ನವದೆಹಲಿ(ಜೂ.14): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ನಿರ್ಧಾರವನ್ನು, ದೆಹಲಿ ಮೆಟ್ರೋ ಮಾಜಿ ಮುಖ್ಯಸ್ಥ ಇ ಶ್ರೀಧರನ್ ಟೀಕಿಸಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಶ್ರೀಧರನ್, ದೆಹಲಿ ಸರ್ಕಾರದ ನಿರ್ಣಯದಿಂದ  ಸಂಸ್ಥೆ ದಿವಾಳಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೋರಿ ದೆಹಲಿ ಸರ್ಕಾರ ಕಳುಹಿಸಿರುವ ಮನವಿ ಪತ್ರವನ್ನು ತಿರಸ್ಕರಿಸುವಂತೆ ಶ್ರೀಧರನ್ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

2002ರಲ್ಲಿ ದೆಹಲಿ ಮೆಟ್ರೋ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದ್ದ ಶ್ರೀಧರನ್, ಯಶಸ್ವಿಯಾಗಿ ಮೆಟ್ರೋ ಯೋಜನೆ ಪೂರ್ಣಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಧರನ್ ಅವರನ್ನು ಮೆಟ್ರೋ ಮ್ಯಾನ್ ಎಂದೇ ಕರೆಯಲಾಗುತ್ತದೆ.