಬಡ್ಡೆ ಹಿಡಿದು ಅಲ್ಲಾಡಿಸಲು, ಅಳಿಸಲು ಇದೊಂದು ಉತ್ತಮ ಸಾಧನ, ಅವಕಾಶ ಎಂಬುದು ಅವರ ನಂಬಿಕೆ. ಸಿದ್ದಾರ್ಥರಿಗೆ ತಂತ್ರಜ್ಞಾನವನ್ನು ತಮ್ಮಲ್ಲಿದ್ದ ಬ್ಲಾಕ್ ಬೆರಿ ಥರ ಉಪಯೋಗಕ್ಕಾಗಿ, ಆರ್ಥಿಕ ಲಾಭಕ್ಕಾಗಿ ಪಳಗಿಸುವ ಆಸಕ್ತಿಯಾದರೆ, ತೇಜಸ್ವಿಗೆ ಅದನ್ನು ಮುಕ್ತವಾಗಿ ಓಪನ್ ಸೋರ್ಸ್‌ನಲ್ಲಿ ವಿಸ್ತರಿಸುವ ಉತ್ಸಾಹ. ಅಂತೂ ಅವರಿಬ್ಬರ ಸಂವಾದ, ಬಂದ ಕೆಲಸ ಮರೆತು ಒಂದು ಗಂಟೆ ನಡೆಯಿತು.
ಸಿದ್ಧಾರ್ಥ ಸೃಷ್ಟಿಸಿದ್ದ ಕೌತುಕ: ಕಾಫಿ ಡೇ ಅನುಭವ ಬಿಚ್ಚಿಟ್ಟ ಮಲೆನಾಡ ಯುವಕ!
ಕೊನೆಗೆ, ಸಿದ್ಧಾರ್ಥ ತಮ್ಮ ಕೆಫೆ ಕಾಫಿ ಡೇಗಳಲ್ಲಿ ಆದಷ್ಟುಹೆಚ್ಚು ಹೆಚ್ಚು ಡಿಜಿಟಲ್ ತಂತ್ರಜ್ಞಾನ ಅಳವಡಿಸುತ್ತೇನೆ ಎಂದರು.
ಕೆಫೆ ಕಾಫಿ ಡೇ ಸಿದ್ದಾರ್ಥರ ಕನಸಿನ ಕೂಸು. ಅದರ ಬೆಳವಣಿಗೆಗೆ ಅಗತ್ಯದ ಪರಿಕರಗಳನ್ನು ಜಗತ್ತಿನಲ್ಲೆಡೆಯಿಂದ, ಅದೆಷ್ಟೇ ದುಬಾರಿಯಾದರೂ ಬಿಡದೆ ತರುತ್ತಿದ್ದರು. ಸ್ವಂತಕ್ಕೆ ತೀರಾ ಹಿಡಿತದ, ಮಿತವ್ಯಯಿಯಾದ ಸಿದ್ದಾರ್ಥ ಕೆಫೆಯ ವಿಚಾರದಲ್ಲಿ ಮಾತ್ರ ಕೈ ಮುಂದು. ಯಾವುದೇ ವೆಚ್ಚಕ್ಕೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹಾಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜರ್ಮನಿಯಿಂದ ಕಾಫಿ ರೋಸ್ಟರ್‌ಗಳು, ಸ್ವಿಡ್ಜರ್‌ಲ್ಯಾಂಡ್‌ನಿಂದ ಕಾಫಿ ಮಿಷಿನ್‌ಗಳು, ಫ್ರಾನ್ಸ್‌ನಿಂದ ಫ್ಲೇವರ್‌ಗಳು, ಇಟಲಿಯಿಂದ ಪೀಠೋಪಕರಣಗಳನ್ನು ಆಮದು ಮಾಡಿಕೊಂಡರು. ಅಷ್ಟೇ ಅಲ್ಲ, ಮುಂದೊಂದು ದಿನ ಈ ಎಲ್ಲಾ ಪರಿಕರಗಳನ್ನು ನಮ್ಮ ಚಿಕ್ಕಮಗಳೂರಿನಲ್ಲೇ ತಯಾರಿಸುವ ಘಟಕಗಳನ್ನು ಸ್ಥಾಪಿಸಿದರು.
ಕೆಫೆಗಳ ಆ ದೊಡ್ಡ ಕನಸು ಅವರಿಗೆ ಮೊದಲು ಮೊಳಕೆಯೊಡೆದದ್ದು 1995ರ ಸುಮಾರಿಗೆ, ಅಥವಾ ಸ್ವಲ್ಪ ಹಿಂದೆಯೇ ಇರಬಹುದು. ಆದರೆ ಇತರರಿಗೆ ಅದರ ಸುಳಿವು ಸಿಕ್ಕಿದ್ದು ಆಗ. ಅದು ಕಾಫಿ ಉದ್ಯಮದ ಸಂಕ್ರಮಣ ಕಾಲ. ಸರ್ಕಾರದ ಪೂರ್ಣ ನಿಯಂತ್ರಣದಲ್ಲಿದ್ದ ಕಾಫಿ ಬೋರ್ಡ್‌ನ ಕಪಿಮುಷ್ಠಿಯಿಂದ ಹೊರಬರಲು ಕಾಫಿ ಬೆಳೆಗಾರರು ಹೋರಾಟದಲ್ಲಿ ತೊಡಗಿದ್ದ ಸಮಯ. ನಾನೂ ಸಕ್ರಿಯವಾಗಿ ಭಾಗಿಯಾಗಿದ್ದೆ.
