ತುಮಕೂರು[ಜೂ.07]: ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದೇ ಕಾಂಗ್ರೆಸ್‌ ಪಕ್ಷದ ಹೋನಾಯ ಸೋಲಿಗೆ ಕಾರಣ ಎಂದು ರಂಭಾಪುರಿ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇಳೆ ಮಾತನಾಡಿದ ಶ್ರೀಗಳು, ಬಹುಸಂಖ್ಯಾತ ವೀರಶೈವರನ್ನು ಒಡೆಯುವ ಕೆಲಸವನ್ನು ಕೆಲ ಕಾಂಗ್ರೆಸ್‌ ಧುರೀಣರು ಮಾಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಪಜಯವಾಗಲು ಇದೇ ಕಾರಣ. ಈ ವಿಚಾರವನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಅವರಿಗೂ ಹೇಳಿದ್ದೇನೆ ಎಂದು ತಿಳಿಸಿದರು.

ಯಾವುದೇ ರಾಜಕಾರಣಿ ಯಾವುದೇ ಧರ್ಮದಲ್ಲಿ ಹಸ್ತಕ್ಷೇಪ ಮಾಡಬಾರದು. ಧರ್ಮದ ಭಾವನೆಗೆ ಧಕ್ಕೆ ತರಬಾರದು ಎಂದರು. ಎಲ್ಲಾ ಧರ್ಮ, ಜನಾಂಗಗಳ ಆದರ್ಶಗಳನ್ನು ಉಳಿಸಿಕೊಂಡು ಹೋಗಬೇಕು. ಈ ವಿಚಾರ ಇದೀಗ ಪರಮೇಶ್ವರ್‌ ಅವರಿಗೆ ವೇದ್ಯವಾಗಿದೆ ಎಂದರು.

ಲಿಂಗಾಯತ ಸಂಸದರಿಗೆ ಕೇಂದ್ರದಲ್ಲಿ ಇನ್ನೂ ಪ್ರಾತಿನಿಧ್ಯ ಸಿಗಬೇಕು. 9 ಮಂದಿ ಲಿಂಗಾಯತ ಸಂಸದರು ಆಯ್ಕೆಯಾಗಿದ್ದಾರೆ. ಒಬ್ಬರಿಗೆ ಮಾತ್ರ ರಾಜ್ಯ ಸಚಿವ ಖಾತೆ ಕೊಡಲಾಗಿದೆ. ಇದು ಸಾಲುವುದಿಲ್ಲ. ತುಮಕೂರು ಸಂಸದ ಜಿ.ಎಸ್‌.ಬಸವರಾಜುಗೆ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ಕೊಡಬೇಕು. ಸಚಿವ ಸ್ಥಾನ ಕೊಟ್ಟರೆ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಬಲ್ಲದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್‌ಗೆ ಗಮನಕ್ಕೆ ತಂದು ಬಸವರಾಜುಗೆ ಸಚಿವ ಸ್ಥಾನ ಕಲ್ಪಿಸಲಿ ಎಂದು ಆಗ್ರಹಿಸಿದರು.