ಬೆಂಗಳೂರು(ಸೆ.13): ಕಳೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷ, ಕೊನೆಗೂ ತನ್ನ ಸೋಲಿನ ಪರಾಮರ್ಶೆ ನಡೆಸಿದೆ. ಸೋಲಿಗೆ ಕಾರಣ ಹುಡುಕಿರುವ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಬಸವರಾಜ್ ರಾಯರೆಡ್ಡಿ ನೇತೃತ್ವದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ, ನಾಯಕರ ಸ್ವಪ್ರತಿಷ್ಠೆಯಿಂದಾಗಿ ಸೋಲಿನ ರುಚಿ ಅನುಭವಿಸುವಂತಾಯಿತು ಎಂದು ಸ್ಪಷ್ಟವಾಗಿ ಹೇಳಿದೆ.

"

ಲೋಕಸಭೆ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣವಾಗಿದ್ದು, ಸ್ವಪ್ರತಿಷ್ಠೆ ಕಾರಣಕ್ಕೆ ಚುನಾವಣೆಯಲ್ಲಿ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು ಎಂದು ಸತ್ಯ ಶೋಧನಾ ವರದಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ನಾಯಕರ ನಡುವಿನ ತಿಕ್ಕಾಟದಿಂದಾಗಿ ಮತಗಳ ಕ್ರೂಢಿಕರಣಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ರಾಯರೆಡ್ಡಿ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖವಾಗಿ ಕೋಲಾರದಲ್ಲಿ ಪಕ್ಷದ ಅಭ್ಯರ್ಥಿ ಸೋಲಲು ರಮೇಶ್ ಕುಮಾರ್ ಹಾಗೂ ಮುನಿಯಪ್ಪ ನಡುವಿನ ಮುಸುಕಿನ ಗುದ್ದಾಟವೇ ಕಾರಣ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅದರಂತೆ ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡ ಸೋಲಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ನಡೆಸಿದ ಷಡ್ಯಂತ್ರವೇ ಕಾರಣ ಎಂದು ಆರೋಪಿಸಲಾಗಿದೆ.

ದೇವೇಗೌಡರನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ತಂಡ ಕಟ್ಟಿಕೊಂಡು ಮನೆ ಮನೆಗೆ ಹಣ ಹಂಚಿ ಬಿಜೆಪಿಗೆ ಮತ ಹಾಕುವಂತೆ ನೋಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ. ಕೆ.ಎನ್ ರಾಜಣ್ಣ ಹಾಗೂ ಇತರ ಮಾಜಿ ಕಾಂಗ್ರೆಸ್ ಶಾಸಕರು ಗೌಡರ ಸೋಲಿಗೆ ಟೊಂಕ ಕಟ್ಟಿ ನಿಂತಿದ್ದರು ಎಂದು ಆರೋಪಿಸಲಾಗಿದೆ.

ಇನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದ್ಯ ಅನರ್ಹರಾಗಿರುವ ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಮುನಿರತ್ನ ಸೇರಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡರ ಸೋಲಿಗೆ ಕಾರಣರಾದರು ಎಂದು ರಾಯರೆಡ್ಡಿ ನೇತೃತ್ವದ ಸಮಿತಿ ತಿಳಿಸಿದೆ. ಆದರೆ ಕೆ.ಗೋಪಾಲಯ್ಯ ಪ್ರಾಮಾಣಿಕವಾಗಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದು ಸಮಿತಿ ಹೇಳಿದೆ.

ಇನ್ನು ಕಲಬುರಗಿಯಲ್ಲಿ ತಮ್ಮ ಸೋಲಿಗೆ ಮಲ್ಲಿಕಾರ್ಜುನ್ ಖರ್ಗೆ ಯಾರನ್ನೂ ದೂಷಿಸಿಲ್ಲ. ಆದರೆ ಕಾಂಗ್ರೆಸ್ ನಾಯಕರು ಪ್ರತ್ಯೇಕ ಲಿಂಗಾಯತ ಧರ್ಮದ ಪರ ಕೆಲಸ ಮಾಡಿದ್ದು ಹಾಗೂ ಉತ್ತರ ಕರ್ನಾಟಕದಲ್ಲಿ ಮೋದಿ ಹವಾ ಹೆಚ್ಚಿದ್ದರಿಂದ ತಮ್ಮ ಸೋಲಾಯಿತು ಎಂದು ಖರ್ಗೆ ಸಮಿತಿಗೆ ಉತ್ತರಿಸಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೇ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೂ ಕೂಡ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಕಾರಣ ಎಂದು ಸತ್ಯ ಶೋಧನಾ ಸಮಿತಿ ಹೇಳಿದೆ. ಜೆಡಿಎಸ್ ಮೈತ್ರಿ ಬಿಟ್ಟು ಏಕಾಂಗಿ ಹೋರಾಟ ನಡೆಸಿದ್ದರೆ ಸೋಲಾಗಿದ್ದರೂ ಪಕ್ಷದ ಸಂಘಟನೆ ಬಲಗೊಳ್ಳುತ್ತಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಅಭ್ಯರ್ಥಿ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಸತ್ಯ ಶೋಧನಾ ಸಮಿತಿ ತನ್ನ ವರದಿ ಸಿದ್ಧಪಡಿಸಿದೆ. ಇದೇ ಅಕ್ಟೋಬರ್ 2 ರಂದು ಕೆಪಿಸಿಸಿಗೆ ಈ ವರದಿ ಸಲ್ಲಿಕೆಯಾಗಲಿದೆ ಎಂದು ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.