ಒಂದು ದಿನ ನಾವೆಲ್ಲಾ ಬೆಳೆಗಾರ ಮಿತ್ರರು ಕೂಡಿ ಹಾಸನಕ್ಕೆ ಹೊರಟಿದ್ದೆವು. ಉದ್ದೇಶ: ಕಾಫಿ ಬೋರ್ಡ್‌ಗೆ ಪರ್ಯಾಯವಾಗಿ ಒಂದು ಸಹಕಾರ ಸಂಘ ‘ಕೋಮಾರ್ಕ್’ ಎಂಬ ಸಂಸ್ಥೆ ಕಟ್ಟುವ ಕುರಿತು ಒಂದು ಸಭೆ. ಕಾರಿನಲ್ಲಿದ್ದ ಎಲ್ಲರಲ್ಲೂ ಹೊಸತೇನನ್ನೊ ಮಾಡುವ ಉತ್ಸಾಹ, ಸಾಧಿಸುವ ಛಲ. ಸಂಘದ ರೂಪುರೇಷೆ, ಮೂಲ ಬಂಡವಾಳದ ಸಂಗ್ರಹಣೆ ಇತ್ಯಾದಿಗಳ ಬಗ್ಗೆ ಜೋರು ಚರ್ಚೆ ನಡೆಯುತಿತ್ತು. ನಾನು ಆಲಿಸುತ್ತಾ ಕಾರು ಚಲಾಯಿಸುತ್ತಿದ್ದೆ. ಆಗ ನಮ್ಮ ಕಾರನ್ನು ಹಿಂದೆ ಸರಿಸಿ, ಇನ್ನೊಂದು ಕಾರು ವೇಗವಾಗಿ ಮುಂದೆ ಹೋಯಿತು. ಪಕ್ಕ ಕುಳಿತಿದ್ದ ದುಂಡುಗ ರಘುರವರು, ‘ಓ ಸಿದ್ದಾರ್ಥ ಹೋಗುತ್ತಿದ್ದಾರೆ’ ಅಂದರು. ನಮ್ಮನ್ನು ದಾಟಿದ ಕಾರು, ವೇಗ ತಗ್ಗಿಸಿ ಪಕ್ಕಕ್ಕೆ ಸರಿಯಿತು, ಆದರ ಡ್ರೈವರ್ ನಮಗೂ ನಿಲ್ಲಿಸುವಂತೆ ವಿನಂತಿಯ ಸಂಜ್ಞೆ ಮಾಡಿದ. ನಾನು ಬದಿಗೆ ಸರಿಸಿ, ಅದರ ಹಿಂದಕ್ಕೆ ನಿಲ್ಲಿಸಿದೆ. ಸಿದ್ದಾರ್ಥ ಅವರು ಕಾರಿನಿಂದ ಇಳಿದು ನಮ್ಮೆಡೆಗೆ ಬಂದರು. ಎಂದಿನಂತೆಯೇ ವೇಗದ, ಉತ್ಸಾಹ ಭರಿತ ನಡಿಗೆ; ಮೊಗದ ತುಂಬಾ ಅರಳಿದ ಮಂದಹಾಸ.
‘ಓ ಪ್ಲಾಂಟರ್‌ಗಳೆಲ್ಲಾ ಸೇರಿಕೊಂಡು ಎಲ್ಲೋ ಹೊರಟ್ಟಿದ್ದೀರಿ, ನನಗೂ ಒಂದು ಸೀಟು ಸಿಗಬಹುದಾ?’ ಕಾರಿನೊಳಗೆ ಬಗ್ಗಿ ನೋಡುತ್ತಾ ಕೇಳಿದರು!
ಕಾಫಿ ಮಾಂತ್ರಿಕನನ್ನು ನೆನೆದ ವಿಮಾನ ಕ್ರಾಂತಿ ಖ್ಯಾತಿಯ ಕ್ಯಾ. ಗೋಪಿನಾಥ್
ಸಿದ್ದಾರ್ಥ ಆಗಲೇ ಕೋಟ್ಯಾಧಿಪತಿ. ಓದು ಮುಗಿಸಿ, ಮುಂಬೈಗೆ ಹೋಗಿ, ಷೇರುಪೇಟೆಯಲ್ಲಿ ತರಬೇತಿ ಪಡೆದು, ಬೆಂಗಳೂರಿಗೆ ಬಂದು ಮೂರೇ ವರ್ಷದಲ್ಲಿ ತಮ್ಮ ಪರಿಣತಿ, ಕೈಚಳಕ ತೋರಿಸಿದ್ದರು. ಅಲ್ಲಿಯವರೆಗೆ ಯಾರೂ ಕೇಳದೆ ಇದ್ದ ಇನ್‌ಫೋಸಿಸ್ ಕಂಪನಿಯಲ್ಲಿ ಬಂಡವಾಳ ಹಾಕಿ ಇಡೀ ಬೆಂಗಳೂರನ್ನೇ ಬೆರಗುಗೊಳಿಸಿದ್ದರು.
ಅವರು ಬಂದು ಸೀಟು ಕೇಳಿದಾಗ ನಾವು ಕಾರಲ್ಲಿ ಇದ್ದವರು ಮುಖ ಮುಖ ನೋಡಿಕೊಂಡಿವು. ಕಾರು ಆಗಲೇ ಭರ್ತಿ ಆಗಿತ್ತು. ಈ ದೊಡ್ಡ ಮನುಷ್ಯರನ್ನು ಎಲ್ಲಿ ಕೂರಿಸುವುದು, ಆದರೆ ಯಾವುದೇ ಮುಜುಗರಕ್ಕೂ ಅವಕಾಶ ಕೊಡದೆ, ಹಿಂದಿನ ಡೋರ್ ತೆಗೆದು ಮೂವರ ನಡುವೆ ತಮ್ಮನ್ನು ತೂರಿಸಿಕೊಂಡು ಬಾಗಿಲು ಹಾಕಿಕೊಂಡು, ಕೂಡಲೇ ನಾವು ಕಟ್ಟಬೇಕು ಎಂದುಕೊಂಡಿದ್ದ ಕೋಮಾರ್ಕ್ ಸಂಸ್ಥೆಯ ಬಗ್ಗೆ ಕೇಳಲು ಶುರು ಮಾಡಿದರು.
