Asianet Suvarna News Asianet Suvarna News

ಸೋತಿದ್ದ ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಏಕೆ?: ಬಿಜೆಪಿ ಲೆಕ್ಕಾಚಾರವೇನು?

ಶಾಸಕ ಮಹೇಶ್ ಕುಮಟಳ್ಳಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ? | ಸೋತಿದ್ದ ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಏಕೆ?: ಬಿಜೆಪಿ ಲೆಕ್ಕಾಚಾರವೇನು?

The Reason Why Laxman Savadi who lost polls enters Karnataka cabinet
Author
Bangalore, First Published Aug 21, 2019, 10:05 AM IST

ಬೆಂಗಳೂರು[ಆ.21]: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡರೂ ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿಸುವ ಮೂಲಕ ಬಿಜೆಪಿ ಹೈಕಮಾಂಡ್ ಅಚ್ಚರಿ ಮೂಡಿಸಿದೆ

ಅಥಣಿ ಕ್ಷೇತ್ರದಿಂದ ಸವದಿ ಅವರನ್ನು ಸೋಲಿಸಿ ಕಾಂಗ್ರೆಸ್ ಶಾಸಕರಾಗಿ ಗೆದ್ದಿದ್ದ ಮಹೇಶ್ ಕುಮಟಳ್ಳಿ ಅವರು ಇದೀಗ ಅನರ್ಹಗೊಂಡಿದ್ದಾರೆ. ಆದರೆ, ಅವರು ಮುಂದೆ ಸಕ್ರಿಯ ರಾಜಕಾರಣದಿಂದ ದೂರವಿರಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಉಪಚುನಾವಣೆಯಲ್ಲಿ ಮತ್ತೆ ಲಕ್ಷ್ಮಣ ಸವದಿ ಅವರನ್ನೇ ಅಭ್ಯರ್ಥಿಯನ್ನಾಗಿಸುವ ತಂತ್ರ ರೂಪಿಸಲಾಗಿದೆ. ಸಚಿವರಾಗಿದ್ದಲ್ಲಿ ಅಥಣಿ ಕ್ಷೇತ್ರವನ್ನು ಗೆಲ್ಲಲು ಅನುಕೂಲವಾಗುತ್ತದೆ ಎಂಬುದು ಇದರ ಹಿಂದಿರುವ ಲೆಕ್ಕಾಚಾರ.

ಜೊತೆಗೆ ಸಮೀಪದ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶ್ರೀಮಂತ್ ಪಾಟೀಲ್ ಅವರೂ ಇದೀಗ ಅನರ್ಹಗೊಂಡಿದ್ದಾರೆ. ಅಲ್ಲಿಯೂ ಉಪಚುನಾವಣೆ ಎದುರಾಗುವುದು ನಿಶ್ಚಿತವಾಗಿದೆ. ಆ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರ ಪ್ರಭಾವವಿದೆ. ಹೀಗಾಗಿ, ಅಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸವದಿ ಅವರಿಗೆ ಅಧಿಕಾರ ನೀಡಬೇಕು ಎಂಬ ಯೋಚನೆಯನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈ ಸಚಿವ ಸಂಪುಟ ವಿಸ್ತರಣೆ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ವಿಧಾನಸಭೆಯಲ್ಲಿ ಪರಾಭವಗೊಂಡಿದ್ದರೂ ಅಥಣಿ ಸೇರಿದಂತೆ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಲಕ್ಷ್ಮಣ ಸವದಿ ಅವರು ಪಕ್ಷ ನಿಷ್ಠೆ ಬಿಡಲಿಲ್ಲ. ಆರ್‌ಎಸ್‌ಎಸ್ ಹಾಗೂ ಸಿಎಂ ಬಿ.ಎಸ್ .ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಲಕ್ಷ್ಮಣ ಸವದಿ ಅವರು ಪಕ್ಷದ ಹೈಕಮಾಂಡ್ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಈ ಮೂಲಕ ಅವರು ವರಿಷ್ಠರ ಗಮನವನ್ನೂ ಸೆಳೆದಿದ್ದರು. ಅಲ್ಲದೇ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಜತೆಗೂಡಿ ಕಾಂಗ್ರೆಸ್‌ನ ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರವನ್ನು ತೆರೆಮರೆಯಲ್ಲಿ ಉರುಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿಯೇ ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ಸಾಧ್ಯವಾಗಿದೆ ಎಂಬುವುದನ್ನು ತಳ್ಳಿಹಾಕುವಂತಿಲ್ಲ.

ಈ ಹಿನ್ನೆಲೆ ಯಲ್ಲಿ ಲಕ್ಷ್ಮಣ ಸವದಿ ಅವರ ಪಕ್ಷದ ಕಾರ್ಯ ಹಾಗೂ ನಿಷ್ಠೆಯೇ ಇಂದು ಸಚಿವರಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.ಇದೆಲ್ಲದರ ಜೊತೆಗೆ ಉಮೇಶ್ ಕತ್ತಿ ಅವರ ಧೋರಣೆ ಬಗ್ಗೆ ಪಕ್ಷ ಹಾಗೂ ಸಂಘ ಪರಿವಾರಕ್ಕೆ ಅಸಮಾಧಾನವೂ ಇತ್ತು. ಅವರಿಗೆ ಸಚಿವ ಸ್ಥಾನ ತಪ್ಪಿಸಿ ಸವದಿ ಅವರನ್ನು ಸಚಿವರನ್ನಾಗಿಸುವುದರಿಂದ ಪಕ್ಷದ ಹಿಡಿತ ಬಲಗೊಳ್ಳಬಹುದು ಎಂಬ ವರಿಷ್ಠರ ಚಿಂತನೆಯೂ ಇದರ ಹಿಂದಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios