ನವದೆಹಲಿ[ಸೆ.07]: ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಗೆಲುವಿನ ನಗೆ ಬೀರಿ ದಿಲ್ಲಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ಜನಪ್ರಿಯ ಯೋಜನೆಗಳ ಘೋಷಣೆ ಮೊರೆ ಹೋದ ಸಿಎಂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ.

ಅಲ್ಲದೆ, ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದರಿಂದ ಮೆಟ್ರೋ ರೈಲು ನಿಗಮ ನಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಜೊತೆಗೆ, ಈ ವಿಚಾರದಲ್ಲಿ ನ್ಯಾಯಾಲಯಗಳಿಗೆ ಅಧಿಕಾರವಿಲ್ಲ ಎಂಬುದಾಗಿ ಭಾವಿಸಬೇಡಿ ಎಂದು ದಿಲ್ಲಿ ಸರ್ಕಾರದ ಕಿವಿ ಹಿಂಡಿದೆ. ಈ ಬಗ್ಗೆ ಶುಕ್ರವಾರ ನ್ಯಾಯಾಧೀಶರಾದ ಅರುಣ್‌ ಮಿಶ್ರಾ ಹಾಗೂ ದೀಪಕ್‌ ಗುಪ್ತ ಇದ್ದ ಸುಪ್ರೀಂ ಪೀಠ ವಿಚಾರಣೆ ನಡೆಸಿತು.

ಮೆಟ್ರೋದಲ್ಲಿ ಜಲಶಕ್ತಿ ಸಚಿವ: ಟ್ವಿಟ್ಟರ್‌ನಲ್ಲಿ ಮೆಚ್ಚುಗೆಯ ಕಲರವ!

‘ನೀವು ಉಚಿತ ಪ್ರಯಾಣದ ಕೊಡುಗೆ ನೀಡಲು ಮುಂದಾದರೆ, ಅದನ್ನು ನಾವು ತಡೆಯುತ್ತೇವೆ. ನೀವು ಸಾರ್ವಜನಿಕರ ತೆರಿಗೆ ಹಣಕ್ಕೆ ನಷ್ಟವನ್ನುಂಟು ಮಾಡಲು ಬಯಸುತ್ತಿದ್ದೀರಿ. ದೆಹಲಿ ಮೆಟ್ರೋವನ್ನು ಹಾಳು ಮಾಡಲು ಏಕೆ ನೀವು ಮುಂದಾಗಿದ್ದೀರಿ? ಓಲೈಕೆಗಾಗಿ ಉಚಿತ ಕೊಡುಗೆ ನೀಡಿ ಅದರ ವೆಚ್ಚವನ್ನು ದೇಶದ ಮೇಲೆ ಹೇರಿದರೆ ಹೇಗೆ?’ ಎಂದೆಲ್ಲಾ ಖಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕೇಜ್ರಿ ನಿರ್ಧಾರದಿಂದ ದಿವಾಳಿ: ಮೋದಿಗೆ ಪತ್ರ ಬರೆದ ‘ಮೆಟ್ರೋ ಮ್ಯಾನ್’!

ದೆಹಲಿ ವಿಧಾನಸಭೆ ಚುನಾವಣೆಯು 2020ರ ವೇಳೆಗೆ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಸಿದ್ಧತೆ ಆರಂಭಿಸಿರುವ ಆಪ್‌ ಸರ್ಕಾರ, ಮಹಿಳೆಯರಿಗೆ ಮೆಟ್ರೋ ರೈಲು ಹಾಗೂ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ಇನ್ನಿತರ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುತ್ತಿದ್ದಾರೆ. ಭ್ರಷ್ಟಾಚಾರ ವಿರುದ್ಧದ ಆಂದೋಲನದ ಮೂಲಕ 2015ರಲ್ಲಿ ದಿಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕೇಜ್ರಿವಾಲ್‌ ಇದೀಗ ಜನಪ್ರಿಯ ಯೋಜನೆಗಳ ಮೊರೆ ಹೋಗಿದ್ದಾರೆ.