ಇದೆಲ್ಲ 20- 25 ವರ್ಷದ ಹಿಂದಿನ ಕತೆ. ಆಗ ನಾವಿನ್ನೂ ಯುವಕರು; ಸರಳ ವಾಸ್ತವದ ಅರಿವಿಲ್ಲದ ಆದರ್ಶವಾದಿಗಳು.
ಇಪ್ಪತ್ತು ಸಾವಿರದಷ್ಟುಬೆಳೆಗಾರರನ್ನು ಒಟ್ಟು ಸೇರಿಸುತ್ತೇವೆ; ತಲಾ ಒಂದೊಂದು ಸಾವಿರದ ಹಾಗೆ ಬಂಡವಾಳ ಸಂಗ್ರಹಿಸುತ್ತೇವೆ; ಬರುವ ಕೋಟಿ ಹಣದಲ್ಲಿ ಮಲ್ಟಿಸ್ಟೇಟ್ ಸಹಕಾರ ಸಂಘ ‘ಕೋಮಾರ್ಕ್’ ಕಟ್ಟುತ್ತೇವೆ ಅಂತೆಲ್ಲ ಹೇಳಿದೆವು. ಮೌನವಾಗಿ ನಮ್ಮ ಮಾತನ್ನು ಆಲಿಸುತ್ತಾ ಕುಳಿತರು. ಅವರು ಅದಾಗಲೇ ಮುಂಬೈ ಷೇರು ಪೇಟೆಯ ನಾಡಿಯನ್ನು ಅರಿತವರು. ಉದ್ಯಮಗಳ ಏಳುಬೀಳುಗಳು ಚೆನ್ನಾಗಿ ಗೊತ್ತಿದ್ದವು. ಮನುಷ್ಯನ ಸಣ್ಣತನ, ಧನದಾಹ, ಒತ್ತಡಗಳು ಕಮಾಡಿಟಿ ಮಾರ್ಕೆಟ್‌ನಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬ ಅರಿವು ಅವರಿಗೆ ಚೆನ್ನಾಗಿ ಇತ್ತು. ನಮ್ಮ ಮಾತು ಕೇಳುತ್ತಾ ಹಾಸನದವರೆಗೂ ಬಂದವರು, ಕೊನೆಗೆ, ‘ಕೋ ಆಪರೇಟಿವ್ ವ್ಯವಸ್ಥೆ ಈಗಲೂ ನಡಿಯುತ್ತೆ ಅಂದ್ಕೊಡಿದ್ದೀರಾ?’ ಅಂದರು.
ನಮ್ಮ ವಾದದಲ್ಲಿ ಅವರಿಗೆ ಸ್ವಲ್ಪವೂ ನಂಬಿಕೆ ಹುಟ್ಟಿರಲಿಲ್ಲ .ಆದರೆ ನಮಗೆ ನಮ್ಮ ಮಾತಿನಲ್ಲಿ ಎಷ್ಟುವಿಶ್ವಾಸ ಇತ್ತು ಅಂದರೆ ನಾವು ಅವರ ಅನುಮಾನವನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡೆವು. ನಮ್ಮೊಳಗೆ ನಿರಾಶೆ ಹೊಗೆಯಾಡಿದ್ದು ಗಮನಿಸಿ, ಸಂತೈಸಲು, ನಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿ,‘ವಿಶ್ ಯು ಆಲ್ ದಿ ಬೆಸ್ಟ್, ನಮ್ಮ ತಂದೆಗೆ ಹೇಳ್ತೀನಿ, ನಿಮಗೆ ಬೇಕಾದಂಥ ಹಣ ಸಹಾಯ ಕೊಡ್ತಾರೆ’ ಅಂದರು. ತಂದೆ ಗಂಗಯ್ಯ ಹೆಗ್ಡೆಯವರಿಂದ ದೊಡ್ಡ ಮೊತ್ತದ ಷೇರು ಬಂಡವಾಳವನ್ನು ಕೊಡಿಸಿದರು.
ಇದಾಗಿ ಮೂರ್ನಾಲ್ಕು ತಿಂಗಳಲ್ಲೇ ಸಿದ್ಧಾರ್ಥ ಬಹುದೊಡ್ಡ ರೀತಿಯಲ್ಲಿ ಕಾಫಿ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಜಗಜ್ಜಾಹೀರಾಯಿತು. ಅಂದರೆ ನಮ್ಮ ಜೊತೆ ಪಯಣಿಸಿದ ಹೊತ್ತಿಗೆ ಅವರು ಮಾರುಕಟ್ಟೆಅಭ್ಯಸಿಸಿ, ಅದರ ಬಗ್ಗೆ ಪೂರ್ಣ ಮಾಹಿತಿ ಕಲೆಹಾಕಿಕೊಂಡಿದ್ದರು.
'ಧಣಿ'ಯನ್ನು ಕಳೆದುಕೊಂಡ ಚೇತನಹಳ್ಳಿಯಲ್ಲಿ ಕರಾಳ ಮೌನ!
