ಬೆಳೆಗಾರನ ಕಣ್ಣಲ್ಲಿ ನೀರು ತರಿಸಿದ ಕೊಳೆರೋಗ
ಧಾರಾಕಾರ ಮಳೆ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ನಿದ್ದೆ ಕೆಡಿಸಿದೆ. ಅಡಿಕೆಗೆ ಕೊಳೆ ರೋಗ ಅಂಟಿಕೊಡಿದ್ದು ಸದ್ಯಕ್ಕೆ ಸುರಿಯುತ್ತಿರುವ ಭಾರೀ ಮಳೆಗೆ ಕೃಷಿಕರು ಏನೂ ಮಾಡಲಾರದ ಸ್ಥಿತಿಗೆ ತಲುಪಿದ್ದಾರೆ.
ಯಲ್ಲಾಪುರ[ಆ.2] ತಾಲೂಕಿನ ವಜ್ರಳ್ಳಿ ಮತ್ತು ಇಡಗುಂದಿ ಗ್ರಾಪಂ ವ್ಯಾಪ್ತಿಯ ವಿವಿಧ ಪ್ರದೇಶಗಳ ತೋಟದಲ್ಲಿ ಅಡಕೆ ಬೆಳೆ ಕೊಳೆರೋಗಕ್ಕೆ ತುತ್ತಾಗುತ್ತಿದ್ದು, ಮರಗಳ ಬುಡದಲ್ಲಿ ಸಣ್ಣ ಅಡಕೆಗಳು
ರಾಶಿ ರಾಶಿಯಾಗಿ ಉದುರಿವೆ.
ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಕೊಳೆರೋಗವನ್ನು ಹತೋಟಿಗೆ ತರುವಲ್ಲಿ ಬೆಳೆಗಾರರು ಹರಸಾಹಸ ಪಡುತ್ತಿದ್ದರೂ ಅಡಕೆ ಕೊನೆಗಳು ಖಾಲಿಯಾಗುವ ಹಂತ ತಲುಪಿದೆ. ಕೊಳೆಗೆ ತುತ್ತಾದ
ಅಡಕೆಗಳನ್ನು ಸಂಗ್ರಹಿಸಿ ತೋಟದಿಂದ ದೂರಕ್ಕೆ ವಿಲೇವಾರಿ ಮಾಡಿದರೂ ಕೊಳೆರೋಗದ ಸೋಂಕಿನ ತೀವ್ರತೆಯನ್ನುತಡೆಗಟ್ಟಲಾಗದ ರೈತರು ಹೈರಾಣಾಗಿದ್ದಾರೆ.
ಇನ್ನೂ ಎರಡು ತಿಂಗಳು ಮಳೆಗಾಲ ಇರುವುದರಿಂದ ಇರುವ ಅಡಕೆ ಬೆಳೆಯನ್ನು ಸಂರಕ್ಷಿಸುವ ಕುರಿತು ತೋಟಿಗರು ಚಿಂತಿಸುತ್ತಿದ್ದಾರೆ. ತೋಟದ ಜವಳು ಭೂಮಿಯಲ್ಲಿ ಕಾಲಿಟ್ಟ ಸ್ಥಳಗಳಲ್ಲಿ ನೀರಿನ ಝರಿಗಳು ಚಿಮ್ಮುತ್ತಿದ್ದು, ತೋಟದಿಂದ ಬಸಿಗಾಲುವೆಗಳ ಮೂಲಕ ನೀರನ್ನು ಹೊರಬಿಡುವುದೇ ಕಷ್ಟಸಾಧ್ಯವಾಗುತ್ತಿದೆ.
ನೂರಾರು ಕುಟುಂಬಗಳು ವಾಸಿಸುವ ಈ ಹಸಿರು ಕಣಿವೆಯ ಗುಡ್ಡಗಾಡಿನ ಪ್ರದೇಶದ ಬಹು ಮುಖ್ಯ ಬೆಳೆಯಾದ ಅಡಕೆಯ ಕೊಳೆರೋಗದ ಬಾಧೆ ಎಲ್ಲರನ್ನೂ ಕಾಡುತ್ತಿದೆ. ಮಧ್ಯಮ ವರ್ಗದವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಕೊಳೆರೋಗದ ನಿಯಂತ್ರಣದ ಸವಾಲುಗಳು ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ. ಕೃಷಿಕರಿಗೆ ಆರ್ಥಿಕ ಬೆನ್ನೆಲುಬಾಗಿರುವ ಅಡಕೆ ಬೆಳೆಯು ಈ ಸಲದ ಕೊಳೆರೋಗದ ಪರಿಣಾಮದಿಂದ ಇಳುವರಿ ಕುಸಿದರೆ ಏನು ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ.