ನವದೆಹಲಿ(ಏ.20): ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದು, ಭಾರತದ ನ್ಯಾಯಾಂಗ ವ್ಯವಸ್ಥೆ ಬೆಚ್ಚಿ ಬಿದ್ದಿದೆ.

ಗೊಗೋಯ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸುಪ್ರೀಂ ಕೋರ್ಟ್ ನ ಕಿರಿಯ ಸಹಾಯಕಿಯಾಗಿದ್ದ ಮಹಿಳೆಯೊಬ್ಬರು 22 ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.

2018 ಅಕ್ಟೋಬರ್ 10 ಮತ್ತು 11ರಂದು ಮುಖ್ಯ ನ್ಯಾಯಾಧೀಶ ಗೊಗೋಯ್ ತಮ್ಮ ಗೃಹ ಕಛೇರಿಯಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಆದರೆ ತಮ್ಮ ಮೇಲಿನ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿರುವ ರಂಜನ್ ಗೊಗೋಯ್, ನ್ಯಾಯಾಂಗ ವ್ಯವಸ್ಥೆ ಈ ಹಿಂದೆಂದೂ ಕಾಣದ ರೀತಿಯಲ್ಲಿ ಅಪಾಯ ಎದುರಿಸುತ್ತಿದೆ ಎಂದು ಹೇಳಿದ್ದಾರೆ.

20 ವರ್ಷಗಳಿಂದ ನ್ಯಾಯಾಧೀಶನಾಗಿ ಕೆಲಸ ಮಾಡುತ್ತಿದ್ದು, ನನ್ನ ಬ್ಯಾಂಕ್ ಬ್ಯಾಲೆನ್ಸ್ ಕೇವಲ 6.80 ಲಕ್ಷ ಇದೆ. ನನ್ನ ಕ್ಲರ್ಕ್ ಕೂಡ ಇದಕ್ಕಿಂತ ಹೆಚ್ಚಿನ ಹಣ ಹೊಂದಿದ್ದಾರೆ ಎಂದು ಗೊಗೋಯ್ ಹೇಳಿದ್ದು, ನನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಲಾಗದೇ ಈ ರೀತಿಯ ಕೀಳು ಆರೋಪ ಹೊರಿಸಿ ತೇಜೋವಧೆಗೆ ಮುಂದಾಗಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಸ್ವಾತಂತ್ರ್ಯದ ಮೇಲೆ ಮಹತ್ತರವಾದ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯದ ಆಧಾರದ ಮೇಲೆ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ನೇತೃತ್ವದಲ್ಲಿ ವಿಶೇಷ ಪೀಠ ರಚನೆಯಾಗಿದೆ.