ಅಷ್ಟರಲ್ಲಾಗಲೇ ಅವರು ಜಗತ್ತಿನ ಅತಿ ದೊಡ್ಡ ಕಾಫಿ ಕಂಪನಿಗಳಾದ ಚೀಬೊ ಹಾಗೂ ಸ್ಟಾರ್‌ಬಕ್ಸ್‌ಅನ್ನು ನೋಡಿಯಾಗಿತ್ತು. ಆ ಹಂತಕ್ಕೆ ಬೆಳೆಯಬೇಕಾದರೆ ತನ್ನ ಕಂಪೆನಿಯನ್ನು ಯಾವ ರೂಪುರೇಷೆಗಳ ಮೇಲೆ ಕಟ್ಟಬೇಕು ಅಂತ ನಿರ್ಧರಿಸಿ ಆಗಿತ್ತು ಅನಿಸುತ್ತೆ. ಆದರೆ ಅವರು ಎಷ್ಟುಸ್ನೇಹಜೀವಿ ಅಂದರೆ ತಮ್ಮ ಕಂಪೆನಿಗೆ ಪ್ರತಿ ಸ್ಪರ್ಧಿಯಾಗಬಹುದಾಗಿದ್ದ ಕೋಮಾರ್ಕ್ ಸಂಸ್ಥೆಗೆ ಧನ ಸಹಾಯ ಮಾಡಿದ್ದರು! ಅದು ಅವರ ದೊಡ್ಡತನ.
ಅನಂತರದ ದಿನಗಳಲ್ಲಿ ಅವರು ಹೇಳಿದ ಹಾಗೇ ಆಯ್ತು. ವ್ಯವಹಾರದ ಬಗ್ಗೆ ಅಷ್ಟಾಗಿ ತಿಳುವಳಿಕೆ ಇಲ್ಲದ ಬೆಳೆಗಾರರೇ ತುಂಬಿದ್ದ ನಮ್ಮ ಸಂಸ್ಥೆ ಒಂದು ವರ್ಷ ಲಾಭ ಗಳಿಸಿತಾದ್ರೂ ಆಮೇಲೆ ನೆಲಕ್ಕಚ್ಚಿತು. ಆದರೂ ಸಿದ್ಧಾರ್ಥ, ನಮ್ಮ ವಿಫಲ ಪ್ರಯತ್ನದ ಬಗ್ಗೆ ಮೆಚ್ಚುಗೆ ಸೂಚಿಸಿದರಷ್ಟೇ ವಿನಹ ಒಂದು ದಿನವೂ ಹೀಗೆಳೆಯಲಿಲ್ಲ.
ಅದೇ ವರ್ಷದಲ್ಲೇ ಎಬಿಸಿ ಕಾಫಿ ಟ್ರೇಡಿಂಗ್ ಶುರು ಮಾಡಿದರು. ಆಮೇಲೆ ಕಾಫಿ ಕ್ಯೂರಿಂಗ್, ರೋಸ್ಟಿಂಗ್, ಕೆಫೆಗಳು.. ಒಂದಾದ ಮೇಲೆ ಒಂದರಂತೆ ಎಡೆಬಿಡದ ಬೆಳವಣಿಗೆ; ಕಾಫಿ ಉದ್ಯಮದಲ್ಲಿ ‘ಅ’ಯಿಂದ ಹಿಡಿದು ‘ಕ್ಷ’ವರೆಗಿನ ಬಹುರಾಷ್ಟ್ರೀಯ conglomarate ಒಂದು ಕೇವಲ ಎರಡು ವರ್ಷದಲ್ಲೇ ಉದಯವಾಯಿತು. ಆ ಮಟ್ಟಿನ ವ್ಯವಹಾರ ಕುಶಲತೆ, ಕಾರ್ಯ ತತ್ಪರತೆ ಅವರಿಗಿತ್ತು. ಇಂದಿಗೂ ಜಗತ್ತಿನಲ್ಲಿ ಕಾಫಿ ಬೆಳೆಯುವುದರಿಂದ ಹಿಡಿದು ಕುಡಿಯುವ ಗ್ರಾಹಕರವರೆಗೆ ಎಲ್ಲಾ ಹಂತದಲ್ಲೂ ಸ್ವಾವಲಂಬನೆ ಸಾಧಿಸಿರುವ ಸಂಸ್ಥೆ ಕಾಫಿ ಡೇ ಒಂದೇ!
ಚಿಕ್ಕಮಗಳೂರಿನ ಬಗ್ಗೆ ಅವರ ಬದ್ಧತೆ ದೊಡ್ಡದು. ಈಗೊಂದು ಎರಡು ವರ್ಷದ ಹಿಂದೆ, ಕಂಪನಿಯ ಆಡಳಿತ ಮಂಡಳಿಯ ಮೀಟಿಂಗ್ ಕರೆದಿದ್ದರು. ವಿಷಯ: ಚಿಕ್ಕಮಗಳೂರಿನಲ್ಲಿ ಅತ್ಯಾಧುನಿಕ ರೊಸ್ಟಿಂಗ್ ಯೂನಿಟ್ ಹಾಗೂ ಅದರ ಪಕ್ಕದಲ್ಲೇ ಹಣ್ಣು ಮತ್ತು ಆಹಾರ ಸಂಸ್ಕರಣ ಘಟಕ ಮಾಡುವ ಬಗ್ಗೆ. ಮೀಟಿಂಗ್‌ಗೆ ಬಂದಿದ್ದವರೆಲ್ಲ ಅವರವರ ಕ್ಷೇತ್ರದ ಪರಿಣಿತರು , ಅನುಭವಿಗಳು. ಹೆಚ್ಚಿನವರಿಗೆ ಈ ಪ್ರಾಜೆಕ್ಟ್ ಒಪ್ಪಿಗೆ ಆಗಲಿಲ್ಲ; ಅವರ ವಾದದಲ್ಲಿ ಹುರುಳಿತ್ತು. ಈ ಘಟಕವನ್ನು ಚಿಕ್ಕಮಗಳೂರಿನಲ್ಲಿ ತೆರೆಯುವುದರಿಂದ ಶೇ.8 ರಿಂದ 9ರಷ್ಟುವೆಚ್ಚ ಹೆಚ್ಚಾಗುತ್ತೆ. ಚಿಕ್ಕಮಗಳೂರಿಗೆ ರೈಲ್ವೇ ಸಂಪರ್ಕ ಇಲ್ಲ. ಸರಕು ಸಾಗಾಣಿಕೆ ಕಷ್ಟ; ಇಲ್ಲಿನ ಹವಾಮಾನವೂ ರೋಸ್ಟಿಂಗ್‌ಗೆ ಪೂರಕವಾಗಿಲ್ಲ. ಹಣ್ಣು, ತರಕಾರಿಗೆ ತಕ್ಕ ಮಾರ್ಕೆಟ್ ಇಲ್ಲ. ಇದನ್ನೇ ಹಾಸನದಲ್ಲಿ ಕಟ್ಟಿದರೆ ವೆಚ್ಚ ಉಳಿಸಬಹುದು ಅಂತ ಪಕ್ಕಾ ಲೆಕ್ಕ ಕೊಟ್ಟರು.
