-ವಿಜಯ್ ಮಲಗಿಹಾಳ

ಬೆಂಗಳೂರು[ಆ.27]: ಲಿಂಗಾಯತ ಸಮುದಾಯಕ್ಕೆ ಸೇರಿದ 38 ಶಾಸಕರು ಬಿಜೆಪಿಯಲ್ಲಿ ಇರುವಾಗ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಲಕ್ಷ್ಮಣ ಸವದಿ ಅವರನ್ನು ಕರೆದು ಸಚಿವ ಸ್ಥಾನವಲ್ಲದೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಿರುವುದು ಕೇವಲ ಬಿಜೆಪಿಯಷ್ಟೇ ಅಲ್ಲದೆ ಇತರ ಪಕ್ಷಗಳಲ್ಲೂ ಅಚ್ಚರಿ ಮೂಡಿಸಿದೆ.

ಈ ನಿರ್ಧಾರದ ಹಿಂದೆ ಬಿಜೆಪಿ ಹೈಕಮಾಂಡ್‌ ಮತ್ತು ಸಂಘ ಪರಿವಾರದ ದೂರಾಲೋಚನೆ ಅಡಗಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಂತರ ಪಕ್ಷದ ಪ್ರಬಲ ಬೆಂಬಲಿಗರಾಗಿರುವ ಲಿಂಗಾಯತ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ಗಂಭೀರವಾಗಿ ಆಲೋಚನೆ ನಡೆಸಿರುವ ಬಿಜೆಪಿ ಹೈಕಮಾಂಡ್‌ ಪರ್ಯಾಯ ನಾಯಕನಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಶೆಟ್ಟರ್‌ ಅಗ್ರೆಸ್ಸಿವ್‌ ನಾಯಕ ಅಲ್ಲ ಎಂಬುದು ವರಿಷ್ಠರ ಅಭಿಮತ.

ಸೋತಿದ್ದ ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಏಕೆ?: ಬಿಜೆಪಿ ಲೆಕ್ಕಾಚಾರವೇನು?

ಹೀಗಾಗಿ, ಯಡಿಯೂರಪ್ಪ ಮತ್ತು ಶೆಟ್ಟರ್‌ ಹೊರತುಪಡಿಸಿ ಟಾಪ್‌ 10 ಲಿಂಗಾಯತ ಮುಖಂಡರ (ಸೋತವರಾಗಲಿ ಅಥವಾ ಗೆದ್ದವರಾಗಲಿ) ಸಂಪೂರ್ಣ ವಿವರವನ್ನು ಒಳಗೊಂಡ ವರದಿಯೊಂದನ್ನು ಬಿಜೆಪಿ ಹೈಕಮಾಂಡ್‌ ರಾಜ್ಯದ ಸಂಘ ಪರಿವಾರದ ಮುಖಂಡರಿಂದ ತರಿಸಿಕೊಂಡಿತ್ತು. ಇದು ಈಗ ನಡೆದಿದ್ದು ಅಲ್ಲ. ಹಲವು ತಿಂಗಳುಗಳ ಹಿಂದಿನ ಬೆಳವಣಿಗೆ.

ಆ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟುಕೆಲಸ ಮಾಡಿರುವ ಹಾಗೂ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲಕ್ಷ್ಮಣ ಸವದಿ ಅವರು ಮುಂದಿನ ಪರ್ಯಾಯ ಲಿಂಗಾಯತ ನಾಯಕರಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ನಿಲುವಿಗೆ ವರಿಷ್ಠರು ಬಂದರು. ಈ ಕಾರಣಕ್ಕಾಗಿಯೇ ಅವರನ್ನು ಕಳೆದ ತಿಂಗಳು ಮಹಾರಾಷ್ಟ್ರದ ಮುಂದಿನ ವಿಧಾನಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಿಸಲಾಯಿತು. ಆ ನೇಮಕದ ಮೂಲಕವೇ ಬಿಜೆಪಿ ಹೈಕಮಾಂಡ್‌ ಸವದಿ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿತ್ತು.

ಶಾಸಕರಾದ ಬಸವರಾಜ ಬೊಮ್ಮಾಯಿ, ಮುರುಗೇಶ್‌ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ, ಉಮೇಶ್‌ ಕತ್ತಿ, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಕೇಂದ್ರ ಸಚಿವ ಸುರೇಶ್‌ ಅಂಗಡಿ, ಸಂಸದರಾದ ಶಿವಕುಮಾರ್‌ ಉದಾಸಿ, ಭಗವಂತ ಖೂಬಾ ಮತ್ತಿತರ ಮುಖಂಡರ ಹೆಸರುಗಳನ್ನು ಪರಿಶೀಲಿಸಿದ ವರಿಷ್ಠರಿಗೆ ಅವರು ಸಮಾಧಾನ ತರಲಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಕೊರತೆ ಕಾಣಿಸಿತು. ಹೀಗಾಗಿ, ಸೋತಿದ್ದರೂ ಪರವಾಗಿಲ್ಲ ಲಕ್ಷ್ಮಣ ಸವದಿ ಅವರಿಗೆ ಪ್ರಾಮುಖ್ಯತೆ ನೀಡಬೇಕು ಎಂಬ ನಿರ್ಧಾರಕ್ಕೆ ವರಿಷ್ಠರು ಬಂದರು ಎಂದು ಉನ್ನತ ಮೂಲಗಳು ತಿಳಿಸಿವೆ.

'ಬಯಸದೇ ಬಂದ ಭಾಗ್ಯ, ನನ್ನನ್ನು ಯಾರು ಮಂತ್ರಿ ಮಾಡಿದ್ರೋ ನನಗೆ ಗೊತ್ತಿಲ್ಲ'

ಲಕ್ಷ್ಮಣ ಸವದಿ ಅವರಿಗೆ ಪ್ರಮುಖ ಸ್ಥಾನ ನೀಡಿದಲ್ಲಿ ಪಕ್ಷದ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಸಕರು ಅಸಮಾಧಾನಗೊಳ್ಳಬಹುದು ಎಂಬ ಸುಳಿವು ವರಿಷ್ಠರಿಗೆ ಇರಲಿಲ್ಲ ಎಂದೇನಲ್ಲ. ಆದರೂ ಅದನ್ನು ನಿಭಾಯಿಸಬಹುದು ಎಂಬ ವಿಶ್ವಾಸ ಹೆಚ್ಚಾಗಿದೆ. ಈ ಕಾರಣಕ್ಕಾಗಿಯೇ ಲಕ್ಷ್ಮಣ ಸವದಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂಬ ಸೂಚನೆಯನ್ನು ವರಿಷ್ಠರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದರು.