#JustAsking ನಂತರ ಮತ್ತೊಂದು ಅಭಿಯಾನಕ್ಕೆ ಮುನ್ನುಡಿ ಬರೆದ ಪ್ರಕಾಶ್ ರೈ

Prakash rai to begin new campaign what can be done after Just asking
Highlights

ತಾವು ಯಾವುದೇ ಸರಕಾರ ಬಂದರೂ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲವೆಂದು ಹೇಳಿದ್ದ ನಟ ಚಿಂತಕ ಪ್ರಕಾಶ್ ರೈ, ಚುನಾವಣಾ ಫಲಿತಾಂಶದ ನಂತರ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳನ್ನು ಪ್ರಶ್ನಿಸಿ 'ಏನು ಮಾಡೋಣ?' ಎಂಬ ಹೊಸ ಅಭಿಯಾನವನ್ನು ಆರಂಭಿಸುತ್ತಿದ್ದಾರೆ. ಇದು ಯಾರ ವಿರುದ್ಧ?

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರಾಜ್ಯಾದ್ಯಂತ ಸಂಚರಿಸಿ, ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಪ್ರಕಾಶ್ ರೈ #JustAsking ಅಭಿಯಾನ ನಡೆಸಿದ್ದರು. ತಾವು ಯಾವುದೇ ಸರಕಾರ ಬಂದರೂ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲವೆಂದು ಹೇಳಿದ್ದ ರೈ, ಇದೀಗ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಸರಕಾರ ರಚಿಸಲು ಮುಂದಾಗಿದ್ದನ್ನು ಪ್ರಶ್ನಿಸುತ್ತಿದ್ದಾರೆ.

'ಸಂವಿಧಾನ ಉಲಿಸಿ,' #JustAsking ನಂತರ 'ಏನು ಮಾಡೋಣ?' ಎಂಬ ನೂತನ ಅಭಿಯಾನಕ್ಕೆ ನಾಂದಿ ಹಾಡುತ್ತಿದ್ದು, ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಪ್ರಜಾಪ್ರಭುತ್ವವನ್ನು ಅವಮಾನಿಸುತ್ತಿದ್ದಾರೆಂದು ರೈ ಆರೋಪಿಸಿದ್ದಾರೆ.

'ನಮ್ಮ ಕ್ಷೇತ್ರದ ಪ್ರತಿನಿಧಿಗಳ ಮೇಲೆ ನಾವಿಟ್ಟ ನಂಬಿಕೆಯನ್ನು, ಇವರು ಇನ್ಯಾರಿಗೋ ಮಾರಿಕೊಳ್ಳುವುದನ್ನು, ಬೇರೆ ದಾರಿಯಿಲ್ಲದೆ ಈ ರಾಜಕಾರಣಿಗಳ ದೊಂಬರಾಟವನ್ನು ನಾವು ಒಪ್ಪಿಕೊಳ್ಳುವಂತೆ ನಮ್ಮ ಮೇಲೆ ಅಭಿಪ್ರಾಯ ಹೇರುವುದನ್ನು ನಾವು ಪ್ರಶ್ನಿಸದಿದ್ದರೆ, ನಮ್ಮ ಈ ಅಸಹಾಯಕತೆಗೆ, ನಮ್ಮ ಅಮಾಯಕತೆ ದುರುಪಯೋಗಕ್ಕೆ, ಯಾರು ಕಾರಣವೆಂದು ನಾವು ಬೇಗ ಗೊತ್ತು ಮಾಡಿಕೊಳ್ಳದಿದ್ದರೆ, ಮತ್ತೊಮ್ಮೆ ಸೋಲುವುದು ನಾವೇ!!' ಎಂದು ರೈ ಹೇಳಿದ್ದಾರೆ.

'ಯಾರಿಗೂ ಬಹುಮತ ಬಾರದ ಚುನಾವಣಾ ಫಲಿತಾಂಶದ ನಂತರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್...ಎಲ್ಲರೂ ಒಬ್ಬರನ್ನೊಬ್ಬರು ಕೊಳ್ಳುವ-ಮಾರುವ ವ್ಯಾಪಾರಕ್ಕಿಳಿದಿದ್ದಾರೆ. ನಮ್ಮ ಅನುಮತಿಯಿಲ್ಲದೆ, ತಮ್ಮ ಶಕ್ತ್ಯಾನುಸಾರ ದಕ್ಕಿದ್ದನ್ನು ಹಂಚಿಕೊಂಡು, ಭಿನ್ನಾಭಿಪ್ರಾಯಗಳನ್ನು ಮರೆತು, ವಿಧಾನಸೌಧದೊಳಗೆ ಒಂದಾಗಿ ಓಡಾಡುತ್ತ ಮುಂದಿನ ಚುನಾವಣೆವರೆಗೆ ಆರಾಮಾಗಿರುತ್ತಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎದುರು ಕೊನೆಗೂ ಸೋತದ್ದು ನಾವು...' ಎಂದು ಬೇಸರ ವ್ಯಕ್ತಪಡಿಸಿರುವ ರೈ, ಹೊಸ ಅಭಿಯಾವನ್ನು ಆರಂಭಿಸುತ್ತಿದ್ದಾರೆ.
 

loader