ಆ. 1 ರಂದೇ ವೇತನ ನೀಡಿ ನೌಕರರ ಪರ ನಿಂತ ಸಿದ್ಧಾರ್ಥ್ ಸಂಸ್ಥೆ
ಎಲ್ಲವನ್ನು ತಾಳ್ಮೆಯಿಂದ ಆಲಿಸಿದ ಸಿದ್ಧಾರ್ಥ, ಕೊನೆಗೆ ಒಂದು ಮಾತು ಹೇಳಿದರು, ‘ಜಾಗದ ವಿಷಯದಲ್ಲಿ ಚರ್ಚೆ ಬೇಡ. ಇದು ನನ್ನ ನಿರ್ಧಾರ; ಇದೇ ಫೈನಲ್. ವೆಚ್ಚ ಹೆಚ್ಚಾಗುತ್ತೆ ಅನ್ನೋದಾದರೆ ಆ ಹಣವನ್ನು ಸ್ವಂತ ಅಕೌಂಟ್‌ನಿಂದ ಕಂಪನಿಗೆ ಕೊಡುತ್ತೇನೆ.’
ಅಂದವರು, ಕೊನೆಗೆ ನಮ್ಮ ಕಡೆ ತಿರುಗಿ, ‘ನಮ್ಮೂರನ್ನು ನಾನು ಬೆಳೆಸದೆ ಇದ್ದರೆ ಇನ್ಯಾರು ಬಂದು ಬೆಳೆಸ್ತಾರೆ? ನಮ್ಮೂರಿನವರು ಕೆಲಸಕ್ಕೆ ಎಲ್ಲಿಗೆ ಹೋಗಬೇಕು?’ ಅಂದರು.
ಸ್ವಿಜರ್‌ಲ್ಯಾಂಡ್ ದೇಶದ Nestle Cafe ಅವರಿಗೆ ಮಾಡೆಲ್ ಆಗಿತ್ತು. ಚಿಕ್ಕಮಗಳೂರನ್ನು ಆ ರೀತಿ ಬೆಳಸಬೇಕು ಎಂಬುದು ಅವರ ಕನಸು .
Nestle ಜಗತ್ತಿನ ಅತಿ ದೊಡ್ಡ ಆಹಾರ ಸಂಸ್ಕರಣಾ ಕಂಪನಿ. ಅವರು, 40-50 ಮೈಲಿ ವಿಸ್ತಾರದಲ್ಲಿ ನೆಸ್ಲ್ಟೇ ಸಿಟಿ ಅನ್ನುವ ಊರನ್ನೇ ಕಟ್ಟಿದ್ದಾರೆ. ಬೇಬಿ ಫುಡ್‌ನಿಂದ ಹಿಡಿದು ಬಾಹ್ಯಾಕಾಶಯಾನಿಗಳ ಆಹಾರದವರೆಗೆ ಅಲ್ಲಿ ಎಲ್ಲ ಆಹಾರ ತಯಾರಾಗುತ್ತದೆ. ಟೆಕ್ನಾಲಜಿಯಲ್ಲೂ ಅದನ್ನು ಮೀರಿಸುವಂತಿರಲಿಲ್ಲ. ಆ ಊರಿನ ಇಪ್ಪತ್ತು ಮೂವತ್ತು ಸಾವಿರ ಕುಟುಂಬಗಳು ಒಂದಲ್ಲಾ ಒಂದು ರೀತಿಯಲ್ಲಿ, ಮೂರ್ನಾಲ್ಕು ತಲೆಮಾರುಗಳಿಂದ Nestle ಕಂಪೆನಿ ಜೊತೆ ಅವಿನಾಭಾವ, ಹಾಸುಹೊಕ್ಕಾದ ಸಂಬಂಧ ಇಟ್ಟುಕೊಂಡಿದ್ದಾರೆ. ಅಂಥದ್ದೊಂದು ಸಿಟಿ ಚಿಕ್ಕಮಗಳೂರು ಆಗಬೇಕು ಅನ್ನೋ ಕನಸು ಸಿದ್ಧಾರ್ಥ ಅವರದು. ಅದಕ್ಕೆ ಪೂರಕವಾಗೇ ಕಟ್ಟಿದ್ದು , ಅಂತರರಾಷ್ಟೀಯ ಮಟ್ಟದ residentaial ಶಾಲೆ, ರೆಸಾರ್ಟ್‌ಗಳು; ಕೆಳವರ್ಗದವರನ್ನು ಮೇಲೆತ್ತಲು Yuva Vocational training centre ಮತ್ತು ಉಚಿತ Multi Speciality ಆಸ್ಪತ್ರೆ.
