ನವದೆಹಲಿ(ಮೇ.07): ಸುಪ್ರೀಂಕೋರ್ಟ್‌ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಪಾದನೆ ಎದುರಿಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರಿಗೆ ಸರ್ವೋಚ್ಚ ನ್ಯಾಯಾಲಯದ ಆಂತರಿಕ ಸಮಿತಿ ಕ್ಲೀನ್‌ಚಿಟ್‌ ನೀಡಿದೆ. ಮಹಿಳೆಯ ಆರೋಪಗಳಲ್ಲಿ ಸತ್ವ ಪತ್ತೆಯಾಗಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಹಾಗೂ ಇಂದಿರಾ ಬ್ಯಾನರ್ಜಿ ಅವರು ಇದ್ದ ಈ ಸಮಿತಿಯ ವರದಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಮಹಾಕಾರ್ಯದರ್ಶಿ ತಿಳಿಸಿದ್ದಾರೆ.

ಇನ್ನು ಸುಪ್ರೀಂ ವರದಿಯನ್ನು ತಿರಸ್ಕರಿಸಿರುವ ದೂರುದಾರ ಮಹಿಳೆ ಮತ್ತು ಕೆಲವು ಮಹಿಳಾ ಸಂಘಟನೆಗಳು, ಸಮಿತಿ ವರದಿ ವಿರೋಧಿಸಿ ಸುಪ್ರೀಂಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಸಮಿತಿಯ ವರದಿಯನ್ನು ದೂರುದಾರ ಮಹಿಳೆಗೆ ನೀಡದಿರುವುದು ವಿಚಾರಣೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಬೃಂದಾ ಕಾರಟ್ ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಸುಪ್ರೀಂಕೋರ್ಟ್‌ನ ಕೆಲವು ಮಹಿಳಾ ವಕೀಲರು ಮತ್ತು ಖಾಸಗಿ ಎನ್‌ಜಿಒ ಸಂಸ್ಥೆಗಳು ಭಾಗವಹಿಸಿವೆ.

ಇನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸುತ್ತಮುತ್ತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ಸುಪ್ರೀಂಕೋರ್ಟ್ ಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ರಂಜನ್‌ ಗೊಗೊಯ್‌ ಅವರು ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು. ಬಳಿಕ ನನ್ನನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಮಾಡಿದ್ದರು ಎಂದು ಸುಪ್ರೀಂಕೋರ್ಟಿನ ಮಾಜಿ ಉದ್ಯೋಗಿಯೊಬ್ಬರು ಏ.19ರಂದು ಆರೋಪ ಮಾಡಿದ್ದರು.

ಈ ಸಂಬಂಧ 22 ನ್ಯಾಯಮೂರ್ತಿಗಳಿಗೆ ಪ್ರಮಾಣಪತ್ರವನ್ನೂ ಕಳುಹಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ನ್ಯಾ. ಬೊಬ್ಡೆ ನೇತೃತ್ವದ ಆಂತರಿಕ ತನಿಖಾ ಸಮಿತಿ ರಚನೆ ಮಾಡಿತ್ತು.