ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ಕೆಎಸ್‌ಯು ನಾಯಕ ಬಿಥುಲ್ ಬಾಲನ್ ಅವರ ಮನೆ ಮೇಲೆ ದುಷ್ಕರ್ಮಿಗಳು ಸ್ಫೋಟಕ ಎಸೆದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ವಿದ್ಯಾರ್ಥಿ ನಾಯಕ ಬಿಥುಲ್ ಬಾಲನ್ ನಿವಾಸದ ಮೇಲೆ ಸ್ಫೋಟಕ ಎಸೆತ:

ಕೋಝಿಕ್ಕೋಡ್: ಕೆಎಸ್‌ಯು ಪ್ರತಿಭಟನೆ ವೇಳೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಕೇರಳ ವಿದ್ಯಾರ್ಥಿ ಒಕ್ಕೂಟದ(ಕೆಎಸ್‌ಯು) ನಾಯಕ ಬಿಥುಲ್ ಬಾಲನ್ ಅವರ ಮನೆಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಸ್ಫೋಟಕ ಎಸೆದಿದ್ದಾರೆ.

Add Asianetnews Kannada as a Preferred SourcegooglePreferred

ವಡಕಾರ ಬಳಿಯ ತಿರುವಳ್ಳೂರಿನಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮುಸುಕುಧಾರಿ ವ್ಯಕ್ತಿಗಳು ಮನೆ ಸಮೀಪ ಬಂದು ಕಾಂಪೌಂಡ್‌ಗೆ ಸ್ಪೋಟಕ ಎಸೆದು ಪರಾರಿಯಾಗಿದ್ದಾರೆ. ಮನೆ ಮುಂದಿನ ಸಿಸಿಟಿವಿ ದೃಶ್ಯಗಳಲ್ಲಿ ಘಟನೆ ಸೆರೆಯಾಗಿದೆ. ಗೇಟ್ ಬಳಿ ನಿಂತಿದ್ದ ಗುಂಪು ಕಟ್ಟಡದ ಕಡೆಗೆ ಸ್ಪೋಟಕ ವಸ್ತುವನ್ನು ಎಸೆಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

ಘಟನೆ ನಡೆದ ಸಮಯದಲ್ಲಿ ಬಿಥುಲ್ ಅವರ ಪೋಷಕರು ಮನೆಯೊಳಗಿದ್ದರು. ಸ್ಫೋಟಕ ಎಸೆತದಿಂದ ಉಂಟಾದ ಸಣ್ಣ ಸ್ಪೋಟದಿಂದ ಕಾಂಕ್ರೀಟ್ ಸನ್‌ಶೇಡ್‌ನ ಒಂದು ಭಾಗಕ್ಕೆ ಹಾನಿಯಾಗಿದ್ದು, ಕಿಟಕಿ ಗಾಜುಗಳು ಒಡೆದಿವೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಬಿಥುಲ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಸ್ಪೋಟಕ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿವರವಾದ ತನಿಖೆ ಆರಂಭಿಸಲಾಗಿದ್ದು, ದಾಳಿಕೋರರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ತನ್ನ ತಾಯಿಯ ಸಾವು ಜೀವನದ ಅತ್ಯಂತ ನೋವಿನ ಕ್ಷಣ : ಮೋಹನ್‌ಲಾಲ್ ಜೊತೆ ಮನಸ್ಸು ಬಿಚ್ಚಿ ಮಾತನಾಡಿದ ಕೇರಳ ಸಿಎಂ

ಇತ್ತ ಬಂಧಿಸಲ್ಪಟ್ಟ ಬಿಥುಲ್ ಅವರನ್ನು ರಿಮ್ಯಾಂಡ್‌ನಲ್ಲಿ ಇರಿಸಲಾಗಿದೆ. ಈ ನಡುವೆ, ಕಣ್ಣೂರಿನಲ್ಲಿ ಕೆಎಸ್‌ಯು ಕಾರ್ಯಕರ್ತರ ಪ್ರತಿಭಟನೆಯ ಸಂದರ್ಭದಲ್ಲಿ ಗಾಯಗೊಂಡಿದ್ದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜಿನಿಂದ ಬಿಡುಗಡೆ ಮಾಡಲಾಗಿದೆ. ಸಚಿವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾತ್ರಿ ನಡೆದ ಆನ್‌ಲೈನ್ ವೈದ್ಯಕೀಯ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಚಿವರು ಮತ್ತು ಅವರ ತಂಡ ಸಂಜೆ 4 ಗಂಟೆ ಸುಮಾರಿಗೆ ರಸ್ತೆ ಮೂಲಕ ತಿರುವನಂತಪುರಂಗೆ ಮರಳಿದ್ದಾರೆ. ಅವರು ತಮ್ಮದೇ ವಾಹನದಲ್ಲಿ ಹೊರಟು ಹೋಗಿದ್ದು,. ರಾತ್ರಿಯ ಹೊತ್ತಿಗೆ ಸಚಿವರ ಆರೋಗ್ಯ ಸ್ಥಿತಿ ಮತ್ತಷ್ಟು ಸುಧಾರಿಸಿದೆ. ಅವರ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ವೈದ್ಯಕೀಯ ಮಂಡಳಿಯೂ ತಿಳಿಸಿದೆ.

ಇದನ್ನೂ ಓದಿ: ಸೊಂಟಕ್ಕೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿದು ಮೇಕೆ ಮರಿಯ ರಕ್ಷಿಸಿದ ಪುಟ್ಟ ಬಾಲಕ

ತನಿಖಾ ತಂಡವು ಸಚಿವರ ಹೇಳಿಕೆಯನ್ನು ದಾಖಲಿಸಲು ಇಂದು ಮತ್ತೆ ಅನುಮತಿ ಕೋರಲಿದೆ. ಸಚಿವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಕಳೆದ ಕೆಲವು ದಿನಗಳಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಕೆಎಸ್‌ಯು ಪ್ರತಿಭಟನಾ ಸ್ಥಳದ ಕ್ಯಾಮೆರಾ ದೃಶ್ಯಾವಳಿಗಳನ್ನು ಕೋರಿ ತನಿಖಾ ತಂಡವು ಆರ್‌ಪಿಎಫ್‌ಗೆ ಅರ್ಜಿ ಸಲ್ಲಿಸಿದೆ.