ಕಾರ್ಮಿಕ ವರ್ಗದ ಬಗ್ಗೆ ಅವರ ಕಾಳಜಿ ವಿಶಿಷ್ಟ. ಅದಕ್ಕೊಂದು ಉದಾಹರಣೆ: ಕಾಫಿ ಡೇ ಕಂಪನಿಯಲ್ಲಿ ಯಾವಾಗಲೂ ವಾರಕ್ಕೆ ಐದೂವರೆ ದಿನಗಳ ಕೆಲಸ, ಅಂದರೆ ಪ್ರತೀ ಶನಿವಾರ ಅರ್ಧ ದಿನ ಆಫೀಸ್‌ಗೆ ಬರಲೇ ಬೇಕು. ಇದು ನಿಯಮ. ಬೆಂಗಳೂರಿನ ಬೇರೆಲ್ಲಾ ದೊಡ್ಡ ಕಂಪನಿಗಳು ವಾರಕ್ಕೆ 5 ದಿನ ಅಥವಾ 2ನೇ ಮತ್ತು 4ನೇ ಶನಿವಾರ ಮಾತ್ರ ಕೆಲಸ ಮಾಡುತ್ತವೆ. ಅದೇ ನಿಯಮವನ್ನು ನಮ್ಮಲ್ಲೂ ಜಾರಿಗೆ ತರಬೇಕು ಎಂಬ ಬೇಡಿಕೆ ಬಂದಾಗ ಸಿದ್ಧಾರ್ಥ ಅವರು ಹೇಳಿದ್ದು, ‘ನಮ್ಮ ಕೆಫೆ ಹುಡುಗರು, ತೋಟದ ಕಾರ್ಮಿಕರು ಪ್ರತೀ ಶನಿವಾರ ಮತ್ತು ಭಾನುವಾರ ಬಿಡುವಿಲ್ಲದೆ ಕಂಪನಿಗಾಗಿ ದುಡಿಯುತ್ತಿರುವಾಗ, ನಾವು ಆಫೀಸ್‌ಗಳಲ್ಲಿ ಕುಳಿತುಕೊಳ್ಳುವವರು ರಜೆ ಮಾಡಿ ಮನೆಯಲ್ಲಿ ಉಳಿಯೋದು ಮನಸ್ಸಿಗೆ ಒಪ್ಪದು. ಪ್ರತಿ ಶನಿವಾರ ಅರ್ಧ ದಿನವಾದರೂ ಬಂದು ನಾವೂ ನಿಮ್ಮೊಡನೆ ಇದ್ದೇವೆ ಅಂತಾ ತೋರಿಸೋಣ.’ ಹೇಳಲೇ ಬೇಕಾದ ಇನ್ನೊಂದು ಘಟನೆ. ಬೇಡ ಅಂದರೂ ರಾಜಕೀಯ ಇವರ ಹೊಸ್ತಿಲಲ್ಲೇ ಇತ್ತು ಅನಿಸುತ್ತೆ. ಇದು ಅವರಿಗೆ ತೊಂದರೆ ಮಾಡ್ತೋ ಒಳ್ಳೇದು ಮಾಡಿತೋ ಗೊತ್ತಿಲ್ಲ. ಅಥವಾ ಅನಿವಾರ್ಯವಾಗಿತ್ತೇನೋ. ಆದರೆ ಇವರಿಗೆ ಎಲ್ಲಾ ಪಕ್ಷದಲ್ಲೂ ಗೆಳೆಯರು, ಹಿತಚಿಂತಕರು ಇದ್ದರು. ಇದಕ್ಕೆ ಉದಾಹರಣೆಯಾಗಿ ಒಂದು ಘಟನೆ:
ಆಗ ಎಸ್.ಎಂ ಕೃಷ್ಣ ಅವರ ಮುಖ್ಯಮಂತ್ರಿ ಅವಧಿ ಕೊನೆಗೊಂಡ ಸಮಯ. ಅವರು ಹಾಗೂ ದೇವೇಗೌಡರು ರಾಜಕೀಯವಾಗಿ ಬದ್ಧ ವೈರಿಗಳು. ಒಂದು ದಿವಸ ನಾನು ದೆಹಲಿಯಿಂದ ಮುಂಜಾನೆಯ ಫ್ಲೈಟ್ ಹತ್ತಿದೆ. ಅವಾಗ ಸಾರ್ಸ್ ಅನ್ನೋ ಸೋಂಕು ಜಾಡ್ಯದ ಗಲಾಟೆ ಜಾಸ್ತಿ ಆಗಿ ಎಲ್ಲರೂ ಪ್ರಯಾಣ ಮಾಡಲು ಹಿಂಜರಿಯುತ್ತಿದ್ದರು. ಇಡೀ ಏರ್‌ಪೋರ್ಟ್, ಫ್ಲೈಟ್‌ಗಳು ಖಾಲಿ ಅಂದ್ರೆ ಖಾಲಿ. ನನಗೆ ಸ್ವಲ್ಪ ತುರ್ತು ಇದ್ದ ಕಾರಣ, ವಿಮಾನ ಹತ್ತಿ ನನ್ನ ಸೀಟ್‌ನಲ್ಲಿ ಕೂತೆ. ಆಮೇಲೆ ಸ್ವಲ್ಪ ಹೊತ್ತು ನೋಡುತ್ತಿದ್ದ ಹಾಗೆ ಮುಂದಿನ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಎರಡು ಕಾಲುಗಳು ಕಂಡವು. ಮೆಟ್ಟು ಬಿಚ್ಚಿಟ್ಟು ಯಾರೋ ಹಿರಿಯರು ಕುಳಿತ್ತಿದ್ದರು. ಈ ಖಾಯಿಲೆಯ ಗಲಾಟೆಯಲ್ಲೂ ಒಬ್ರೇ ಪ್ರಯಾಣಿಸುತ್ತಿದ್ದಾರಲ್ಲ, ಯಾರಿರಬಹುದು ಅಂತ ಕುತೂಹಲದಿಂದ, ನನ್ನ ಎಕಾನಮಿ ಕ್ಲಾಸ್‌ನಿಂದ ಬ್ಯುಸಿನೆಸ್ ಕ್ಲಾಸ್‌ನ ಕಡೆ ಬಗ್ಗಿ ನೋಡಿದೆ. ಅವರೂ ಸಹಾ ಅದೇ ಸಮಯಕ್ಕೆ ಹಿಂದೆ ತಿರುಗಿದರು.. ದೇವೇಗೌಡರು!
