ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ? ಈ ಚರ್ಚೆ ಶುರುವಾಗಿದೆ. ರೇಂಜ್ ರೋವರ್, ಬೆಂಜ್ ಸೇರಿದಂತೆ ಇತರ ಶಸ್ತ್ರಸಜ್ಜಿತ ಹಾಗೂ ಸುರಕ್ಷಿತ ವಾಹನಗಳಿದ್ದರೂ ಫಾರ್ಚನರ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ನವದೆಹಲಿ (ಡಿ.05) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತದಲ್ಲಿದ್ದಾರೆ. ನಿನ್ನೆ (ಡಿ.04) ಸಂಜೆ ಭಾರತಕ್ಕೆ ಆಗಮಿಸಿರುವ ಪುಟಿನ್, ಪ್ರಧಾನಿ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ವಿಶೇಷ ಅಂದರೆ ವ್ಲಾದಿಮಿರ್ ಪುಟಿನ್ ದೆಹಲಿ ಪಾಲಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದರು. ಪ್ರಧಾನಿ ಮೋದಿ ಶಿಷ್ಟಾಚಾರ ಮುರಿದು ಪುಟಿನ್ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಪುಟಿನ್ ಆತ್ಮೀಯವಾಗಿ ಬರ ಮಾಡಿಕೊಂಡ ಪ್ರಧಾನಿ ಮೋದಿ, ಬಳಿಕ ಆರ್ಮರ್ಡ್ ವಾಹನ ಬದಲು ಟೋಯೋಟಾ ಫಾರ್ಚುನರ್ ಕಾರಿನಲ್ಲಿ ಉಭಯ ನಾಯಕರು ಪ್ರಯಾಣಿಸಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಅತೀ ಹಚ್ಚು ಜೀವ ಬೆದರಿಕೆ ಎದುರಿಸುತ್ತಿರುವ ನಾಯಕ. ಆದರೂ ಸಾಮಾನ್ಯ ಫಾರ್ಚುನರ್ ಕಾರಿನಲ್ಲಿ ಮೋದಿ ಹಾಗೂ ಪುಟಿನ್ ಪ್ರಯಾಣಿಸಿದ ಹಿಂದಿನ ಮಾಹಿತಿಗಳು ಬಯಲಾಗಿದೆ.
ಆರ್ಮರ್ಡ್ ವಾಹನ ಬದಲು ಫಾರ್ಚುನರ್
ಪುಟಿನ್ ಪ್ರಯಾಣಿಸುವ ಲಿಮೋಸಿನ್ ವಿಶ್ವದಲ್ಲೇ ಅತೀ ಹೆಚ್ಚು ಸುರಕ್ಷಿತ ವಾಹನ. ಇತ್ತ ಪ್ರಧಾನಿ ಮೋದಿ ಕೂಡ ಗರಿಷ್ಠ ಭದ್ರತೆ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಇಬ್ಬರು ನಾಯಕರು ಆರ್ಮರ್ಡ್ ವಾಹನ ಬಿಟ್ಟು ಟೊಯೋಟಾ ಫಾರ್ಚುನರ್ ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸಿದ್ದಾರೆ. ಪಾಲಂ ವಿಮಾನ ನಿಲ್ದಾಣದಿಂದ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ನಿವಾಸಕ್ಕೆ ಬಿಳಿ ಬಣ್ಣದ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ಕಾರಿನ ನಂಬರ್ ಪ್ಲೇಟ್ ಮೆರೆಮಾಚಲಿಲ್ಲ
ಸಾಮಾನ್ಯವಾಗಿ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಪ್ರತಿಷ್ಠಿತರು ಪ್ರಯಾಣಿಸುವಾಗ ಕಾರಿನ ನಂಬರ್ ಪ್ಲೇಟ್ ಮರೆ ಮಾಚಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಈ ರೀತಿ ಮಾಡಲಾಗುತ್ತದೆ. ಆದರೆ ಮೋದಿ ಹಾಗೂ ಪುಟಿನ್ MH01EN5795 ರಿಜಿಸ್ಟ್ರೇಶನ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಈ ಕಾರು 2024ರಲ್ಲಿ ನೋಂದಣಿಯಾಗಿದೆ. ಬಳಿ ಬಣ್ಣದ ಟೋಯೋಟಾ ಫಾರ್ಚುನರ್ 4 MT ಡೀಸೆಲ್ ಕಾರು ಇದಾಗಿದೆ.
ಎಸ್‌ಪಿಜಿ ಹಾಗೂ ಎಫ್‌ಎಸ್ಒ ಸಮ್ಮತಿ
ಭಾರತದ ಸ್ಪೆಷಲ್ ಪ್ರೊಟೆಕ್ಷನ್ ಫೋರ್ಸ್ ಹಾಗೂ ರಷ್ಯಾದ ಫೆಡರಲ್ ಪ್ರೊಟೆಕ್ಷನ್ ಸರ್ವೀಸ್ (FSO) ಭದ್ರತಾ ಪಡೆಗಳು ಆರ್ಮರ್ಡ್ ವಾಹನ ಬದಲು ಇತರ ವಾಹನದಲ್ಲಿ ಮೋದಿ ಹಾಗೂ ಪುಟಿನ್ ಪ್ರಯಾಣಿಸಲು ಸಮ್ಮತಿಸಿತ್ತು. ಸಾಮಾನ್ಯವಾಗಿ ಉಭಯ ನಾಯಕರು ಆರ್ಮರ್ಡ್ ವಾಹನದಲ್ಲಿ ಪ್ರಯಾಣ ಮಾಡುತ್ತಾರೆ, ಮೋದಿ ವಾಹನ, ಅಥವಾ ಪುಟಿನ್ ವಾಹನದಲ್ಲಿ ಪ್ರಯಾಣಿಸುತ್ತಾರ ಅನ್ನೋದು ಎಲ್ಲರ ಊಹೆಯಾಗಿತ್ತು. ಈ ಊಹೆಗಳನ್ನು ಮೀರಿಸಲು ಹಾಗೂ ಉಭಯ ನಾಯಕರು ಯಾವ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಅನ್ನೋದು ಗೆಸ್ ಮಾಡಲು ಸಾಧ್ಯವಾಗದೆ ರೀತಿಯಲ್ಲಿ ಫಾರ್ಚುನರ್ ಕಾರು ಬಳಸಲಾಗಿದೆ ಎಂಬ ಮಾಹಿತಿ ಬಯಲಾಗಿದೆ.
ಪುಟಿನ್ ಹಾಗೂ ಮೋದಿ ಫಾರ್ಚುನರ್ ವಾಹನದಲ್ಲಿ ತೆರಳುವಾಗ ಇದೇ ರೀತಿಯ ಬಿಳಿಯ ಫಾರ್ಚನರ್ ವಾಹನ ಹೆಚ್ಚಾಗಿ ಬಳಕೆ ಮಾಡಬಹುದು. ಇದರಿಂದ ಯಾವ ಫಾರ್ಚುನರ್ ಕಾರಿನಲ್ಲಿ ಉಭಯ ನಾಯಕರಿದ್ದಾರೆ ಅನ್ನೋದು ತಕ್ಷಣಕ್ಕೆ ಗುರುತಿಸಲು ಅಸಾಧ್ಯವಾಗುತ್ತದೆ. ಇಷ್ಟೇ ಅಲ್ಲ ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೂ ನೆರವಾಗಲಿದೆ ಎಂದು ಭದ್ರತಾ ಪಡೆಗಳು ಈ ನಿರ್ಧಾರ ತೆಗೆದುಕೊಂಡಿದೆ.


