ನವದೆಹಲಿ[ಸೆ.06]: ಪ್ರಧಾನಿ ನರೇಂದ್ರ ಮೋದಿಯ ಅತ್ಯಂತ ವಿಶ್ವಾಸಾರ್ಹ, ಆಪ್ತ ಹಾಗೂ ಉನ್ನತ ಶಿಕ್ಷಣ ಪಡೆದಿರುವ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ದೆಹಲಿ ಮೆಟ್ರೋದಲ್ಲಿ ಜನ ಸಾಮಾನ್ಯರಂತೆ ಪ್ರಯಾಣಿಸಿದ್ದಾರೆ. ತ್ಮಮ ಟ್ವಿಟರ್ ಖಾತೆಯಲ್ಲಿ ಫೋಟೋಗಳನ್ನು ಟ್ವೀಟ್ ಮಾಡಿರುವ ಸಚಿವ ಶೆಖಾವತ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಮೋದಿ ಕ್ಯಾಬಿನೆಟ್ ನಲ್ಲಿ ಜಲಶಕ್ತಿ ಸಚಿವರಾಗಿರುವ ಗಜೇಂದ್ರ ಸಿಂಗ್ ಶೆಖಾವತ್, ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿರುವ ಫೋಟೋಗಳನ್ನು ಟ್ವೀಟ್ ಮಾಡುತ್ತಾ 'ಶ್ರೀ ವಿಪುಲ್ ಗೋಯಲ್ ಮನೆಯಲ್ಲಿಡಲಾದ ಗಣಪತಿ ದರ್ಶನ ಪಡೆಯಲು ಮೆಟ್ರೋದಲ್ಲಿ ಪ್ರಯಾಣಿಸಿದೆ. ಮೆಟ್ರೋ ಜನರು ಸಂಚರಿಸಲು ಅತ್ಯಂತ ಸೂಕ್ತವಾದ ಸಾರಿಗೆಯಾಗಿದೆ. ಇಲ್ಲಿ ಸ್ವಚ್ಛತೆಗೂ ಅತಿ ಹೆಚ್ಚು ಮಹತ್ವ ನೀಡಲಾಗಿದೆ' ಎಂದಿದ್ದಾರೆ. ಇನ್ನು ಜನ ಸಾಮಾನ್ಯರಂತೆ ಪ್ರಯಾಣಿಸಿದಾಗ ಇವರನ್ನು ಯಾರೊಬ್ಬರೂ ಗುರುತು ಹಿಡಿದಿಲ್ಲ ಎಂಬುವುದು ಮತ್ತೂ ಅಚ್ಚರಿಯ ವಿಚಾರ.

ಮೆಟ್ರೋದಲ್ಲಿ ಅವರು ಹತ್ತಿದಾಗ ಸೀಟುಗಳೆಲ್ಲಾ ಭರ್ತಿಯಾಗಿದ್ದವು. ಹೀಗಾಗಿ ಸ್ಟೀಲ್ ರಾಡ್ ಹಿಡಿದು ಪ್ರಯಾಣವಾರಂಭಿಸಿದ ಅವರು ಫೋನ್ ನಲ್ಲಿ ಮಾತನಾಡಲಾರಂಭಿಸಿದ್ದಾರೆ. 

IANS ನೀವೇಕೆ ಓರ್ವ ಸಚಿವರಾದರೂ ನಿಂತುಕೊಂಡೇ ಪ್ರಯಾಣಿಸಿದ್ರಿ ಎಂದು ಪ್ರಶ್ನಿಸಿದೆ. ಇದಕ್ಕೆ ಮರುಪ್ರಶ್ನೆ ಎಸೆದ ಸಚಿವ ಶೆಖಾವತ್, 'ಯಾಕೆ? ಏನಾಯ್ತು? ಇದರಲ್ಲಿ ಅಚ್ಚರಿ ಪಡುವಂತದ್ದೇನಿದೆ? ಅಚಿವನಾದ್ರೆ ಮೆಟ್ರೋದಲ್ಲಿ ಪ್ರಯಾಣಿಸ್ಬಾರ್ದಾ?' ಎಂದು ಕೇಳಿದ್ದಾರೆ. 

ಮೆಟ್ರೋ ಪ್ರಯಾಣದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶೆಖಾವತ್ 'ಫರಿದಾಬಾದ್ ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಹೀಗಾಗಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂಬ ಮನಸ್ಸಾಯಿತು. 
ಹೀಗಾಗಿ ಮೆಟ್ರೋ ಹತ್ತಿ ರಾತ್ರಿ ಸುಮಾರು 10 ಗಂಟೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ಮೆಟ್ರೋ ಮೂಲಕವೇ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದೆ. ದೆಹಲಿಯಿಂದ ಹೊರಗೆ ನನಗೆ ಬೇರೆ ಕೆಲಸವಿತ್ತು' ಎಂದಿದ್ದಾರೆ.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರದ ಕೃಷಿ ರಾಜ್ಯ ಸಚಿವರಾಗಿದ್ದ ಶೆಖಾವತ್ 2014ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಅಂತರದ ಮತಗಳಿಂದ ಗೆಲುವು ಸಾಧಿಸಿದ್ದರು. ಸದದ್ಯ ಶೆಖಾವತ್ ದೆಹಲಿ ಮೆಟ್ರೋ ಪ್ರಯಾಣಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಇವರ ಸರಳತೆಗೆ ಮಾರು ಹೋಗಿದ್ದಾರೆ.