‘ನಮಸ್ಕಾರ ಸಾರ್’ ಅಂದೆ. ಇಡೀ ಫ್ಲೈಟ್ ಖಾಲಿ ಇತ್ತಲ್ಲಾ?, ‘ಇಲ್ಲೇ ಬಾರಪ್ಪಾ..’ ಅಂದ್ರು. ಅಲ್ಲೇ ಹೋಗಿ ಕೂತೆ. ಅವರಿಗೂ ಮಾತಿಗೆ ಜನ ಬೇಕಿತ್ತು ಅಂತಾ ಕಾಣುತ್ತೆ, ಅವರ ರಾಜಕೀಯದ ಒಳನೋಟ ನನಗೂ ಸ್ವಲ್ಪ ನೀಡಿದರು; ಹಾಗೇ ನನ್ನ ಆಸ್ಥೆ ಕೃಷಿ ಬಗ್ಗೆ ತಿಳಿದಷ್ಟುಹಂಚಿಕೊಂಡೆ; ಅದೇ ದಿನ ಬೆಂಗಳೂರಿನ ಸಮೀಪ ರಾಜು ಎಂಬ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅದನ್ನು ಜ್ಞಾಪಿಸಿದ್ದಕ್ಕೆ , ನಾನು ಈಗ ಅಲ್ಲಿಗೇ ಹೋಗುತ್ತಿರುವುದು, ಸಾಂತ್ವನ ಹೇಳಲು ಎಂದರು.
ನಡುವೆ ತಟ್ಟನೆ , ‘ಈಗ ನೀವೇನು ಮಾಡ್ತಾ ಇದ್ದೀರಿ?’ ಅಂತ ಕೇಳಿದರು .
ನಾನು ಹೇಳೋದೋ ಬೇಡ್ವೋ ಅನ್ನುವ ಅನುಮಾನದಲ್ಲೇ ಯೋಚಿಸಿ,‘ನಾನು ಕೆಫೆ ಕಾಫಿ ಡೇಯಲ್ಲಿ ಮುಖ್ಯ ಸಂಶೋಧಕ’ ಅಂದೆ.
ಅವರು,‘ಓ ಕಾಫಿ ಡೇನಾ, ಸಿದ್ಧಾರ್ಥ ಅವರದ್ದು..?’
‘ಹೌದು ಸಾರ್’ ಅಂದೆ, ಇನ್ನೇನಂತಾರೋ ಗೌಡ್ರು ಅನ್ನುವ ಆತಂಕದಲ್ಲಿ.
ಅವರೇ ಮಾತಾಡಿದರು, ‘ ಅವನ ಮಾವ ಎಸ್. ಎಂ. ಕೃಷ್ಣ ಮತ್ತು ನಾವು ಬೇರೆ ಬೇರೆ ಗ್ರೂಪ್‌ನಲ್ಲಿದ್ದೀವಿ. ರಾಜಕೀಯದಲ್ಲಿ ವೈಮನಸ್ಸು ಅದೂ ಇದೂ ಇದ್ದೇ ಇರುತ್ತೆ. ಆದ್ರೆ ಈ ಹುಡುಗ ಸಿದ್ದಾರ್ಥನ ಬಗ್ಗೆ ನನಗೆ ತುಂಬಾ ಅಭಿಮಾನ ಇದೆ. ಏನು ಉತ್ಸಾಹಿ ಅವನು.. ಅಂತವ್ರಿದ್ರೆ ರಾಜ್ಯಕ್ಕೆ, ದೇಶಕ್ಕೆ ಗೌರವ ಬರುತ್ತೆ. ಅಂಥವ್ರಿಗೆ ಏನು ಸಹಾಯ ಬೇಕಾದ್ರೂ ಮಾಡ್ಬೇಕು ಅಂತ ನಮ್ಮ ಸರ್ಕಾರದಲ್ಲೂ ನಾವು ನಿರ್ಧಾರ ತಗೊಂಡಿದ್ದೀವಿ..’ ಅಂದರು.
ಒಬ್ಬ ಪುರುಷ ಪುರುಷೋತ್ತಮನಾಗಲು ಬೇಕಾದ ಎಲ್ಲವೂ ಇದ್ದೂ ಸಿದ್ಧಾರ್ಥ ದಾರುಣ ಅಂತ್ಯ ಕಂಡದ್ದು ನನ್ನ ಅರಿವಿಗೆ ನಿಲುಕದ ಸಂಗತಿ. ಕೋಟಿ ಕನಸು ಕಂಡ ಕಂಗಳು ನೇತ್ರಾವತಿಯ ಮಡಿಲಲ್ಲಿ, ಮರಳ ಘಾಸಿಗೆ ನಲುಗಿ ಮುಚ್ಚಿದುವೇಕೆ? ಗೊತ್ತಿಲ್ಲ .
