Asianet Suvarna News Asianet Suvarna News

ಬೇರುಹುಳುಗಳ ನಿಯಂತ್ರಣಕ್ಕೆ ಅಡಕೆ ಬೆಳೆಗಾರರಿಗೆ ಸಲಹೆ

ಅಡಕೆ ಬೆಳೆಗೆ ಕಂಟಕವಾಗಿರುವ ಬೇರು ಹುಳುಗಳ ಸಮಸ್ಯೆ ನಿಯಂತ್ರಣಕ್ಕೆ ಜಿಲ್ಲಾ ತೋಟಗಾರಿಕೆ ಇಲಾಖೆಯು ಅಡಕೆ ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಅಡಕೆ ಬೆಳೆಯನ್ನು ಬೇರು ಹುಳುಗಳಿಂದ ರಕ್ಷಿಸಲು ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳನ್ನೂ ತಿಳಿಸಲಾಗಿದೆ.

Precautions to control Root aphids
Author
Bangalore, First Published Jul 12, 2019, 8:22 AM IST

ಶಿವಮೊಗ್ಗ(ಜು.12): ಅಡಕೆ ಬೆಳೆಗೆ ಕಂಟಕವಾಗಿರುವ ಬೇರು ಹುಳುಗಳ ಸಮಸ್ಯೆ ನಿಯಂತ್ರಣಕ್ಕೆ ಜಿಲ್ಲಾ ತೋಟಗಾರಿಕೆ ಇಲಾಖೆ ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಮುಖ್ಯವಾಗಿ ತೋಟಗಳಲ್ಲಿ ನೀರು ನಿಲ್ಲುವುದು ಹಾಗೂ ತೋಟ ಸ್ವಚ್ಛವಾಗಿಟ್ಟುಕೊಳ್ಳದಿರುವುದು ಮತ್ತು ಅಗತ್ಯ ಪ್ರಮಾಣದ ಬೇವಿನ ಹಿಂಡಿ ಅಥವಾ ಬೇವಿನ ಎಣ್ಣೆಯನ್ನು ಬೇರುಗಳಿಗೆ ಒದಗಿಸದಿರುವುದು ಬೇರುಹುಳುಗಳ ಉತ್ಪತ್ತಿ ಹಾಗೂ ಹೆಚ್ಚಳಕ್ಕೆ ಕಾರಣವಾಗಿದೆ.

ಬೇರು ಹುಳುಗಳು ಮರದ ಮೂಲವಾದ ಬೇರುಗಳನ್ನು ತಿಂದು ಹಾಕುವ ಮೂಲಕ ಮರದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತವೆ. ಇದರಿಂದಾಗಿ ಮರಗಳು ಸೊರಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕೊನೆಯ ಹಂತದಲ್ಲಿ ಮರದ ತಲೆಭಾಗ ಸಂಪೂರ್ಣ ಸಪುರಗೊಂಡು ಮುರಿದು ಬಿಳುತ್ತದೆ. ಈ ಕುರಿತು ರೈತರು ಮುಂಜಾಗರೂಕತೆ ವಹಿಸಿದಲ್ಲಿ ಬೇರು ಹುಳುಗಳ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದಾಗಿದೆ.

ನಿಯಂತ್ರಣ ಕ್ರಮಗಳು:

1) ತೋಟದಲ್ಲಿ ಬಸಿಕಾಲುವೆ ನಿರ್ಮಿಸಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಕಳೆ ಬೆಳೆಯದಂತೆ ಕ್ರಮಕೈಗೊಳ್ಳುವುದು, ತೋಟ ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಬೇರು ಹುಳುಗಳು ಉತ್ಪತ್ತಿಯಾಗದಂತೆ ತಡೆಯಬಹುದಾಗಿದೆ.

2) ಅಡಕೆ ಸಸಿ ಅಥವಾ ಮರಗಳ ಸುತ್ತ ಹುಟ್ಟುವ ಹುಲ್ಲನ್ನು ಮಳೆಗಾಲದ ಆರಂಭಕ್ಕೂ ಮುನ್ನವೇ ತೆಗೆದುಹಾಕುವುದು, ಜುಲೈ ಹಾಗೂ ಆಗಸ್ಟ್‌ ತಿಂಗಳ ಅವಧಿಯಲ್ಲಿ ಸಂಜೆ 6 ರಿಂದ 7.30ರ ನಡುವೆ ಹಾರಾಡುವ ದುಂಬಿಗಳ ನಿಯಂತ್ರಣಕ್ಕೆ ಟ್ರಾಪ್‌ಗಳ ಬಳಕೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವುದು.

3) ಪ್ರತಿ ಮರಗಳ ಬುಡಕ್ಕೂ ವರ್ಷಕ್ಕೊಮ್ಮೆ 250 ಗ್ರಾಂ ಬೇವಿನ ಹಿಂಡಿ ನೀಡುವುದು ಹಾಗೂ ಅಗತ್ಯವಿದ್ದರೆ ನೀರಿನೊಂದಿಗೆ ಬೇವಿನೆಣ್ಣೆ ಮಿಶ್ರ ಮಾಡಿ ಬುಡಗಳಿಗೆ ಸಿಂಪಡಿಸುವುದು.

4) ಪ್ರತಿ ಲೀಟರ್‌ ನೀರಿಗೆ 2 ಮಿ.ಲೀ ಕ್ಲೋರೋಫೈರಿಫಾಸ್‌ (20ಇ.ಸಿ) ಅಥವಾ 0.5 ಮಿ.ಲೀ ಇಮಿಡಾಕ್ಲೋಪ್ರಿಡ್‌ ಬೆರೆಸಿ ಪ್ರತಿ ಮರಗಳ ಬುಡಕ್ಕೂ 2-3 ಲೀಟರ್‌ ದ್ರಾವಣ ಹಾಕವುದು. ಇಲ್ಲವೇ 20 ಗ್ರಾಂ ಫೋರೆಟ್‌ ಹಾಕುವುದರಿಂದ ಬೇರುಹುಳುಗಳ ಸಮಸ್ಯೆ ನಿಯಂತ್ರಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಳೆಗಾರನ ಕಣ್ಣಲ್ಲಿ ನೀರು ತರಿಸಿದ ಕೊಳೆರೋಗ

Follow Us:
Download App:
  • android
  • ios