ಸಿದ್ಧಾರ್ಥ ಜೊತೆ ಮಾತುಕತೆ ಆಡಿ ಹೋಗಿದ್ದ ತೇಜಸ್ವಿ ಮತ್ತೆ ಒಂದು ವಾರಕ್ಕೆ ಸಿಕ್ಕಿದ್ದರು.
‘ಆ ಸಿದ್ಧಾರ್ಥ, ತಂತ್ರಜ್ಞಾನನ ಪಳಗಿಸುತ್ತೇನೆ ಅಂತಾನೆ, ಸಾಮ್ರಾಜ್ಯ ಕಟ್ಟುತ್ತೀನಿ ಅಂತಾನೆ, ಅವನಿಗೇನಾದ್ರು ಬುದ್ದಿ ಇದೆಯಾ.. ಅದೆಲ್ಲಾ ಮಾಡಿ ಏನು ಸಾಧಿಸ್ತಾನೋ..’ ಎಂದಿನ ತಮ್ಮ ಲಘು ಹಾಸ್ಯದ ದನಿಯಲ್ಲಿ ಬದುಕಿನ ದಾರುಣ ಸತ್ಯವನ್ನೇ ನುಡಿದಿದ್ದರು.
ಈಗ ನೋಡಿದರೆ , ನಾವೆಲ್ಲ ಹಾಡಿ ಹೊಗಳುತ್ತಿರುವ ತಂತ್ರಜ್ಞಾನ, ಬೆಳೆದು ಮಾನವನ ಕೈಮೀರಿ ಹೋಗುತ್ತಿದೆ.
ಷೇರು ಪೇಟೆಯಲ್ಲಿ Analog Digital ಎಂಬ ತಂತ್ರಜ್ಞಾನ ಹೊಸತಾಗಿ ಬಂದಿದೆ. ಅಲ್ಲಿ, ಮಾನವ ಬುದ್ದಿಮತ್ತೆಯ ಅಗತ್ಯವೇ ಇಲ್ಲದೆ ಕಂಪ್ಯೂಟರ್‌ಗಳು ಸಾವಿರಾರು ಕೋಟಿ ಡಾಲರ್‌ಗಳ ವ್ಯವಹಾರವನ್ನು ಕ್ಷಣಾರ್ಧದಲ್ಲಿ ಮುಗಿಸುತ್ತವೆ. Artificial Intellegance ಹೊಂದಿದ ಪ್ರೋಗ್ರಾಮ್‌ಗಳನ್ನು ಇಲ್ಲಿ ಅಳವಡಿಸಿರುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಾಕು, ಅರ್ಧ ನಿಮಿಷದಲ್ಲಿ ಕೋಟಿಗಟ್ಟಲೆ ಹಣ ನಿರ್ನಾಮವಾಗುತ್ತದೆ.
ಈಗಾಗಲೇ ಮೂರ್ನಾಲ್ಕು ಇಂತಹ ಘಟನೆಗಳು ವರದಿಯಾಗಿವೆ.
ಇಸ್ಫೋಸಿಸ್ ಅಧ್ಯಕ್ಷರಾಗಿದ್ದ, ಸಿದ್ಧಾಥ್‌ರ್‍ರ ಆತ್ಮೀಯ ಗೆಳೆಯ, ನಂದನ್ ನೀಲಕೇಣಿ ಒಂದೆಡೆ ಬರೆಯುತ್ತಾರೆ Siddharth is a magician; he can juggle with ten balls at a time (ಸಿದ್ಧಾರ್ಥ ಒಬ್ಬ ಜಾದೂಗಾರ ; ಒಮ್ಮೆಗೇ ಹತ್ತು ಚೆಂಡುಗಳ ಜೊತೆ ಆಡಬಲ್ಲ)
ಆದರೆ ಎಲ್ಲೊ , ಯಾವಾಗಲೋ ಆ ಜಾದೂಗಾರನ ಕೈಚಳಕ ಕುಂದಿತೇನೋ? ಗೊತ್ತಿಲ್ಲ.
ಆದರೆ ಅವರು ಬಿತ್ತರಿಸಿದ ಕನಸುಗಳು ಲಕ್ಷಾಂತರ ಜನ ಸಾಮಾನ್ಯರ ಎದೆಯಲ್ಲಿ ಅನುರಣಿಸಿದ್ದಕ್ಕೆ , ಅವರ ಅಂತಿಮ ಯಾತ್ರೆಯೇ ಸಾಕ್ಷಿ. ಕರಾವಳಿ ತುದಿಯಿಂದ ಮಲೆನಾಡವರೆಗೆ ದಾರಿಯುದ್ದಕ್ಕೂ ನಿಂತ ಜನಸ್ತೋಮ; ಕಂಡಿಲ್ಲದ, ಕೇಳಿಲ್ಲದ ಮಹಿಳೆಯರು ಸಹಾ ಮೆಟ್ಟು ಬಿಚ್ಚಿಟ್ಟು ದೂರದಿಂದಲೇ ಕೈಮುಗಿದದ್ದು; ಯುವಕ ಯುವತಿಯರು ತಮ್ಮ ಹೀರೋನನ್ನು ಕಡೆಯ ಬಾರಿಗೆ ಕಣ್ಣು ತುಂಬಿಸಿಕೊಳ್ಳಲು ಮುಗಿಬಿದ್ದದ್ದು;
ಎಲ್ಲಾ ಅವರ ಸಾಧನೆಗೆ ಸಾಕ್ಷಿ.